ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಟಾಚಾರದ ಕಲಿಕೆ ಮಕ್ಕಳ ಭವಿಷ್ಯಕ್ಕೆ ಮಾರಕ

ಅಗಲಗುರ್ಕಿ ಬಿಜಿಎಸ್‌ ಶಾಲೆಯಲ್ಲಿ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಂಗಳಾನಂದನಾಥ ಸ್ವಾಮೀಜಿ ಅಭಿಮತ
Last Updated 16 ಮಾರ್ಚ್ 2018, 6:37 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ವಿದ್ಯಾರ್ಥಿಗಳು ವಿದ್ಯೆಯನ್ನು ಉತ್ಸಾಹದಿಂದ ಕಲಿತಾಗ ಮಾತ್ರ ಸಮಾಜದಲ್ಲಿ ಎದುರಾಗುವ ಕಷ್ಟಗಳನ್ನು ಮೆಟ್ಟಿ ನಿಲ್ಲಲು ಸಾಧ್ಯ’ ಎಂದು ಆದಿಚುಂಚನಗಿರಿ ಚಿಕ್ಕ ಬಳ್ಳಾಪುರಶಾಖಾ ಮಠದ ಮಂಗಳಾ ನಂದನಾಥ ಸ್ವಾಮೀಜಿ ತಿಳಿಸಿದರು.

ನಗರದ ಹೊರವಲಯದ ಅಗಲಗುರ್ಕಿ ಬಿಜಿಎಸ್‌ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯ ಕ್ರಮ ‘ಸ್ವಸ್ತಿ ವಿಜಯ’ದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ಪೋಷಕರ, ಶಿಕ್ಷಕರ ಒತ್ತಾಯಕ್ಕೆ ಮಣಿದು ಓದಿದರೆ ಶಿಕ್ಷಣಕ್ಕೆ ಅರ್ಥವಿಲ್ಲ. ಮನಸ್ಸನ್ನು ಶುದ್ಧವಾಗಿಟ್ಟುಕೊಂಡು ಕಲಿತು ಸಾಧನೆ ಮಾಡಬೇಕು. ಯಾವುದೇ ಕಾರಣಕ್ಕೂ ಮನಸ್ಸು ಚಂಚಲ ಮಾಡಿಕೊಳ್ಳಬಾರದು. ಕೆಟ್ಟ ಆಲೋಚನೆಗಳನ್ನು ಬಿಟ್ಟಾಗ ಜ್ಞಾನ ವೃದ್ಧಿಸಿಕೊಳ್ಳಲು ಸಾಧ್ಯ’ ಎಂದು ತಿಳಿಸಿದರು.

‘ಮಕ್ಕಳ ಓದಿಗಾಗಿ ಪೋಷಕರು ತಮ್ಮ ಆಸೆಗಳನ್ನು ಬದಿಗಿಟ್ಟು ಉತ್ತಮ ಶಿಕ್ಷಣ ಕೊಡಿಸಲು ಮುಂದಾಗುತ್ತಾರೆ. ಅದನ್ನು ಅರ್ಥ ಮಾಡಿಕೊಂಡು ಮಕ್ಕಳು ಚಿಕ್ಕಂದಿನಿಂದಲೇ ಗುರಿ ಹಾಕಿಕೊಂಡು ಅದನ್ನು ಮುಟ್ಟುವ ದಿಕ್ಕಿನಲ್ಲಿ ಸಾಗಬೇಕು. ಇದರಿಂದ ಭವಿಷ್ಯದಲ್ಲಿ ಎದುರಾಗುವ ಕಷ್ಟಗಳನ್ನು ನಿವಾರಿಸಲು ಸಾಧ್ಯ. ವಿದ್ಯಾರ್ಥಿಗಳು ಪ್ರೌಢಶಾಲೆ ಮತ್ತು ಕಾಲೇಜುಹಂತದಲ್ಲಿ ಕಲಿಯುವಾಗ ಬಹಳ ಉತ್ಸಾಹದಿಂದಿ ಇರಬೇಕು. ಕಾಟಚಾರದ ಕಲಿಕೆ ಭವಿಷ್ಯಕ್ಕೆ ಮಾರಕ ವಾಗುತ್ತದೆ’ ಎಂದು ಹೇಳಿದರು.

ಬಿಜಿಎಸ್‌ ಶಿಕ್ಷಣ ಸಂಸ್ಥೆ ಮುಖ್ಯ ಆಡಳಿತಾಧಿಕಾರಿ ಎನ್‌.ಶಿವರಾಂ ರೆಡ್ಡಿ ಮಾತನಾಡಿ, ‘ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದಿಂದ ಜಗತ್ತು ನಿಂತಿದೆ. ವಿದ್ಯೆ ಇಲ್ಲದೆ ಯಾರೊಬ್ಬರು ಪರಿಪೂರ್ಣ ವ್ಯಕ್ತಿಯಾಗಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯ ದಿದ್ದರೆ ಯಾವೊಂದು ಕೆಲಸಕ್ಕೆ ಹೋದರೂ ಪ್ರಯೋಜನವಿಲ್ಲ. ಪರೀಕ್ಷೆಯಲ್ಲಿ ಪಡೆಯುವ ಒಂದೊಂದು ಅಂಕವೂ ಮಹತ್ವವಾಗಿರುತ್ತದೆ. ಅಂಕಕ್ಕೆ ನಮ್ಮ ಜೀವನವನ್ನೇ ಬದಲಾಯಿಸಿ ಬಿಡುವ ಶಕ್ತಿ ಇದೆ’ ಎಂದು ತಿಳಿಸಿದರು.

‘ವಿದ್ಯಾರ್ಥಿ ಜೀವನದಲ್ಲಿಯೇ ಮಕ್ಕಳು ಜಾತಿ ವ್ಯವಸ್ಥೆಯ ಕಟ್ಟುಪಾಡು ಗಳನ್ನು ಮೀರುವ ಕೆಲಸ ಮಾಡಬೇಕು. ವಿಶ್ವ ಮಾನವರಾಗಿ ಉದಾರವಾದ ಚಿಂತನೆ ಮೈಗೂಡಿಸಿಕೊಳ್ಳಬೇಕು. ಆಗ ಮಾತ್ರ ನಾವು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ವಿದ್ಯಾರ್ಥಿಗಳಿಗೆ ಒಂದು ರೀತಿಯ ಅಗ್ನಿ ಪರೀಕ್ಷೆ ಇದ್ದಂತೆ. ವಿದ್ಯಾರ್ಥಿಗಳು ಬಹಳ ಸಮಯ ಪ್ರಜ್ಞೆಯಿಂದ ಪರೀಕ್ಷೆ ಎದುರಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಎಸ್ಸೆಸ್ಸೆಲ್ಸಿ ಮುಗಿದ ನಂತರ ಸಾಕಷ್ಟು ಅವಕಾಶಗಳಿವೆ. ಮನೆಯಲ್ಲಿ ಬಡತನವಿದ್ದರೆ ಕಡಿಮೆ ಅವಧಿಯಲ್ಲಿ ಮುಗಿಸುವ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ನಮ್ಮ ಪರಿಸ್ಥಿತಿ, ಆಸಕ್ತಿಗೆ ಅನುಗುಣವಾಗಿ ಕೋರ್ಸ್‌ ಗಳನ್ನು ಆಯ್ಕೆ ಮಾಡಿ ಕೊಳ್ಳಬಹುದು. ಯಾವುದೇ ಕಾರಣಕ್ಕೂ ಕೋರ್ಸ್‌ ಅರ್ಧಕ್ಕೆ ಮೊಟಕುಗೊಳಿಸಬಾರದು. ವಿದ್ಯಾಭ್ಯಾಸ ಮುಗಿದ ಕೂಡಲೇ ಉದ್ಯೋಗ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ಇಟ್ಟುಕೊಳ್ಳಬೇಕು’ ಎಂದರು.

ಅಗಲಗುರ್ಕಿ, ಮಂಚನಬಲೆ, ಬಾಗೇಪಲ್ಲಿ ಮತ್ತು ಮೆಳೆಕೋಟೆ ಶಾಲೆ ವಿದ್ಯಾರ್ಥಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT