ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರತಾ ಸಲಹೆಗಾರರ ವಜಾಕ್ಕೆ ಟ್ರಂಪ್‌ ನಿರ್ಧಾರ?

ಅಮೆರಿಕ ಮಾಧ್ಯಮಗಳ ವರದಿ ಅಲ್ಲಗಳೆದ ಶ್ವೇತಭವನ
Last Updated 16 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಲೆಫ್ಟಿನೆಂಟ್‌ ಜನರಲ್‌ ಎಚ್‌.ಆರ್‌. ಮೆಕ್‌ ಮಾಸ್ಟರ್‌ ಅವರನ್ನು ಹುದ್ದೆಯಿಂದ ವಜಾಗೊಳಿಸಲು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಿರ್ಧರಿಸಿದ್ದಾರೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.

ಟ್ರಂಪ್‌ ಮತ್ತು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ನಡುವಣ ಭೇಟಿಗೆ ಮುನ್ನವೇ ಆ ಹುದ್ದೆಗೆ ಇನ್ನೊಬ್ಬರನ್ನು ನೇಮಕ ಮಾಡಲು ಹುಡುಕಾಟ ನಡೆಯುತ್ತಿದೆ ಎಂದು ಹೇಳಲಾಗಿದೆ.

‘ಮೆಕ್‌ ಮಾಸ್ಟರ್‌ ನಂತರ ಹುದ್ದೆ ನಿರ್ವಹಿಸಲು ಸೂಕ್ತ ವ್ಯಕ್ತಿ ದೊರಕದೇ ಇರುವ ಕಾರಣ ತಮ್ಮ ನಿರ್ಧಾರ ಘೋಷಿಸಲು ಅವರು ಸಮಯ ತೆಗೆದುಕೊಳ್ಳುತ್ತಿದ್ದಾರೆ’ ಎಂದು ‘ವಾಷಿಂಗ್ಟನ್‌ ಪೋಸ್ಟ್‌’ ತನ್ನ ವರದಿಯಲ್ಲಿ ತಿಳಿಸಿದೆ.

‘ಮೆಕ್‌ಮಾಸ್ಟರ್‌ ತೀರ ನಿಷ್ಠುರ ವ್ಯಕ್ತಿ. ಅವರ ವಿವರಣೆ ತುಂಬ ದೀರ್ಘ ಹಾಗೂ ಅಪ್ರಸ್ತುತವಾಗಿರುತ್ತದೆ’ ಎಂಬ ಟ್ರಂಪ್‌ ಅವರ ದೂರಿನ ಬಗ್ಗೆಯೂ ವರದಿ ಉಲ್ಲೇಖಿಸಿದೆ.

ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದ ಜಾನ್‌ ಬೊಲ್ಟೋನ್‌ ಅಥವಾ ಎನ್‌ಎಸ್‌ಎ ಸಿಬ್ಬಂದಿ ವಿಭಾಗದ ಮುಖ್ಯಸ್ಥ ಕೀತ್‌ ಕೆಲ್ಲೊಗ್‌ ಅವರು ಮೆಕ್‌ ಮಾಸ್ಟರ್‌  ಹುದ್ದೆಗೆ ನೇಮಕವಾಗುವ ಸಾಧ್ಯತೆ ಇದೆ ಎಂದೂ ಅದು ತಿಳಿಸಿದೆ.

2016ರ ಅಮೆರಿಕದ ಚುನಾವಣೆಯಲ್ಲಿ ರಷ್ಯಾದ ಹಸ್ತಕ್ಷೇಪವನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದ ಮೆಕ್‌ ಮಾಸ್ಟರ್‌ ಅವರಿಗೆ ಟ್ರಂಪ್ ಕಳೆದ ತಿಂಗಳು ಛೀಮಾರಿ ಹಾಕಿದ್ದರು. ಸದ್ಯದ ಬೆಳವಣಿಗೆಯು ಇದಕ್ಕೆ ಪುಷ್ಟಿಕೊಡುವಂತಿದೆ ಎನ್ನಲಾಗಿದೆ. 

ಆದರೆ, ಈ ವರದಿಯನ್ನು ನಿರಾಕರಿಸಿರುವ ಶ್ವೇತಭವನದ ವಕ್ತಾರೆ ಸಾರಾ ಸ್ಯಾಂಡರ್ಸ್‌, ‘ರಾಷ್ಟ್ರೀಯಭದ್ರತಾ ಮಂಡಳಿಯಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT