‘ಪ್ರಾದೇಶಿಕ ಭಾಷೆಯ ಮೇಲೆ ಹಲ್ಲೆ’

7
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಆತಂಕ

‘ಪ್ರಾದೇಶಿಕ ಭಾಷೆಯ ಮೇಲೆ ಹಲ್ಲೆ’

Published:
Updated:
‘ಪ್ರಾದೇಶಿಕ ಭಾಷೆಯ ಮೇಲೆ ಹಲ್ಲೆ’

ಮಡಿಕೇರಿ: ‘ಪ್ರಾದೇಶಿಕ ಭಾಷೆಯ ಮೇಲೆ ಈಚೆಗೆ ಹಲ್ಲೆ ಹಾಗೂ ಕಡೆಗಣಿಸುವ ಬೆಳವಣಿಗೆಗಳು ನಡೆಯುತ್ತಿವೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.

ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷರೂ ಆದ ಹೋರಾಟಗಾರ ಟಿ.ಪಿ. ರಮೇಶ್ ಅವರಿಗೆ ನಗರದ ಕೆಳಗಿನ ಗೌಡ ಸಮಾಜದಲ್ಲಿ ಗುರುವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಭಾರತದ ಬಹುತ್ವದ ದೇಶ. ಬಹುಸಂಸ್ಕೃತಿ, ಬಹು ಧರ್ಮವಿದೆ. ಎಲ್ಲ ಸಂಸ್ಕೃತಿ ಹಾಗೂ ಭಾಷೆಯನ್ನು ಇಲ್ಲಿ ಪ್ರೀತಿಸಲಾಗುತ್ತದೆ. ಅದಕ್ಕೆ ಕರ್ನಾಟಕವೊಂದು ದೊಡ್ಡ ಉದಾಹರಣೆ. ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ಆದರೆ, ಇಂದಿನ ಬೆಳವಣಿಗೆ ಗಮನಿಸಿದರೆ ವಿಷಾದವಾಗಲಿದೆ. ಜತೆಗೆ, ಪ್ರಾದೇಶಿಕ ಭಾಷೆಯ ಮೇಲೆ ಹಲ್ಲೆಯಂತಹ ಬೆಳವಣಿಗೆಗಳು ನಡೆಯುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ರಮೇಶ್ ಅವರು ಅಸಂಘಟಿತ ಹಾಗೂ ತಳ ಸಮುದಾಯಗಳಲ್ಲಿ ರಾಜಕೀಯ. ಸಾಹಿತ್ಯ, ಸಂಘಟನೆಯ ಎಚ್ಚರಿಕೆ ಪ್ರಜ್ಞೆ ಮೂಡಿಸಿದ್ದಾರೆ’ ಎಂದು ಸಿದ್ದರಾಮಯ್ಯ ಹೇಳಿದರು.

‘ನಾನು ಮಡಿಕೇರಿಯಲ್ಲಿ ಉಪನ್ಯಾಸಕ ವೃತ್ತಿ ಮಾಡುತ್ತಿದೆ. ಆಗ ಮಡಿಕೇರಿ ಪರಿಸರ ಸ್ವಚ್ಛಂದವಾಗಿತ್ತು. ಇಂದು ಪ್ರಕೃತಿಯ ಮೇಲೆ ಹಲ್ಲೆ ನಡೆಸುತ್ತಿರುವುದು ನೋವಿನ ವಿಚಾರ’ ಎಂದು ಎಚ್ಚರಿಸಿದ ಅವರು, ‘ತತ್ವ, ನಿಷ್ಠೆ ಹಾಗೂ ಮಾನವೀಯತೆ ಬೆಳೆಸಿಕೊಳ್ಳಬೇಕು’ ಎಂದರು.

ಮಾಜಿ ಸಚಿವ ಎಂ.ಸಿ. ನಾಣಯ್ಯ ಮಾತನಾಡಿ, ‘ಹಿಂದೆ ಸಾಹಿತ್ಯ ಪರಿಷತ್‌ ಹಾಗೂ ಸಾಹಿತ್ಯ ಕ್ಷೇತ್ರ ರಾಜಕೀಯ ರಹಿತವಾಗಿ ಕೆಲಸ ಮಾಡುತ್ತಿತ್ತು. ಇಂದು ಅಲ್ಲಿಯೂ ರಾಜಕೀಯ ಪ್ರವೇಶ ಮಾಡಿದೆ’ ಎಂದು ವಿಷಾದಿಸಿದರು.

‘ರಮೇಶ್ ಅವರು 40 ವರ್ಷಗಳಿಂದ ಒಡನಾಡಿಯಾಗಿದ್ದು, ರಾಜಕೀಯ ರಹಿತವಾಗಿ ಇಂದಿಗೂ ಸಹ ಜೊತೆಯಾಗಿದ್ದೇವೆ. ರಮೇಶ್ ಅವರು ಮಾಡಿದ ಕೆಲಸವನ್ನು ಎಂದಿಗೂ ಮರೆಯಲಾರೆ. ರಮೇಶ್ ಮತ್ತು ಬಳಗ ಹಗಲು ರಾತ್ರಿ ದುಡಿದು ನನ್ನನ್ನು ರಾಜಕೀಯವಾಗಿ ಗೆಲ್ಲುವಂತೆ ಮಾಡಿದರು. ಅವರು ಚೆಯ್ಯಂಡಾಣೆಯಲ್ಲಿ ನನ್ನ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೋಡಗಿಸಿಕೊಂಡಿದ್ದ ಸಂದರ್ಭದಲ್ಲಿ ಪ್ರತಿಸ್ಪರ್ಧಿಗಳು ರಮೇಶ್‌ಗೆ ಹೊಡೆದಿದ್ದು ಕೂಡ ನೆನಪಿದೆ’ ಎಂದು ಸ್ಮರಿಸಿದರು.

ಸಾಹಿತಿ ಡಾ.ಮಳಲಿ ವಸಂತ ಕುಮಾರ್, ‘ಜಿಲ್ಲೆಯಲ್ಲಿ ಕನ್ನಡ ಭಾಷೆ, ಸಾಹಿತ್ಯ ಬೆಳವಣಿಗೆಗೆ ಟಿ.ಪಿ.ರಮೇಶ ಅವರ ಕೊಡುಗೆ ಅಪಾರ. ಆದರೆ, ಕೊಡಗಿನಲ್ಲಿ ಹೋಂಸ್ಟೇಗಳು ಇಲ್ಲಿನ ಸಂಸ್ಕೃತಿಗೆ ಧಕ್ಕೆ ತರುತ್ತಿದೆ. ಅದಕ್ಕೆ ಕಡಿವಾಣ ಹಾಕಬೇಕು’ ಎಂದು ಹೇಳಿದರು.

ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ‘ಜಿಲ್ಲೆಯಲ್ಲಿ ಕನ್ನಡ ಭಾಷೆಯನ್ನು ಗಟ್ಟಿಯಾಗಿ ನೆಲೆಗೊಳ್ಳಲು ಟಿ.ಪಿ.ರಮೇಶ್ ಅವರು ಶ್ರಮಿಸಿದ್ದಾರೆ’ ಎಂದು ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ನೀಲಗಿರಿ ತಳವಾರ್ ಮಾತನಾಡಿದರು. ಕವಿತಾ ರೈ, ಅಭಿನಂದನಾ ಗ್ರಂಥ ಪ್ರಧಾನ ಸಂಪಾದಕ ಬಿ.ಎ. ಷಂಶುದ್ದಿನ್, ಡಾ.ಎಂ.ಜಿ. ನಾಗರಾಜು, ಸುಳ್ಯ ಕೆವಿಜಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಎನ್.ಎ. ಜ್ಞಾನೇಶ್, ಬೆಸೂರು ಮೋಹನ್ ಪಾಳೆಗಾರ್, ಬಿ.ಎನ್. ಪ್ರಕಾಶ್ ಹಾಜರಿದ್ದರು.

‘ಪಕ್ಷದ ಎಂಜಲಿಗೆ ಪತ್ರಿಕೆ ಮಾರಿಕೊಂಡರೆ ಅಪಾಯ’

ಮಡಿಕೇರಿ:
‘ಪ್ರಜಾಪ್ರಭುತ್ವದಲ್ಲಿ ನಾಲ್ಕನೇ ಅಂಗ ಪತ್ರಿಕಾ ಕ್ಷೇತ್ರ; ರಾಜಕೀಯ ಪಕ್ಷದ ಎಂಜಲಿಗೆ ಮಾಧ್ಯಮವನ್ನು ಮಾರಾಟ ಮಾಡಿಕೊಂಡರೆ ಪ್ರಶ್ನಿಸುವ ಮನೋಭಾವ ಕಡಿಮೆ ಆಗಲಿದೆ. ಆದರೆ, ಇಂದಿನ ಮಾಧ್ಯಮಗಳು ಸುಳ್ಳನ್ನೇ ಸತ್ಯವೆಂದು ನಂಬಿಸುವ ಕೆಲಸ ಮಾಡುತ್ತಿವೆ’ ಎಂದು ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.

‘ಪ್ರಜಾಪ್ರಭುತ್ವದ ಆಶಯಗಳಿಗೆ ತಕ್ಕಂತೆ ಪತ್ರಿಕಾ ಕ್ಷೇತ್ರ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

*

ಬಹುಸಂಸ್ಕೃತಿ ರಾಷ್ಟ್ರದಲ್ಲಿ ಇತ್ತೀಚಿನ ರಾಜಕೀಯ ಗಮನಿಸಿದರೆ ಮುಂದಿನ ದಿನಗಳಲ್ಲಿ ಅರಾಜಕತೆ ಉಂಟಾಗುವ ಆತಂಕವಿದೆ. ಸಾಹಿತ್ಯ ಕ್ಷೇತ್ರವನ್ನೂ ರಾಜಕೀಯ ಬಿಟ್ಟಿಲ್ಲ.

– ಎಂ.ಸಿ. ನಾಣಯ್ಯ, ಮಾಜಿ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry