ಯುಗಾದಿ ಪ್ರಕೃತಿಯ ನಿತ್ಯಪಾಠ

7

ಯುಗಾದಿ ಪ್ರಕೃತಿಯ ನಿತ್ಯಪಾಠ

Published:
Updated:
ಯುಗಾದಿ ಪ್ರಕೃತಿಯ ನಿತ್ಯಪಾಠ

ಪ್ರಗತಿ ಮತ್ತು ಅವನತಿಗಳಿಗೆ ಮಾನದಂಡವೇ ಕಾಲದ ಎಣಿಕೆ. ಮನುಷ್ಯನಲ್ಲಿ ಬದಲಾವಣೆಯ ಬಗ್ಗೆ ಗಮನ ಬಂದದ್ದೇ ಅವನಿಗೆ ಕಾಲವನ್ನು ಕುರಿತು ಅರಿವು ಮೂಡಿದಾಗ. ಹೀಗೆ ಕಾಲಕ್ಕೂ ನಮ್ಮ ಜೀವನಕ್ಕೂ ಸಂಬಂಧವನ್ನು ಕಲ್ಪಿಸಿರುವ ಹಬ್ಬವೇ ‘ಯುಗಾದಿ.’

ಯುಗಾದಿ – ಎಂದರೆ ಯುಗದ ಮೊದಲು ಎಂದರ್ಥ. ಯುಗ ಎನ್ನುವುದು ಒಟ್ಟು ಸೃಷ್ಟಿಪ್ರಕ್ರಿಯೆಯನ್ನು ಅಳೆಯುವ ಕಾಲದಂಡ ಎನ್ನಬಹುದು. ಇಡಿಯ ಸೃಷ್ಟಿ ನಾಲ್ಕು ಯುಗಗಳ ಚಕ್ರದಲ್ಲಿ ಸುತ್ತುತ್ತಲೇ ಇರುತ್ತದೆ ಎನ್ನುವುದು ಪ್ರಾಚೀನ ಭಾರತದಲ್ಲಿಯ ನಂಬಿಕೆಯಾಗಿತ್ತು. ಕೃತಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗ – ಇವೇ ಆ ಯುಗಗಳು. ಈ ಯುಗಗಳ ಸತ್ಯ ಮತ್ತು ಧರ್ಮದ ಪ್ರಮಾಣವನ್ನು ಆಧರಿಸಿ ಅವುಗಳ ಸೌಖ್ಯವನ್ನು ಹೇಳುವುದು ವಾಡಿಕೆ. ಕೃತಯುಗದಲ್ಲಿ ನಾಲ್ಕು ಕಾಲುಗಳಲ್ಲಿರುವ ಸತ್ಯಧರ್ಮಗಳು ಕಲಿಯುಗಕ್ಕೆ ಬರುವ ಹೊತ್ತಿಗೆ ಒಂಟಿಕಾಲಿನ ಮೇಲೆ ನಿಂತಿರುತ್ತವೆ. ನಾವಿರುವ ಕಾಲವೇ ಕಲಿಯುಗ. ಎಂದರೆ ನಮ್ಮ ಕಾಲದಲ್ಲಿ ಸತ್ಯ–ಧರ್ಮಗಳಿಗೆ ಗಟ್ಟಿತನ ಕಡಿಮೆ ಎಂದು ಅರ್ಥ! ಸತ್ಯ–ಧರ್ಮಗಳ ಅವನತಿ ಎಂದರೆ ಅಸತ್ಯ–ಅಧರ್ಮಗಳ ಏಳಿಗೆ ಎಂದೇ ಅಲ್ಲವೆ? ಹೀಗೆಂದು ಈ ವಿದ್ಯಮಾನ ನಮಗೆ ಸುಲಭವಾಗಿ ಗೋಚರಕ್ಕೆ ಬರುವಂಥದ್ದಲ್ಲ. ಆದರೆ ಪ್ರಕೃತಿ ಇದನ್ನು ನಮಗೆ ಸುಲಭದಲ್ಲಿ ತಿಳಿಯಪಡಿಸುತ್ತಿರುತ್ತದೆ. ಕತ್ತಲು–ಬೆಳಕು, ಸಿಹಿ–ಕಹಿ – ಇಂಥ ವಿವರಗಳ ಮೂಲಕ ಸೃಷ್ಟಿರಹಸ್ಯವನ್ನು ಅದು ನಮಗೆ ಉಣಬಡಿಸುತ್ತಿರುತ್ತದೆ. ಆದುದರಿಂದ ನಾವು ಯುಗರಹಸ್ಯವನ್ನೂ ಯುಗಧರ್ಮವನ್ನೂ ತಿಳಿದುಕೊಳ್ಳಲು ನಾಲ್ಕು ಯುಗಗಳ ಆರಂಭದ ದಿನಕ್ಕೇ ಕಾಯಬೇಕಿಲ್ಲ; ಬದುಕಿನ ಯಾವ ಕ್ಷಣವನ್ನೂ ಕೂಡ ‘ಯುಗದ ಆದಿ’ಯನ್ನಾಗಿಸಿಕೊಂಡು ಸೃಷ್ಟಿರಹಸ್ಯದ ಜಾಡನ್ನು ಹಿಡಿಯಬಹುದು. ಬಹುಶಃ ಇಂಥದೊಂದು ಪರಿಕಲ್ಪನೆಯಲ್ಲಿ ಯುಗಾದಿ ಎಂಬ ಹಬ್ಬ ಹರಳುಗಟ್ಟಿರಬಹುದೆನಿಸುತ್ತದೆ.

ಸಾಮಾನ್ಯವಾಗಿ ನಮಗೆ ಕಾಲದ ಎಣಿಕೆ ಸುಲಭವಾಗಿ ದಕ್ಕುವಂಥದ್ದು ಹಗಲು–ರಾತ್ರಿಗಳ ಚಕ್ರದಾಟದಲ್ಲಿ. ಇದು ಪ್ರಕೃತಿಯಲ್ಲಿಯೇ ಸಹಜವಾಗಿರುವ ಆಟ. ಈ ಚಕ್ರದ ಮತ್ತೊಂದು ವಿಸ್ತಾರರೂಪವೇ ಪ್ರಕೃತಿಯಲ್ಲಿ ನಡೆಯುವ ಋತುಗಳ ಸುತ್ತಾಟ. ಬದಲಾವಣೆ ಕಣ್ಣಿಗೆ ಕಟ್ಟುವಂತೆ, ನಮ್ಮ ನಿತ್ಯದ ಅನುಭವಕ್ಕೆ ಒದಗುವಂತೆ ಸ್ಪಷ್ಟವಾಗಿರುತ್ತದೆ. ಆದರೆ ಯಾವ ಬದಲಾವಣೆಯೂ ಶಾಶ್ವತವಲ್ಲ; ನಿರಂತರವಾಗಿ ಬದಲಾವಣೆ ಆಗುತ್ತಲೇ ಇರುತ್ತದೆ. ಇಂದು ಎಲೆ, ಹೂವು, ಕಾಯಿ, ಹಣ್ಣುಗಳಿಂದ ನಳನಳಿಸುತ್ತಿರುವ ಮರ ನಾಳೆಗೆ ತನ್ನೆಲ್ಲ ಆ ಸೊಬಗನ್ನೂ ಕಳೆದುಕೊಂಡು ಬೆತ್ತಲಾಗಿ ಬಯಲಿಗೆ ಮೈಯೊಡ್ಡಿ ನಿಂತಿರುತ್ತದೆ. ಆದರೆ ಈ ಶೂನ್ಯಭಾವವೂ ಸ್ಥಿರವಲ್ಲ; ನಾಳೆಗೆ ಮತ್ತೆ ಚಿಗುರಾಗಿ, ಮತ್ತೊಂದು ದಿನದಲ್ಲಿ ಎಲೆಯಾಗಿ, ನಂತರ ಹೂವಾಗಿ, ಕಾಯಾಗಿ, ಹಣ್ಣಾಗಿ ಮತ್ತೆ ಸಂಭ್ರಮಿಸುತ್ತದೆ. ಆದುದರಿಂದ ಜೀವನದಲ್ಲಿ ಸಿಹಿ–ಕಹಿಗಳಾಗಲೀ, ಬೆಳಕು–ಕತ್ತಲೆಗಳಾಗಲೀ ಶಾಶ್ವತವಾದವು ಅಲ್ಲ; ಅಂತೆಯೇ ಸುಖ–ದುಃಖಗಳೂ ಕೂಡ ಜೀವನದ ಸುತ್ತಾಟದ ಭಾಗಗಳೇ ಹೊರತು ಅವೇ ಸ್ಥಿರಬಿಂದುಗಳಲ್ಲ ಎಂಬ ಮಹಾಸತ್ಯದ ಸಂಭ್ರಮದ ಆಚರಣೆಗೆ ನಮ್ಮನ್ನು ಸಿದ್ಧಗೊಳಿಸುವ ಪ್ರಕೃತಿಯ ಪಾಠವೇ ಯುಗಾದಿ.

ಹೀಗಿದ್ದರೂ ನಮ್ಮ ಮನಸ್ಸು ಸಹಜವಾಗಿಯೇ ಜೀವನದಲ್ಲಿ ಹಸಿರನ್ನು ಸಂಭ್ರಮಿಸುತ್ತದೆ, ಒಪ್ಪುತ್ತದೆ. ಆದುದರಿಂದಲೇ ಪ್ರಕೃತಿಮಾತೆ ಹಸಿರನ್ನುಡುವ ಕಾಲವನ್ನೇ ನಮ್ಮ ಯುಗದ ಆದಿಯನ್ನಾಗಿಸಿಕೊಂಡಿದ್ದೇವೆ. ಆದರೆ ಸಿಹಿಯ ಜೊತೆಗೆ ಕಹಿಯನ್ನೂ ಸ್ವೀಕರಿಸುವ ಧೈರ್ಯವನ್ನೂ ಮಾಡಿದ್ದೇವೆ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry