ಕಂದಾಯ ವಸೂಲಾತಿಯಲ್ಲಿ ತಾರತಮ್ಯ ಆರೋಪ

7
ದೊಡ್ಡಬಳ್ಳಾಪುರ ನಗರ ಸಭೆಯಲ್ಲಿ ಪ್ರತಿಧ್ವನಿ

ಕಂದಾಯ ವಸೂಲಾತಿಯಲ್ಲಿ ತಾರತಮ್ಯ ಆರೋಪ

Published:
Updated:
ಕಂದಾಯ ವಸೂಲಾತಿಯಲ್ಲಿ ತಾರತಮ್ಯ ಆರೋಪ

ದೊಡ್ಡಬಳ್ಳಾಪುರ: ನಗರಸಭೆ ವ್ಯಾಪ್ತಿಯಲ್ಲಿ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿರುವುದರಿಂದ ಕಂದಾಯ ವಸೂಲಿ ಮಾಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಬೃಹತ್‌ ವಾಣಿಜ್ಯ ಮಳಿಗೆಗಳ ಮಾಲೀಕರು ಲಕ್ಷಾಂತರ ರೂಪಾಯಿ ಕಂದಾಯ ಬಾಕಿ ಉಳಿಸಿಕೊಂಡಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಇರುವ ಬಗ್ಗೆ ಗುರುವಾರ ನಡೆದ ಸರ್ವ ಸದಸ್ಯರ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು.

ಸದಸ್ಯ ಶಿವಕುಮಾರ್‌ ಮಾತನಾಡಿ, ನಗರದಲ್ಲಿ ಎಷ್ಟು ವಾಣಿಜ್ಯ ಮಳಿಗೆಗಳು ಇವೆ, ಯಾರು ಎಷ್ಟು ಕಂದಾಯ ಬಾಕಿ ಉಳಿಸಿಕೊಂಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ನೀಡುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಅರ್ಜಿ ನೀಡಿದ್ದರೂ, ಇದುವರೆಗೂ ಯಾವುದೇ ಮಾಹಿತಿ ನೀಡಿಲ್ಲ. ಕೆಲವು ಪ್ರಭಾವಿ ವ್ಯಕ್ತಿಗಳು ನಿರ್ಮಿಸುವ ವಾಣಿಜ್ಯ ಮಳಿಗೆಗಳಿಗೆ ಕಡಿಮೆ ಕಂದಾಯ ವಿಧಿಸುತ್ತಿದ್ದಾರೆ. ಈ ತಾರತಮ್ಯ ನಿಲ್ಲಬೇಕು ಎಂದು ಆಗ್ರಹಿಸಿದರು.

ಸದಸ್ಯ ಕೆ.ಬಿ.ಮುದ್ದಪ್ಪ ಮಾತನಾಡಿ ವಾಣಿಜ್ಯ ಮಳಿಗೆ, ಹೋಟೆಲ್‌ಗಳ, ವ್ಯಾಪಾರ ಪರವಾನಗಿ ಪಡೆದಿರುವವರ ಬಗ್ಗೆ ವಾರ್ಡ್‌ವಾರು ಸರ್ವೆ ನಡೆಸಿ ಪಟ್ಟಿ ತಯಾರಿಸುವಂತೆ ಸದಸ್ಯರ ಸಭೆಯಲ್ಲಿ ಆದೇಶ ನೀಡಿದ್ದರೂ ಅಧಿಕಾರಿಗಳು ಈ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ ಎಂದರು.

ಪಿ.ಸಿ.ಲಕ್ಷ್ಮೀನಾರಾಯಣ್‌ ಮಾತನಾಡಿ, ನಗರದಲ್ಲಿನ ಖಾಸಗಿ ಶಾಲೆಗಳ ಮಾಲೀಕರು ಕಂದಾಯ ಪಾವತಿಸದೆ ಹಲವು ವರ್ಷಗಳಿಂದಲೂ ಬಾಕಿ ಉಳಿಸಿಕೊಂಡಿವೆ. ಇಂತಹ ಶಾಲೆಗಳಿಂದಲೂ ಕಂದಾಯ ವಸೂಲಿ ಮಾಡಬೇಕು. ಖಾಸಗಿ ಅವರಿಂದ ಸರ್ವೆ ನಡೆಸಿ ಪಟ್ಟಿ ಸಿದ್ಧಪಡಿಸಬೇಕು ಎಂದರು.

ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ನಗರಸಭೆ ಅಧ್ಯಕ್ಷ ಟಿ.ಎನ್‌.ಪ್ರಭುದೇವ್‌, ಸದಸ್ಯರು ಯಾವುದೇ ಮಾಹಿತಿಪಡೆಯಲು ಅರ್ಹರು. ಈಗಾಗಲೇ ಕಂದಾಯ ವಸೂಲಾತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪರವಾನಗಿ ಪಡೆಯದೆ ನಿರ್ಮಿಸುವ ಕಟ್ಟಡಗಳಿಗೆ ಎರಡು ಪಟ್ಟು ಕಂದಾಯ ವಿಧಿಸಿ ವಸೂಲಿ ಮಾಡಲಾಗುತ್ತಿದೆ. ಕಂದಾಯ ವಸೂಲಿಯಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಉದ್ದೇಶ ಪೂರಕ ತಪ್ಪು: ವಾರ್ಡ್‌ಗಳಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡುವ ವಿಷಯಗಳು ಸೇರಿದಂತೆ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿರುವ ಯಾವುದೇ ವಿಷಯಗಳನ್ನು ನಡಾವಳಿ ಪುಸ್ತಕದಲ್ಲಿ ದಾಖಲಿಸುತ್ತಿಲ್ಲ ಎಂದು ಅಧ್ಯಕ್ಷರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕನ್ನಡ ಪಕ್ಷದ ಸದಸ್ಯೆ ಮಂಜುಳಾ ಅಂಜನೇಯ, ಇದು ಒಂದು ಬಾರಿ ಆಗಿದ್ದರೆ ಕೈತಪ್ಪಿನಿಂದ ಆಗಿರಬಹುದು ಎಂದು ಸುಮ್ಮನಾಗಬಹುದಿತ್ತು. ಆದರೆ, ಪದೇ ಪದೇ ಇದು ನಡೆಯುತ್ತಿದೆ. ಮಹಿಳಾ ಸದಸ್ಯರು ಎನ್ನುವ ಕಾರಣದಿಂದ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಈ ಬಗ್ಗೆ ರಾಜ್ಯ ಮಹಿಳಾ ಆಯೋಗ, ಪೌರಾಡಳಿತ ನಿರ್ದೇಶನಾಲಯ, ಜಿಲ್ಲಾಧಿಕಾರಿಗಳಿಗೂ ದೂರು ನೀಡಲಾಗಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಟಿ.ಎನ್‌.ಪ್ರಭುದೇವ್‌, ಅಧಿಕಾರಿಗಳ ಕೈತಪ್ಪಿನಿಂದ ನಡಾವಳಿ ಪುಸ್ತಕದಲ್ಲಿ ಸದಸ್ಯರ ಹೆಸರು ಕೈಬಿಡಲಾಗಿದೆಯೇ ವಿನಹ ಯಾವುದೇ ದುರುದ್ದೇಶ ಇಲ್ಲ. ಮುಂದೆ ಈ ರೀತಿ ಆಗದಂತೆ ನಿಗಾವಹಿಸಲಾಗುವುದು ಎಂದರು.

ಪೌರಾಯುಕ್ತ ಆರ್‌.ಮಂಜುನಾಥ್‌ ಸಭೆಗೆ ಮಾಹಿತಿ ನೀಡಿ, ಒಂದು ತಿಂಗಳಲ್ಲಿ ನಗರದಲ್ಲಿ ಎಷ್ಟು ವಾಣಿಜ್ಯ ಮಳಿಗೆಗಳು ಇವೆ ಎನ್ನುವ ಬಗ್ಗೆ ಪಟ್ಟಿ

ಸಿದ್ಧಪಡಿಸಲಾಗುವುದು. ಮಾರ್ಚ್‌ ಅಂತ್ಯದ ವೇಳೆಗೆ ₹60 ಲಕ್ಷ ಕಂದಾಯ ವಸೂಲಿ ಮಾಡುವ ಗುರಿಹೊಂದಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry