ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲಾ ರಾಶಿಗೂ ಧನಪ್ರಾಪ್ತಿ ಯೋಗ!

Last Updated 16 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಪ್ರಿಯ ಯುಗಾದಿ,

ಒಂದು ಕೈಯಲ್ಲಿ ಬೇವು, ಇನ್ನೊಂದು ಕೈಯಲ್ಲಿ ಬೆಲ್ಲ ಹಿಡಿದು ಬರುತ್ತಿರುವ ನಿನಗಿದೋ ಪ್ರೀತಿಯ ಸ್ವಾಗತ. ಇದೇನಿದು, ಬೇವಿಗಿಂತ ಬೆಲ್ಲವೇ ಜಾಸ್ತಿ ತಂದಂತಿದೆ. ಎರಡೂ 50:50 ಇರಬೇಕಿತ್ತು ಅಲ್ವಾ? ಓಹೋ, ಇದು 80 ಪರ್ಸೆಂಟ್‌ ಡಿಸ್ಕೌಂಟ್‌ ಸಮಯ. ಅದಕ್ಕಾಗಿಯೇ ನೀನೂ ಬೇವಿಗೆ ಒಂದಿಷ್ಟು ಡಿಸ್ಕೌಂಟ್‌ ಕೊಟ್ಟಿರುವೆಯೇನೋ. ಪಾಪss, ಈ ವ್ಯಾಪಾರಿಗಳಿಗೆ ಜನರ ಮೇಲೆ ಎಷ್ಟೊಂದು ಪ್ರೀತಿ ನೋಡು. ಖುಷಿಯಿಂದ ಹಬ್ಬ ಮಾಡಲೆಂದು ಎಷ್ಟೊಂದು ಡಿಸ್ಕೌಂಟ್‌ ಕೊಡ್ತಾರೆ.

ಹೌದು, ನಿನಗೇಕೆ ಈ ಸಲ ನಮ್ಮ ಮೇಲೆ ಅಷ್ಟೊಂದು ಸಿಟ್ಟು? ಹೋಗಿ, ಹೋಗಿ ಭಾನುವಾರವೇ ಬಂದು ಬಿಟ್ಟಿರುವೆಯಲ್ಲ, ಅದೂ ಭರ್ತಿ ಒಂದುದಿನ ರಜೆ ಲಾಸ್‌ ಮಾಡಿ. ಇದರಿಂದ ಆಗಿರುವ ರಾಷ್ಟ್ರೀಯ ನಷ್ಟದ ಅಂದಾಜು ನಿನಗೆ ಇದ್ದಂತೆಯೇ ಇಲ್ಲ. ಅದೇ ಸೋಮವಾರ ಬಂದಿದ್ದರೆ ನಿನ್ನ ಗಂಟು ಏನು ಹೋಗುತ್ತಿತ್ತು. ನಿನ್ನನ್ನು ಇನ್ನಷ್ಟು ಸಂಭ್ರಮದಿಂದ ಸ್ವಾಗತಿಸುತ್ತಾ, ಎರಡು ಒಬ್ಬಟ್ಟುಗಳನ್ನು ಹೆಚ್ಚಾಗಿಯೇ ನೈವೇದ್ಯಕ್ಕೆ ಇಡುತ್ತಿದ್ದೆವು ಮಾರಾಯ. ಅಂದಹಾಗೆ, ಈ ಬಾರಿ ನೀನು ‘ವಿಳಂಬಿ’ ಎಂಬ ಹೆಸರನ್ನು ಇಟ್ಟುಕೊಂಡರೂ ಕಳೆದ ಸಲಕ್ಕಿಂತ ಬೇಗನೆ ದಾಳಿ ಇಟ್ಟಿರುವೆಯಲ್ಲ?

ವರ್ಷದಾರಂಭದ ದಿನ ಪುರೋಹಿತರು ಓದಿ ಹೇಳುವ ಭವಿಷ್ಯದ ಪ್ರತಿ ಅದ್ಹೇಗೋ ಲೀಕ್‌ ಆಗಿ ವಾರದ ಹಿಂದೆಯೇ ಸಿಕ್ಕಿತ್ತು. ಕಣ್ಣು ಹಾಯಿಸಿದರೆ ಎಲ್ಲ ರಾಶಿಗಳ ಜನರಿಗೂ ಧನ ಪ್ರಾಪ್ತಿಯೋಗ ಎಂದು ಬರೆದಿತ್ತು. ಎಲ್ಲರಿಗೂ ಧನ ಸಿಗುವ ಈ ಯೋಗಾಯೋಗ ಏನು ಮುಂಬರುವ ವಿಧಾನಸಭೆ ಚುನಾವಣೆ ಪ್ರಭಾವವೋ ಅಥವಾ ಕಾಳಧನವನ್ನು ತಂದು ಪ್ರಧಾನಿ ಎಲ್ಲರ ಖಾತೆಗಳಿಗೂ ಹಾಕಲಿದ್ದಾರೆಯೋ?

ನೀನು ಬರುವುದೇನೋ ಬಂದಿ. ಆದರೆ, ವಿಧಾನಸಭೆ ಚುನಾವಣೆಯನ್ನೂ ಜತೆಯಲ್ಲೇ ತಂದಿ. ಹಬ್ಬವೆಂದರೆ ಬಟ್ಟೆ ಅಂಗಡಿಗಳಿಗೆ ಹೋಗಬೇಕು ತಾನೆ? ಆದರೆ, ಮಾರ್ಕೆಟ್‌ಗೆ ಹೋಗುವ ಮುನ್ನವೇ ಸೀರೆಗಳು ಮನೆಮನೆಗೆ ಬಂದು ಬೀಳುತ್ತಿವೆಯಂತಲ್ಲ. ಪಾಪ, ಬಟ್ಟೆ ವ್ಯಾಪಾರಿಗಳು ಏನು ಮಾಡಬೇಕು? ಅವರಿಗೆ ನೀನು ಹೀಗೆ ಬೇವನ್ನಷ್ಟೇ ತಿನ್ನಿಸಬಾರದಿತ್ತು.

ನಿನಗೆ ನೆನಪಿದೆಯೋ ಇಲ್ಲವೋ ಗೊತ್ತಿಲ್ಲ. ಕಳೆದ ಸಲ ನಿನ್ನನ್ನು ಸ್ವಾಗತಿಸಿದ್ದಾಗಲೂ ಒಂದು ಬೇಡಿಕೆ ಇಟ್ಟಿದ್ದೆವು. ಹೇಗಾದರೂ ಮಾಡಿ ನಗರದ ಈ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡು ಅಂತ. ಆ ಬೇಡಿಕೆಯನ್ನು ಕಿವಿಗೆ ಹಾಕಿಕೊಳ್ಳದ ನೀನು, ಈ ಸಲ ಭಾನುವಾರದ ದಿನವೇ ಬರಲು ಮುಹೂರ್ತ ನಿಗದಿ ಮಾಡಿಕೊಂಡಿರುವೆ. ರಸ್ತೆಗಳೆಲ್ಲ ಖಾಲಿಯಿದ್ದಾಗಲೇ ಓಡಿಬರುವ ನೀನು ಬಲು ಚಾಲಾಕಿ ಕಣಪ್ಪ. ಸೋಮವಾರ ಏನಾದರೂ ಬಂದಿದ್ದರೆ ದಟ್ಟಣೆಯ ಬಿಸಿ ಹೇಗಿರುತ್ತದೆ ಎಂಬುದು ನಿನಗೆ ತಿಳಿದಿರುತ್ತಿತ್ತು. ಸಮಾರಂಭಕ್ಕೆ ತಡವಾಗಿ ಬರುವ ರಾಜಕಾರಣಿಗಳಂತೆ ನೀನೂ ಮುಹೂರ್ತ ಮೀರಿ ಎಷ್ಟು ಗಂಟೆ ತಡವಾಗಿ ಬರುತ್ತಿದ್ದೆಯೇನೋ?

ಹಬ್ಬಗಳಲ್ಲೇ ಭಾರಿ ಪ್ರಭಾವಿ ನೀನು. ದಸರಾ–ದೀಪಾವಳಿ ಹಬ್ಬಗಳನ್ನು ಒಟ್ಟೊಟ್ಟಿಗೆ ದೂರಕ್ಕೆ ನೂಕಿ, ಬೇಸಿಗೆ ರಜೆ ಸಂದರ್ಭದಲ್ಲಿ ಬರುವ ನೀನು, ಎಷ್ಟೊಂದು ಏಕಸ್ವಾಮ್ಯ ಸ್ಥಾಪಿಸಿಬಿಟ್ಟಿರುವೆ. ಅದೇನು ಮೋಡಿ ಮಾಡುವೆಯೋ ಏನೋ; ನೀನು ಬರುವ ಸಮಯದಲ್ಲಿ ಪ್ರಖರ ಬಿಸಿಲಿದ್ದರೂ ಗಿಡ–ಮರಗಳ ತುಂಬೆಲ್ಲ ಹೊಸ ಚಿಗುರು. ಕಾವೇರಿ ನೀರು ಯಾವಾಗ ಖಾಲಿಯಾಗುವುದೋ ಎಂಬ ಭಯ. ಯಾರು, ಎಷ್ಟೇ ನೀರು ಒಯ್ದರೂ ಕೆಆರ್‌ಎಸ್‌ ಅಕ್ಷಯ ಪಾತ್ರೆಯಂತೆ ನೀರಿನಿಂದ ತುಂಬಿರುವಂತೆ ಮಾಡಿ ಪುಣ್ಯ ಕಟ್ಟಿಕೊ ಮಾರಾಯ.

ನೀನು ಬರುವಾಗಲೇ ರಸ್ತೆಗಳೆಲ್ಲ ಹೊಸರೂಪ ಪಡೆಯುತ್ತಿವೆ, ಭೇಷ್‌. ನಗರದ ಜನರೆಲ್ಲ ಒಟ್ಟಾಗಿ ಕೂಗು ಹಾಕಿದರೂ ಮಾಡಿಸಲಾಗದ ಕೆಲಸವನ್ನು ಸದ್ದಿಲ್ಲದೆ ಮಾಡಿಸಿರುವೆ. ಆದರೆ, ಈ ತರಾತುರಿ ಕೆಲಸಗಳ ನೈಜ ಬಣ್ಣ ಮುಂದೆ ಬರುವ ಮಳೆಗಾಲದಲ್ಲಿ ಬಯಲಾಗಲಿದೆ. ಕಳೆದ ವರ್ಷ ಹವಾಮಾನ ವೈಪರೀತ್ಯದ ಬಿಸಿ ಅನುಭವಿಸುವಂತೆ ಮಾಡಿ ಪಾಠ ಕಲಿಸಿರುವೆ ಅಂತ ನೀನು ಒಳಗೊಳಗೆ ಖುಷಿ ಪಡುತ್ತಿರಬಹುದು. ಅದೆಲ್ಲ ಬಿಡು, ಈ ಬೇಸಿಗೆಯಲ್ಲಿ ಎಷ್ಟು ಹೊಸ ಏರ್‌ ಕೂಲರ್‌ಗಳನ್ನು ಖರೀದಿ ಮಾಡ್ತೀವಿ ಗೊತ್ತೆ?

ಈ ಲೆಕ್ಕಾಚಾರವನ್ನು ಮಾಲ್‌ಗಳು ಹಾಕಲಿವೆ ಬಿಡು ದ್ಯಾವ್ರೆ. ಮೆಟ್ರೊ ನಿಗಮದವರು ಬಿಟ್ಟೂಬಿಡದೆ ರೈಲು ಬಿಡುವಂತೆ (ಅಲ್ಲಲ್ಲ, ಓಡಿಸುವಂತೆ), ಚುನಾವಣೆ ನಂತರ ಇಂದಿರಾ ಕ್ಯಾಂಟೀನ್‌ ಬಂದಾಗದಂತೆ, ಬೇಸಿಗೆಯಲ್ಲೂ ಕಾವೇರಿ ನೀರು ಸಿಗುವಂತೆ, ಮಳೆಗಾಲದಲ್ಲಿ ರಸ್ತೆಗಳು ಹೊಳೆಯ ರೂಪ ತಾಳದಂತೆ ಹರಸಬೇಕು ನೀನು.

ನಮಗೆ ಏನೇನೋ ಪಾಠಗಳನ್ನು ಕಲಿಸಲು ನೀನು ಜಲದಿನ, ಸಂತಸ ದಿನಗಳನ್ನು ಸಹ ಜತೆಯಲ್ಲೇ ಕರೆತಂದಿರುವೆ. ನಿನ್ನ ಈ ಕಳಕಳಿಗೆ ಸಲಾಂ. ಹಬ್ಬದ ಪ್ಯಾಕೇಜ್‌ ಊಟಕ್ಕಾಗಿ ಟೇಬಲ್‌ ಕಾದಿರಿಸಿದ್ದೇವೆ. ತಡವಾಗುತ್ತೆ ಸೋಮಿ, ಬೇಗ ಹೋಗಬೇಕು. ಮತ್ತೆ ಸಿಗೋಣ.

ಇಂತಿ ನಿನ್ನ,

ಬೆಂಗಳೂರಿನ ನಾಗರಿಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT