ಮುಖಂಡರಿಗೆ ಸವಾಲಾದ ಪ್ರಶ್ನೆಗಳು

7
ವಿದ್ಯಾರ್ಥಿ ಕಾಂಗ್ರೆಸ್ ಜಿಲ್ಲಾ ಘಟಕ ಆಯೋಜಿಸಿದ್ದ ನನ್ನ ಕರ್ನಾಟಕ ಕಾರ್ಯಕ್ರಮದಲ್ಲಿ ಕಂಡು ಬಂದ ನೋಟ

ಮುಖಂಡರಿಗೆ ಸವಾಲಾದ ಪ್ರಶ್ನೆಗಳು

Published:
Updated:
ಮುಖಂಡರಿಗೆ ಸವಾಲಾದ ಪ್ರಶ್ನೆಗಳು

ತುಮಕೂರು: ವಿದ್ಯಾರ್ಥಿ ಕಾಂಗ್ರೆಸ್ ಘಟಕವು ಗುರುವಾರ ಆಯೋಜಿಸಿದ್ದ ನನ್ನ ಕರ್ನಾಟಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕೇಳಿದ ಕೆಲ ಪ್ರಶ್ನೆಗಳು ಮುಖಂಡರಿಗೆ ಸವಾಲಾದವು!

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ವಿದ್ಯಾರ್ಥಿ ಸಮೂಹದಿಂದ ಸದಸ್ಯ ರಿಜ್ವಾನ್ ಅರ್ಷದ್ ಹಾಗೂ ಶಾಸಕ ಡಾ.ರಫೀಕ್ ಅಹಮದ್ ಉತ್ತರಿಸಿದರು.

ನಗರದ ಎಚ್ಎಂಎಸ್ಐಟಿ ಎಂಜಿನಿಯರಿಂಗ್ ಕಾಲೇಜು, ಎಸ್‌ಐಟಿ, ಎಸ್‌ಎಸ್ಐಟಿ ಎಂಜಿನಿಯರಿಂಗ್ ಕಾಲೇಜು, ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಪ್ರಶ್ನೆ ಕೇಳಿದರು.

ಪ್ರಶ್ನೆ ಕೇಳಿದ ಭರತ್ ಎಂಬ ವಿದ್ಯಾರ್ಥಿ, ’ನಾನು ರೈತರ ಮಗ. ಎಲ್ಲ ರೈತರ ಮಕ್ಕಳ ಪರವಾಗಿ ಪ್ರಶ್ನೆ ಕೇಳುತ್ತಿದ್ದೇನೆ. ರೈತರ ಸಾಲ ಹೆಚ್ಚಾಗಿದೆ. ನಾವು ಕಾಲೇಜು ಶುಲ್ಕ ತುಂಬಲು ಹಣ ಕೇಳಿದರೆ ಬ್ಯಾಂಕಿನ ಸಾಲ ತುಂಬಲೊ, ಹೊಲಕ್ಕೆ ಬೀಜ, ಗೊಬ್ಬರ ಹಾಕಲೊ, ನಿನ್ನ ಕಾಲೇಜು ಫೀಸ್ ತುಂಬಲೊ ಎಂದು ಪೋಷಕರು ಪ್ರಶ್ನಿಸುವಂತಹ ಸ್ಥಿತಿ ಇದೆ. ರೈತರ ಸಂಪೂರ್ಣ ಸಾಲವನ್ನು ರಾಜ್ಯ ಸರ್ಕಾರ ಮನ್ನಾ ಮಾಡಿದರೆ ರೈತರ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುತ್ತದೆ’ ಎಂದು ಕೋರಿದರು.

ದಿನೇಶ ಗುಂಡೂರಾವ್ ಮಾತನಾಡಿ, ’ಈಗಾಗಲೇ ರಾಜ್ಯ ಸರ್ಕಾರವು ₹ 25ರಿಂದ 50 ಸಾವಿರದವರೆಗಿನ ಸಾಲ ಮನ್ನಾ ಮಾಡಿದೆ. ₹ 9 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ಕೇಂದ್ರ ಸರ್ಕಾರವು ಸಾಲ ಮನ್ನಾ ಮಾಡಬೇಕಾಗುತ್ತದೆ. ರೈತರಿಗೆ ಬಿತ್ತನೆ ಬೀಜಕ್ಕೆ, ಕೃಷಿ ಹೊಂಡ ಹೀಗೆ ಅನೇಕ ಸೌಕರ್ಯ ಕಲ್ಪಿಸಿದೆ’ ಎಂದರು.

ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪೂರೈಸುವವರೆಗೂ ಇನ್ನು ಮುಂದೆ ಯಾವುದೇ ಶುಲ್ಕ ಪಾವತಿಸುವಂತಿಲ್ಲ ಎಂದು ತಿಳಿಸಿದರು.

ವಿದ್ಯಾರ್ಥಿನಿ ಸಾದಿಕಾ ಮಾತನಾಡಿ, ‘ಪ್ರತಿ ವರ್ಷ ಸಾವಿರಾರು ಪದವೀಧರರು ಹೊರ ಬರುತ್ತಾರೆ. ಸ್ಥಳೀಯವಾಗಿ ಉದ್ಯೋಗ ಕಲ್ಪಿಸಲು ಏನು ಯೋಜನೆ ರೂಪಿಸಿದ್ದೀರಿ’ ಎಂದು ಪ್ರಶ್ನಿಸಿದರು.

ವಿದ್ಯಾರ್ಥಿನಿ ದಿವ್ಯಶ್ರೀ ಮಾತನಾಡಿ,‘ಬಸ್ ಪಾಸ್ ಇದ್ದರೂ ಚಾಲಕರು ಮತ್ತು ನಿರ್ವಾಹಕರು ಬಸ್ ನಿಲುಗಡೆ ಮಾಡುವುದಿಲ್ಲ. ಬಸ್ ಹತ್ತಿ ಸೀಟ್ ಮೇಲೆ ಕುಳಿತರೆ ಎಬ್ಬಿಸುತ್ತಾರೆ? ಸಕಾಲಕ್ಕೆ ಬಸ್ ಬರುವುದಿಲ್ಲ’ ಎಂದು ಸಮಸ್ಯೆ ಹೇಳಿಕೊಂಡರು.

ಡಾ.ರಫೀಕ್ ಅಹಮದ್ ಮಾತನಾಡಿ, ‘ಇನ್ನು ಮುಂದೆ ಅಂತಹ ಸಮಸ್ಯೆ ಆದರೆ ಬಸ್ ಸಂಖ್ಯೆ, ಚಾಲಕ–ನಿರ್ವಾಹಕರ ಹೆಸರು ಬರೆದು ಗಮನಕ್ಕೆ ತಂದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ವಿದ್ಯಾರ್ಥಿ ಪವನ್ ಮಾತನಾಡಿ, ’ಟೌನ್ ಹಾಲ್ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಚರಿಸಲು ಭಯ ಆಗುತ್ತದೆ.   ಪರ್ಸ್, ಮೊಬೈಲ್ ಕಿತ್ತುಕೊಂಡು ಹೋಗುತ್ತಾರೆ. ಕಳ್ಳರ ಕಾಟ ಹೆಚ್ಚಾಗಿದೆ’ ಎಂದು ಪ್ರಶ್ನಿಸಿದರು.

ಡಾ.ರಫೀಕ್ ಅಹಮದ್ ಮಾತನಾಡಿ, ‘ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೆ ತಂದು ಹೆಚ್ಚಿನ ಪೊಲೀಸ್ ಬಂದೊಬಸ್ತ್ ಮಾಡಲಾಗುವುದು’ ಎಂದು ಹೇಳಿದರು.

ಹರ್ಷಿತಾ ಮಾತನಾಡಿ, ‘ಪ್ರತಿಭಾನ್ವಿತರಿದ್ದರೂ ಉದ್ಯೋಗವಕಾಶಗಳು ಸಿಗುತ್ತಿಲ್ಲ. ಅರ್ಹರಿಗೆ ಅನ್ಯಾಯವಾಗುತ್ತಿದೆ. ಉದಾಹರಣೆಗೆ ಕೆಪಿಎಸ್‌ಇ ನೇಮಕಾತಿಯಲ್ಲಿ ನಡೆದ ಹಗರಣ. ಈ ಸಮಸ್ಯೆ ಸರ್ಕಾರ ಹೇಗೆ ಹೋಗಲಾಡಿಸುತ್ತದೆ?

ದಿನೇಶ್ ಗುಂಡೂರಾವ್ ಮಾತನಾಡಿ,‘ ಈಗ ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆಯಲು ಅವಕಾಶವಿಲ್ಲದಂತೆ ಎಚ್ಚರಿಕೆವಹಿಸಲಾಗಿದೆ. ಸಿಇಟಿಯಲ್ಲಿ, ಮ್ಯಾನೇಜ್‌ಮೆಂಟ್ ಕೋಟಾದಲ್ಲಿ ಅರ್ಹರಿಗೆ ಸೀಟು ದೊರಕಿಸುವ ವ್ಯವಸ್ಥೆ ಜಾರಿಗೊಳಿಸಲಾಗಿದೆ’ ಎಂದು ವಿವರಿಸಿದರು.

ಸೈಯದ್ ಸಾದತ್ ಮಾತನಾಡಿ,‘ ಎಸ್‌ಸಿ,ಎಸ್‌ಟಿ ವಿದ್ಯಾರ್ಥಿಗಳಿಗೆ ಮಾತ್ರ ಲ್ಯಾಪ್‌ ಟಾಪ್ ಯಾಕೆ ಎಂದು ಪ್ರಶ್ನಿಸಿದರು.

ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಮಾತನಾಡಿ,‘ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹೆಚ್ಚಿನ ಅನುದಾನ ಇದ್ದುದರಿಂದ ಈ ಸೌಲಭ್ಯ ಕೊಡಲಾಗಿದೆ. ಮುಂಬರುವ ವರ್ಷದಿಂದ ಎಲ್ಲ ವಿದ್ಯಾರ್ಥಿಗಳಿಗೂ ಲ್ಯಾಪ್ ಟಾಪ್ ಸಿಗಲಿದೆ’ ಎಂದರು.

ವೇದಿಕೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಆರ್. ರಾಜೇಂದ್ರ, ಜಿಲ್ಲಾ ವಕ್ತಾರ ರಾಜೇಶ್ ದೊಡ್ಮನೆ, ವಿದ್ಯಾರ್ಥಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸುಮುಖ್ ಕೊಂಡವಾಡಿ, ಉಪಾಧ್ಯಕ್ಷ ಉಲ್ಲಾಸಗೌಡ, ಉಸ್ತುವಾರಿ ವಲ್ಲಭ್, ಶ್ರೀಧರ್ ಇದ್ದರು.

ಆರ್ಥಿಕ ಕುಸಿತವೇ ಸಮಸ್ಯೆಗೆ ಕಾರಣ

‘ಸರ್ಕಾರವೇ ಎಲ್ಲ ಪದವೀಧರರಿಗೂ ಉದ್ಯೋಗ ಕಲ್ಪಿಸಲು ಸಾಧ್ಯವಿಲ್ಲ. ಖಾಸಗಿ ವಲಯದಲ್ಲೂ ಅವಕಾಶಗಳಿವೆ. ಕೇಂದ್ರ ಸರ್ಕಾರವು ಜಿಎಸ್‌ಟಿ, ನೋಟು ಅಮಾನ್ಯೀಕರಣದಂತಹ ಕ್ರಮಗಳಿಂದ ಉದ್ಯೋಗ ಸೃಷ್ಟಿ ಕುಸಿದಿದೆ. ಆರ್ಥಿಕ ಚೇತರಿಕೆ ಕಂಡಿಲ್ಲ’ಎಂದು ದಿನೇಶ್ ಗುಂಡೂರಾವ್ ಉತ್ತರಿಸಿದರು.

ಎಲ್ಲರಿಗೂ ಉದ್ಯೋಗ ಲಭಿಸಬೇಕಾದರೆ ಬಂಡವಾಳ ಹೂಡಿಕೆ ಹೆಚ್ಚಾಗಬೇಕು. ಈ ವಿಷಯದಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry