ಸಂಚಲನ ಮೂಡಿಸಿದ ಬೋಪಯ್ಯ ‘ಸ್ಟೇಟಸ್‌’

ಗುರುವಾರ , ಮಾರ್ಚ್ 21, 2019
24 °C

ಸಂಚಲನ ಮೂಡಿಸಿದ ಬೋಪಯ್ಯ ‘ಸ್ಟೇಟಸ್‌’

Published:
Updated:
ಸಂಚಲನ ಮೂಡಿಸಿದ ಬೋಪಯ್ಯ ‘ಸ್ಟೇಟಸ್‌’

ಮಡಿಕೇರಿ: ವಿರಾಜಪೇಟೆ ಕ್ಷೇತ್ರದ ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ಅವರ ಫೇಸ್‌ಬುಕ್‌ ‘ಸ್ಟೇಟಸ್‌’ ಕೊಡಗಿನಲ್ಲಿ ಗುರುವಾರ ಸಂಚಲನಕ್ಕೆ ಕಾರಣವಾಯಿತು.

ಕೊಡಗಿನಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಿದ್ದು, ಬಿಜೆಪಿಯ ಹಾಲಿ ಶಾಸಕರ ಬದಲಿಗೆ ಹೊಸ ಮುಖಗಳಿಗೆ ಅವಕಾಶ ನೀಡಬೇಕೆಂಬ ಆಗ್ರಹ ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ. ಬುಧವಾರ ರಾತ್ರಿ 11.47ಕ್ಕೆ ಬೋಪಯ್ಯ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ನಾಳೆ ಪಕ್ಷದ ಕಾರ್ಯಕರ್ತರಿಗೆ ಅಚ್ಚರಿ ನೀಡುವುದಾಗಿ ಬರೆದುಕೊಂಡಿದ್ದು ಕುತೂಹಲಕ್ಕೆ ಕಾರಣವಾಗಿತ್ತು.

ವಿರಾಜಪೇಟೆಯಿಂದ ಸ್ಪರ್ಧಿಸಲು ಗೌಡ ಸಮುದಾಯದ ಬೋಪಯ್ಯ ತಯಾರಿ ನಡೆಸಿದ್ದರು. ಪರಿವರ್ತನಾ ಯಾತ್ರೆ ವೇಳೆ ಹಾಲಿ ಶಾಸಕರಿಗೇ ಟಿಕೆಟ್‌ ಎಂದು ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಘೋಷಣೆ ಮಾಡಿದ್ದರು. ಬಳಿಕ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿತ್ತು.

ಗೋಣಿಕೊಪ್ಪಲಿನಲ್ಲಿ ಭಿನ್ನಮತೀಯ ಮುಖಂಡರು ಸಭೆ ನಡೆಸಿದ್ದರು. ಬೋಪಯ್ಯ ಬದಲಿಗೆ ಕೊಡವ ಸಮುದಾಯದ ಮುಖಂಡರೊಬ್ಬರಿಗೆ ಟಿಕೆಟ್‌ ನೀಡಬೇಕೆಂಬ ಬೇಡಿಕೆ ಇಟ್ಟಿದ್ದರು. ಈ ಬೆಳವಣಿಗೆಯಿಂದ ಬೋಪಯ್ಯ ಅವರು ಬೇಸತ್ತು ಈ ರೀತಿ ಬರೆದುಕೊಂಡರೇ ಅಥವಾ ರಾಜಕೀಯ ನಿವೃತ್ತಿಯ ಇಂಗಿತ ವ್ಯಕ್ತಪಡಿಸುತ್ತಾರೆಯೇ ಎನ್ನುವ ಚರ್ಚೆಗಳು ನಡೆದವು.

‘1976ರ ಮಡಿಕೇರಿಯನ್ನು ನಿಮಗೆ ಊಹಿಸಲೂ ಅಸಾಧ್ಯ. ನಗರದ ಗದ್ದೆಗಳಿಗಿನ್ನೂ ಲೇಔಟ್‌ ಭಾಗ್ಯ ಸಿಕ್ಕಿರಲಿಲ್ಲ. ಡಿಸೆಂಬರ್‌ನ ಚುಮು ಚುಮು ಚಳಿ. ಅವತ್ತು ಹುತ್ತರಿ ಹಬ್ಬ... ಮಡಿಕೇರಿಯ ಜೈಲಿನಲ್ಲಿ ನಾನು ಕಂಬಿ ಎಣಿಸುತ್ತಿದ್ದೆ. ತುರ್ತು ಪರಿಸ್ಥಿತಿಯ ಕರಾಳ ದಿನಗಳು ಅವು...’ ಎಂದು ಮತ್ತೊಮ್ಮೆ ಸ್ಟೇಟಸ್‌ ಹಾಕಿದ್ದರು.

ಬೆಂಗಳೂರಿಗೆ ತೆರಳಿದ್ದ ಕಾರಣ ಬೆಂಬಲಿಗರನ್ನೂ ಭೇಟಿ ಆಗಿರಲಿಲ್ಲ. ಹೀಗಾಗಿ, ಮಧ್ಯಾಹ್ನದ ತನಕವೂ ‘ಸ್ಟೇಟಸ್‌’ ನಡೆ ಕುತೂಹಲ ಮೂಡಿಸಿತ್ತು.

‘ಒಬ್ಬ ಸಾಮಾನ್ಯ ಕಾರ್ಯಕರ್ತ ನಡೆದು ಬಂದ ಹಾದಿಯನ್ನು ಜನರ ಬಳಿ ಹಂಚಿಕೊಳ್ಳುವ ತವಕ; ನಾನು ನಡೆದು ಬಂದ ಹಾದಿಯನ್ನು ನಿಮ್ಮ ಮುಂದೆ ಬಿಚ್ಚಿಡುತ್ತಿದ್ದೇನೆ...’ ಎಂದು ಚರ್ಚೆಗೆ ತೆರೆ ಎಳೆದಿದ್ದಾರೆ.

‘ರಾಜಕೀಯವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಭಿನ್ನಮತೀಯರ ಊಹೆ ತಪ್ಪು’ ಎಂದು ಬೋಪಯ್ಯ ‘ಪ್ರಜಾವಾಣಿ’ಗೆ ಸ್ಪಷ್ಟನೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry