ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಆಯೋಗದ ಸೂಚನೆ ಪಾಲಿಸಿ: ಜಿಲ್ಲಾಧಿಕಾರಿ

Last Updated 16 ಮಾರ್ಚ್ 2018, 8:49 IST
ಅಕ್ಷರ ಗಾತ್ರ

ಕೊಪ್ಪಳ: ಚುನಾವಣೆ ಸಂದರ್ಭದಲ್ಲಿ ಮುದ್ರಣಕಾರರು, ಫ್ಲೆಕ್ಸ್, ಬ್ಯಾನರ್ ತಯಾರಿಸುವವರು ಹಾಗೂ ರಾಜಕೀಯ ಪಕ್ಷಗಳು ಚುನಾವಣಾ ಆಯೋಗ ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಗುರುವಾರ ಮುದ್ರಣಕಾರರು ಮತ್ತು ರಾಜಕೀಯ ಮುಖಂಡರ ಸಭೆಯಲ್ಲಿ ಸೂಚನೆ ನೀಡಿದರು.

ಮುದ್ರಣಕಾರರು ಯಾವುದೇ ಜಾತಿ, ಧರ್ಮ ನಿಂದಿಸುವಂತಹ, ಪ್ರಚೋದನಕಾರಿ ವಿಷಯವನ್ನು ಒಳಗೊಂಡ ಕರಪತ್ರವನ್ನು ಮುದ್ರಿಸಬಾರದು. ಅಲ್ಲದೆ ವೈಯಕ್ತಿಕ ನಿಂದನೆ ಮತ್ತು ಕೋಮು ಸಾಮರಸ್ಯ ಕದಡುವಂತಹ ವಿಷಯಗಳನ್ನು ಪ್ರಕಟಿಸಬಾರದು. ಚುನಾವಣಾ ಪ್ರಚಾರಕ್ಕೆ ಕರಪತ್ರಗಳನ್ನು ಮುದ್ರಿಸುವಾಗ ಸರಿಯಾದ ಚಿಹ್ನೆಗಳನ್ನು ಉಪಯೋಗಿಸಬೇಕು. ಅಲ್ಲದೆ ಕರಪತ್ರದ ಕೆಳಭಾಗದಲ್ಲಿ ಮುದ್ರಣಾಲಯದ ಹೆಸರು, ಮೊಬೈಲ್ ಸಂಖ್ಯೆ, ಮುದ್ರಣ ಮಾಡಿದ ಕರಪತ್ರಗಳ ನಿಖರ ಸಂಖ್ಯೆಯನ್ನು ಅದರಲ್ಲಿ ನಮೂದಿಸಬೇಕು ಎಂದರು.

ಮುದ್ರಣಕ್ಕೆ ಕಾರ್ಯಾದೇಶ ಪಡೆಯುವ ಸಂದರ್ಭದಲ್ಲಿ ಅವರ ಹೆಸರು, ಮೊಬೈಲ್ ಸಂಖ್ಯೆ, ಇಬ್ಬರು ಸಾಕ್ಷಿಗಳ ಸಹಿ ಸಲ್ಲಿಸಬೇಕು. ನಂತರ ಮುದ್ರಣ ಕಾರ್ಯ ಮುಗಿದ ಬಳಿಕ, ನಮೂನೆ-ಎ ಮತ್ತು ಬಿಯಲ್ಲಿ ಸೂಕ್ತ ಮಾಹಿತಿಯೊಂದಿಗೆ ಘೋಷಣಾ ಪತ್ರವನ್ನು ಆಯಾ ವಿಧಾನಸಭಾ ಕ್ಷೇತ್ರದ ರಿಟರ್ನಿಂಗ್ ಅಧಿಕಾರಿಗೆ ಸಲ್ಲಿಸಬೇಕು. ತಮ್ಮ ಸಂಸ್ಥೆಯ ಅಧಿಕೃತ ರಸೀದಿ, ಬಿಲ್ ಮಾತ್ರ ಬಳಸಬೇಕು. ಲೆಕ್ಕ ಪತ್ರಗಳಿಗೆ ಸಂಬಂಧಿಸಿದಂತೆ ಬಿಲ್‍ಗಳು ಹಾಗೂ ರಸೀದಿಗಳನ್ನು ಸಮರ್ಪಕವಾಗಿ ಇರಿಸಿಕೊಳ್ಳಬೇಕು. ಚುನಾವಣಾ ವೀಕ್ಷಕರು ಯಾವುದೇ ಸಂದರ್ಭದಲ್ಲಿ ಯಾವುದೇ ಮುದ್ರಣ ಅಥವಾ ಫ್ಲೆಕ್ಸ್ ಮುದ್ರಣ ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲಿಸಬಹುದಾಗಿದ್ದು, ನಿಯಮಗಳನ್ನು ಉಲ್ಲಂಘಿಸುವ ಮುದ್ರಣಕಾರರಿಗೆ 6 ತಿಂಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿರುತ್ತದೆ ಜಿಲ್ಲಾಧಿಕಾರಿ ಹೇಳಿದರು.

ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿ: ಎಲ್ಲ ವೃತ್ತ ಪತ್ರಿಕೆಗಳು, ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳು, ಕೇಬಲ್ ನೆಟ್‌ವರ್ಕ್‌, ಮೊಬೈಲ್ ನೆಟ್‌ವರ್ಕ್ ಮತ್ತು ಎಸ್‍ಎಂಎಸ್ ಸಂದೇಶ ಇತ್ಯಾದಿಗಳಂತಹ ಸಮೂಹ ಮಾಧ್ಯಮದ ವಿಧಾನಗಳನ್ನು ನೋಡಿಕೊಳ್ಳುವ ಸಲುವಾಗಿ ಜಿಲ್ಲಾಮಟ್ಟದಲ್ಲಿ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿಯನ್ನು (ಎಂಸಿಎಂಸಿ) ರಚಿಸಲಾಗಿದೆ ಎಂದರು.

ಅಭ್ಯರ್ಥಿಗಳು ಹಾಗೂ ಪಕ್ಷಗಳು ಪ್ರಕಟಿಸಲು ಅಥವಾ ಪ್ರಚಾರಪಡಿಸಲು ಬಯಸುವ ಜಾಹೀರಾತುಗಳು, ಸಾರ್ವಜನಿಕ ಪ್ರಕಟಣೆಗಳು, ಸಂದೇಶಗಳನ್ನು ಪ್ರಕಟಿಸುವ ಮುನ್ನ ಜಿಲ್ಲಾಮಟ್ಟದ ಈ ಸಮಿತಿಯಿಂದ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿರುತ್ತದೆ. ಅಲ್ಲದೆ ಪತ್ರಿಕೆ ಅಥವಾ ಟಿ.ವಿ. ಮತ್ತು ಕೇಬಲ್ ನೆಟ್‍ವರ್ಕ್‍ಗಳ ಜಾಹೀರಾತುಗಳಿಗೆ ನಿಯಮಾನುಸಾರ ದರ ನಿಗದಿಪಡಿಸಿ, ಸಂಬಂಧಪಟ್ಟ ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರ್ಪಡೆಗೊಳಿಸಲಾಗುವುದು. ಜಾಹೀರಾತುಗಳು, ಸಾರ್ವಜನಿಕ ಪ್ರಕಟಣೆಗಳು, ಸಂದೇಶಗಳು, ಚರ್ಚೆಗಳು ಹಾಗೂ ಸಂದರ್ಶನದ ದಾಖಲೆಗಳನ್ನು ಸಮಿತಿಯು ನಿರ್ವಹಿಸಲಿದೆ. ಇದರ ಜೊತೆಗೆ ಕಾಸಿಗಾಗಿ ಸುದ್ದಿಯ ಬಗ್ಗೆಯೂ ಸಮಿತಿಯು ನಿಗಾ ವಹಿಸಲಿದೆ ಎಂದರು.

ಇಂತಹ ಪ್ರಕರಣ ಕಂಡುಬಂದಲ್ಲಿ, ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ಪ್ರತಿ ಅಭ್ಯರ್ಥಿಯ ಬಗ್ಗೆಯೂ ಸಮಿತಿಯು ದೈನಂದಿನ ವರದಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಿದೆ ಎಂದು ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಅವರು ಸಭೆಯಲ್ಲಿ ವಿವರಣೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ರುದ್ರೇಶ್ ಘಾಳಿ, ಡಿವೈಎಸ್‍ಪಿ ಸಂದಿಗವಾಡ, ಕೈಗಾರಿಕೆ ಇಲಾಖೆ ಜಂಟಿನಿರ್ದೇಶಕ ಪ್ರಶಾಂತ್, ಕೊಪ್ಪಳ ತಹಶೀಲ್ದಾರ್ ಗುರುಬಸವರಾಜ, ಗಂಗಾವತಿ ತಹಶೀಲ್ದಾರ್ ಚಂದ್ರಕಾಂತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT