ಕುಷ್ಟಗಿ: ಕೂಲಿಕಾರರ ಪ್ರತಿಭಟನೆ

7
ನರೇಗಾ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಒತ್ತಾಯ, ಕೂಲಿ ಪಾವತಿಸಲು ಆಗ್ರಹ

ಕುಷ್ಟಗಿ: ಕೂಲಿಕಾರರ ಪ್ರತಿಭಟನೆ

Published:
Updated:
ಕುಷ್ಟಗಿ: ಕೂಲಿಕಾರರ ಪ್ರತಿಭಟನೆ

ಕುಷ್ಟಗಿ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ತಾಲ್ಲೂಕಿನ ಮೆಣೆದಾಳ, ಸಂಗನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳ ಕೂಲಿಕಾರ್ಮಿಕರು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ನಂತರ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಧರಣಿ ನಡೆಸಿದರು.

ಸಂಗನಾಳ, ಮೆಣೆದಾಳ ಗ್ರಾಮ ಪಂಚಾಯಿತಿಗಳಲ್ಲಿ ನೋಂದಾಯಿಸಿದ ಕೂಲಿಕಾರ್ಮಿಕರಿಗೆ ಯೋಜನೆ ನಿಯಮಗಳ ಅನುಸಾರ ಉದ್ಯೋಗ ನೀಡುತ್ತಿಲ್ಲ. ಯೋಜನೆ ಕಾಯ್ದೆ ರೂಪದಲ್ಲಿ ಜಾರಿಯಲ್ಲಿದ್ದರೂ ಅನುಷ್ಠಾನದಲ್ಲಿ ಮಾತ್ರ ನಿರೀಕ್ಷಿತ ಫಲಿತಾಂಶ ಕಂಡುಬಂದಿಲ್ಲ. ಈ ಹಣಕಾಸು ವರ್ಷ ಮುಗಿದರೂ ನೂರು ದಿನಗಳ ಕೂಲಿ ದೊರೆತಿಲ್ಲ. ನಾಲ್ಕು ತಿಂಗಳಾದರೂ ಮಾಡಿದ ಕೆಲಸಗಳಿಗೆ ಕೂಲಿಹಣ ಪಾವತಿಯಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸಂಘಟನೆ ಪ್ರಮುಖರಾದ ಮಂಜುನಾಥ, ನಾಗಪ್ಪ, ಗವಿಸಿದ್ದಪ್ಪ ಗಡಾದ, ದೊಡ್ಡನಗೌಡ ಬಿಜಕಲ್‌ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಸಭೆ: ನಂತರ ಸಾಮರ್ಥ್ಯ ಸೌಧದಲ್ಲಿ ಕಾರ್ಯನಿರ್ವಹಣಾಧಿಕಾರಿ ಡಾ.ಡಿ.ಮೋಹನ್‌ ಅಧ್ಯಕ್ಷತೆಯಲ್ಲಿ ಸಮಾಲೋಚನಾ ಸಭೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೂಲಿಕಾರರು, ಕೆಲಸದ ಸ್ಥಳದಲ್ಲಿ ಎಂಜಿನಿಯರ್‌ ಇರುವುದಿಲ್ಲ. ಆದರೆ, ಕಡಿಮೆ ಕೂಲಿ ನಮೂದಿಸುತ್ತಾರೆ. ಅಂಗವಿಕಲರು, ಅರವತ್ತು ವರ್ಷ ಮೀರಿದವರಿಗೆ ಪ್ರತ್ಯೇಕ ಕೂಲಿ ಇದ್ದರೂ ಎಲ್ಲರಿಗೂ ಒಂದೇ ರೀತಿ ನಮೂದಿಸಲಾಗುತ್ತಿದೆ. ಹೊಸದಾಗಿ ಜಾಬ್‌ಕಾರ್ಡ್‌ಗಳನ್ನು ನೀಡಿಲ್ಲ ಎಂದು ಸಮಸ್ಯೆಗಳನ್ನು ಬಿಚ್ಚಿಟ್ಟರು.

ಈ ಕುರಿತು ಮಾತನಾಡಿದ ಕಾರ್ಯನಿರ್ವಹಣಾಧಿಕಾರಿ, ಐದು ಪಂಚಾಯಿತಿಗಳಿಗೆ ಒಬ್ಬ ಎಂಜಿನಿಯರ್‌ ಇರುತ್ತಾರೆ. ಏಕಕಾಲಕ್ಕೆ ಎಲ್ಲ ಕಡೆ ಬರಲು ಸಾಧ್ಯವಾಗುವುದಿಲ್ಲ. ಕೂಲಿಕಾರರು ಸರಿಯಾದ ಅಳತೆ ನೀಡುವುದು ಕಡ್ಡಾಯ ಎಂದರು.

ಕಾಮಗಾರಿ ನಡೆದ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಅದೇ ರೀತಿ ಹೊಸ ಜಾಬ್‌ಕಾರ್ಡ್‌ಗಳನ್ನು ಪಡೆಯುವುದಕ್ಕೆ ಪಡಿತರ ಚೀಟಿ ಕಡ್ಡಾಯವಾಗಿರುತ್ತದೆ ಎಂದು ಹೇಳಿದರು.

ಕೆಲಸ ಮಾಡಲು ಸಾಧ್ಯವಾಗದ ಕಾರಣ ಆಯಾ ಪಂಚಾಯಿತಿ ವ್ಯಾಪ್ತಿಯ ಬೇರೆ ಬೇರೆ ಸ್ಥಳದಲ್ಲಿ ಕೆಲಸಕ್ಕೆ ಕರೆದೊಯ್ಯಲಾಗುತ್ತದೆ.

ಟ್ರ್ಯಾಕ್ಟರ್‌ ವ್ಯವಸ್ಥೆ ಮಾಡುವುದರ ಜೊತೆಗೆ ಪ್ರವಾಸ ಭತ್ಯೆಯನ್ನೂ ನೀಡಲಾಗುತ್ತದೆ. ಸಂಗನಾಳ ಗ್ರಾಮ ಪಂಚಾಯಿತಿಗೆ ₹ 16 ಲಕ್ಷ ಟ್ರ್ಯಾಕ್ಟರ್‌ ಬಾಡಿಗೆ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಪಂಚಾಯತ್‌ರಾಜ್‌ ಇಲಾಖೆಯ ಎಂಜಿನಿಯರಿಂಗ್‌ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಶಿವಾನಂದ ನಾಗೋಡ, ನರೇಗಾ ಸಹಾಯಕ ನಿರ್ದೇಶಕ ಎನ್‌.ಎಸ್‌.ಬಡಿಗೇರ, ಎಂಜಿನಿಯರ್‌ಗಳು ಮತ್ತು ಅಭಿವೃದ್ಧಿ ಅಧಿಕಾರಿಗಳು ಇದ್ದರು.

ದುಡಿಯದಿದ್ದರೂ ಹಾಜರಿಗೆ ಒತ್ತಾಯ

ಕುಷ್ಟಗಿ:
ಕೆಲಸಕ್ಕೆ ಬಾರದವರ ಹೆಸರಿನಲ್ಲೂ ಹಾಜರಿ ಹಾಕುವಂತೆ ಒತ್ತಾಯಿಸಲಾಗುತ್ತದೆ. ಸ್ಥಳಕ್ಕೆ ಹೋಗಿ ವಸ್ತುಸ್ಥಿತಿ ಪರಿಶೀಲಿಸಿದರೆ ಕೆಲವರು ಹೊಡೆಯಲು ಬರುತ್ತಾರೆ. ಮಹಿಳಾ ಕೂಲಿಕಾರರು ಅವಾಚ್ಯ ಪದಗಳಿಂದ ಸಿಬ್ಬಂದಿಯನ್ನು ನಿಂದಿಸುತ್ತಾರೆ. ನಿಯಮಗಳ ಅನುಸಾರ ನಡೆದುಕೊಂಡರೆ ಕೆಲವರಿಗೆ ಆಗುತ್ತಿಲ್ಲ ಎಂಬುದನ್ನು ಸಭೆಯಲ್ಲಿದ್ದ ಸಿಬ್ಬಂದಿ ಅಧಿಕಾರಿಯ ಗಮನಕ್ಕೆ ತಂದಾಗ ಮಾತಿನ ಚಕಮಕಿ ನಡೆಯಿತು.

ಸಂಘಟನೆ ಹೆಸರಿನಲ್ಲಿ ರಾಯಚೂರು ಜಿಲ್ಲೆಯ ಕೆಲ ಮಧ್ಯವರ್ತಿಗಳು ನರೇಗಾ ಯೋಜನೆಯಲ್ಲಿ ಕೆಲಸಗಾರರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದು, ಕೂಲಿಕಾರರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಕರ್ತವ್ಯ ನಿರತ ಅಧಿಕಾರಿ, ಸಿಬ್ಬಂದಿಗೂ ಕಿರುಕುಳ ನೀಡುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry