ಚಿಂತೆಯಲ್ಲಿ ನಿಂತ ದಶರಥನ ಅರಮನೆ

ಬುಧವಾರ, ಮಾರ್ಚ್ 20, 2019
26 °C

ಚಿಂತೆಯಲ್ಲಿ ನಿಂತ ದಶರಥನ ಅರಮನೆ

Published:
Updated:
ಚಿಂತೆಯಲ್ಲಿ ನಿಂತ ದಶರಥನ ಅರಮನೆ

ರಾಜ್ಯವೊಂದು ಸುಭಿಕ್ಷವಾಗಿರಲು ಏನೆಲ್ಲ ಬೇಕೋ ಅವೆಲ್ಲವೂ ಕೋಸಲೆಯಲ್ಲಿ ಇದ್ದವು. ರಾಜನಾಗಿದ್ದ ದಶರಥನು ಪ್ರಜೆಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಹೀಗಾಗಿ ಅವನನ್ನು ಪಟ್ಟಣದ ಜನರೂ ಹಳ್ಳಿಯ ಜನರೂ – ಸಮಾನವಾಗಿ ಇಷ್ಟಪಡುತ್ತಿದ್ದರು (ಪೌರಜಾನಪದಪ್ರಿಯಃ). ಅವನು ಮಹಾಶೂರನಷ್ಟೇ ಅಲ್ಲ, ವಿದ್ವಾಂಸನೂ ಆಗಿದ್ದವನು. ಅವನು ಎಷ್ಟು ಪರಾಕ್ರಮಶಾಲಿ ಎಂದರೆ ಏಕಾಕಿಯಾಗಿ ಹತ್ತು ಸಾವಿರ ಮಹಾರಥರೊಡನೆ ಯುದ್ಧ ಮಾಡಬಲ್ಲವನಾಗಿದ್ದನು. ಶತ್ರುಗಳ ಮೇಲೆ ಸದಾ ಮೇಲುಗೈ ಸಾಧಿಸಿರುತ್ತಿದ್ದ; ಇಷ್ಟೇ ಅಲ್ಲ, ಮಿತ್ರರನ್ನು ಸಂಪಾದಿಸುವಲ್ಲೂ ಅವನು ಬುದ್ಧಿವಂತ. ಅವನ ಸಂಪತ್ತು ಕುಬೇರನ ಸಂಪತ್ತಿನ ಜೊತೆಗೆ ತೂಗುವಂಥದ್ದು; ಆದರೆ ಅವನು ಜಿತೇಂದ್ರಿಯ. ಧರ್ಮ, ಅರ್ಥ ಮತ್ತು ಕಾಮಗಳೆಂಬ ತ್ರಿವರ್ಗದಲ್ಲಿ ನಿರತನಾದ ಅವನು ಇಂದ್ರನು ಅಮರಾವತಿಯನ್ನು ರಕ್ಷಿಸುವಂತೆ ಅಯೋಧ್ಯೆಯನ್ನು ರಕ್ಷಿಸುತ್ತಿದ್ದ. ಹಲವರು ರಾಜರು ಅವನಿಗೆ ಮಿತ್ರರು; ಸಾಮಂತರು ಅವನಿಗೆ ವಿಧೇಯರು. ಕರ್ತವ್ಯನಿಷ್ಠರೂ ಸಮರ್ಥರೂ ಆದ ಮಂತ್ರಿಗಳ ನಡುವೆ ಅವನು ಕಿರಣಗಳೊಂದಿಗೆ ಕೂಡಿ ಜನಿಸಿದ ಸೂರ್ಯನಂತೆ ವಿರಾಜಿಸುತ್ತಿದ್ದ.

ರಾಜನೊಬ್ಬ ಸರಿ ಇದ್ದರೆ ಸಾಕೆ? ಅವನಿಗೆ ಜೊತೆಯಾಗಿ ನಿಲ್ಲಬಲ್ಲ ಮಂತ್ರಿಗಳು ಕೂಡ ಸಮರ್ಥರಾಗಿರಬೇಕಷ್ಟೆ! ಕೋಸಲೆಯ ಪುಣ್ಯವೋ ಅಥವಾ ಪ್ರಜೆಗಳ ಪುಣ್ಯವೋ – ದಶರಥನ ಮಂತ್ರಿಗಳು ದಕ್ಷರೂ ಪ್ರಾಮಾಣಿಕರೂ ಆಗಿದ್ದರು. ಅವರೆಲ್ಲರೂ ವಿದ್ಯಾವಿನಯಸಂಪನ್ನರು. ಎಲ್ಲಕ್ಕಿಂತಲೂ ಮುಖ್ಯವಾಗಿ ಜನರ ಅಪವಾದಕ್ಕೆ ಹೆದರುವವರು; ನಾಚಿಕೆಯನ್ನುಳ್ಳವರು. ಎಚ್ಚರಿಕೆಯಿಂದಿರುವವರು. ಅವರ ಕೀರ್ತಿ ವಿದೇಶಗಳಲ್ಲೂ ಹಬ್ಬಿತ್ತು. ಅವರಿಗೆ ಯುದ್ಧ ಮಾಡುವುದೂ ತಿಳಿದಿತ್ತು, ಸಂಧಿಯನ್ನು ಮಾಡಿಕೊಳ್ಳುವುದೂ ಗೊತ್ತಿತ್ತು. ಅವರೆಲ್ಲರೂ ರಾಜಸಭೆಯಲ್ಲಿ ನಡೆಯುವ ಮಂತ್ರಾಲೋಚನೆಯ ರಹಸ್ಯವನ್ನು ಕಾಪಾಡಬಲ್ಲವರು. ಸಮಸ್ಯೆಗಳು ಎದುರಾದಾಗ ಕೂಡಲೇ ಅವನ್ನು ಪರಿಹರಿಸಲು ಮುನ್ನುಗ್ಗುವವರು.

ಒಂದು ರಾಜ್ಯಕ್ಕೆ ರಾಜನೂ ಮಂತ್ರಿಗಳೂ ಅಷ್ಟೇ ಸಾಕೆ? ಪ್ರಜೆಗಳು ಹೇಗಿರಬೇಕು? ರಾಜ್ಯದ ಸೌಭಾಗ್ಯವೋ ರಾಜನ ಸೌಭಾಗ್ಯವೋ ಅಥವಾ ಪ್ರಜೆಗಳದ್ದೇ ಸೌಭಾಗ್ಯವೋ – ಕೋಸಲೆಯ ಪ್ರಜೆಗಳು ದಿಟದ ಪ್ರಜೆಗಳೇ ಆಗಿದ್ದರು. ಎಲ್ಲ ಪ್ರಜೆಗಳೂ ಒಳ್ಳೆಯ ಕೆಲಸಗಳಲ್ಲಿ ಸಂತೋಷಪಡುವವರಾಗಿದ್ದರು. ಏಕೆಂದರೆ ಅವರೆಲ್ಲರೂ ಪರಿಶುದ್ಧ ಹೃದಯದವರು. ಅಂತರಂಗದ ಶುಭ್ರತೆಗೂ ಬಹಿರಂಗದ ಶುಭ್ರತೆಗೂ ಗಮನವನ್ನು ಕೊಡುತ್ತಿದ್ದರು. ತಾವೂ ಸಂತೋಷವಾಗಿರುತ್ತಿದ್ದರು, ತಮ್ಮ ಅಕ್ಕಪಕ್ಕದವರೂ ಸಂತೋಷವಾಗಿರಲಿ ಎಂದು ಬಯಸುತ್ತಿದ್ದವರು. ಎಲ್ಲರಿಗೂ ತಮ್ಮ ತಮ್ಮ ಕರ್ತವ್ಯಗಳು ಏನೆಂಬುದು ತಿಳಿದಿತ್ತು. ಅವರೆಲ್ಲರೂ ಕರ್ತವ್ಯಗಳಲ್ಲಿ ಶೂರರೇ ಆಗಿದ್ದರು. ಸತ್ಯಧರ್ಮಗಳನ್ನು ನಂಬಿದವರು; ಹೆಂಡತಿ, ಮಕ್ಕಳು, ಮೊಮ್ಮಕ್ಕಳು – ಹೀಗೆ ಕುಟುಂಬದ ಸಂತೋಷದ ಸುಖವನ್ನು ಬಲ್ಲವರಾಗಿದ್ದರು.

ರಾಜನಾಗಿಯೂ ಪ್ರಜಾರಕ್ಷಕನಾಗಿಯೂ ತೇಜಸ್ವಿಯಾಗಿದ್ದ ದಶರಥನಿಗೆ ಚಿಂತೆಯಿಂದ ಬಿಡುಗಡೆ ಇರಲಿಲ್ಲ. ಮಕ್ಕಳಿಲ್ಲ ಎನ್ನುವ ಚಿಂತೆ ಅವನನ್ನು ಕಾಡುತ್ತಿತ್ತು. ಎಲ್ಲ ಸಂಪತ್ತು ಇದ್ದರೂ ತನ್ನ ಪಾಲಿಗೆ ಏನೂ ಇಲ್ಲ ಎನ್ನುವಂಥ ವ್ಯಥೆ ಅವನನ್ನು ಆಕ್ರಮಿಸಿತ್ತು. ‘ತಲೆಮಾರುಗಳಿಂದ ಕೋಸಲೆಯನ್ನು ನಮ್ಮ ಇಕ್ಷ್ವಾಕುವಂಶದ ಮಹಾರಾಜರು ಪಾಲಿಸುತ್ತ ಬಂದಿದ್ದಾರೆ; ಆದರೆ ನನ್ನ ನಂತರ ನನ್ನ ಪ್ರಜೆಗಳನ್ನು ಕಾಪಾಡುವವರು ಯಾರು’ – ಎಂಬ ಕೊರಗು ಅವನನ್ನು ಸದಾ ಕಾಡುತ್ತಲೇ ಇತ್ತು.

ಒಂದು ದಿನ ದಶರಥನಿಗೆ ಇದ್ದಕ್ಕಿದ್ದಂತೆ ಒಂದು ಆಲೋಚನೆ ಹೊಳೆಯಿತು! ‘ಸಂತತಿಗೋಸ್ಕರ ನಾನು ಅಶ್ವಮೇಧಯಾಗವನ್ನು ಏಕೆ ಮಾಡಬಾರದು?’ ಇಂಥದೊಂದು ಹೊಳಹು ಸಿಕ್ಕಿದ ಕೂಡಲೇ ಈ ವಿಷಯವನ್ನು ಮಂತ್ರಿಗಳೊಡನೆ ಸಮಾಲೋಚಿಸಬೇಕೆಂದು ತೀರ್ಮಾನಿಸಿದ. ಸುಮಂತ್ರನನ್ನು ಕರೆದು ‘ರಾಜಗುರುಗಳನ್ನೂ ಪುರೋಹಿತರನ್ನೂ ಸಭೆಗೆ ಆದರದಿಂದ ಕರೆದುಕೊಂಡು ಬಾ’ ಎಂದು ತಿಳಿಸಿದ. ಸುಯಜ್ಞ, ವಾಮದೇವ, ಜಾಬಾಲಿ, ಕಾಶ್ಯಪ, ಪ್ರಧಾನ ಪುರೋಹಿತರಾದ ವಸಿಷ್ಠರೂ ಸೇರಿದಂತೆ ಹಲವರು ಪುರೋಹಿತರು ಅರಮನೆಗೆ ಬಂದು ಸಭೆ ಸೇರಿದರು. ಆಗ ದಶರಥನು ಆ ಎಲ್ಲರಿಗೂ ಕೈ ಮುಗಿದು ಅವರಲ್ಲಿ ಹೀಗೆ ವಿನಂತಿಸಿಕೊಂಡ:

‘ಪೂಜ್ಯರೇ! ಮಕ್ಕಳಿಗಾಗಿ ಅನುದಿನವೂ ನಾನು ಹಂಬಲಿಸುತ್ತಿರುವ ಸಂಗತಿ ನಿಮಗೆ ತಿಳಿಯದ ವಿಷಯವೇನಲ್ಲ. ಸಂತತಿ ಇಲ್ಲವೆಂಬ ಕೊರತೆಯಿಂದಾಗಿ ನನ್ನ ಜೀವನದಲ್ಲಿ ಸುಖವೆಂಬುದೇ ಮರೆಯಾಗಿದೆ. ಈ ವ್ಯಥೆಯಿಂದ ಪಾರಾಗುವ ದಾರಿಯೊಂದು ನನಗೀಗ ಹೊಳೆದಿದೆ. ಅಶ್ವಮೇಧಯಾಗದ ಫಲದಿಂದ ಮಕ್ಕಳಾಗುತ್ತವೆ ಎಂಬ ಮಾತಿದೆಯಲ್ಲವೆ? ಈಗ ನಾನು ಆ ಯಾಗವನ್ನು ಮಾಡಬೇಕೆಂದು ಸಂಕಲ್ಪಿಸಿದ್ದೇನೆ. ಪುತ್ರಕಾಮನೆಯಿಂದ ಮಾಡಲ್ಪಡುವ ಈ ಯಾಗವು ಫಲ‍ಪ್ರದವಾಗಲು ಏನೆಲ್ಲ ಮಾಡಬೇಕು ಎಂಬುದನ್ನು ನೀವೆಲ್ಲರೂ ತಿಳಿಸಿಕೊಡಬೇಕೆಂದು ಪ್ರಾರ್ಥಿಸಿಕೊಳ್ಳುತ್ತಿರುವೆ.’

ದಶರಥನ ಮಾತುಗಳನ್ನು ಕೇಳಿ ಅಲ್ಲಿ ಸೇರಿದ್ದ ಎಲ್ಲ ಪುರೋಹಿತರಿಗೂ ಸಂತೋಷವಾಯಿತು. ‘ನಿನ್ನ ಸಂಕಲ್ಪ ಯೋಗ್ಯವಾಗಿದೆ’ ಎಂದು ಎಲ್ಲರೂ ಮೆಚ್ಚಿದರು. ಪ್ರಧಾನ ಪುರೋಹಿತರು ಅಶ್ವಮೇಧಯಾಗದ ವಿವರಗಳನ್ನು ಅವನಿಗೆ ಹೇಳಿದರು. ‘ಯಜ್ಞಕ್ಕೆ ಬೇಕಾದ ಎಲ್ಲ ಸಲಕರಣೆಗಳೂ ಈ ಕೂಡಲೇ ಸಿದ್ಧವಾಗಲಿ; ಯಜ್ಞಾಶ್ವವನ್ನೂ ವಿಜಯಯಾತ್ರೆಗೆ ಸಿದ್ಧಮಾಡೋಣವಾಗಲಿ!’ ಎಂದರು. ಅವರೇ ಮುಂದುವರಿದು ‘ಎಲೈ ಮಹಾರಾಜ! ನಿನ್ನ ಇಷ್ಟಾರ್ಥ ನೆರವೇರುವುದು. ನಿನಗೆ ಪುತ್ರರು ಜನಿಸುವರು, ಸಂದೇಹವಿಲ್ಲ. ಸರಯೂನದಿಯ ಉತ್ತರತೀರದಲ್ಲಿ ಯಾಗಶಾಲೆ ನಿರ್ಮಾಣವಾಗಲಿ; ನಿನಗೆ ಶುಭವಾಗಲಿ’ ಎಂದರು.

ಪುರೋಹಿತರ ಮಾತುಗಳನ್ನು ಕೇಳಿ ದಶರಥನಿಗೆ ಸಂತೋಷವಾಯಿತು. ಅವನ ಕಣ್ಣುಗಳು ಆನಂದಬಾಷ್ಪಗಳಿಂದ ತುಂಬಿದವು. ತತ್‌ಕ್ಷಣವೇ ಅವನು ಮಂತ್ರಿಗಳನ್ನು ಕರೆದು ‘ಗುರುಗಳು ಅಪ್ಪಣೆ ಮಾಡಿದಂತೆ ಎಲ್ಲ ಯಜ್ಞಸಾಮಗ್ರಿಗಳನ್ನೂ ಸಿದ್ಧಗೊಳಿಸಿ. ಸಮರ್ಥರಾದ ಯೋಧರ ಕಾವಲಿನಲ್ಲಿ ಋತ್ವಿಜರ ಜೊತೆಗೂಡಿ ಯಜ್ಞಾಶ್ವವು ಸಂಚಾರಕ್ಕೆ ತೆರಳಲಿ. ಎಲ್ಲರಿಗೂ ಅಶ್ವಮೇಧಯಾಗವನ್ನು ಮಾಡಲು ಸಾಧ್ಯವಾಗದು. ನಮಗೆ ಅಂಥದೊಂದು ಅವಕಾಶ ಒದಗಿದೆ. ನೀವೆಲ್ಲರೂ ಸಮರ್ಥರು; ಧರ್ಮವಂತರು. ನಿಮ್ಮ ಸಹಕಾರದಿಂದ ಯಾಗವು ಫಲಪ್ರದವಾಗುವಂತೆ ನೋಡಿಕೊಳ್ಳಿ’ ಎಂದು ಆಜ್ಞಾಪಿಸಿದ.

ದಶರಥನ ಮಾತುಗಳನ್ನು ಕೇಳಿದ ಮಂತ್ರಿಗಳೆಲ್ಲರೂ ‘ನಿಮ್ಮ ಆಜ್ಞೆಯಂತೆಯೇ ಆಗಲಿ’ ಎಂದು ವಂದಿಸಿದರು. ಪುರೋಹಿತರು ‘ಮುಂದಿನ ಚೈತ್ರಮಾಸದ ಹುಣ್ಣಿಮೆಯಂದೇ ಯಜ್ಞವನ್ನು ಆರಂಭಿಸಬಹುದು’ ಎಂದು ಹೇಳಿ, ಅವನನ್ನು ಆಶೀರ್ವದಿಸಿ, ಅವನ ಅನುಮತಿಯನ್ನು ಪಡೆದು ಅಲ್ಲಿಂದ ತೆರಳಿದರು. ‘ಪುರೋಹಿತರು ಸೂಚಿಸಿದಂತೆ ಯಜ್ಞಕ್ಕೆ ಸಿದ್ಧತೆಗಳು ನಡೆಯಲಿ’ ಎಂದು ಮಂತ್ರಿಗಳಿಗೆ ಸೂಚಿಸಿ, ಉಲ್ಲಾಸದಿಂದ ಅಂತಃಪುರಕ್ಕೆ ತೆರಳಿದ.

ಮಕ್ಕಳಿಲ್ಲವೆಂಬ ಚಿಂತೆ ದಶರಥನನ್ನು ಮಾತ್ರವೇ ಅಲ್ಲ, ಇಡಿಯ ರಾಜ್ಯದ ಜನರನ್ನೂ ಕಾಡುತ್ತಿತ್ತು. ದಶರಥನಿಗೆ ಮೂವರು ಹೆಂಡತಿಯರು; ಕೌಸಲ್ಯೆ, ಕೈಕೇಯಿ ಮತ್ತು ಸುಮಿತ್ರೆ. ಅವನ ಮಡದಿಯರಂತೂ ತಮಗೆ ಮಕ್ಕಳಾಗಲಿಲ್ಲವೆಂಬ ಚಿಂತೆಯಲ್ಲಿ ಮುಳುಗಿ ಎಷ್ಟೋ ದಿನ ಅನ್ನ–ನೀರುಗಳನ್ನೇ ಮರೆತಿದ್ದರು. ಅವರು ಕಣ್ಣೀರು ಹಾಕದ ದಿನವೇ ಇರಲಿಲ್ಲ.

ಅಂತಃಪುರವನ್ನು ಪ್ರವೇಶಿಸಿದ ದಶರಥ ತನ್ನ ಪತ್ನಿಯರನ್ನು ಉದ್ದೇಶಿಸಿ ‘ನಿಮಗೆಲ್ಲರಿಗೂ ಸಂತೋಷವಾಗುವ ಸುದ್ದಿಯನ್ನು ತಂದಿರುವೆ. ಪುತ್ರಪ್ರಾಪ್ತಿಗಾಗಿ ಅಶ್ವಮೇಧಯಾಗವನ್ನು ಮಾಡಲು ಸಂಕಲ್ಪಿಸಿರುವೆ. ಪ್ರಧಾನ ಪುರೋಹಿತರೂ ಮಂತ್ರಿಗಳೂ ಎಲ್ಲರೂ ಇದಕ್ಕೆ ಸಮ್ಮತಿಸಿದ್ದಾರೆ. ನೀವು ಮೂವರೂ ಯಜ್ಞದೀಕ್ಷೆಯನ್ನು ಸ್ವೀಕರಿಸಿ’ ಎಂದು ಸಂತಸದಿಂದ ಹೇಳಿದ. ದಶರಥನ ಮಾತುಗಳನ್ನು ಕೇಳಿ ಅವರೆಲ್ಲರೂ ಆನಂದದಲ್ಲಿ ಮುಳುಗಿದರು. ಅವರ ಕಣ್ಣುಗಳ ಮುಂದೆ ಪುಟ್ಟ ಪುಟ್ಟ ಹೆಜ್ಜೆಗಳು ಕಾಣತೊಡಗಿದಂತಾದವು!

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry