ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇವು ಮತ್ತು ಬೆಲ್ಲ ಬೇಸಿಗೆಯ ಔಷಧ

Last Updated 16 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಚರ್ಮರೋಗಗಳಿಗೆ ಬೇವು ರಾಮಬಾಣ.‌ ಅದಕ್ಕಾಗಿಯೇ ಯುಗಾದಿಯಂದು ಎಲ್ಲರೂ ಸ್ನಾನದ ನೀರಿಗೆ ಬೇವಿನ ಎಲೆಗಳನ್ನು ಹಾಕಿ ಕುದಿಸಿ ಸ್ನಾನ ಮಾಡುತ್ತಾರೆ. ಬೇಸಿಗೆಯಲ್ಲಿ ಬೆವರು ಹೆಚ್ಚಾಗಿ ಬರುವುದರಿಂದ ತುರಿಕೆ ಸಾಮಾನ್ಯ. ಅದನ್ನು ನಿಯಂತ್ರಿಸಲು ದಿನವೂ ಈ ರೀತಿಯ ಸ್ನಾನ ಒಳ್ಳೆಯದು. ಇದರಿಂದ ಬ್ಯಾಕ್ಟೀರಿಯಾ, ವೈರಸ್ ಮತ್ತು ಫಂಗಸ್‌ಗಳು ನಾಶವಾಗುತ್ತವೆ.

ಊರಲ್ಲಿ ಬೇವಿನ ಮರವೊಂದಿದ್ದರೆ, ಊರಿಗೆ ಒಂದು ಔಷಧದ ಅಂಗಡಿಯಿದ್ದಂತೆ. ಅದಕ್ಕಾಗಿಯೆ ಬೇವಿನ ಮರಕ್ಕೆ ‘village pharmacy’ ಎನ್ನಲಾಗುತ್ತದೆ. ಬಹಳಷ್ಟು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಬೇವಿನ ಮರಕ್ಕೆ ಇದೆ. ಆಯಾಸ, ನೀರಡಿಕೆ, ಕೆಮ್ಮು, ಜ್ವರ, ಕ್ರಿಮಿ, ಅರುಚಿ, ಹುಣ್ಣು, ಗಾಯ, ಚರ್ಮರೋಗ, ವಾಂತಿ, ಮಧುಮೇಹ, ಕಣ್ಣಿನರೋಗಗಳು – ಇತ್ಯಾದಿ ರೋಗಗಳಲ್ಲಿ ಔಷಧವಾಗಿ ಬಳಸಲಾಗುತ್ತದೆ.

‘ನಿಂಬತಿ ಸ್ವಸ್ಥಮದದಾತಿ’ ಆರೋಗ್ಯವನ್ನು ನೀಡುವುದರಿಂದ ಬೇವಿಗೆ ಆಯುರ್ವೇದದಲ್ಲಿ ‘ನಿಂಬ’ ಎಂದು ಹೆಸರು. ಬೆಲ್ಲ(ಗುಡ)ಕ್ಕೆ ಆಯುರ್ವೇದದಲ್ಲಿ ವಿಶೇಷ ಸ್ಥಾನವಿದೆ. ಮೊದಲಿನ ಕಾಲದಲ್ಲಿ ಬಿಸಿಲಿನಲ್ಲಿ ಬಳಲಿ ಬಂದವರಿಗೆ ನೀರಿನ ಜೊತೆ ಬೆಲ್ಲವನ್ನು ನೀಡುವ ಪದ್ಧತಿ ಇತ್ತು. ಇದೇ ಆಯುರ್ವೇದದ ಗುಡಾಂಬು ಪ್ರಯೋಗ. ಇದು ದೇಹವನ್ನು ತಂಪಾಗಿಸುವುದರ ಜೊತೆಗೆ ದೇಹದ ಬಳಲಿಕೆಯನ್ನು ಕಡಿಮೆ ಮಾಡಿ ಚೈತನ್ಯವನ್ನು ನೀಡುತ್ತದೆ. ಆದರೆ ಇವತ್ತಿನ ದಿನಗಳಲ್ಲಿ ಫ್ರಿಜ್‌ನಲ್ಲಿರಿಸಿದ ಬಗೆಬಗೆಯ ಸಂಸ್ಕರಿಸಿದ ಪಾನೀಯ ನೀಡುವುದು ಪ್ರತಿಷ್ಠೆಯ ಸಂಕೇತವಾಗಿಬಿಟ್ಟಿದೆ.

ಬೆಲ್ಲಕ್ಕೆ ದೇಹದ ವಿಷಾಂಶಗಳನ್ನು ಹೊರಹಾಕುವ (ಸ್ರೋತಸ ಶೋಧಕ) ಶಕ್ತಿ ಇದೆ. ಬೆಲ್ಲವು ಶ್ವಾಸಕೋಶದ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದರಿಂದ ವಾಯುಮಾಲಿನ್ಯದಿಂದಾಗುವ ಉಸಿರಾಟದ ಸಮಸ್ಯೆಗೆ ಒಂದು ಒಳ್ಳೆಯ ಔಷಧ. ಅದಕ್ಕಾಗಿಯೇ ಇತ್ತೀಚೆಗೆ ದೆಹಲಿಯಲ್ಲಿ ಉಂಟಾದ ಅತಿಯಾದ ವಾಯುಮಾಲಿನ್ಯದ ದುಷ್ಪರಿಣಾಮ ದೇಹದ ಮೇಲೆ ಉಂಟಾಗದಿರಲೆಂದು ದಿನನಿತ್ಯ ಕೊಂಚ ಬೆಲ್ಲ ಸೇವಿಸಲು ಅಲ್ಲಿನ ನಾಗರಿಕರಿಗೆ ಸೂಚಿಸಲಾಗುತ್ತಿದೆ.

ಜೀರ್ಣಕ್ರಿಯೆ ಸರಿಮಾಡುವ ಶಕ್ತಿ ಬೆಲ್ಲಕ್ಕೆ ಇದೆ. ಆಯುರ್ವೇದದಲ್ಲಿ ಬೆಲ್ಲ ಮತ್ತು ಅಳಲೆಕಾಯಿ ಪುಡಿ (ಗುಡಹರಿತಕಿ) ಹಾಗೂ ಬೆಲ್ಲ ಮತ್ತು ಹಸಿಶುಂಠಿ(ಗುಡಾರ್ದಕ)ಯ ನಿತ್ಯಸೇವನೆಯನ್ನು ಹೇಳಿದ್ದಾರೆ. ಅದಕ್ಕಾಗಿಯೇ ನಮ್ಮ ಹಿರಿಯರು ಊಟದ ನಂತರ ದಿನವೂ ಕೊಂಚ ಬೆಲ್ಲ ಸೇವಿಸುತ್ತಿದ್ದರು. ಬೆಲ್ಲದಿಂದ ಮಾಡಿದ ಸಾಕಷ್ಟು ಔಷಧಗಳನ್ನು ಆಯುರ್ವೇದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಉದಾ; ಶತಾವರಿ ಗುಡ.

ಅತಿಯಾಗಿ ಸಿಹಿಖಾದ್ಯವನ್ನು ಇಷ್ಟಪಡುವವರು ಸಕ್ಕರೆ ಬದಲಿಗೆ ಬೆಲ್ಲ ಬಳಸುವುದು ಒಳಿತು. ಬೆಲ್ಲದಲ್ಲಿ ಖನಿಜಾಂಶಗಳು ಇರುವುದರಿಂದ ರಕ್ತಹೀನತೆಯನ್ನು ತಡೆಗಟ್ಟುತ್ತದೆ. ಯುಗಾದಿಯ ಬೇವು–ಬೆಲ್ಲದ ಸಮ್ಮಿಶ್ರಣವು ಜೀವನದ ಸಿಹಿ–ಕಹಿಯ ಸಂಗತಿಗಳನ್ನು ಸಮನಾಗಿ ಸ್ವೀಕರಿಸಬೇಕೆಂಬ ಆದರ್ಶ ಜೀವನಮೌಲ್ಯವನ್ನು ಸಾರುವುದರೊಟ್ಟಿಗೆ ಆರೋಗ್ಯದ ಗುಟ್ಟನ್ನು ತನ್ನಲ್ಲಿ ಅಡಗಿಸಿಟ್ಟುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT