ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯ ಒದಗಿಸಲು ಗ್ರಾಹಕರ ವೇದಿಕೆ

ಜಿಲ್ಲಾ ನ್ಯಾಯಾಲಯದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಜೋಶಿ ಹೇಳಿಕೆ
Last Updated 16 ಮಾರ್ಚ್ 2018, 8:48 IST
ಅಕ್ಷರ ಗಾತ್ರ

ಕೊಪ್ಪಳ: 'ಗ್ರಾಹಕರಿಗೆ ನ್ಯಾಯ ಒದಗಿಸಲು ಗ್ರಾಹಕರ ವೇದಿಕೆ ಸ್ಥಾಪಿಸಲಾಗಿದೆ' ಎಂದು ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಆರ್‌.ಜಿ.ಜೋಶಿ ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿರುವ ಸಾಕ್ಷಿದಾರರ ಮೊಗಸಾಲೆಯಲ್ಲಿ ಗುರುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಗ್ರಾಹಕರ ವೇದಿಕೆ, ಜಿಲ್ಲಾ ವಕೀಲರ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ವಿಶ್ವ ಗ್ರಾಹಕರ ದಿನಾಚರಣೆಯ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

'ಮೊದಲು ವ್ಯಾಪಾರಸ್ಥರು ಅನೇಕ ರೀತಿಯಿಂದ ಗ್ರಾಹಕರನ್ನು ಶೋಷಣೆಗೆ ಒಳಪಡಿಸುತ್ತಿದ್ದರು. ಕೇಂದ್ರ ಸರ್ಕಾರ ಇದನ್ನು ಅರ್ಥಮಾಡಿಕೊಂಡು 1986ರಲ್ಲಿ ಗ್ರಾಹಕರ ರಕ್ಷಣೆಗೆ ಕಾಯ್ದೆ ರೂಪಿಸಿತು. ಬಳಿಕ ಎಲ್ಲ ಜಿಲ್ಲೆಗಳಲ್ಲಿ ಗ್ರಾಹಕರ ರಕ್ಷಣಾ ವೇದಿಕೆಯನ್ನು ಸ್ಥಾಪಿಸಲಾಯಿತು. ಹಣ ಕೊಟ್ಟು ಸೇವೆ ಅಥವಾ ವಸ್ತುವನ್ನು ಪಡೆದು ಕೊಳ್ಳುವವರೆಲ್ಲರನ್ನೂ ಗ್ರಾಹಕರು ಎನ್ನುತ್ತಾರೆ. ವಸ್ತುಗಳು ಮತ್ತು ಪಡೆಯುವ ಸೇವೆಗಳಲ್ಲಿ ಲೋಪದೋಷಗಳು ಕಂಡುಬಂದರೆ ಅದಕ್ಕೆ ಪರಿಹಾರ ಕಂಡುಕೊಳ್ಳಲು ಗ್ರಾಹಕರ ಹಕ್ಕನ್ನು ಚಲಾಯಿಸಿ ನ್ಯಾಯ ಪಡೆಯಬೇಕು' ಎಂದರು.

ಜಿಲ್ಲಾ ಗ್ರಾಹಕರ ವೇದಿಕೆಯ ಅಧ್ಯಕ್ಷೆ ಏಕತಾ ಎಚ್.ಡಿ. ಮಾತನಾಡಿ, 'ಪ್ರಧಾನಿಯಿಂದ ಕೂಲಿಕಾರರವರೆಗೂ ಯಾವುದೇ ವಸ್ತುಗಳನ್ನು ಖರೀದಿಸುವವರೆಲ್ಲರೂ ಗ್ರಾಹಕರು. ಮೊದಲು ವ್ಯಾಪಾರಿಗಳು ಗ್ರಾಹಕರೇ ದೇವರು ಎಂದು ಹೇಳುತ್ತಿದ್ದರು. ಆದರೆ ಪ್ರಸ್ತುತ ಗ್ರಾಹಕರನ್ನು ಶೋಷಣೆ ಮಾಡಲಾಗುತ್ತಿದೆ. ಗ್ರಾಹಕರು ವಸ್ತುವಿನ ಗರಿಷ್ಠ ಮಾರಾಟ ದರ ನಿಗದಿಪಡಿಸಿದಷ್ಟು ಮಾತ್ರ ಹಣ ನೀಡಬೇಕು. ಹೆಚ್ಚು ಕೇಳಿದರೆ ಯಾಕೆ ಎಂದು ಕೇಳಬೇಕು. ಅವರು ಹಾರಿಕೆ ಉತ್ತರ ನೀಡಿದರೆ ಗ್ರಾಹಕರ ವೇದಿಕೆಗೆ ದೂರು ನೀಡಬೇಕು. ಇದರಿಂದ ನ್ಯಾಯ ಪಡೆಯಬಹುದು. ಈ ನಿಟ್ಟಿನಲ್ಲಿ ಎಲ್ಲರೂ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು' ಎಂದರು.

'ನಿಮ್ಮ ಹಕ್ಕನ್ನು ನೀವು ತಿಳಿದುಕೊಳ್ಳಬೇಕು. ಕೆಲವು ವೈದ್ಯರು ನೀಡಿದ ಸೇವೆಗಿಂತಲೂ ಹೆಚ್ಚಿನ ಹಣ ಪಡೆಯುತ್ತಾರೆ. ಈ ಮೂಲಕ ಗ್ರಾಹಕರಿಗೆ ಮೋಸ ಮಾಡುತ್ತಾರೆ. ಅವರ ಮೇಲೆಯೂ ದೂರು ದಾಖಲಿಸಬಹುದು. ಆದರೆ ಯಾವುದೇ ದೂರು ಸಲ್ಲಿಸಿದರೂ ಅದಕ್ಕೆ ನಿರ್ದಿಷ್ಟವಾದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿರಬೇಕು. ಬಹುತೇಕ ಗ್ರಾಹರಿಗೆ ಹಕ್ಕುಗಳ ಹಾಗೂ ಕಾಯ್ದೆಯ ಬಗ್ಗೆ ಅರಿವು ಇಲ್ಲ. ಈ ನಿಟ್ಟಿನಲ್ಲಿ ಪಕ್ಕದ ಮನೆಯವರಿಗೆ ಈ ಕುರಿತು ತಿಳಿವಳಿಕೆ ನೀಡಬೇಕು' ಎಂದರು.

ವಕೀಲ ಎ.ವಿ.ಕಣವಿ ಉಪನ್ಯಾಸ ನೀಡಿದರು. ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಎಸ್.ಎಚ್‍.ಇಂಗಳದಾಳ ಅಧ್ಯಕ್ಷತೆ ವಹಿಸಿದ್ದರು. ಟಿ.ಶ್ರೀನಿವಾಸ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧೂ ಎಲಿಗಾರ, ವಕೀಲರ ಸಂಘದ ಕಾರ್ಯದರ್ಶಿ ಕೊಟ್ರೇಶ್ ಪೋಚಗುಂಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT