ದಣಿದ ಪ್ರೇಮಿಯ ಕಥಾನಕ

7

ದಣಿದ ಪ್ರೇಮಿಯ ಕಥಾನಕ

Published:
Updated:
ದಣಿದ ಪ್ರೇಮಿಯ ಕಥಾನಕ

ಚಿತ್ರ: #ಓ...ಪ್ರೇಮವೇ

ನಿರ್ಮಾಪಕರು: ಸಿ.ಟಿ. ಚಂಚಲಕುಮಾರಿ

ನಿರ್ದೇಶನ: ಮನೋಜ್

ತಾರಾಗಣ: ಮನೋಜ್, ನಿಕ್ಕಿ ಗರ್ಲಾನಿ, ರಂಗಾಯಣ ರಘು, ಸಾಧುಕೋಕಿಲ, ಅಪೂರ್ವಾ, ಬುಲೆಟ್‌ ಪ್ರಕಾಶ್‌, ಪ್ರಶಾಂತ್‌ ಸಿದ್ದಿ

ನಿಷ್ಕಲ್ಮಷ ಪ್ರೀತಿ ಹುಡುಕುವ ಹುಡುಗ. ಆದರೆ, ಶ್ರೀಮಂತ ಹುಡುಗನ ಸಂಗ ಬಯಸುವ ಹುಡುಗಿ. ಒಂದಿಷ್ಟು ಹಾಸ್ಯ. ನಾಯಕನ ಎಂಟ್ರಿಗೆ ಭರ್ಜರಿ ಹೊಡೆದಾಟ. ನಾಯಕ, ನಾಯಕಿ ನಡುವೆ ಮುಸುಕಿನ ಗುದ್ದಾಟ. ಈ ನಡುವೆಯೇ ಮತ್ತೊಬ್ಬ ನಾಯಕಿಯ ಪ್ರವೇಶ. ಕೊನೆಗೆ, ಅವಳಿಗೂ ದಕ್ಕದ ನಾಯಕ... ಇಂಥಹ ಅಂಶಗಳಿರುವ ಸಿನಿಮಾಗಳು ಈಗಾಗಲೇ ಸಾಕಷ್ಟು ಬಂದುಹೋಗಿವೆ. ಇದಕ್ಕೆ ಹೊಸ ಸೇರ್ಪಡೆ ‘#ಓ...ಪ್ರೇಮವೇ’ ಚಿತ್ರ.

ಜೀವನದಲ್ಲಿ ಹಣ, ಅಂತಸ್ತು ಶಾಶ್ವತವಲ್ಲ. ಪ್ರೀತಿಯೇ ಶಾಶ್ವತ ಎಂದು ‘#ಓ...ಪ್ರೇಮವೇ’ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಮನೋಜ್. ಮೊದಲಾರ್ಧ ಹರೆಯದ ಹಸಿ ಕನವರಿಕೆಗಳು, ಹುಡುಗಾಟದ ಪ್ರೇಮ ಕಥನವಾಗಿ ಸಾಗುತ್ತದೆ. ದ್ವಿತೀಯಾರ್ಧವು ಭಗ್ನಪ್ರೇಮಿಯೊಬ್ಬನ ಹತಾಶೆಯಲ್ಲಿ ನಲುಗುತ್ತದೆ. ಇನ್ನೊಂದೆಡೆ ಆಗರ್ಭ ಶ್ರೀಮಂತ ಮನೆತನದ ಹುಡುಗಿಯೊಬ್ಬಳು ಮಧ್ಯಮ ವರ್ಗದ ಬದುಕಿನ ಸವಿ ಬಯಸುವ, ಜೊತೆಗೆ ಪ್ರೀತಿಯ ಶಕ್ತಿಯನ್ನೂ ಕಥನ ಒಳಗೊಳ್ಳುತ್ತದೆ. ಕೊನೆಗೆ, ಭಗ್ನಪ್ರೇಮಿಗೆ ತಾನು ಪ್ರೀತಿಸಿದ ಹುಡುಗಿ ಒಲಿಯುವುದರೊಂದಿಗೆ ಚಿತ್ರ ಮುಗಿದು ಹೋಗುತ್ತದೆ.

ಅಂಜಲಿ (ನಿಕ್ಕಿ ಗರ್ಲಾನಿ) ಮಧ್ಯಮ ವ‌ರ್ಗದ ಹುಡುಗಿ. ಅವರಪ್ಪ ಜಿಪುಣ. ಅವಳಿಗೆ ಶ್ರೀಮಂತ ಯುವಕನನ್ನು ಕೈಹಿಡಿಯುವ ಆಸೆ. ಆಕೆಗೆ ರಾಹುಲ್‌ (ಮನೋಜ್‌) ಓಡಾಡುವ ಐಷಾರಾಮಿ ಕಾರುಗಳು ಕಣ್ಣು ಕುಕ್ಕುತ್ತವೆ. ಸದ್ದಿಲ್ಲದೆ ಅವನ ಮೇಲೆ ಪ್ರೇಮಾಂಕುರವಾಗುವ ವೇಳೆಗೆ ಹಾಡೊಂದು ಮುಗಿದು ಹೋಗುತ್ತದೆ.

ಅವನಿಗೂ ಅಂಜಲಿ ಕಂಡರೆ ಪ್ರೀತಿ. ಪ್ರೀತಿಯ ವಿನಿಮಯವಾದಾಗ ಒಟ್ಟೊಟ್ಟಿಗೆ ವಿಹರಿಸುತ್ತಾರೆ. ಒಮ್ಮೆ ಅಪ್ಪನ ಹಳೆಯ ಕಾರು ಮಾರಲು ಆಕೆ ಹೋಗುತ್ತಾಳೆ. ಆಗ ರಾಹುಲ್‌ ಹಳೆಯ ಕಾರುಗಳನ್ನು ಮಾರುವ ಕಮಿಶನ್‌ ಏಜೆಂಟ್‌ ಎಂಬುದು ಗೊತ್ತಾಗುತ್ತದೆ. ಆಗ ಅವಳ ಕನಸಿನ ಗೋಪುರ ಕುಸಿದು ಬೀಳುತ್ತದೆ. ಅವನ ಪ್ರೀತಿ ತಿರಸ್ಕರಿಸುತ್ತಾಳೆ. ನೊಂದ ರಾಹುಲ್ ಕುಡಿತದ ಚಟಕ್ಕೆ ದಾಸನಾಗುತ್ತಾನೆ. ಆಗ ಮೈಥಿಲಿ ಅವನ ಜೀವನ ಪ್ರವೇಶಿಸುತ್ತಾಳೆ. ಅವಳಿಗೂ ರಾಹುಲ್‌ನನ್ನು ಪಡೆಯುವ ಬಯಕೆ. ಶ್ರೀಮಂತ ಹುಡುಗನ ಕೈಹಿಡಿಯಲು ಹೋದ ಅಂಜಲಿಗೆ ಸತ್ಯದ ಅರಿವಾಗುತ್ತದೆ.  

ಚಿತ್ರದ ನಡುವೆ ಬಂದು ಹೋಗುವ ಹಾಸ್ಯ ದೃಶ್ಯಗಳು ನೋಡುಗರಿಗೆ ಕಚಗುಳಿ ಇಡುವುದಿಲ್ಲ. ನಾಯಕನಿಂದ ಪ್ರೇಕ್ಷಕರಿಗೆ ಪುಕ್ಕಟೆಯಾಗಿ ಪ್ರೀತಿಯ ಪಾಠವೂ ಸಿಗುತ್ತದೆ. ರಂಗಾಯಣ ರಘು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸ್ವಿಡ್ಜರ್ಲೆಂಡ್‌ ದೃಶ್ಯಗಳು ಕಿರಣ್‌ ಹಂಪಾಪುರ ಅವರ ಕ್ಯಾಮೆರಾದಲ್ಲಿ ಸೊಗಸಾಗಿ ಸೆರೆಸಿಕ್ಕಿವೆ. ಆನಂದ್‌ರಾಜ ವಿಕ್ರಮ್‌ ಮತ್ತು ರಾಹುಲ್ ದೇವ್‌ ಸಂಗೀತ ಚಿತ್ರಕ್ಕೆ ಹೊಸದೇನನ್ನೂ ಕಟ್ಟಿಕೊಟ್ಟಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry