ಶೌಚಾಲಯ: 31ರವರೆಗೂ ಗಡುವು

7

ಶೌಚಾಲಯ: 31ರವರೆಗೂ ಗಡುವು

Published:
Updated:

ಸಂಡೂರು: ‘ಸ್ವಚ್ಛ ಭಾರತ ಯೋಜನೆಯಡಿ ಮಾರ್ಚ್ 31ರ ಒಳಗೆ ವೈಯಕ್ತಿಕ ಶೌಚಾಲಯ ನಿರ್ಮಾಣದಲ್ಲಿ ಗುರಿ ಸಾಧಿಸದ ಅಧಿಕಾರಿಗಳ ಸಂಬಳವನ್ನು ಕಡಿತ ಮಾಡಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜೆ.ಎಂ.ಅನ್ನದಾನಸ್ವಾಮಿ ಎಚ್ಚರಿಕೆ ನೀಡಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿ, ‘ಸುಶೀಲಾನಗರ ಪಂಚಾಯಿತಿ ವ್ಯಾಪ್ತಿಯಲ್ಲಿ 2 ತಿಂಗಳಾದರೂ ಶೌಚಾಲಯ ನಿರ್ಮಾಣದಲ್ಲಿ ಪ್ರಗತಿಯಾಗಿಲ್ಲ. ಇಲ್ಲಿ 149 ಶೌಚಾಲಯಗಳ ನಿರ್ಮಾಣವಾಗಬೇಕಿದೆ. ನರಸಿಂಗಾಪುರ, ರಾಜಾಪುರ, ತಾರಾನಗರ ಪಂಚಾಯಿತಿಗಳಲ್ಲೂ ಪ್ರಗತಿ ಇಲ್ಲವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕುಡಿಯುವ ನೀರು: ‘ಬೇಸಿಗೆ ಆರಂಭವಾಗಿರುವುದರಿಂದ ಎಲ್ಲಿಯೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಹಲವೆಡೆ ಕೊಳವೆ ಬಾವಿಗಳಲ್ಲಿ ಅಂತರ್ಜಲದ ಮಟ್ಟ ಕುಸಿಯುತ್ತಿದೆ. ನೀರಿನ ಸಮಸ್ಯೆ ಉದ್ಭವಿಸಬಹುದಾದ ಪ್ರದೇಶಗಳ ಪಟ್ಟಿ ಕಳಿಸಬೇಕು’ ಎಂದು ಸೂಚಿಸಿದರು.

ತಹಶೀಲ್ದಾರ್ ಎಚ್.ಎಂ. ರಮೇಶ್ ಮಾತನಾಡಿ, ‘ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಅಡಿಯಲ್ಲಿ ತಾಲ್ಲೂಕಿಗೆ 6,994 ಗುರಿ ನೀಡಲಾಗಿದೆ. ಇಲ್ಲಿಯವರೆಗೆ ಕೇವಲ 1,637 ನೊಂದಣಿಯಾಗಿದೆ. ಮುರಾರಿಪುರ, ಜೈಸಿಂಗಾಪುರ, ನಾರಾಯಣಪುರ, ಮಾದಾಪುರ, ತುಮಟಿ, ಲಕ್ಕಲಹಳ್ಳಿಯಿಂದ ಒಂದು ಅರ್ಜಿಯೂ ಸಲ್ಲಿಕೆಯಾಗಿಲ್ಲ. ಚುನಾವಣೆ ಘೋಷಣೆಯಾದರೆ ತೊಂದರೆಯಾಗುತ್ತದೆ. ಪಂಚಾಯಿತಿ ಅಧಿಕಾರಿಗಳು ಹೆಚ್ಚು ಜಾಗೃತಿ ಮೂಡಿಸಬೇಕು’ ಎಂದರು.

ಇಂಟರ್‌ನೆಟ್‌ ಸಮಸ್ಯೆ: ಈ ಸಂದರ್ಭದಲ್ಲಿ ಮಾತನಾಡಿದ ಜಿ.ಎಲ್. ಹಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆದಿಲಕ್ಷ್ಮಿ, ‘ರಸ್ತೆ ನಿರ್ಮಾಣದ ವೇಳೆ ಬಿಎಸ್‌ಎನ್‌ಎಲ್ ತಂತತಿ ತುಂಡಾದ ಕಾರಣ ಇಂಟರ್‌ನೆಟ್ ಸಮಸ್ಯೆ ಇದೆ’ ಎಂದರು. ಅಗ್ರಹಾರ, ವಿಠಲಾಪುರ, ಮೆಟ್ರಿಕಿ ಪಂಚಾಯಿತಿ ಅಧಿಕಾರಿಗಳೂ ಇದೇ ಸಮಸ್ಯೆಯನ್ನು ಗಮನಕ್ಕೆ ತಂದರು.

ಅದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಹಾಂತೇಶ್ ಗೌಡ, ‘ಬಿಎಸ್‌ಎನ್‌ಎಲ್ ಸಿಬ್ಬಂದಿ ನಿಯಮಗಳನ್ನು ಪಾಲಿಸುತ್ತಿಲ್ಲ. ಗುತ್ತಿಗೆದಾರರು ಸಂಜೆ ಅಥವಾ ರಾತ್ರಿ ವೇಳೆ ರಸ್ತೆ ಬದಿಯೇ ಕುಣಿಗಳನ್ನು ತೋಡಿ ತಂತಿ ಅಳವಡಿಸುತ್ತಿದ್ದಾರೆ, ಅದರಿಂದ ರಸ್ತೆ ನಿರ್ಮಾಣ ಸಂದರ್ಭದಲ್ಲಿ ತೊಂದರೆಯಾಗುತ್ತಿದೆ’ ಎಂದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಡಿ. ಫರ್ಜಾನಾ, ಉಪಾಧ್ಯಕ್ಷೆ ಗಂಗಾಬಾಯಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry