ಸಮುದಾಯ ಭವನಕ್ಕೆ ಮೊದಲ ಆದ್ಯತೆ

7
ರಾಮದುರ್ಗ; ಶಾಸಕರ ಸ್ಥಳೀಯ ಕ್ಷೇತ್ರಾಭಿವೃದ್ಧಿ ನಿಧಿ ಬಳಕೆ– ಉಳಿಕೆ

ಸಮುದಾಯ ಭವನಕ್ಕೆ ಮೊದಲ ಆದ್ಯತೆ

Published:
Updated:
ಸಮುದಾಯ ಭವನಕ್ಕೆ ಮೊದಲ ಆದ್ಯತೆ

ಬೆಳಗಾವಿ: ಶಾಸಕರ ಸ್ಥಳೀಯ ಕ್ಷೇತ್ರಾಭಿವೃದ್ಧಿ ನಿಧಿಯಡಿ ಜಿಲ್ಲೆಯ ರಾಮದುರ್ಗ ಕ್ಷೇತ್ರದಲ್ಲಿ ಹಲವು ಕಾಮಗಾರಿಗಳು ನಡೆದಿವೆ. ಜಿಲ್ಲೆಯ ಇತರ ಕ್ಷೇತ್ರಗಳಂತೆ ಇಲ್ಲಿಯೂ ಸಮುದಾಯ ಭವನಗಳ ನಿರ್ಮಾಣಕ್ಕೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಶಾಸಕ ಅಶೋಕ ಪಟ್ಟಣ ಅವರು ಜನರ ಬೇಡಿಕೆಯ ಮೇರೆಗೆ ಎಲ್ಲ ಜಾತಿ, ಧರ್ಮದವರಿಗೆ ಸಮುದಾಯ ಭವನಗಳನ್ನು ನಿರ್ಮಿಸಿಕೊಟ್ಟಿದ್ದಾರೆ.

ಹೊಸೂರು, ಹಲಗತ್ತಿ, ರಾಮಾಪುರ, ರಾಮದುರ್ಗ, ಆರಿಬೆಂಚಿ, ಗೊಣಗನೂರು, ಕೆ.ಜುನಿಪೇಟೆ, ಬನ್ನೂರು, ಉದಪುಡಿ, ನಾಗನೂರು, ಅವರಾದಿ, ಎಂ.ಚಂದರಗಿ, ಚೆನ್ನಾಪುರ ಸೇರಿದಂತೆ ಬಹುತೇಕ ಎಲ್ಲ ಗ್ರಾಮ– ಪಟ್ಟಣಗಳಲ್ಲಿ ನಿರ್ಮಿಸಲಾಗಿದೆ. ದೇವಸ್ಥಾನಗಳಿ ಬಳಿ, ಮಸೀದಿ ಬಳಿ ಹಾಗೂ ಎಸ್‌.ಸಿ, ಎಸ್‌.ಟಿ ಕಾಲೊನಿಗಳಲ್ಲಿಯೂ ಸಮುದಾಯ ಭವನಗಳನ್ನು ನಿರ್ಮಿಸಲಾಗಿದೆ.

ಬಸ್‌ ಶೆಲ್ಟರ್‌: ರಾಮದುರ್ಗ, ಮುದೆನೂರು, ಖಾನಪೇಟ, ಕಲ್ಮಡ, ಚಿಪ್ಪಲಕಟ್ಟಿ, ಸುನ್ನಾಳ, ಹಲಗತ್ತಿ, ದಾಡಿಬಾವಿ, ಬಿಜಗುಪ್ಪಿ, ಗೊಣಗನೂರು, ಕಂಕಣವಾಡಿ, ಆನೆಗುದ್ದಿ, ಹೊಸೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಸ್‌ ಶೆಲ್ಟರ್‌ ನಿರ್ಮಿಸಲಾಗಿದೆ. ಹಳ್ಳಿಗಳ ಪ್ರದೇಶಗಳಲ್ಲಿ ದೊಡ್ಡ ದೊಡ್ಡ ಬಸ್‌ ನಿಲ್ದಾಣ ನಿರ್ಮಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಬಸ್‌ಗಳ ಸಂಚಾರ ಕಡಿಮೆ ಇರುತ್ತದೆ. ಅಲ್ಲದೇ, ಪ್ರಯಾಣಿಕರ ಸಂಖ್ಯೆಯೂ ಕಡಿಮೆ. ಹೀಗಾಗಿ ಬಸ್‌ ಶೆಲ್ಟರ್‌ ನಿರ್ಮಿಸಲಾಗಿದೆ.

2014–15ನೇ ಸಾಲಿನಲ್ಲಿ ಕುಲ್ಲೂರು ಗ್ರಾಮದಲ್ಲಿ ₹ 3 ಲಕ್ಷ ಅಂದಾಜು ವೆಚ್ಚದಲ್ಲಿ ರಂಗಮಂದಿರ ನಿರ್ಮಿಸಲಾಗಿದೆ.

ಕ್ಷೇತ್ರದಲ್ಲಿ ಮಲಪ್ರಭಾ ನದಿ ಹರಿದಿದ್ದು, ಪಶುಸಂಗೋಪನೆಗೆ ಹೆಚ್ಚು ಅವಕಾಶಗಳಿವೆ. ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರುಗಳನ್ನು ಸಾಕಿದ್ದಾರೆ. ಹೈನೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ. ರೈತರಿಗೆ ಅನುಕೂಲವಾಗಲೆಂದು ಶಾಸಕರು, ಹಾಲಿನ ಡೇರಿ ನಿರ್ಮಿಸಲು ಶಿಫಾರಸು ಮಾಡಿದ್ದಾರೆ.‌ ಹಿರೇಕೊಪ್ಪ, ಬನ್ನೂರು, ಕುನ್ನಾಳ, ಕೆ.ಚಂದರಗಿ, ಮುರುಕೊತ್ನಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಾಲಿನ ಡೇರಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ.‌

ಅನುದಾನ ಶಿಫಾರಸು: 2013–14ರ ಅವಧಿಯಲ್ಲಿ ಶಾಸಕರು ₹ 2.08 ಕೋಟಿ ಮೊತ್ತದ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದರು. ಇವುಗಳಲ್ಲಿ ₹ 1.32 ಕೋಟಿ ಕಾಮಗಾರಿಗಳು ಪೂರ್ಣಗೊಂಡಿವೆ. 2014–15ರ ಸಾಲಿನಲ್ಲಿ ಶಿಫಾರಸು ಮಾಡಿದ್ದ ₹ 2.01 ಕೋಟಿ ಮೊತ್ತದ ಕಾಮಗಾರಿಗಳ ಪೈಕಿ, ಕೇವಲ ₹ 1.04 ಕೋಟಿ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ.

2015– 16ರ ಸಾಲಿನಲ್ಲಿ ₹ 1.77 ಕೋಟಿ ಮೊತ್ತದ ಕಾಮಗಾರಿಗಳ ಪೈಕಿ ₹ 1.31 ಕೋಟಿ ಕಾಮಗಾರಿಗಳು ಪ್ರಗತಿಯಲ್ಲಿವೆ. 2016–17ರಲ್ಲಿ ₹ 2.92 ಕೋಟಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದರೆ, ₹ 1.99 ಕೋಟಿ ಕಾಮಗಾರಿಗಳು ನಡೆದಿವೆ. ಕೊನೆಯ ವರ್ಷದ ಅವಧಿಯಲ್ಲಿ ₹ 1.46 ಕೋಟಿ ಮೊತ್ತದ ಕಾಮಗಾರಿಗಳ ಪೈಕಿ ಕೇವಲ 9.80 ಲಕ್ಷ ಕಾಮಗಾರಿಗಳು ನಡೆದಿವೆ.

ಮಿತಿಗಿಂತಲೂ ಹೆಚ್ಚು ಶಿಫಾರಸು: ಶಾಸಕ ಅಶೋಕ ಪಟ್ಟಣ ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ಕಾಮಗಾರಿ ಕೈಗೊಳ್ಳಲು ಐದು ವರ್ಷಗಳ ಅವಧಿಯಲ್ಲಿ ₹ 10.24 ಕೋಟಿ ಮೊತ್ತದ ಕಾಮಗಾರಿಗಳನ್ನು ಕೈಗೊಳ್ಳಲು ಶಿಫಾರಸು ಮಾಡಿದ್ದಾರೆ. ಇವುಗಳ ಪೈಕಿ ಕೇವಲ ₹ 6.56 ಕೋಟಿ ಮೊತ್ತದ ಕಾಮಗಾರಿಗಳಿಗೆ ಮಾತ್ರ ಆಡಳಿತಾತ್ಮಕ ಅನುಮೋದನೆ ದೊರೆತಿದೆ.

ಕಾಮಗಾರಿಗೆ ಅನುದಾನ ನೀಡುವಂತೆ ಕೋರಿ ಸಾರ್ವಜನಿಕರು ಅರ್ಜಿ ಸಲ್ಲಿಸುತ್ತಾರೆ. ಆದರೆ, ಅದಕ್ಕೆ ಪೂರಕವಾದ ದಾಖಲೆಗಳನ್ನು ನೀಡುವುದಿಲ್ಲ. ಈ ನಿಧಿಯ ಅನುದಾನ ಬಳಸಲು ಹಲವು ಷರತ್ತುಗಳಿವೆ. ಇವುಗಳನ್ನು ಪೂರೈಸಲು ಅಗತ್ಯ ದಾಖಲೆಗಳನ್ನು ನೀಡದಿದ್ದರೆ ಕಾಮಗಾರಿಗೆ ಅಧಿಕಾರಿಗಳು ಆಡಳಿತಾತ್ಮಕ ಮಂಜೂರಾತಿ ನೀಡುವುದಿಲ್ಲ. ಹೀಗಾಗಿ ನಾನು ಶಿಫಾರಸ್ಸು ಮಾಡಿರುವುದಕ್ಕೂ ಹಾಗೂ ಆರಂಭವಾಗಿರುವ ಕಾಮಗಾರಿಗಳಿಗೂ ಸಾಕಷ್ಟು ವ್ಯತ್ಯಾಸವಿದೆ ಎನ್ನುತ್ತಾರೆ ಅಶೋಕ ಪಟ್ಟಣ.

‘ಮಕ್ಕಳ ಉದ್ಯಾನಕ್ಕೆ ಸಿಕ್ಕಿಲ್ಲ ಅನುಮತಿ’

ದೊಡ್ಡಮಂಗಡಿಯಲ್ಲಿ ಮಕ್ಕಳ ಉದ್ಯಾನ ನಿರ್ಮಿಸಲು ಅಶೋಕ ಪಟ್ಟಣ ಅವರು 2014–15ನೇ ಸಾಲಿನಲ್ಲಿ ಶಿಫಾರಸ್ಸು ಮಾಡಿದ್ದರು. ಉದ್ಯಾನವನ್ನು ಅಭಿವೃದ್ಧಿಪಡಿಸುವುದು, ಮಕ್ಕಳಿಗೆ ಆಟವಾಡಲು ಆಟಿಕೆಗಳ ಅಳವಡಿಕೆ, ಮರಗಳನ್ನು ಬೆಳೆಸುವುದು ಹಾಗೂ ಪಾದಚಾರಿ ಮಾರ್ಗಗಳ ನಿರ್ಮಾಣ ಇದರಲ್ಲಿ ಸೇರಿತ್ತು. ಅಂದಾಜು ₹ 13.50 ಲಕ್ಷದ ಕಾಮಗಾರಿಗೆ ಶಿಫಾರಸ್ಸು ಮಾಡಿದ್ದರು.

ಆದರೆ, ಈ ಕಾಮಗಾರಿಗೆ ಆಡಳಿತಾತ್ಮಕ ದೊರೆತಿಲ್ಲ. ಕಾಮಗಾರಿ ಬಾಕಿ ಉಳಿದಿದೆ. ಆ ವರ್ಷ ಅತ್ಯಂತ ಕಡಿಮೆ ಮೊತ್ತದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಶಾಸಕರು ₹ 2.01 ಕೋಟಿ ಮೊತ್ತದ ಕಾಮಗಾರಿಗಳಿಗೆ ಶಿಫಾರಸ್ಸು ನೀಡಿದ್ದರೆ, ಇವುಗಳ ಪೈಕಿ ₹ 1.04 ಕೋಟಿ ಕಾಮಗಾರಿಗಳಿಗೆ ಅನುಮೋದನೆ ದೊರೆತಿದೆ.

*

5 ವರ್ಷಗಳಲ್ಲಿ ₹ 10.24 ಕೋಟಿ ಮೊತ್ತದ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದೆ. ಕೆಲವೊಂದು ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ದೊರೆಯದ ಕಾರಣ ಇನ್ನೂ ಆರಂಭವಾಗಿಲ್ಲ.

–ಅಶೋಕ ಪಟ್ಟಣ, ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry