ಆರೋಪ ಹೊರಿಸುವವರು ನನ್ನ ಭಾಷಣ ಆಲಿಸಲಿ

7
ಕರಿಂಜೆ ಕ್ಷೇತ್ರದ ಮುಕ್ತಾನಂದ ಸ್ವಾಮೀಜಿ ಹೇಳಿಕೆ

ಆರೋಪ ಹೊರಿಸುವವರು ನನ್ನ ಭಾಷಣ ಆಲಿಸಲಿ

Published:
Updated:

ಮೂಡುಬಿದಿರೆ: ನಾನು ಮುಖ್ಯಮಂತ್ರಿ ಯನ್ನಾಗಲಿ ಅಥವಾ ಶಾಸಕ ಅಭಯ ಚಂದ್ರ ಅವರನ್ನಾಗಲಿ ನಿಂದಿಸಿದ್ದೇನೆ ಎಂಬುದರಲ್ಲಿ ಸತ್ಯಾಂಶ ಇಲ್ಲ. ನನ್ನ ಭಾಷಣದ ಆಡಿಯೋ ಈಗಾಗಲೇ ವೈರಲ್ ಆಗಿದೆ. ಆರೋಪ ಹೊರಿಸುವವರು ಅದನ್ನು ಆಲಿಸಿದರೆ ಸತ್ಯ ಏನೆಂಬುದು ಗೊತ್ತಾಗುತ್ತದೆ ಎಂದು ಕರಿಂಜೆ ಕ್ಷೇತ್ರದ ಮುಕ್ತಾನಂದ ಸ್ವಾಮೀಜಿ ಹೇಳಿದ್ದಾರೆ.

ಗುರುವಾರ ತಮ್ಮ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಅವರು, ‘ವಾಲ್ಪಾಡಿಯ ಅರ್ಜುನಾಪುರದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ನಾನು 18 ನಿಮಿಷ ಭಾಷಣ ಮಾಡಿದ್ದೆ. ರಾಮಯಣದ ಘಟನೆಯನ್ನು ಉಲ್ಲೇಖಿಸುತ್ತಾ ರಾಮನಲ್ಲೂ ಅಧಿಕಾರವಿತ್ತು, ರಾವಣನಲ್ಲೂ  ಇತ್ತು. ಇಬ್ಬರಲ್ಲೂ ಸಂಸ್ಕಾರವಿತ್ತು. ಆದರೆ ಇಬ್ಬರ ಆಳ್ವಿಕೆ ಮತ್ತು ನಡವಳಿಕೆಯಲ್ಲಿ ವ್ಯತ್ಯಾಸವಿತ್ತು. ರಾಮನ ಆದರ್ಶ ನಮಗೆ ಬೇಕು ಎಂದು ಹೇಳಿದ್ದೇನೆ ಹೊರತು ಎಲ್ಲಿಯು ಮುಖ್ಯಮಂತ್ರಿಯನ್ನಾಗಲಿ, ಶಾಸಕ ಅಭಯಚಂದ್ರ ಅವರನ್ನು 'ರಾಕ್ಷಸ' ಎಂದು ನಿಂದಿಸಿಲ್ಲ ಎಂದು ಖಡಾಖಂಡಿತವಾಗಿ ಹೇಳುತ್ತೇನೆ. ನನ್ನ ಭಾಷಣದ ಆಡಿಯೊವನ್ನು ಪರಿಶೀಲಿಸಬಹುದು’ ಎಂದರು.

‘ನಾನು ಸರ್ಕಾರಿ ಜಾಗವನ್ನು ಕಬಳಿಸಿದ್ದೇನೆ ಎಂದು ಶಾಸಕರು ಆರೋಪಿಸಿದ್ದು, ನನ್ನಲ್ಲಿರುವುದು ಹಣ ಕೊಟ್ಟು ಖರೀದಿಸಿದ ಖಾಸಗಿ ಜಾಗ. ಅದಕ್ಕೆ ಸರಿಯಾದ ದಾಖಲೆಗಳಿವೆ. ಒಂದಿಂಚೂ ಸರ್ಕಾರಿ ಜಾಗ ನನ್ನ ಬಳಿ ಇಲ್ಲ. ಶಾಸಕರು ಕಂದಾಯ ಇಲಾಖೆಯ ಮೂಲಕ ಯಾವಾಗ ಬೇಕಾದರು ತನಿಖೆ ನಡೆಸಬಹುದು’ ಎಂದರು.

ಶಾಸಕರು ನನ್ನನ್ನು ಚುನಾವಣೆಗೆ ನಿಲ್ಲುವಂತೆ ಸವಾಲು ಹಾಕಿದ್ದು,  ರಾಜಕೀಯ ಪ್ರವೇಶದ ಹುಚ್ಚು ನನಗಿಲ್ಲ. ಸನ್ಯಾಸ ರಾಜಕೀಯಕ್ಕಿಂತ ಶ್ರೇಷ್ಠವಾದದ್ದು. ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರುವುದಿಲ್ಲ ಎಂದವರು ನನ್ನ ವಿರುದ್ಧ ಅಭಯಚಂದ್ರ ಮಾಡಿದ ಆರೋಪ ಬೇಸರ ತಂದಿದೆ. ಅಭಯಚಂದ್ರ ನಮ್ಮ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಗೌರವ ಅಧ್ಯಕ್ಷರು. ಕ್ಷೇತ್ರದ ಬಗ್ಗೆ ಅವರು ಸುಳ್ಳು ಆರೋಪ ಯಾಕೆ ಮಾಡಿದ್ದಾರೆಂಬುದು ಗೊತ್ತಾಗಿಲ್ಲ. ಅವರಿಗೆ ಭಗವಂತ ಒಳ್ಳೆಯದನ್ನು ಮಾಡಲಿ’ ಎಂದು ಹೇಳಿದರು.

ಕೃಷ್ಣರಾಜ ಹೆಗ್ಡೆ, ವಿಶ್ವನಾಥ ಶೆಟ್ಟಿ, ಸುಧಾಕರ ನೂಯಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry