ರಾಜ್ಯದಾದ್ಯಂತ ಬಿರುಗಾಳಿ ಸಹಿತ ಮಳೆ

ಬುಧವಾರ, ಮಾರ್ಚ್ 20, 2019
31 °C

ರಾಜ್ಯದಾದ್ಯಂತ ಬಿರುಗಾಳಿ ಸಹಿತ ಮಳೆ

Published:
Updated:
ರಾಜ್ಯದಾದ್ಯಂತ ಬಿರುಗಾಳಿ ಸಹಿತ ಮಳೆ

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಶುಕ್ರವಾರ ಗುಡುಗು ಸಹಿತ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ಅಬ್ಬರಿಸಿದೆ.

ರಾಜಧಾನಿಯಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಮಳೆ ಸುರಿದಿದೆ. ಮಳೆಯ ಪರಿಣಾಮ ಹುಣಸೂರು ತಾಲ್ಲೂಕಿನ ಹೊಸಹಳ್ಳಿಯಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ. ಅಲ್ಲದೆ, ಅಪಾರ ಪ್ರಮಾಣದ ಹಾನಿ ಉಂಟಾಗಿದೆ.

ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಸುರಿದ ಮಳೆಗೆ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದವು. ಹುಣಸೂರು ತಾಲ್ಲೂಕಿನ ಹೊಸಹಳ್ಳಿಯಲ್ಲಿ ಸರಸ್ವತಿ (56) ಎಂಬುವರಿಗೆ ಸಿಡಿಲು ಬಡಿದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಬಿರುಗಾಳಿ ಸಹಿತ ಮಳೆಗೆ ಗೌಡಿಕೆರೆಯ ಅಕ್ರಂಪಾಶಾ ಅವರಿಗೆ ಸೇರಿದ ಎರಡು ಎಕರೆ ಬಾಳೆ ಹಾಗೂ ಕೋಣನಹೊಸಹಳ್ಳಿಯ ರಾಜು ಅವರ ಮೂರು ಎಕರೆ ಬಾಳೆ ತೋಟ ಸಂಪೂರ್ಣ ನೆಲಕಚ್ಚಿದೆ.

ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿಯೂ ಉತ್ತಮ ಮಳೆಯಾಗಿದೆ. ಉದ್ಯಾನದ ಸಣ್ಣ ಪುಟ್ಟ ಕೆರೆ ಕಟ್ಟೆಗಳಲ್ಲಿ ನೀರು ಸಂಗ್ರಹವಾಗಿದೆ.

ಹುಬ್ಬಳ್ಳಿ , ಧಾರವಾಡ, ಹಾವೇರಿ, ಬಳ್ಳಾರಿ, ಉತ್ತರ ಕನ್ನಡ, ಬೆಳಗಾವಿ, ಗದಗ, ಬಾಗಲಕೋಟೆ ಜಿಲ್ಲೆಗಳಲ್ಲಿ ವರುಣನ ಆರ್ಭಟವಿತ್ತು. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯ ಶಿವಪುರದಲ್ಲಿ ವಿದ್ಯುತ್ ಕಂಬ ಬಿದ್ದು ಮನೆಗೆ ಹಾನಿಯಾಗಿದೆ. ಗೊಲ್ಲರಹಟ್ಟಿಯ ಬಳಿ ಆರು ಕುರಿಗಳು ಹಳ್ಳದಲ್ಲಿ ಕೊಚ್ಚಿ ಹೋಗಿವೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಭದ್ರಾವತಿ, ತೀರ್ಥಹಳ್ಳಿ ತಾಲ್ಲೂಕಿನ ಹಲವಡೆ ಭಾರಿ ಮಳೆಯಾಗಿದೆ.

ಚಿತ್ರದುರ್ಗ ತಾಲ್ಲೂಕಿನ ಹಲವೆಡೆ ಸಂಜೆ ಮಳೆಯಾಗಿದ್ದು, 7 ಗಂಟೆ ನಂತರ ಬಿರುಸಾಯಿತು. ಚಿಕ್ಕಜಾಜೂರು, ಹೊಸದುರ್ಗ, ಹಿರಿಯೂರು ಭಾಗದಲ್ಲೂ ಜೋರು ಮಳೆಯಾಗಿದೆ. ಭರಮಸಾಗರದಲ್ಲಿ 45.5 ಮಿ.ಮೀ ದಾಖಲೆಯ ಮಳೆಯಾಗಿದೆ.

ದಾವಣಗೆರೆಯ ಜಗಳೂರು ಚನ್ನಗಿರಿ ತಾಲ್ಲೂಕಿನಲ್ಲಿ ತುಂತುರು ಮಳೆ ಸುರಿದಿದೆ.

ಉಚ್ಚಂಗಿದುರ್ಗದ ರಾಮಘಟ್ಟ, ಯು.ಕಲ್ಲಹಳ್ಳಿ, ಬೇವಿನಹಳ್ಳಿ, ನಾಗತಿಕಡ್ಡೆ, ಮೇಗಳಗೆರೆ ಸೇರಿ ಹಲವೆಡೆ ಮಳೆಯಾಯಿತು. ಉತ್ಸವಾಂಬಾ ದೇವಿ ಜಾತ್ರೆಯ ಸಂಭ್ರಮದಲ್ಲಿದ್ದ ಇಲ್ಲಿನ ಜನರಿಗೆ ಮಳೆ ಮತ್ತಷ್ಟು ಖುಷಿ ಕೊಟ್ಟಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry