ಜಿಲ್ಲೆಯಲ್ಲಿ ಉತ್ತಮ ಮಳೆ; ತಂಪಾದ ಇಳೆ

ಬುಧವಾರ, ಮಾರ್ಚ್ 20, 2019
26 °C
ನಾಗರಹೊಳೆ ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಕಾಳ್ಗಿಚ್ಚು ತಾತ್ಕಾಲಿಕ ದೂರ

ಜಿಲ್ಲೆಯಲ್ಲಿ ಉತ್ತಮ ಮಳೆ; ತಂಪಾದ ಇಳೆ

Published:
Updated:
ಜಿಲ್ಲೆಯಲ್ಲಿ ಉತ್ತಮ ಮಳೆ; ತಂಪಾದ ಇಳೆ

ಮೈಸೂರು/ಎಚ್.ಡಿ.ಕೋಟೆ/ಹಂಪಾಪುರ/ಸರಗೂರು/ಕೆ.ಆರ್.ನಗರ/ನಂಜನಗೂಡು: ಜಿಲ್ಲೆಯಲ್ಲಿ ಗುರುವಾರ ಗುಡುಗು ಸಹಿತ ಉತ್ತಮ ಮಳೆಯಾಗಿದ್ದು, ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಜನತೆ ಕೊಂಚ ನಿಟ್ಟುಸಿರು ಬಿಟ್ಟರು. ರೈತರ ಮೊಗದಲ್ಲೂ ಮಂದಹಾಸ ಮೂಡಿತು.

ಮೈಸೂರಿನಲ್ಲಿ ಮಧ್ಯಾಹ್ನದಿಂದಲೂ ಮೊಡ ಮುಸುಕಿದ ವಾತಾವರಣವಿತ್ತು. ಸಂಜೆಯ ವೇಳೆಗೆ ಆರಂಭವಾದ ಮಳೆ ಸುಮಾರು ಒಂದೂವರೆ ಗಂಟೆ ಸುರಿಯಿತು. ವಾಹನ ಸವಾರರು, ವ್ಯಾಪಾರಸ್ಥರು ಸಮಸ್ಯೆಗೆ ಸಿಲುಕಿದರು.

ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಸುರಿದ ಸಾಧಾರಣ ಮಳೆಯಿಂದ ಭೂಮಿ ತಂಪಾಯಿತು. ಬೇಸಿಗೆ ಬಿಸಿಲಿನಿಂದ ತತ್ತರಿಸಿದ ಜನತೆಗೆ ಕೊಂಚ ಸಮಾಧಾನ ತಂದಿತು.

ನಾಗರಹೊಳೆ ಮತ್ತು ಬಂಡೀಪುರ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ. ಹ್ಯಾಂಡ್ ಪೋಸ್ಟ್, ನಾಗರಹೊಳೆ ವ್ಯಾಪ್ತಿಯ ಡಿ.ಬಿ.ಕುಪ್ಪೆ ಅಂತರಸಂತೆ, ಬಳ್ಳೆ, ಕೆ.ಎಡತೊರೆ, ಭೀಮನಹಳ್ಳಿ ಭಾಗಗಳಲ್ಲಿ ಮಳೆಯಾಗಿದ್ದು, ರೈತರ ಮುಖದಲ್ಲಿ ಸಂತಸ ಮೂಡಿದೆ. ಹಂಪಾಪುರ ಹೋಬಳಿಯಾದ್ಯಂತ ಸಾಧಾರಣ ಮಳೆಯಾಗಿದೆ.

ಕಾಳ್ಗಿಚ್ಚು ಆತಂಕ ದೂರ: ನಾಗರಹೊಳೆ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿಯೂ ಮಳೆ ಬಿದ್ದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಸಂತಸಗೊಂಡಿದ್ದಾರೆ.

‘ಬಿದಿರು ಸೇರಿದಂತೆ ಕಾಡಿನ ಮರಗಳ ಎಲೆಗಳು ಒಣಗಿ ಉದುರಿದ್ದವು. ಜತೆಗೆ ಕುರುಚಲು ಗಿಡಗಳು ಒಣಗಿದ್ದರಿಂದ ಕಾಳ್ಗಿಚ್ಚಿನ ಆತಂಕ ಎದುರಾಗಿತ್ತು. ಫ್ರೆಬುವರಿ ಮತ್ತು ಈ ತಿಂಗಳನಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡಿತ್ತು. ಗುರುವಾರ ಬಿದ್ದ ಮಳೆಯಿಂದಾಗಿ ತರಗೆಲೆ ತೇವಾಂಶದಿಂದ ಕೂಡಿರುವುದರಿಂದ ಮಂದಿನ ಕೆಲ ದಿನ ನೆಮ್ಮದಿಯಿಂದ ಇರಬಹುದು’ ಎಂದು ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾಗರಹೊಳೆಯ ಶೇ 60ರಷ್ಟು ಭಾಗ ಮಳೆಯಾಗಿದೆ. ಸತತ 2 ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ಹಳ್ಳ– ಕೊಳ್ಳಗಳಲ್ಲಿ ನೀರು ಹರಿಯಿತು. ಇದರಿಂದಾಗಿ ಕಾಡುಪ್ರಾಣಿಗಳಿಗೆ ಕುಡಿಯಲು ನೀರು ದೊರೆತಂತಾಗಿದೆ. ಇದೇ ರೀತಿ ಇನ್ನು ಎರಡು– ಮೂರು ದಿನ ಮಳೆಯಾದರೆ ಕೊಂಚ ಹಸಿರು ಚಿಗುರಲಿದೆ. ಕಾಳ್ಗಿಚ್ಚಿನ ಆತಂಕವೂ ದೂರವಾಗಲಿದೆ’ ಎಂದು ಮೇಟಿಕುಪ್ಪೆ ಸಹಾಯಕ ವಲಯ ಅರಣ್ಯಾಧಿಕಾರಿ ಶರಣಬಸಪ್ಪ ಹೇಳಿದರು.

ಸರಗೂರು ಪಟ್ಟಣದಲ್ಲಿ ಒಂದು ಗಂಟೆಗೂ ಹೆಚ್ಚು ಮಳೆ ಸುರಿಯಿತು. ಎರಡು ದಿನಗಳಿಂದ ಮೋಡಕವಿದ ವಾತಾವರಣ ಇತ್ತು, ಮಳೆಯಿಂದಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಕೆ.ಆರ್.ನಗರ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ತುಂತುರು ಮಳೆ ಸುರಿಯಿತು. ಮೋಡಕವಿದ ವಾತಾವರಣ ಗುರುವಾರವೂ ಮುಂದುವರೆದಿತ್ತು. ಆಗಾಗ ಗಾಳಿ, ಗುಡುಗು ಸಹಿತ ತುಂತುರು ಮಳೆ ಸುರಿದು ತೆಂಪೇರಿಸಿತು. ನಂಜನಗೂಡಿನಲ್ಲಿ ಮಧ್ಯಾಹ್ನ 10 ನಿಮಿಷ ಹಾಗೂ ಸಂಜೆ ಅರ್ಧ ಗಂಟೆ ತುಂತುರು ಮಳೆಯಾಯಿತು.

ಗುಡುಗು ಸಹಿತ ಮಳೆ

ಹುಣಸೂರು:
ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಗುರುವಾರವೂ ಮಳೆಯಾಯಿತು. ಮಧ್ಯಾಹ್ನ 3.30ರಲ್ಲಿ ಗುಡುಗಿನಿಂದ ಕೂಡಿದ ಮಳೆ ಸುರಿಯಿತು.

ಬೆಳಿಗ್ಗೆಯಿಂದ ಶುಭ್ರ ಆಕಾಶದ ವಾತಾವರಣ ಇತ್ತು. ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಏಕಾಏಕಿ ಮೋಡ ಕವಿದು ಮಳೆ ಆರಂಭವಾಯಿತು. ಹುಣಸೂರು ನಗರ, ಗಾವಡಗೆರೆ, ಕಟ್ಟೆಮಳಲವಾಡಿ, ಬನ್ನಿಕುಪ್ಪೆ, ತಟ್ಟೆಕೆರೆ, ರತ್ನಾಪುರಿ ಸೇರಿದಂತೆ ತಾಲ್ಲೂಕಿನ ಬಹುತೇಕ ಕಡೆ ಮಳೆ ಬಿದ್ದಿದೆ. ಕೆಲವೆಡೆ ಸಂಜೆ 7.30ರವರೆಗೆ ಮುಂದುವರೆಯಿತು.

ಈಗ ಮಳೆಯಾಗಿರುವುದರಿಂದ ಒಂದಿಷ್ಟು ಹಸಿರು ಚಿಗುರಲಿದ್ದು, ಜಾನುವಾರುಗಳಿಗೆ ಮೇವು ದೊರೆಯಲಿದೆ ಎಂದು ಮನುಗನಹಳ್ಳಿ ಗ್ರಾಮದ ರೈತ ಕೃಷ್ಣೇಗೌಡ ಸಂತಸ ವ್ಯಕ್ತಪಡಿಸಿದರು.

ಶಾಲಾ ಮಕ್ಕಳು ಗುಂಪು ಗುಂಪಾಗಿ ಅಲ್ಲಲ್ಲಿ ನಿಂತು ಮಳೆಯಲ್ಲಿ ಕುಣಿಯುತ್ತಿದ್ದ ದೃಶ್ಯ ಕಂಡುಬಂದಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry