7
ಯುಗಾದಿ ಹೊಸ್ತಿಲಲ್ಲಿ ಅವಿಭಜಿತ ಕೋಲಾರ ಜಿಲ್ಲೆಯ ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ

ಹಾಲು ಖರೀದಿ ದರ ಹೆಚ್ಚಳ: ಇಂದಿನಿಂದ ಜಾರಿ

Published:
Updated:
ಹಾಲು ಖರೀದಿ ದರ ಹೆಚ್ಚಳ: ಇಂದಿನಿಂದ ಜಾರಿ

ಕೋಲಾರ: ಹೈನುಗಾರಿಕೆಯೇ ಜೀವನಾಡಿಯಾಗಿರುವ ಅವಿಭಜಿತ ಕೋಲಾರ ಜಿಲ್ಲೆಯ ಹಾಲು ಉತ್ಪಾದಕರಿಗೆ ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು (ಕೋಚಿಮುಲ್‌) ಯುಗಾದಿ ಹೊಸ್ತಿಲಲ್ಲಿ ಸಿಹಿ ಸುದ್ದಿ ನೀಡಿದ್ದು, ಹಾಲು ಖರೀದಿ ದರವನ್ನು ಲೀಟರ್‌ಗೆ ₹ 1 ಹೆಚ್ಚಿಸಿದೆ.

ಕೋಚಿಮುಲ್‌ ವ್ಯಾಪ್ತಿಯ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 1,834 ಪ್ರಾಥಮಿಕ ಹಾಲು ಸಹಕಾರ ಸಂಘಗಳಿದ್ದು, ಸುಮಾರು 2.83 ಲಕ್ಷ ಹಾಲು ಉತ್ಪಾದಕರು ಒಕ್ಕೂಟದ ಸದಸ್ಯರಾಗಿದ್ದಾರೆ. ಹಾಲು ಸಂಗ್ರಹಣೆಯಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿರುವ ಒಕ್ಕೂಟದಲ್ಲಿ ದಿನನಿತ್ಯ ಸುಮಾರು 8.70 ಲಕ್ಷ ಲೀಟರ್‌ ಹಾಲು ಶೇಖರಣೆಯಾಗುತ್ತಿದೆ.

ಒಕ್ಕೂಟದಿಂದ ಬೆಂಗಳೂರಿನ ಮದರ್‌ ಡೇರಿಗೆ ಪ್ರತಿನಿತ್ಯ 1.56 ಲಕ್ಷ ಲೀಟರ್‌, ಆಂಧ್ರಪ್ರದೇಶ ಹಾಗೂ ಎಂಟಿಆರ್‌ ಕಂಪೆನಿಗೆ 1.51 ಲಕ್ಷ ಲೀಟರ್‌ ಹಾಲು ಕಳುಹಿಸಲಾಗುತ್ತಿದೆ. 3.04 ಲಕ್ಷ ಲೀಟರ್‌ ಸ್ಯಾಚೆಟ್‌ ಹಾಲು, 2.30 ಲಕ್ಷ ಲೀಟರ್‌ ಗುಡ್‌ ಲೈಫ್‌ ಹಾಲು ಮಾರಾಟವಾಗುತ್ತಿದೆ. 30 ಸಾವಿರ ಲೀಟರ್‌ ಹಾಲು ಮೊಸರು ಉತ್ಪಾದನೆಗೆ, 5 ಸಾವಿರ ಲೀಟರ್‌ ಹಾಲು ಚೀಸ್‌ ಉತ್ಪಾದನೆಗೆ ಬಳಕೆಯಾಗುತ್ತಿದೆ. ಅಲ್ಲದೇ, ಕ್ಷೀರ ಭಾಗ್ಯ ಯೋಜನೆಗೆ ಅಗತ್ಯವಿರುವ ಹಾಲಿನ ಪುಡಿ ತಯಾರಿಕೆಗೆ ಸ್ವಲ್ಪ ಪ್ರಮಾಣದಲ್ಲಿ ಹಾಲು ಬಳಸಲಾಗುತ್ತಿದೆ.

ರೈತರ ಬೆನ್ನೆಲುಬು: ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳು ಬರಪೀಡಿತ ಜಿಲ್ಲೆಗಳಾಗಿದ್ದು, ಕೃಷಿ ನಿರ್ವಹಣೆ ಕಷ್ಟವಾಗಿದೆ. ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದ್ದು, 2 ಸಾವಿರ ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುವುದು ಕಷ್ಟ. ಹೀಗಾಗಿ ರೈತರು ಕೃಷಿಯ ಬದಲಿಗೆ ಹೈನುಗಾರಿಕೆಯತ್ತ ಮುಖ ಮಾಡಿದ್ದು, ಹೈನುಗಾರಿಕೆಯು ಬಹುಪಾಲು ರೈತ ಕುಟುಂಬಗಳ ಬೆನ್ನೆಲುಬಾಗಿದೆ. ಕೃಷಿಗೆ ಪರ್ಯಾಯವಾಗಿ ಹೈನುಗಾರಿಕೆಯು ಪ್ರಮುಖ ಆದಾಯ ಮೂಲವಾಗಿದೆ.

ಅವಳಿ ಜಿಲ್ಲೆಗಳಲ್ಲಿ ಹಿಂದಿನ ವರ್ಷ ಉತ್ತಮ ಮಳೆಯಾಗಿದ್ದು, ಜಾನುವಾರುಗಳಿಗೆ ಸದ್ಯಕ್ಕೆ ಮೇವು ಮತ್ತು ಕುಡಿಯುವ ನೀರಿನ ಸಮಸ್ಯೆ ಇಲ್ಲ. ಆದರೆ, ಬೇಸಿಗೆ ಆರಂಭವಾಗುತ್ತಿದ್ದಂತೆ ಮಾರ್ಚ್‌ ಮೊದಲ ವಾರದಿಂದ ಎರಡೂ ಜಿಲ್ಲೆಗಳಲ್ಲಿ ಹಾಲಿನ ಉತ್ಪಾದನೆ ಕುಸಿದಿದೆ. ಜನವರಿ ತಿಂಗಳಲ್ಲಿ 10 ಲಕ್ಷದ ಗಡಿ ದಾಟಿದ್ದ ಹಾಲು ಉತ್ಪಾದನೆ ಪ್ರಮಾಣವು ದಿಢೀರ್‌ ಕುಸಿತ ಕಂಡಿದೆ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮೇ ಅಂತ್ಯದವರೆಗೆ: ಸಂಕಷ್ಟದಲ್ಲಿರುವ ಹೈನೋದ್ಯಮಕ್ಕೆ ಬಲ ತುಂಬಲು ಮುಂದಾಗಿರುವ ಕೋಚಿಮುಲ್‌ ಆಡಳಿತ ಮಂಡಳಿ ಸದಸ್ಯರು ಸಭೆ ನಡೆಸಿ ಹಾಲು ಖರೀದಿ ದರ ಹೆಚ್ಚಿಸುವ ನಿರ್ಧಾರ ಕೈಗೊಂಡಿದ್ದು, ಹೊಸ ದರ ಶುಕ್ರವಾರದಿಂದ (ಮಾ.16) ಜಾರಿಯಾಗಲಿದೆ. ಪ್ರಸ್ತುತ ಹಾಲು ಖರೀದಿ ದರ ಪ್ರತಿ ಲೀಟರ್‌ಗೆ ₹ 24 ಇದೆ. ದರ ಹೆಚ್ಚಳದ ನಂತರ ಪರಿಷ್ಕೃತ ದರ ಲೀಟರ್‌ಗೆ ₹ 25ಕ್ಕೆ ಏರಿಕೆಯಾಗಿದೆ. ಇದರ ಜತೆಗೆ ಪ್ರೋತ್ಸಾಹಧನವಾಗಿ ಸರ್ಕಾರದಿಂದ ಲೀಟರ್‌ಗೆ ₹ 5 ಕೊಡಲಾಗುತ್ತದೆ. ಹೊಸ ಖರೀದಿ ದರ 2018ರ ಮೇ ಅಂತ್ಯದವರೆಗೆ ಅನ್ವಯವಾಗುತ್ತದೆ. ಆ ನಂತರ ಪರಿಸ್ಥಿತಿ ಅವಲೋಕಿಸಿ ದರ ಪರಿಷ್ಕರಣೆ ಮಾಡುವ ಬಗ್ಗೆ ಕೋಚಿಮುಲ್‌ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಜೂನ್‌ನಲ್ಲಿ ಇಳಿಕೆಯಾಗಿತ್ತು: ಒಕ್ಕೂಟವು ಹಿಂದಿನ ವರ್ಷ ಜ.1ರಂದು ಹಾಲು ಖರೀದಿ ದರವನ್ನು ಲೀಟರ್‌ಗೆ ₹ 1.30 ಹೆಚ್ಚಳ ಮಾಡಿತ್ತು. ನಂತರ ಮಾರ್ಚ್‌ 8ರಂದು ಮತ್ತೊಮ್ಮೆ ಲೀಟರ್‌ಗೆ ₹ 2 ಹೆಚ್ಚಿಸಿತ್ತು. ಅದರೊಂದಿಗೆ ಖರೀದಿ ದರ ₹ 25ಕ್ಕೆ ಏರಿಕೆಯಾಗಿತ್ತು. ಬಳಿಕ ಹಾಲು ಸಂಗ್ರಹಣೆ ಹೆಚ್ಚಿ ಮಾರಾಟ ಪ್ರಮಾಣ ಕುಸಿದ ಕಾರಣ ಜೂನ್‌ 8ರಂದು ಖರೀದಿ ದರದಲ್ಲಿ ₹ 1 ಇಳಿಕೆ ಮಾಡಿತ್ತು.

ಇದರಿಂದ ಅಸಮಾಧಾನಗೊಂಡಿದ್ದ ಹಾಲು ಉತ್ಪಾದಕರು ಖರೀದಿ ದರ ಹೆಚ್ಚಿಸುವಂತೆ ಒತ್ತಾಯಿಸುತ್ತಿದ್ದರು. ಕೋಚಿಮುಲ್‌ ಆಡಳಿತ ಮಂಡಳಿಯು ಕೊನೆಗೂ ಖರೀದಿ ದರ ಹೆಚ್ಚಳ ಮಾಡಿದ್ದು, ಹಾಲು ಉತ್ಪಾದಕರ ಮೊಗದಲ್ಲಿ ಸಂತಸ ಮೂಡಿದೆ.

*

ಹಾಲು ಉತ್ಪಾದಕರ ಹಿತದೃಷ್ಟಿಯಿಂದ ಹಾಲು ಖರೀದಿ ದರ ಹೆಚ್ಚಿಸಲಾಗಿದೆ. ಇದರಿಂದ ಒಕ್ಕೂಟಕ್ಕೆ ಸುಮಾರು ₹ 6 ಕೋಟಿ ಹೆಚ್ಚುವರಿ ಆರ್ಥಿಕ ಹೊರೆಯಾಗಲಿದೆ.

–ಎನ್‌.ಜಿ.ಬ್ಯಾಟಪ್ಪ, ಕೋಚಿಮುಲ್‌ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry