ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗಲಿದ ಯೋಧನಿಗೆ ಹುಟ್ಟೂರಲ್ಲಿ ಕಣ್ಣೀರ ನಮನ

ಹರದೂರು ಗ್ರಾಮದಲ್ಲಿ ಅಸಂಖ್ಯ ಜನರ ಕಂಬನಿಯ ನಡುವೆ ಅಂತ್ಯಕ್ರಿಯೆ
Last Updated 16 ಮಾರ್ಚ್ 2018, 10:32 IST
ಅಕ್ಷರ ಗಾತ್ರ

ಹಾಸನ: ‘ಹುತಾತ್ಮ ಯೋಧ ಚಂದ್ರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡದೆ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಅಗೌರವ ತೋರಿದ್ದಾರೆ’ ಎಂದು ಆರೋಪಿಸಿ ಅರಕಲಗೂಡು ತಾಲ್ಲೂಕಿನ ಹರದೂರು ಗ್ರಾಮಸ್ಥರು ಜಿಲ್ಲಾಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.

‘ಗೌರವದಿಂದ ಅಂತ್ಯ ಸಂಸ್ಕಾರ ಮಾಡಿ, ಇಲ್ಲ ಪಾರ್ಥಿವ ಶರೀರ ನಮಗೆ ಕೊಡಿ, ನಾವೇ ಮಣ್ಣು ಮಾಡುತ್ತೇವೆ’ ಎಂದು ಜಿಲ್ಲಾಸ್ಪತ್ರೆ ಎದುರು ಪಟ್ಟು ಹಿಡಿದು, ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನೆಗೆ ಮಣಿದ ಜಿಲ್ಲಾಡಳಿತ, ಅಂತಿಮ ದರ್ಶನಕ್ಕೆ ಅರ್ಧ ತಾಸು  ಜಿಲ್ಲಾಧಿಕಾರಿ ಕಚೇರಿ ಎದುರು ವ್ಯವಸ್ಥೆ ಮಾಡಿತು. ಜನಪ್ರತಿನಿಧಿಗಳು, ವಿದ್ಯಾರ್ಥಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಅಂತಿಮ ದರ್ಶನ ಪಡೆದರು.

‘ಹೆಮ್ಮೆಯ ವೀರ ಯೋಧ ಮತ್ತೆ ಹುಟ್ಟಿ ಬಾ, ಅರಕಲಗೂಡಿನ ಚಂದ್ರ ಅವರಿಗೆ ಜೈ, ಭಾರತ್ ಮಾತಾ ಕಿ ಜೈ, ಜೈ ಜವಾನ್ ಜೈ ಕಿಸಾನ್’ ಎಂಬ ಘೋಷಣೆಗಳು ಮೊಳಗಿದವು.‌‌

ಚಂದ್ರ ಅವರ ತಾಯಿ ಕಾಳಮ್ಮ, ತಂದೆ ಸ್ವಾಮಿಗೌಡ, ಪತ್ನಿ ಪೃಥ್ವಿ ಹಾಗೂ ಇತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಊರ ಮಗನಿಗೆ ಸಂಬಂಧಿಕರು, ಗ್ರಾಮಸ್ಥರು ಕಣ್ಣೀರ ನಮನ ಸಲ್ಲಿಸಿದರು.

ಬುಧವಾರ ರಾತ್ರಿ 7.40ಕ್ಕೆ ಹಿಮ್ಸ್ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಸಚಿವ ಎ.ಮಂಜು ಅವರು ಪೋಷಕರಗೆ ಸಾಂತ್ವನ ಹೇಳಿ, ಅಂತ್ಯಕ್ರಿಯೆ ಕುರಿತು ಚರ್ಚೆ ನಡೆಸಿದ್ದರು.

‘ಜಿಲ್ಲಾಧಿಕಾರಿ ಕಚೇರಿ ಎದುರು ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಬೇಕೆ’ ಎಂದು ರೋಹಿಣಿ ಕೇಳಿದ್ದರು. ಆದರೆ, ಯೋಧನ ತಂದೆ ಸ್ವಾಮಿಗೌಡ, ‘ಅರಕಲಗೂಡಿನಲ್ಲಿ ಸಂಬಂಧಿಕರಿದ್ದು, ತಾಲ್ಲೂಕು ಕಚೇರಿ ಎದುರು ಅವಕಾಶ ಮಾಡಿಕೊಟ್ಟರೆ ಸಾಕು’ ಎಂದು ಮನವಿ ಮಾಡಿದ್ದರು. ಆದರೆ ಬೆಳಗ್ಗೆ ಗ್ರಾಮದ ಕೆಲವರು ಜಿಲ್ಲಾಧಿಕಾರಿ ಕಚೇರಿ ಎದುರು ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕೆಂದು ಪಟ್ಟು ಹಿಡಿದು ಘೋಷಣೆ ಕೂಗಿದರು.

‘ಪಾರ್ಥಿವ ಶರೀರ ಹುಟ್ಟೂರಿಗೆ ತೆಗೆದುಕೊಂಡು ಹೋಗುವ ಮುನ್ನ, ಹುತಾತ್ಮ ಯೋಧನ ಕುಟುಂಬಕ್ಕೆ ಸೇರಿರದ ಕೆಲವರು ಡಿ.ಸಿ ಕಚೇರಿ ಬಳಿ ಸಾರ್ವಜನಿಕ ದರ್ಶನಕ್ಕೆ ಇರಿಸಬೇಕು ಎಂದು ಮನವಿ ಮಾಡಿದ ಹಿನ್ನಲೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಪೋಷಕರ ಕೋರಿಕೆಯಂತೆ ಅಂತ್ಯಕ್ರಿಯೆಯ ಅಂತಿಮ ವಿಧಿವಿಧಾನಗಳನ್ನು ಸಕಲ, ಸರ್ಕಾರಿ ಗೌರವಗಳೊಂದಿಗೆ ನಿರ್ವಹಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸ್ಪಷ್ಟ ಪಡಿಸಿದ್ದಾರೆ.

ಯೋಧನ ಕುಟುಂಬಕ್ಕೆ ನಿವೇಶನ: ಸಚಿವ
ಸಚಿವ ಎ.ಮಂಜು ಅವರು ಚಂದ್ರ ಕುಟುಂಬಕ್ಕೆ ತಮ್ಮ ಒಂದು ತಿಂಗಳ ವೇತನವನ್ನು ಸಹಾಯಧನವಾಗಿ ನೀಡಿದ್ದಾರೆ. ಹಾಸನದ ಎಸ್.ಎಂ. ಕೃಷ್ಣ ನಗರದಲ್ಲಿ ಒಂದು ನಿವೇಶನ ಒದಗಿಸುವುದಾಗಿ ಭರವಸೆ ನೀಡಿದರು.

ಕುಟುಂಬಕ್ಕೆ ಸರ್ಕಾರದ ಸವಲತ್ತು
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಹುತಾತ್ಮ ಯೋಧನ ಕುಟುಂಬಕ್ಕೆ ಸಾಂತ್ವನ ಹೇಳಿದರು. ತಂದೆ, ತಾಯಿಗಳಿಗೂ ಸಮಾಧಾನ ಪಡಿಸಿದ ಅವರು ರಕ್ತದೊತ್ತಡದಿಂದ ಬಳಲುತ್ತಿರುವ ಚಂದ್ರ ಅವರ ಪತ್ನಿ ಪೃಥ್ವಿ ಅವರು ಆರೋಗ್ಯದ ಬಗ್ಗೆ ಗಮನ ಹರಿಸುವಂತೆ ತಿಳಿಸಿದ್ದಾರೆ.

ಎಲ್ಲಾ ಕಾರ್ಯಗಳು ಮುಗಿದ ನಂತರ ಮತ್ತೆ ಭೇಟಿಯಾಗಿ ಸರ್ಕಾರದಿಂದ ದೊರೆಯುವ ಸಕಲ ಸವಲತ್ತು ಒದಗಿಸಲು ಸಹಕರಿಸುವುದಾಗಿ ತಿಳಿಸಿದರು.

ಗುಪ್ತಚರ ಇಲಾಖೆ ವೈಫಲ್ಯ
ಯೋಧನ ಕುಟುಂಬಕ್ಕೆ ಜೆಡಿಎಸ್ ಪಕ್ಷದ ವತಿಯಿಂದಲೂ ಸೂಕ್ತ ಸಹಾಯ ಮಾಡಲಾಗುವುದು ಎಂದು ಸಂಸದ ಎಚ್.ಡಿ.ದೇವೇಗೌಡ ಹೇಳಿದರು.

9 ಜನ ಯೋಧರ ಸಾವಿಗೆ ಸ್ಥಳೀಯ ಮತ್ತು ಕೇಂದ್ರ ಸರ್ಕಾರಗಳ ಗುಪ್ತಚರ ಇಲಾಖೆ ವೈಫಲ್ಯ ಕಾರಣ. ಉಭಯ ಸರ್ಕಾರಗಳು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೆ ದುರಂತ ಸಂಭವಿಸುತ್ತಿರಲಿಲ್ಲ. ಇದೊಂದು ರಾಷ್ಟ್ರೀಯ ದುರಂತ. ಇಷ್ಟೆಲ್ಲಾ ಆದ ಬಳಿಕ ಸರ್ಜಿಕಲ್ ಸ್ಟ್ರೈಕ್ ಮಾಡುವ ಬಗ್ಗೆ ಹೇಳಿಕೆ ನೀಡಿದ್ದಾರೆ, ಮುಂದೆ ಏನಾಗುವುದೋ ನೋಡೊಣ ಎಂದರು.


–ಅರಕಲಗೂಡಿಗೆ ಗುರುವಾರ ಮೃತಯೋಧ ಚಂದ್ರ ಅವರ ಪಾರ್ಥಿವ ಶರೀರವನ್ನು ತಂದಾಗ ಕಂಡು ಬಂದ ಜನಸಮೂಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT