ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಲು ಸಲಹೆ

ರಾಜ್ಯ ಪೊಲೀಸ್ ತರಬೇತಿ ಶಾಲೆಯ ಕವಾಯತು ಮೈದಾನದಲ್ಲಿ ಡಿಜಿ ಮತ್ತು ಐಜಿಪಿ ನೀಲಮಣಿ ಎನ್. ರಾಜು ಹೇಳಿಕೆ
Last Updated 16 ಮಾರ್ಚ್ 2018, 7:39 IST
ಅಕ್ಷರ ಗಾತ್ರ

ಖಾನಾಪುರ: ಇಲ್ಲಿನ ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ಶಾಲೆಯ ಕವಾಯತು ಮೈದಾನದಲ್ಲಿ ಗುರುವಾರ ನಡೆದ ಶಾಲೆಯ ಪ್ರಶಿಕ್ಷಣಾರ್ಥಿಗಳ 23ನೇ ತಂಡದ ನಿರ್ಗಮನ ಪಥ ಸಂಚಲನಕ್ಕೆ ರಾಜ್ಯ ಡಿಜಿ ಮತ್ತು ಐಜಿಪಿ ನೀಲಮಣಿ ಎನ್. ರಾಜು ಸಾಕ್ಷಿಯಾದರು.

ಮೈಸೂರು, ಚಿಕ್ಕಮಗಳೂರು, ಚಾಮರಾಜನಗರ, ಮಂಡ್ಯ, ಹಾಸನ, ಕೋಲಾರ, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳ ಒಟ್ಟು 294 ಪ್ರಶಿಕ್ಷಣಾರ್ಥಿಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದರು.

ಗೌರವವಂದನೆ ಸ್ವೀಕರಿಸಿದ ನಂತರ ಮಾತನಾಡಿದ ನೀಲಮಣಿ ಎನ್‌.ರಾಜು, ಪೊಲೀಸ್ ಕೆಲಸ ಒಂದು ಸವಾಲಿನ ಕೆಲಸವಾಗಿದೆ. ಇಂದಿನ ದಿನಗಳಲ್ಲಿ ಪೊಲೀಸರು ಒತ್ತಡದಲ್ಲಿ ಕೆಲಸ ನಿರ್ವಹಿಸಬೇಕಾಗಿದೆ. ಸದ್ಯದಲ್ಲಿಯೇ ವಿಧಾನಸಭೆ ಚುನಾವಣೆ ನಡೆಯಲಿದ್ದು, ಪೊಲೀಸರು ನಿಷ್ಪಕ್ಷಪಾತವಾಗಿ ಮತ್ತು ಇಲಾಖೆಯ ಗೌರವಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದು ಕರೆ ನೀಡಿದರು.

ಕಳೆದ 25 ವರ್ಷಗಳಿಂದ ಅಸ್ತಿತ್ವದಲ್ಲಿರುವ ಈ ಪೊಲೀಸ್ ತರಬೇತಿ ಶಾಲೆ ಇದುವರೆಗೂ 23 ತಂಡಗಳಿಗೆ ತರಬೇತಿ ನೀಡಿ, ಇಲಾಖೆಯ ಕಾರ್ಯಕ್ಷಮತೆ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ ಎಂದ ಅವರು, ಈ ಶಾಲೆಗೆ ₹ 2 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದರು.

ಉಪಪ್ರಾಂಶುಪಾಲಶಿವಾನಂದ ಚನ್ನಬಸಪ್ಪನವರ ನೇತೃತ್ವದಲ್ಲಿ ಪ್ರಶಿಕ್ಷಣಾರ್ಥಿಗಳು ಆಕರ್ಷಕ ಕವಾಯತು ಹಾಗೂ ಪಥ ಸಂಚಲನವನ್ನು ನಡೆಸಿಕೊಟ್ಟರು. ತರಬೇತಿ ಅವಧಿಯಲ್ಲಿ ಉತ್ತಮ ಸಾಧನೆ ತೋರಿದ 11 ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.

ತರಬೇತಿ ಶಾಲೆಯ ಬೆಳ್ಳಿ ಹಬ್ಬದ ಅಂಗವಾಗಿ ಹೊರತಂದ ವಿಶೇಷ ಸ್ಮರಣ ಸಂಚಿಕೆಯನ್ನು ಇಲಾಖೆಯ ಹಿರಿಯ ಅಧಿಕಾರಿಗಳು ಬಿಡುಗಡೆಗೊಳಿಸಿದರು.

ಇದೇ ಸಂದರ್ಭದಲ್ಲಿ ತರಬೇತಿ ಶಾಲೆಯ ದರ್ಬಾರ್ ಹಾಲ್ ನಲ್ಲಿ 25 ವರ್ಷಗಳ ಅವಧಿಯಲ್ಲಿ ಶಾಲೆ ನಡೆದುಬಂದ ಹಾದಿಯ ಛಾಯಾ ಚಿತ್ರ ಪ್ರದರ್ಶನ ಕಾರ್ಯಕ್ರಮ ಜರುಗಿತು. ಬೆಳ್ಳಿ ಹಬ್ಬದ ಅಂಗವಾಗಿ ನಿವೃತ್ತ ಪೊಲೀಸ್ ಅಧಿಕಾರಿ ಜಿ.ಆರ್ ಪಾಟೀಲ ಅವರನ್ನು ಸತ್ಕರಿಸಲಾಯಿತು.

ತರಬೇತಿ ವಿಭಾಗದ ಐಜಿ ಪದಮ್ ಕುಮಾರ್ ಗರ್ಗ, ಡಿಜಿ ಕೆ.ಎಸ್.ಆರ್ ಚರಣರೆಡ್ಡಿ ಕೆ.ಎಸ್.ಆರ್.ಪಿ ಎಡಿಜಿಪಿ ಭಾಸ್ಕರರಾವ್, ಬೆಳಗಾವಿ ಪೊಲೀಸ್ ಕಮಿಷನರ್ ಡಿ.ಸಿ ರಾಜಪ್ಪ, ಬೆಳಗಾವಿ ಎಸ್.ಪಿ ಸುಧೀರಕುಮಾರ ರೆಡ್ಡಿ, ಬೈಲಹೊಂಗಲ ಡಿ.ಎಸ್.ಪಿ ಕರುಣಾಕರ ರೆಡ್ಡಿ, ಖಾನಾಪುರ ಸಿಪಿಐ ಮೋತಿಲಾಲ ಪವಾರ, ಡಿ.ಎಚ್ ಓಸ್ವಾಲ, ವೈ.ಡಿ ಅಗಸೀಮನಿ, ಸುನೀಲ ಸನದಿ, ಬಿ ವಿ ಮಳಿಮಠ, ಎಂ.ಎಂ ಲಾಡ್, ರಾಜು ಕೆಂಚನಗೌಡರ, ಎ.ಆರ್ ಕಲ್ಲಣ್ಣವರ, ಪಾರ್ವತಿ ಹುದ್ದಾರ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT