ಎಚ್‍ಐವಿ ಸೋಂಕು ತಡೆಗೆ ತಿಳಿವಳಿಕೆ ಅಗತ್ಯ: ಶೈಲಜಾ

7

ಎಚ್‍ಐವಿ ಸೋಂಕು ತಡೆಗೆ ತಿಳಿವಳಿಕೆ ಅಗತ್ಯ: ಶೈಲಜಾ

Published:
Updated:

ಹರಿಹರ: ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಸೂಕ್ತ ತಿಳಿವಳಿಕೆ ಮೂಲಕ ಮಾರಣಾಂತಿಕ ಎಚ್‍ಐವಿ ಕಾಯಿಲೆಯನ್ನು ತಡೆಗಟ್ಟಬಹುದು ಎಂದು ಆಪ್ತ ಸಮಾಲೋಚಕಿ ಶೈಲಜಾ ಎ. ಪಾಟೀಲ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ರೆಡ್‍ಕ್ರಾಸ್, ರೆಡ್‍ ರಿಬ್ಬನ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಬುಧವಾರ ನಡೆದ ಎಚ್.ಐ.ವಿ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಜ್ಞಾನ ಹಾಗೂ ಅಸುರಕ್ಷಿತ ಲೈಂಗಿಕ ಕ್ರಿಯೆಗಳಿಂದ ಎಚ್‍ಐವಿ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಈ ಸೋಂಕಿಗೆ ಒಳಗಾದ ವ್ಯಕ್ತಿಗೆ ಬಳಸಿದ ಚುಚ್ಚು ಮದ್ದುಗಳ ಮರು ಬಳಕೆಯಿಂದ, ರಕ್ತದ ಮೂಲಕ ಮತ್ತು ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಸೋಂಕು ಹರಡುತ್ತದೆ ಎಂದು ಮಾಹಿತಿ ನೀಡಿದರು.

ಎಚ್‍ಐವಿ ಸೋಂಕು ತಗುಲಿದ ವ್ಯಕ್ತಿಯ ಜತೆ ಮಾತನಾಡಿದರೆ, ಊಟ ಮಾಡಿದರೆ ಅಥವಾ ಕೈಕುಲಕಿದರೆ ಈ ರೋಗ ಹರಡುವುದಿಲ್ಲ. ಸರ್ಕಾರ ಎಚ್‍ಐವಿ ಸೋಂಕಿತ ಮಕ್ಕಳಿಗೆ ಉಚಿತ ಶಿಕ್ಷಣ ಸೌಲಭ್ಯದ ಜತೆಗೆ ಪೌಷ್ಟಿಕ ಆಹಾರವನ್ನು ಒದಗಿಸಲು ₹ 750 ಮಾಸಾಶನ ನೀಡುತ್ತದೆ. ಗರ್ಭಿಣಿಯರಿಗೆ ಎಚ್ಐವಿ ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ. ಈ ಸೌಲಭ್ಯ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರೆಯುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಎಸ್.ಆರ್. ಅಂಜಿನಪ್ಪ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಶರೀರ ಹಾಗೂ ಆರೋಗ್ಯದಿಂದ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದರು.

ರೆಡ್‍ಕ್ರಾಸ್ ಸಂಚಾಲಕರಾದ ಡಾ.ಕೆ.ಎಂ. ಹನುಮಂತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕರಾದ ಎಸ್. ವೆಂಕಟೇಶಮೂರ್ತಿ, ಬಿ.ಸಿ. ತಹಸೀಲ್ದಾರ್, ಜಿ.ಎಸ್‍. ಸುರೇಶ್, ಟಿ.ಎಸ್. ಮಹಾಂತೇಶ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry