ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದ ಕುಗ್ಗುತ್ತಿದೆ ‍ಪ್ರಧಾನಿ ಮೋದಿ ಜನಪ್ರಿಯತೆ: ದೇವೇಗೌಡ

7

ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದ ಕುಗ್ಗುತ್ತಿದೆ ‍ಪ್ರಧಾನಿ ಮೋದಿ ಜನಪ್ರಿಯತೆ: ದೇವೇಗೌಡ

Published:
Updated:
ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದ ಕುಗ್ಗುತ್ತಿದೆ ‍ಪ್ರಧಾನಿ ಮೋದಿ ಜನಪ್ರಿಯತೆ: ದೇವೇಗೌಡ

ಹಾಸನ: ನೋಟು ರದ್ದತಿ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ), ಕಪ್ಪುಹಣವನ್ನು ಬಡವರಿಗೆ ಹಂಚುವ ಭರವಸೆ ಹಾಗೂ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯನ್ನು ಕುಗ್ಗಿಸುತ್ತಿರುವುದು ನಿಜ ಎಂದು ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡ ಹೇಳಿದರು.

ಎನ್‌ಡಿಎ ಮೈತ್ರಿಕೂಟದಿಂದ ತೆಲುಗುದೇಶಂ ಪಕ್ಷ (ಟಿಡಿಪಿ) ಹೊರಬಂದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ‘ಆಂಧ್ರ ಪ್ರದೇಶ ವಿಭಜನೆಯಾದಾಗ ವಿಶೇಷ ಪ್ಯಾಕೇಜ್ ಕೊಡುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಆದರೆ, ಈವರೆಗೂ ನೀಡಿಲ್ಲ. ಪ್ಯಾಕೇಜ್ ವಿಷಯದಲ್ಲಿ ಪ್ರಧಾನಿ ಅವರು ಯೂಟರ್ನ್ ತೆಗೆದುಕೊಂಡರು. ಕೇಂದ್ರದ ಈ ನಡೆಯೇ ಇಂದಿನ ಹೊಸ ಬೆಳವಣಿಗೆಗೆ ಕಾರಣ ಇರಬಹುದು’ ಎಂದು ಹೇಳಿದರು.

ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬುನಾಯ್ಡುಗೆ ಬೆಂಬಲ ನೀಡುವ ಬಗ್ಗೆ ಕಾದು ನೋಡಿ ಎಂದು ದೇವೇಗೌಡರು ಹೇಳಿದ್ದಾರೆ.

‘ಮೊಯಿಲಿ ಆರೋಪ ಸತ್ಯ’: ಕಾಂಗ್ರೆಸ್‌ ಪಕ್ಷದಲ್ಲಿ ಟಿಕೆಟ್‌ ಹಂಚಿಕೆ ವಿಷಯಕ್ಕೆ ಸಂಬಂಧಿಸಿ ಸಂಸದ ವೀರಪ್ಪಮೊಯಿಲಿ ಮಾಡಿರುವ ಆರೋಪ ಸತ್ಯ ಎಂದ ಗೌಡರು, ಅದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.

‘ಮೊಯಿಲಿ ಅವರು ಮಾಡಿರುವ ಆರೋಪ ಒಂದು ಅಂಶ ಮಾತ್ರ. ಈ ರೀತಿಯ ಚಟುವಟಿಕೆ ಸಾಕಷ್ಟು ನಡೆಯುತ್ತಿವೆ. ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮೊಯಿಲಿಗಿಂತ ಹೆಚ್ಚು ನಾನು‌ ಬೇರೆ ಹೇಳಬೇಕೆ?’ ಎಂದು ಅವರು ಪ್ರಶ್ನಿಸಿದರು.

‘ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಇದೇ 21ಕ್ಕೆ ಜಿಲ್ಲೆಗೆ ಬರುತ್ತಾರಂತೆ. ಅವರು ಬಂದು ಹೋಗಲಿ. ಆ ನಂತರ ನಾವೂ ದೊಡ್ಡ ಸಭೆ ಮಾಡುತ್ತೇವೆ’ ಎಂದು ದೇವೇಗೌಡ ಹೇಳಿದರು.

‘ಕಾವೇರಿ ವಿಚಾರದಲ್ಲಿ ನನ್ನ ನಿರ್ಧಾರ ಅಚಲ. ಕಾವೇರಿ ಕೊಳ್ಳದ ಸಂಸದರ ಸಭೆಯನ್ನು ಮುಂದೆ ಕರೆದರೂ ಭಾಗಿಯಾಗುವೆ. ನಿರ್ವಹಣಾ ಮಂಡಳಿ ರಚನೆ ಬಗ್ಗೆ ನಾನು ಈಗಾಗಲೇ ಕೇಂದ್ರದ ಹಲವರಿಗೆ ಪತ್ರ ಬರೆದಿದ್ದೇನೆ’ ಎಂದು ಅವರು ಹೇಳಿದರು.

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ: ‘ಚುನಾವಣೆ ಹೊಸ್ತಿಲಲ್ಲಿ ಸಾವಿರಾರು ಕೋಟಿ‌ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಹಾಕಿದರೆ ಜನ ನಂಬುತ್ತಾರಾ? ಜನರಿಗೆ ರಾಜಕೀಯ ಪ್ರಭುತ್ವ ಇಲ್ಲವೇ?’ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಖೇಣಿ ಭ್ರಷ್ಟ: ‘ಅಶೋಕ್ ಖೇಣಿ ಸಾಕಷ್ಟು ಅಕ್ರಮ ಎಸಗಿದ್ದಾರೆ. ₹ 30 ಸಾವಿರ ಕೋಟಿ ವಂಚನೆ ಮಾಡಿದ್ದಾರೆ. ಅಂಥವರನ್ನು ಪಕ್ಷಕ್ಕೆ ಸೇರಿಸಿಕೊಂಡು ‌ನಮ್ಮದು ಭ್ರಷ್ಟಾಚಾರರಹಿತ ಸರ್ಕಾರ ಅಂದರೆ ಜನ ಒಪ್ಪುತ್ತಾರಾ? ನೈಸ್ ಯೋಜನೆಯಿಂದ ತೊಂದರೆಗೀಡಾಗಿರುವ ರೈತರನ್ನು ಜತೆ ಸೇರಿಸಿ ಶೀಘ್ರ ರಾಜಭವನ ಚಲೋ ಮಾಡುವೆ’ ಎಂದು ಗೌಡರು ಎಚ್ಚರಿಕೆ ನೀಡಿದರು.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಏನು ಬ್ರೇಕಿಂಗ್ ಸುದ್ದಿ ಕೊಡುತ್ತಾರೆ ಕಾದು ನೋಡೋಣ. ನನಗೆ ಸಹನಾ‌ ಶಕ್ತಿ ಇದೆ’ ಎಂದು ದೇವೇಗೌಡ ನಸುನಕ್ಕು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry