ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಬ್ ದಾಳಿ ಖುಲಾಸೆ ಅಸಂಗತ ವಿದ್ಯಮಾನ

Last Updated 16 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಮಂಗಳೂರಿನ ಆಮ್ನೇಸಿಯಾ ಪಬ್‍ ಮೇಲೆ ದಾಳಿ ನಡೆಸಿ ಅಲ್ಲಿದ್ದ ಯುವಕರು ಹಾಗೂ ಯುವತಿಯರನ್ನು ಥಳಿಸಿದಂತಹ ಆರೋಪದ ಪ್ರಕರಣದಲ್ಲಿ ಪ್ರಮೋದ್ ಮುತಾಲಿಕ್ ಸೇರಿದಂತೆ ಶ್ರೀರಾಮಸೇನೆಯ 27 ಕಾರ್ಯಕರ್ತರನ್ನು ಮಂಗಳೂರಿನ ಎರಡನೇ ಜೆಎಂಎಫ್ ನ್ಯಾಯಾಲಯ ಬಿಡುಗಡೆ ಮಾಡಿರುವುದು ಆಘಾತಕಾರಿ. ನಮ್ಮ ಅಪರಾಧ ನ್ಯಾಯ ವಿತರಣೆ ವ್ಯವಸ್ಥೆಯ ದೋಷಕ್ಕೆ ಇದು ಮತ್ತೊಂದು ದೊಡ್ಡ ಉದಾಹರಣೆ. ‘ತನಿಖೆ ಮತ್ತು ವಿಚಾರಣೆಯ ಎಲ್ಲಾ ಹಂತಗಳಲ್ಲಿ ಆರೋಪ ಸಾಬೀತು ಮಾಡಲು ಪ್ರಾಸಿಕ್ಯೂಷನ್ ಸಂಪೂರ್ಣ ವಿಫಲವಾಗಿದೆ’ ಎಂದು ನ್ಯಾಯಾಧೀಶರು ಹೇಳಿದ್ದಾರೆ. 2009ರ ಜನವರಿ 24ರಂದು ಯುವತಿಯರ ತಲೆಗೂದಲು ಹಿಡಿದು ಎಳೆದಾಡಿ ಯುವಕರ ಮೇಲೆ ಹಲ್ಲೆ ನಡೆಸಿದ ವಿಡಿಯೊ ದೃಶ್ಯಗಳನ್ನು ರಾಷ್ಟ್ರದಾದ್ಯಂತ ಎಲ್ಲಾ ಸುದ್ದಿವಾಹಿನಿಗಳೂ ಪ್ರಸಾರ ಮಾಡಿದ್ದವು. ಇಡೀ ರಾಷ್ಟ್ರ ಈ ಆಘಾತಕಾರಿ ದೃಶ್ಯಗಳನ್ನು ನೋಡಿತ್ತು. ಹೀಗಿದ್ದೂ ಆರೋಪ ಸಾಬೀತು ಮಾಡಲು ಏಕೆ ಸಾಧ್ಯವಾಗಲಿಲ್ಲ ಎಂಬುದು ಪ್ರಶ್ನೆ. ‘ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿರುವುದನ್ನು ಸಾಬೀತುಪಡಿಸಲು ವಿಡಿಯೊ ಮತ್ತು ಫೋಟೊಗಳು ಪ್ರಬಲ ಸಾಕ್ಷ್ಯವಾಗುತ್ತವೆ. ಆದರೆ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ವಿಡಿಯೊ ಮತ್ತು ಫೋಟೊಗಳನ್ನು ತನಿಖಾಧಿಕಾರಿಯು ಹಾಜರುಪಡಿಸಿಲ್ಲ. ಇದು ಪ್ರಾಸಿಕ್ಯೂಷನ್ ಪಾಲಿಗೆ ಮಾರಕವಾಯಿತು’ ಎಂದು ಆದೇಶದಲ್ಲಿ ನ್ಯಾಯಾಧೀಶರು ಉಲ್ಲೇಖಿಸಿದ್ದಾರೆ. ಸಂತ್ರಸ್ತ ಮಹಿಳೆಯರನ್ನು ಗುರುತಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿರುವುದನ್ನೂ ಆದೇಶದಲ್ಲಿ ಪ್ರಸ್ತಾಪಿಸಲಾಗಿದೆ. ಹೀಗಾಗಿ, ‘ಆರೋಪಿಗಳಿಗೆ ಸಂಶಯದ ಲಾಭವನ್ನು ನೀಡಲಾಗಿದೆ’ ಎಂದೂ ಕೋರ್ಟ್ ಹೇಳಿದೆ. ಕಾನೂನಿನ ಗೋಜಲುಗಳಲ್ಲಿ ಆರೋಪ ಸಾಬೀತು ಮಾಡಲಾಗದಂತಹ ಅಸಂಗತ ವಿದ್ಯಮಾನ ಇದು.

ಈ  ಘಟನೆ ನಡೆದು ಒಂಬತ್ತು ವರ್ಷಗಳಷ್ಟು ಸುದೀರ್ಘ ಅವಧಿಯ ನಂತರ ಈ ತೀರ್ಪು ಹೊರಬಿದ್ದಿದೆ. ಸುರಕ್ಷತೆಯ ಭೀತಿಯಿಂದ ಶ್ರೀರಾಮಸೇನೆ ಕಾರ್ಯಕರ್ತರ ವಿರುದ್ಧ ಸಾಕ್ಷ್ಯ ನುಡಿಯಲು ಸಂತ್ರಸ್ತ ಮಹಿಳೆಯರಲ್ಲಿ ಒಬ್ಬರಾದರೂ ಮುಂದೆ ಬರಲಿಲ್ಲ ಎಂಬ ಅಭಿಪ್ರಾಯ ಇದೆ. ಸಾಕ್ಷಿಗಳಲ್ಲಿ ಸುರಕ್ಷತೆಯ ಭಾವನೆ ಮೂಡಿಸುವಂತಹ ಪರಿಸ್ಥಿತಿ ನಮ್ಮ ವ್ಯವಸ್ಥೆಯಲ್ಲಿ ಇಲ್ಲ ಎನ್ನುವಂತಹದ್ದು ಆತಂಕಕಾರಿ ಸಂಗತಿ. ನ್ಯಾಯ ವಿತರಣೆಗೆ ಇದು ಪ್ರಮುಖ ಅಡ್ಡಗಾಲಾಗುತ್ತಿದೆ. ಹೀಗಾಗಿ, ದಿಟ್ಟವಾಗಿ ಸಾಕ್ಷ್ಯ ನುಡಿಯುವಂತಹ ಸನ್ನಿವೇಶ ಸೃಷ್ಟಿಯನ್ನು ಮುಖ್ಯ ಕಾಳಜಿಯಾಗಿ ಪರಿಗಣಿಸಬೇಕಾದುದು ಅಗತ್ಯ. ‘ಕೋರ್ಟ್‌ನ ಈ ಆದೇಶ, ಸತ್ಯಕ್ಕೆ ಸಿಕ್ಕ ಜಯ’ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿಕೊಂಡಿದ್ದಾರೆ. ‘ಹೆಚ್ಚುತ್ತಿರುವ ಪಬ್ ಸಂಸ್ಕೃತಿ ವಿರುದ್ಧ ದಾಳಿ ಮಾಡುವುದಷ್ಟೇ ನಮ್ಮ ಉದ್ದೇಶವಾಗಿತ್ತು. ಆದರೆ ನಮ್ಮನ್ನು ಗೂಂಡಾಗಳಾಗಿ ಬಿಂಬಿಸಲಾಯಿತು’ ಎಂದು ಅವರು ಹೇಳಿದ್ದಾರೆ. ಇದೇ ರೀತಿ, ಸಂಸ್ಕೃತಿ ರಕ್ಷಣೆಯ ಹೆಸರಿನಲ್ಲಿ ಮಂಗಳೂರಿನಲ್ಲಿ ಇಂತಹದೇ ಮತ್ತಷ್ಟು ದಾಳಿ ಪ್ರಕರಣಗಳಿಗೆ ಆಮ್ನೇಸಿಯಾ ಪಬ್ ಮೇಲಿನ ದಾಳಿ ಪ್ರೇರಣೆಯಾಗಿತ್ತು ಎಂಬುದನ್ನು ನಾವು ನೆನಪಿಸಿಕೊಳ್ಳಬೇಕು. ಇಷ್ಟೊಂದು ಪ್ರಚಾರ ಪಡೆದ ದಾಳಿ ಪ್ರಕರಣದಲ್ಲೂ ದಾಳಿ ನಡೆಸಿದವರಿಗೆ ಶಿಕ್ಷೆ ಆಗುವುದು ಸಾಧ್ಯವಿಲ್ಲ ಎನ್ನುವುದು ಸಮಾಜದಲ್ಲಿ ಸಿನಿಕತನ ಬೆಳೆಯಲು ಕಾರಣವಾಗುತ್ತದೆ. ‘ಈ ಪ್ರಕರಣದ ಬಗ್ಗೆ ಅಡ್ವೊಕೇಟ್ ಜನರಲ್ ಜೊತೆ ಚರ್ಚಿಸಿ ಮೇಲ್ಮನವಿ ಸಲ್ಲಿಸಲಾಗುವುದು’ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರೇನೊ ಹೇಳಿದ್ದಾರೆ. ಆದರೆ ಇದು ಬಾಯಿಮಾತಾಗಬಾರದು. ಸಂಸ್ಕೃತಿ ರಕ್ಷಣೆ ಹೆಸರಲ್ಲಿ ಕಾನೂನು ಕೈಗೆತ್ತಿಕೊಂಡವರಿಗೆ ಕಠಿಣ ಶಿಕ್ಷೆಯಾಗುತ್ತದೆ ಎಂಬ ಸಂದೇಶ ಜನರನ್ನು ತಲುಪುವುದು ಮುಖ್ಯ. ಮಹಿಳೆ ಮೇಲಿನ ಹಿಂಸಾಚಾರಗಳಿಗೆ ಸಂಬಂಧಿಸಿದಂತೆ ಕಠಿಣ ಕಾನೂನುಗಳಿದ್ದರಷ್ಟೇ ಸಾಲದು. ಕಾನೂನುಗಳು ಜಾರಿಯಾಗುವ ಪ್ರಕ್ರಿಯೆಯಲ್ಲಿ ನಮ್ಮ ಪೊಲೀಸ್ ವ್ಯವಸ್ಥೆಯೂ ಸಂವೇದನಾಶೀಲತೆ ಪ್ರದರ್ಶಿಸಬೇಕು. ಮೊದಲಿಗೆ ತನಿಖೆ ಪ್ರಕ್ರಿಯೆಯಲ್ಲಿ ವೃತ್ತಿಪರತೆ ಹಾಗೂ ದಕ್ಷತೆ ಇರಬೇಕು. ರಾಜಕೀಯ ಪ್ರಭಾವಗಳನ್ನು ಮೀರುವಂತಹ ದಿಟ್ಟತನ ಇರಬೇಕು. ಆ ಮೂಲಕ ಕಾನೂನು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಂತ್ರಸ್ತರಲ್ಲೂ ವಿಶ್ವಾಸದ ಭಾವನೆ ಮೂಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT