4
ದೊಡ್ಡಬಳ್ಳಾಪುರ ನಗರಸಭೆ ಸದಸ್ಯರ ಸಭೆಯಲ್ಲಿ ಚರ್ಚೆ

‘ಗುತ್ತಿಗೆ ಪೌರಕಾರ್ಮಿಕರ ನೇಮಕದಲ್ಲಿ ಅಕ್ರಮ’

Published:
Updated:

ದೊಡ್ಡಬಳ್ಳಾಪುರ: ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಪಟ್ಟಿ ತಯಾರಿಕೆಗೆ ಸರ್ವ ಸದಸ್ಯರ ಸಮಿತಿ ರಚಿಸಿ ಪಟ್ಟಿ ಸಿದ್ಧಪಡಿಸಲಾಗುವುದು ಎಂದು ನಗರಸಭೆ ಅಧ್ಯಕ್ಷ ಟಿ.ಎನ್‌.ಪ್ರಭುದೇವ್‌ ಹೇಳಿದರು.

ಗುರುವಾರ ನಗರಸಭೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ಪಿಎಫ್‌, ಇಎಸ್‌ಐ ಇರುವ ವಯೋಮಿತಿ ಹಾಗೂ 2014ರಿಂದಲೂ ನಗರಸಭೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವವರ 40 ಜನರ ಪಟ್ಟಿ ಸಿದ್ಧಪಡಿಸಲಾಗಿದೆ ಎಂದರು.

ಅಧ್ಯಕ್ಷರ ಉತ್ತರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಆರ್‌.ಕೆಂಪರಾಜ್‌, ಎಂ.ಮಲ್ಲೇಶ್‌, ಪ್ರಕಾಶ್‌, ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಕಾಯಂಗೊಳಿಸಲು ಪಟ್ಟಿಯನ್ನು ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿಸಿದ ನಂತರ ಜಿಲ್ಲಾಧಿಕಾರಿಗೆ ಕಳುಹಿಸಲು ತಿರ್ಮಾನಿಸಲಾಗಿತ್ತು. ಆದರೆ, ಏಕ ಪಕ್ಷಿಯವಾಗಿ ತಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಂಡು ಪಟ್ಟಿ ಸಿದ್ಧಪಡಿಸಲಾಗಿದೆ. ಇದರಲ್ಲಿ ಅಕ್ರಮ ನಡೆದಿದ್ದು, ಹೊಸದಾಗಿ ಆಯ್ಕೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಪೌರಾಯುಕ್ತ ಆರ್‌ .ಮಂಜುನಾಥ್‌ ಸಭೆಗೆ ಮಾಹಿತಿ ನೀಡಿ, ಶುಕ್ರವಾರ ಸದಸ್ಯರ ಸಭೆ ಕರೆದು ಪೌರಕಾರ್ಮಿಕರ ಪಟ್ಟಿಯನ್ನು ಹೊಸದಾಗಿ ಸಿದ್ಧಪಡಿಸಲಾಗುವುದು ಎಂದು ಹೇಳಿದರು.

ಬ್ಯಾನರ್‌ ಹಾಳಿ: ನಗರದಲ್ಲಿ ಇತ್ತೀಚೆಗೆ ಬ್ಯಾನರ್‌ಗಳ ಹಾವಳಿ ಮಿತಿ ಮೀರಿದೆ. ಇದಕ್ಕೆ ಕಡಿವಾಣ ಹಾಕಬೇಕು. ನಗರಸಭೆಯಿಂದ ಯಾವುದೇ ಅನುಮತಿ ಪಡೆಯುತ್ತಿಲ್ಲ ಎಂದು ದೂರಿದ ಸದಸ್ಯ ಎಂ.ಮಲ್ಲೇಶ್‌, ಯಾವುದೇ ಪಕ್ಷ, ಸಂಘಟನೆಗಳಿಗೆ ಮುಲಾಜಿಲ್ಲದೆ ಕಡ್ಡಾಯವಾಗಿ ಬ್ಯಾನರ್‌ ಕಟ್ಟುವವರಿಂದ ಶುಲ್ಕ ವಸೂಲಿ ಮಾಡಬೇಕು ಎಂದು ಅವರು ಹೇಳಿದರು.

ಸದಸ್ಯೆ ಸುಶೀಲ ರಾಘವ ಮಾತನಾಡಿ, ಮಳೆ ನೀರು ಚರಂಡಿ ನಿರ್ಮಿಸಲು ಹಣ ನೀಡುವಂತೆ ಮನವಿ ಮಾಡಲಾಗಿತ್ತು. 14ನೇ ಹಣಕಾಸು ಯೋಜನೆಯಲ್ಲಿಯೂ ಯಾವುದೇ ಹಣ ನೀಡಿಲ್ಲ. ಕೆಲವರ ವಾರ್ಡ್‌ಗಳ ಕಾಮಗಾರಿಗಳಿಗೆ ಹಣ ನೀಡಲಾಗಿದೆ. ಮಳೆನೀರು ಚರಂಡಿ ನಿರ್ಮಿಸಲು ತುರ್ತಾಗಿ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

94 ಸಿಸಿ ಯೋಜನೆಯಲ್ಲಿ ಹಕ್ಕುಪತ್ರ ಪಡೆದಿರುವ ಸಂಜಯನಗರ ನಿವಾಸಿಗಳಿಗೆ ನಗರಸಭೆಯಿಂದ ಎಲ್ಲಾ ರೀತಿಯ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದ ಸದಸ್ಯೆ ಸುಶೀಲಮ್ಮ ಮೋಹನ್‌ ಕುಮಾರ್‌, ಹಕ್ಕುಪತ್ರ ಹೊಂದಿರುವವರಿಗೆ ನಗರಸಭೆಯಿಂದ ಇ–ಖಾತೆ ಮಾಡಿಕೊಡಬೇಕು. ಅಲ್ಲದೆ, ಮನೆಗಳನ್ನು ಹೊಸದಾಗಿ ನಿರ್ಮಿಸಿಕೊಳ್ಳಲು ಸಾಲ ಸೌಲಭ್ಯ ಮಂಜೂರು ಮಾಡಬೇಕು ಎಂದು ಅವರು ಹೇಳಿದರು.

ಸ್ಥಾಯಿತಿ ಸಮಿತಿ ಅಧ್ಯಕ್ಷ ಎಚ್‌.ಎಸ್‌.ಶಿವಶಂಕರ್‌ ಮಾತನಾಡಿ, ಸ್ಥಾಯಿ ಸಮಿತಿ ಸಭೆಯಲ್ಲಿ ವ್ಯಾಪಾರ ವಹಿವಾಟು ತೆರಿಗೆ ವಸೂಲಿ, ಹೊಸದಾಗಿ ಪರವಾನಗಿ ನೀಡುವುದು, ನವೀಕರಣ ಬಗ್ಗೆ ಚರ್ಚಿಸಲಾಗಿದೆ. ಇದರಿಂದಾಗಿ ಕಂದಾಯ ವಸೂಲಿಯಲ್ಲಿ ಹೆಚ್ಚಳವಾಗಿದೆ ಎಂದು ಅವರು ಹೇಳಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಜಯಲಕ್ಷ್ಮೀನಟರಾಜ್‌, ಅಧಿಕಾರಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry