ಕಾರ್ಮಿಕರ ಮೊಗದಲ್ಲಿ ಉಕ್ಕೀತೇ ಸಂತಸ ?

7
ಇಂದು ನಗರಕ್ಕೆ ಉಕ್ಕು ಸಚಿವ ಚೌಧರಿ ಬಿರೇಂದ್ರ ಸಿಂಗ್ ಭೇಟಿ

ಕಾರ್ಮಿಕರ ಮೊಗದಲ್ಲಿ ಉಕ್ಕೀತೇ ಸಂತಸ ?

Published:
Updated:
ಕಾರ್ಮಿಕರ ಮೊಗದಲ್ಲಿ ಉಕ್ಕೀತೇ ಸಂತಸ ?

ಭದ್ರಾವತಿ: ಇಲ್ಲಿನ ವಿಐಎಸ್ಎಲ್ ಕಾರ್ಖಾನೆಗೆ ಕೇಂದ್ರ ಉಕ್ಕು ಸಚಿವ ಚೌಧರಿ ಬಿರೇಂದ್ರ ಸಿಂಗ್ ಶುಕ್ರವಾರ ಭೇಟಿ ನೀಡಲಿದ್ದು, ಕಾರ್ಮಿಕರ ಮೊಗದಲ್ಲಿ ಸಂತಸದ ಛಾಯೆ ಮೂಡಿದೆ.

ಶತಮಾನದ ವರ್ಷಾಚರಣೆ ಸಂದರ್ಭದಲ್ಲೇ ಉತ್ಪಾದನೆ ಸ್ಥಗಿತವಾಗಿರುವ ಕಾರ್ಖಾನೆಯಲ್ಲಿ ಈಗ ನೀರವ ಮೌನ ಅವರಿಸಿದ್ದರೆ, ಮತ್ತೊಂದೆಡೆ ಗುತ್ತಿಗೆ ಕಾರ್ಮಿಕರು ದಿನದಿಂದ ದಿನಕ್ಕೆ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಕಳೆದೊಂದು ವರ್ಷದಿಂದ ಬ್ಲಾಸ್ಟ್ ಫರ್ನೇಸ್ ಉತ್ಪಾದನೆ ಸಂಪೂರ್ಣ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಗುತ್ತಿಗೆ ಕಾರ್ಮಿಕರ ಮಾಸಿಕ ಕೆಲಸದಲ್ಲೂ ಕಡಿತ ಉಂಟಾಗಿ, ತಿಂಗಳಿಗೆ 13 ದಿನಗಳ ಕೆಲಸವಷ್ಟೆ ನಿಗದಿಯಾಗಿದೆ.

ಇದರ ಜತೆ ಜತೆಗೆ ಗುತ್ತಿಗೆ ಪದ್ಧತಿ ನವೀಕರಣಗೊಳ್ಳದ ಹಿನ್ನೆಲೆಯಲ್ಲಿ ಈ ತಿಂಗಳ ಆರಂಭದಲ್ಲಿ 36 ಮಂದಿ ಗುತ್ತಿಗೆ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಈ ತಿಂಗಳ ಅಂತ್ಯದ ವೇಳೆಗೆ ಕೆಲಸ ಕಳೆದುಕೊಂಡ ಗುತ್ತಿಗೆದಾರರ ಪ್ರಮಾಣ 300ಕ್ಕೆ ಏರಲಿದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಏಪ್ರಿಲ್ ಅಂತ್ಯದ ವೇಳೆಗೆ ಈ ಸಂಖ್ಯೆ 800ಕ್ಕೆ

ಏರಲಿದೆ.

ಬಂಡವಾಳ ಅಗತ್ಯ: ಸದ್ಯ ಕಾರ್ಖಾನೆ ಉತ್ಪಾದನೆ ಆರಂಭಕ್ಕೆ ಅಗತ್ಯ ಇರುವುದು ಬಂಡವಾಳ. ಇದನ್ನು ತೊಡಗಿಸಲು ಆಡಳಿತ ಮಂಡಳಿ ಮುಂದಾದಲ್ಲಿ ಎಲ್ಲರಿಗೂ ನಿಗದಿತ ಕೆಲಸ ಸಿಗಲಿದೆ ಎಂಬುದು ಕಾರ್ಮಿಕ ಮುಖಂಡರ ವಾದ.

350 ಕಾಯಂ ಕಾರ್ಮಿಕರನ್ನು ಹೊಂದಿರುವ ಕಾರ್ಖಾನೆಯಲ್ಲಿ 1,200ಕ್ಕೂ ಹೆಚ್ಚು ಮಂದಿ ಗುತ್ತಿಗೆ ಕಾರ್ಮಿಕರು ಹಲವು ದಶಕಗಳಿಂದ ಕೆಲಸ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದಾರೆ.

ಪ್ರಥಮ ಬಾರಿಗೆ 1989ರಲ್ಲಿ 500 ಗುತ್ತಿಗೆ ಕಾರ್ಮಿಕರನ್ನು ಕೆಲಸ ಇಲ್ಲ ಎಂಬ ಕಾರಣಕ್ಕೆ ತೆಗೆದುಹಾಕಲಾಗಿತ್ತು. ಅದಾದ ಮೇಲೆ ಕೆಲಸ ಕಳೆದು ಕೊಳ್ಳತೊಡಗಿದವರ ಸಂಖ್ಯೆ ಈ ತಿಂಗಳಿನಿಂದಲೇ ಏರುತ್ತಿದೆ ಎನ್ನುತ್ತಾರೆ ಗುತ್ತಿಗೆ ಕಾರ್ಮಿಕ ಸಂಘದ ಪದಾಧಿಕಾರಿಗಳು.

ತಿಂಗಳಿಗೆ 13 ದಿನಗಳ ಕೆಲಸ ಎಂಬ ಪದ್ಧತಿ ಆರಂಭಗೊಂಡು 10 ತಿಂಗಳು ಕಳೆದಿವೆ. ಬೇರೆಡೆಯಿಂದ ಸಿದ್ಧ ಉಕ್ಕನ್ನು ತರಿಸಿ, ಅದನ್ನು ಬೇಡಿಕೆಗೆ ತಕ್ಕಂತೆ ಸಿದ್ಧ ಮಾಡಿಕೊಡುವುದು ಎಸ್ಎಂಎಸ್ ವಿಭಾಗದಲ್ಲಿ ನಡೆಯುತ್ತಿರುವುದರಿಂದ ಇಷ್ಟು ಕೆಲಸ ಸಿಗುತ್ತಿದೆ ಎನ್ನುತ್ತಾರೆ ಮುಖಂಡರು.

ಹೋರಾಟದ ಪ್ರಭಾವ: ಕೇಂದ್ರ ಸಚಿವರೊಬ್ಬರು ಕಳೆದ ಮೂರು ವರ್ಷಗಳಲ್ಲಿ 2ನೇ ಬಾರಿ ಇಲ್ಲಿಗೆ ಬರುತ್ತಿರುವುದಕ್ಕೆ ಕಾರ್ಮಿಕರ ಹೋರಾಟ ಮತ್ತು ಬೇಡಿಕೆಗಳ ಪಟ್ಟಿಯೇ ಕಾರಣ ಎನ್ನಲಾಗಿದೆ.

2015ರಲ್ಲಿ ಅಂದಿನ ಉಕ್ಕು ಸಚಿವರಾಗಿದ್ದ ನರೇಂದ್ರಸಿಂಗ್ ತೋಮರ್ ಕಾರ್ಖಾನೆಗೆ ಭೇಟಿ ನೀಡಿ, ಕಾರ್ಖಾನೆಗೆ ಸ್ವಂತ ಗಣಿ ನೀಡಿದಲ್ಲಿ ₹ 1,000 ಕೋಟಿ ಬಂಡವಾಳ ಹೂಡುವ ಭರವಸೆ ನೀಡಿದ್ದರು.

ರಾಜ್ಯ ಸರ್ಕಾರ ಸಂಡೂರು ಬಳಿ 150 ಎಕರೆ ಅದಿರು ಪ್ರದೇಶವನ್ನು ಕೊಡುವ ಪ್ರಸ್ತಾವಕ್ಕೆ ಅನುಮೋದನೆ ನೀಡಿ, ಕೇಂದ್ರಕ್ಕೆ ಕಳುಹಿಸಿದ ಬೆನ್ನಲ್ಲೇ ಬಂಡವಾಳ ಹೂಡಿಕೆಯ ಬೇಡಿಕೆ ಹೆಚ್ಚಿತು. ಮತ್ತೊಂದೆಡೆ ಗುತ್ತಿಗೆ ಕಾರ್ಮಿಕರ ರಕ್ಷಣೆಯ ಬೇಡಿಕೆಯೂ ಆದ್ಯತೆ ಪಡೆದಿದೆ.

ಈ ನಿಟ್ಟಿನಲ್ಲಿ ನಿರಂತವಾಗಿ ನಡೆದ ಹೋರಾಟಗಳು, ಸಂಸದ ಬಿ.ಎಸ್. ಯಡಿಯೂರಪ್ಪ ಅವರ ಭೇಟಿ, ಕೇಂದ್ರ ಸಚಿವರ ಜತೆಯಲ್ಲಿನ ಸಂಪರ್ಕದಿಂದಾಗಿ ಸಹಜವಾಗಿ ಅವರೇ ಇಲ್ಲಿಗೆ ಬರಲು ಕಾರಣವಾಗಿವೆ ಎನ್ನುತ್ತಾರೆ ಕಾರ್ಮಿಕ ಸಂಘದ ಪದಾಧಿಕಾರಿಗಳು. ಸಚಿವರು ಬರುತ್ತಿರುವುದರಿಂದ ಇವರೆಲ್ಲರಲ್ಲೂ ನಿರೀಕ್ಷೆಗಳು ಗರಿಗೆದರಿವೆ.

ತುರ್ತು ಪರಿಹಾರದ ನಿರೀಕ್ಷೆ

ಕಾರ್ಖಾನೆ ಬಂಡವಾಳ ಹಿಂತೆಗೆತ ಪ್ರಕ್ರಿಯೆಯಿಂದ ಹಿಂದಕ್ಕೆ ಬರಬೇಕು, ಸೈಲ್ ಆಡಳಿತ ಅವಶ್ಯ ಇರುವ ಬಂಡವಾಳ ಹೂಡಬೇಕು, ಗುತ್ತಿಗೆ ಕಾರ್ಮಿಕರ ರಕ್ಷಣೆಗೆ ಕ್ರಮ ತೆಗೆದುಕೊಳ್ಳಬೇಕು ಎಂಬ ಬೇಡಿಕೆ ಪಟ್ಟಿಯೊಂದಿಗೆ ಕಾರ್ಮಿಕರು ಸಚಿವರ ಮನವೊಲಿಕೆಗೆ ಮುಂದಾಗಿದ್ದಾರೆ.

–ಕೆ.ಎನ್. ಶ್ರೀಹರ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry