ವಸತಿ ನೀಡಲು ಜೆಡಿಎಸ್, ಬಿಎಸ್‌ಪಿ ಆಗ್ರಹ

ಸೋಮವಾರ, ಮಾರ್ಚ್ 25, 2019
21 °C
ನಗರಸಭೆ ಎದುರು ಹಳೇ ಅರ್ಜಿದಾರ ಪರ ಪ್ರತಿಭಟನೆ

ವಸತಿ ನೀಡಲು ಜೆಡಿಎಸ್, ಬಿಎಸ್‌ಪಿ ಆಗ್ರಹ

Published:
Updated:
ವಸತಿ ನೀಡಲು ಜೆಡಿಎಸ್, ಬಿಎಸ್‌ಪಿ ಆಗ್ರಹ

ಹಾವೇರಿ: ‘ನಿವೇಶನ ಮತ್ತು ವಸತಿ ನೀಡುವಂತೆ 2003ರಿಂದ 2010ರ ನಡುವೆ ಆಶ್ರಯ ಸಮಿತಿಗೆ ತಲಾ ₹ 5 ಸಾವಿರ ಕಟ್ಟಿದ 252 ಹಳೇ ಅರ್ಜಿದಾರರಿಗೆ ಮೊದಲು ವಸತಿ ನೀಡಬೇಕು’ ಎಂದು ಆಗ್ರಹಿಸಿ ಜೆಡಿಎಸ್ ಮತ್ತು ಬಿಎಸ್‌ಪಿ ಜಿಲ್ಲಾ ಘಟಕಗಳ ನೇತೃತ್ವದಲ್ಲಿ ಗುರುವಾರ ನಗರಸಭೆ ಎದುರು ಪ್ರತಿಭಟನೆ ನಡೆಯಿತು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಬೇವಿನಮರ ಮಾತನಾಡಿ, ‘ಆಶ್ರಯ ಸಮಿತಿಗೆ ನಗರದ 252 ಸೂರು ರಹಿತರು 15 ವರ್ಷಗಳ ಹಿಂದೆಯೇ ಠೇವಣಿ ಪಾವತಿಸಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈಗ ಈಚೆಗೆ ಅರ್ಜಿ ಸಲ್ಲಿಸಿ ಹೆಚ್ಚಿಗೆ ಹಣ ನೀಡಿದವರಿಗೆ ವಸತಿ ನೀಡಲಾಗುತ್ತಿದೆ. ನಿವೇಶನ ಮತ್ತು ವಸತಿಗಾಗಿ ಮೊದಲು ಠೇವಣಿ ಇಟ್ಟು ಅರ್ಜಿ ಸಲ್ಲಿಸಿದ ಬಡವರಿಗೆ ಆಶ್ರಯ ಸಮಿತಿ ಅನ್ಯಾಯ ಮಾಡುತ್ತಿದ್ದು, ಇದರಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶಾಮೀಲಾಗಿದ್ದಾರೆ’ ಎಂದು ಆರೋಪಿಸಿದರು.

ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಮರೆಮ್ಮನವರ ಮಾತನಾಡಿ, ‘ಹಳೇ ಅರ್ಜಿದಾರರು ಠೇವಣಿ ಇಟ್ಟ ಹಣದಲ್ಲಿಯೇ ಆಶ್ರಯ ಸಮಿತಿಯು ಭೂ ವೀರಾಪುರ ಬಳಿ 7 ಎಕರೆ ಜಾಗವನ್ನು ಖರೀದಿ ಮಾಡಿದೆ. ಹೀಗಾಗಿ ಅಲ್ಲಿ ಅವರಿಗೆ ಮೊದಲು ವಸತಿ ನೀಡಬೇಕು. ಇಲ್ಲವೇ, ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ನಾವು 2004ರಲ್ಲಿಯೇ ₹ 5 ಸಾವಿರ ತುಂಬಿದ್ದೇವೆ. ಆದರೆ, ಇದುವರೆಗೂ ವಸತಿ ಅಥವಾ ನಿವೇಶನ ನೀಡಿಲ್ಲ. ಆದರೆ, ಈಗ ಆಯ್ಕೆ ಮಾಡಿದ ಪಟ್ಟಿಯಲ್ಲಿ ನಮ್ಮ ಹೆಸರು ಇಲ್ಲ. ಆದ್ದರಿಂದ, ಅದನ್ನು ರದ್ದುಪಡಿಸಿ ಹಳೇ ಅರ್ಜಿದಾರರಿಗೆ ಮೊದಲು ನಿವೇಶನ ನೀಡಬೇಕು’ ಎಂದು ಹಳೇ ಅರ್ಜಿದಾರರು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಶಿವಕುಮಾರಯ್ಯ, ಈ ಹಿಂದೆ ನಗರಸಭೆಯು ‘ಮೂಲಿ ನಿವೇಶನ’ಗಳನ್ನು ಹರಾಜು ಹಾಕಿತ್ತು. ಆಗ ಹರಾಜು ಕೂಗಲು ಕೆಲವರು ಠೇವಣಿ ಇಟ್ಟಿದ್ದರು, ಆದರೆ, ನಿವೇಶನ ಸಿಗದವರು ಠೇವಣಿಯನ್ನು ವಾಪಾಸ್ ಪಡೆದಿಲ್ಲ. ಅದನ್ನೇ ನಿವೇಶನಕ್ಕಾಗಿ ಠೇವಣಿ ಇಟ್ಟ ರಸೀದಿ ಎಂದು ಕೆಲವರು ವಾದಿಸುತ್ತಿದ್ದಾರೆ ಎಂದರು.

ಅಲ್ಲದೇ, ಆಶ್ರಯ ಸಮಿತಿ ಆಯ್ಕೆ ಮಾಡಿದ ಫಲಾನುಭವಿಗಳ ಪಟ್ಟಿಗೆ ಸಹಿ ಮಾಡುವ ಅಧಿಕಾರ ಮಾತ್ರ ನನಗಿದ್ದು, ಬದಲಾಯಿಸುವ ಹಾಗೂ ತಿದ್ದುಪಡಿ ಮಾಡುವ ಅಧಿಕಾರ ಇಲ್ಲ ಎಂದರು.

ಜೆಡಿಎಸ್‌ ರಾಜ್ಯ ಘಟಕದ ಕಾರ್ಯದರ್ಶಿ ಡಾ.ಸಂಜಯ್‌ ಡಾಂಗೆ, ಎಸ್.ಎಸ್.ಕಳ್ಳಿಮನಿ, ಶಂಕ್ರಣ್ಣ ಮಕರಬ್ಬಿ, ಮಾತೇಶ ಬೇವಿನಹಿಂಡಿ, ಅಮೀರ್‌ ಜಾನಬೇಪಾರಿ, ಉಮೇಶ ತಳವಾರ, ಮಂಜು ಕನ್ನಾಯಕನವರು, ಸುನಿಲ್ ದಂಡೆಮ್ಮನವರ, ಎನ್.ಟಿ.ಮಂಜುನಾಥ, ವಿಜಯಕುಮಾರ ವಿರಕ್ತಮಠ, ಎಂ.ಡಿ.ಬ್ಯಾಡಗಿ, ಲಕ್ಷಣ ಗಾಣಗೇರ, ರಘು ಕಲಾಲ, ಅಲ್ತಾಫ್‌ ಸದಾಫ್‌, ಎಂ.ಜಮಾದರ, ಕೆ.ಎಂ.ಸುಂಕದ, ವೈ.ಹುಬ್ಬಳ್ಳಿ ಇದ್ದರು.

*

ಆಶ್ರಯ ಸಮಿತಿಗೆ ಅರ್ಜಿ ಸಲ್ಲಿಸಿದ ಒಟ್ಟು 252 ಹಳೇ ಅರ್ಜಿದಾರರಿಗೆ ಮೊದಲು ನಿವೇಶನ ಮತ್ತು ವಸತಿ ನೀಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ನಡೆಸಲಾಗುವುದು.

–ಡಾ.ಸಂಜಯ್‌ ಡಾಂಗೆ,

ಜೆಡಿಎಸ್‌ ರಾಜ್ಯ ಘಟಕದ ಕಾರ್ಯದರ್ಶಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry