ಖರೀದಿ ಸಂಭ್ರಮಕ್ಕೆ ಮಾರುಕಟ್ಟೆ ಸಜ್ಜು

7

ಖರೀದಿ ಸಂಭ್ರಮಕ್ಕೆ ಮಾರುಕಟ್ಟೆ ಸಜ್ಜು

Published:
Updated:
ಖರೀದಿ ಸಂಭ್ರಮಕ್ಕೆ ಮಾರುಕಟ್ಟೆ ಸಜ್ಜು

ವರ್ಷದ ಮೊದಲ ಹಬ್ಬ ಯುಗಾದಿಯ ಸ್ವಾಗತಕ್ಕೆ ನಗರ ಸಜ್ಜಾಗಿದೆ. ಪ್ರಮುಖ ಮಾರುಕಟ್ಟೆಗಳಾದ ಕೆ.ಆರ್.ಮಾರುಕಟ್ಟೆ, ರಸೆಲ್ ಮಾರುಕಟ್ಟೆ ಹಾಗೂ ಮಲ್ಲೇಶ್ವರ ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿ ಚಟುವಟಿಕೆಗಳು ಗರಿಗೆದರಿವೆ. ನಗರದಲ್ಲಿ ದೇಶದ ವಿವಿಧ ಪ್ರದೇಶಗಳ ಜನರು ನೆಲೆಸಿರುವುದರಿಂದ ಯುಗಾದಿ ಆಚರಣೆಯಲ್ಲಿಯೂ ವೈವಿಧ್ಯಗಳಿವೆ.

ಕೆಲ ಕುಟುಂಬಗಳಿಗೆ ಬೇವು ಮತ್ತು ಬೆಲ್ಲವೇ ಪ್ರಧಾನ. ಕೆಲವರಿಗೆ ಮಾವಿನ ಕಾಯಿಯ ಖಾದ್ಯಗಳು ಪ್ರಮುಖ ಆಹಾರವೆನಿಸಿಕೊಳ್ಳುತ್ತವೆ. ಮತ್ತೆ ಕೆಲವರಿಗೆ ಪುಟಾಣಿ ಕಡಲೆ (ಕಡ್ಲೆಪಪ್ಪು), ಕೊಬ್ಬರಿ ಹಾಗೂ ಎಳ್ಳು ಯುಗಾದಿಯ ಆಹಾರದಲ್ಲಿ ಇರಲೇ ಬೇಕೆಂಬುದು ನಿಯಮ.

ಯುಗಾದಿಯ ಅಲಂಕಾರದಲ್ಲಿಯೂ ವೈವಿಧ್ಯ ಇದೆ. ಬೆಂಗಳೂರಿನ ಬಹುತೇಕ ಮನೆಗಳ ಬಾಗಿಲುಗಳನ್ನು ಮಾವು–ಬೇವಿನ ತೋರಣ ಅಲಂಕರಿಸುತ್ತದೆ. ಕೆಲಮನೆಗಳಲ್ಲಿ ಇದರ ಜೊತೆಗೆ ಬಾಳೆ ಹಾಗೂ ಕಬ್ಬಿನ ಜಲ್ಲೆಗಳು ರಾರಾಜಿಸುತ್ತವೆ. ಹಬ್ಬದ ಸಂಭ್ರಮ ಹೆಚ್ಚಿಸುವ ಬಗೆಬಗೆ ವಸ್ತುಗಳು ನಗರದ ಮಾರುಕಟ್ಟೆಗಳಿಗೆ ಬಂದಿವೆ. ಬೀದಿಬದಿಯಲ್ಲಿ ಬೇವು, ಮಾವು, ಬಾಳೆ, ಕಬ್ಬುಗಳ ವ್ಯಾಪಾರ ಜೋರಾಗಿದೆ. ತರಕಾರಿ ಹಣ್ಣುಗಳ ಖರೀದಿ ಭರಾಟೆಯೂ ಕಂಡು ಬರುತ್ತಿದೆ.

ಯುಗಾದಿಗೆ ಉಡುಗೊರೆ ಕೊಡಲು ಬಯಸುವವರು ಹಣ್ಣುಗಳ ಬಾಕ್ಸ್‌ ಹಾಗೂ ಹೂಗುಚ್ಛಗಳಿಗೆ ಆದ್ಯತೆ ನೀಡುತ್ತಾರೆ. ಹಾಗಾಗಿಯೇ ನಗರದ ವಿವಿಧ ಮಾಲ್‌, ಮಳಿಗೆ ಹಾಗೂ ಮಾರುಕಟ್ಟೆಗಳಲ್ಲಿ ಸಿದ್ಧವಾಗಿರುವ ತರಹೇವಾರಿ ಗುಚ್ಛಗಳು, ಬಹುವಿನ್ಯಾಸದ ಬಾಕ್ಸ್‌ಗಳು ಗ್ರಾಹಕರನ್ನು ಸೆಳೆಯುತ್ತಿವೆ.

‘ಯುಗಾದಿಯಲ್ಲಿ ಹೂ, ಹಣ್ಣುಗಳಿಗೆ ವಿಶೇಷ ಬೇಡಿಕೆ. ಅದರಲ್ಲೂ, ಹಣ್ಣಿನ ಬಾಕ್ಸ್‌ಗಳು ಯಥೇಚ್ಚವಾಗಿ ಮಾರಾಟವಾಗುತ್ತವೆ. ಬೇಡಿಕೆ ಮತ್ತು ಹಣ್ಣುಗಳ ಪೂರೈಕೆಗೆ ಅನುಗುಣವಾಗಿ ದರ ನಿಗದಿಪಡಿಸುತ್ತೇವೆ. ಈ ಬಾರಿ ಮಾವಿನಹಣ್ಣಿನ ಕೊಯ್ಲು ಇನ್ನೂ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ. ಹಾಗಾಗಿ ಕೊಂಚ ದರ ಹಚ್ಚಿದೆ. ಉಳಿದಂತೆ ಕಲ್ಲಂಗಡಿ ಮತ್ತು ದ್ರಾಕ್ಷಿಗಳ ಪೂರೈಕೆ ಹೆಚ್ಚಿದ್ದು, ದರವೂ ಕಡಿಮೆ ಇದೆ. ದ್ರಾಕ್ಷಿ ಬಾಕ್ಸ್‌ ಹಾಗೂ ಮಿಶ್ರ ಫಲಗಳ ಬಾಕ್ಸ್‌ಗಳು ಹೆಚ್ಚು ಮಾರಾಟವಾಗುವ ನಿರೀಕ್ಷೆ ಇದೆ’ ಎನ್ನುತ್ತಾರೆ ಕೆ.ಆರ್.ಮಾರುಕಟ್ಟೆ ವ್ಯಾಪಾರಿ ಅಬ್ದುಲ್ಲಾ ಕುಟ್ಟಿ.

‘ವರ್ಷದಿಂದ ವರ್ಷಕ್ಕೆ ಮಾರುಕಟ್ಟೆಯಲ್ಲಿ ಹಬ್ಬದ ಸಂಭ್ರಮ ಕಳೆಗುಂದುತ್ತಿದೆ’ ಎನ್ನುವುದು ವ್ಯಾಪಾರಿಗಳ ಸಾಮಾನ್ಯ ಅಭಿಪ್ರಾಯ.

‘ಹಿಂದಿನ ಕಾಲದಲ್ಲಿ ಇದ್ದಂತೆ ಸಂಪ್ರದಾಯಬದ್ದವಾಗಿ ಹಬ್ಬ ಆಚರಿಸುವವರು ವಿರಳ. ನನ್ನ ತಾತನ ಕಾಲದಿಂದಲೂ ರಸೆಲ್‌ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿದ್ದೇವೆ. ಈಚಿನ ವರ್ಷಗಳಲ್ಲಿ ಹಬ್ಬವೆಂದರೆ, ವಿಶೇಷ ವ್ಯಾಪಾರ ಇರುವುದಿಲ್ಲ. ಎಂದಿನಂತೆಯೇ ಇರುತ್ತದೆ. ಮನೆಗಳಲ್ಲಿ ಹಬ್ಬದ ಸಂಭ್ರಮವಿದ್ದರೆ ಮಾತ್ರ ವ್ಯಾಪಾರಿಗಳಲ್ಲೂ ಸಂಭ್ರಮ’ ಎನ್ನುವುದು ವ್ಯಾಪಾರಿ ರಮೇಶ್ ಅಭಿಪ್ರಾಯ.

‘ಸಾರ್ವಜನಿಕವಾಗಿ ಆಚರಿಸುವ ದಸರಾ, ಗಣಪತಿ ಹಬ್ಬಗಳಲ್ಲಿ ಜನರು ದೊಡ್ಡ ಪ್ರಮಾಣದಲ್ಲಿ ಹೂ, ಹಣ್ಣು ಖರೀದಿಸುತ್ತಾರೆ. ಹಾಗಾಗಿ ಕೆ.ಆರ್.ಮಾರುಕಟ್ಟೆ ಸೇರಿದಂತೆ ವಿವಿಧೆಡೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಾರೆ. ಆದರೆ ಯುಗಾದಿ ಮನೆಗಳಲ್ಲಿ ಆಚರಿಸುವ ಹಬ್ಬವಾದ ಕಾರಣ ಮನೆಮುಂದೆ ಬರುವ ತಳ್ಳುಗಾಡಿಗಳು ಅಥವಾ ಹತ್ತಿರದ ಚಿಲ್ಲರೆ ವ್ಯಾಪಾರಿಗಳಿಂದಲೇ, ಹೂ, ಹಣ್ಣುಗಳನ್ನು ಖರೀದಿಸುತ್ತಾರೆ. ಮಾರುಕಟ್ಟೆಗೆ ಬಂದು ಖರೀದಿಸುವವರ ಸಂಖ್ಯೆ ಕಡಿಮೆ’ ಎನ್ನುವುದು ರಸೆಲ್ ಮಾರುಕಟ್ಟೆಯ ವ್ಯಾಪಾರಿ ರಾಜು ಅವರ ಅಂಬೋಣ.

‘ಹಬ್ಬ ಎಂದು ವ್ಯಾಪಾರಿಗಳು ಸಂಭ್ರಮಿಸುವ ದಿನಗಳು ಈಗ ಮಾಯವಾಗಿವೆ. ಗ್ರಾಹಕರು ಮಾರುಕಟ್ಟೆಯತ್ತ ಮುಖಮಾಡುವುದೇ ಅಪರೂಪವಾಗುತ್ತಿದೆ. ಎಲ್ಲರೂ ಮಾರುವವರಾದರೆ ಕೊಳ್ಳುವವರಾರು’ ಎಂದು ಪ್ರಶ್ನಿಸುತ್ತಾರೆ ಮಲ್ಲೇಶ್ವರ ಮಾರುಕಟ್ಟೆಯ ಸೊಪ್ಪಿನ ವ್ಯಾಪಾರಿ ಚಂದ್ರು.

**ವಿವಿಧ ಮಾರುಕಟ್ಟೆಗಳಲ್ಲಿ ಹೂ, ಹಣ್ಣು, ತರಕಾರಿ

ದರ (ಕೆ.ಜಿ.ಗೆ)

ಕನಕಾಂಬರ

₹350

ಮಲ್ಲಿಗೆ 

₹180

ಸುಗಂಧರಾಜ

₹80

ಗುಲಾಬಿ

₹100

ಸೇವಂತಿ

₹80

ಮಾವಿನಹಣ್ಣು

₹150

ದ್ರಾಕ್ಷಿ

₹60

ದಾಳಿಂಬೆ

₹180

ಕಲ್ಲಂಗಡಿ

₹10

ಟೊಮೊಟೊ

₹8

ಹುರುಳಿಕಾಯಿ 

₹30

ಕ್ಯಾರೆಟ್

₹30

ನುಗ್ಗೇಕಾಯಿ 

₹40

ಕ್ಯಾಪ್ಸಿಕಂ

₹60

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry