ಡಿ.ವಿ.ಜಿ. ಕಣ್ಣಲ್ಲಿ ಬೆಂಗಳೂರು

7

ಡಿ.ವಿ.ಜಿ. ಕಣ್ಣಲ್ಲಿ ಬೆಂಗಳೂರು

Published:
Updated:
ಡಿ.ವಿ.ಜಿ. ಕಣ್ಣಲ್ಲಿ ಬೆಂಗಳೂರು

1905–06ರಲ್ಲಿ ನಾನು (ಮುಳಬಾಗಲಿನಿಂದ) ಬೆಂಗಳೂರಿಗೆ ಬಂದದ್ದು ಚಾಕರಿ ಸಂಪಾದಿಸುವುದಕ್ಕೋಸ್ಕರ. ಮೆಟ್ರಿಕ್ಯುಲೇಷನ್ ಪರೀಕ್ಷೆಗೆ ಕುಳಿತು ಫೆಯಿಲ್‍ ಆಗಿದ್ದೆ. ನಾನು ಫೆಯಿಲಾದದ್ದು ಬಹುಶಃ ಎರಡು ಮೂರು ವಿಷಯಗಳಲ್ಲಿ ಎಂದು ತೋರುತ್ತದೆ. ಆ ಎರಡು ಮೂರರಲ್ಲಿ ಕನ್ನಡ ಒಂದು’.

ಈ ಮಾತುಗಳನ್ನು ಬರೆದಿರುವವರು ಕನ್ನಡ ನಾಡಿನಲ್ಲಿ ಮನೆಮಾತಾಗಿರುವ ಡಿ.ವಿ.ಜಿ. (1887-1975). ಅವರದು ದೊಡ್ಡ ಜೀವನ, ದೊಡ್ಡ ಸಾಧನೆ. ಹಲವು ಕ್ಷೇತ್ರಗಳಲ್ಲಿ ಅವರು ಮಾಡಿದ ಸಾಧನೆ, ಗಳಿಸಿಕೊಂಡ ವಿದ್ವತ್ತು, ನಡೆಸಿದ ಋಜು ಜೀವನ ಬೆರಗು ಹುಟ್ಟಿಸುವಂಥವು.

ಸಾಹಿತ್ಯ ಡಿ.ವಿ.ಜಿ.ಯವರು ಸ್ವತಃ ಆರಿಸಿಕೊಂಡ ಕ್ಷೇತ್ರವಲ್ಲ. ‘ಸಾಹಿತ್ಯಕ್ಷೇತ್ರದಲ್ಲಿ ನಾನೊಬ್ಬ ಆಗಂತುಕ’ ಎಂದು ಅವರೇ ಒಂದೆಡೆ ಹೇಳಿಕೊಂಡಿದ್ದಾರೆ. ಹಾಗೆ ನೋಡಿದರೆ ಪತ್ರಿಕೋದ್ಯಮ ಕೂಡ ಅವರ ಆಸಕ್ತಿಯ ಕ್ಷೇತ್ರವಾಗಿರಲಿಲ್ಲ. ಅವರಿಗೆ ಆ ಕಾಲದಲ್ಲಿ ಬೇಕಾಗಿದ್ದದ್ದು ತಕ್ಕಮಟ್ಟಿಗೆ ನೆಮ್ಮದಿಯಿಂದ ಬದುಕಲು ನೆರವಾಗುವಂಥ ಒಂದು ಸಣ್ಣ ಕೆಲಸ. ಅದಕ್ಕಾಗಿ ಅವರೆಷ್ಟು ಕಷ್ಟಪಟ್ಟರು ಎನ್ನುವುದು ಅವರದೇ ಮಾತುಗಳಲ್ಲಿ ದಾಖಲಾಗಿವೆ.

‘ಚಾಮರಾಜಪೇಟೆಯಿಂದ ಹೊರಟು ಮಾರ್ಕೆಟ್ಟಿನ ಬಳಿ ಬಂದು ಅಲ್ಲಿಂದ ಈಗಿನ ವಿಧಾನವೀಧಿಯ ಕೊನೆಯವರೆಗೂ ನಾನು ಸವೆಯಿಸದೆ ಇದ್ದ ರಸ್ತೆ ಒಂದು ಗಜವೂ ಇಲ್ಲ... ಆಗ ನನಗೆ ಎಲ್ಲಿಯಾದರೂ ಮಾಹೇಯಾನಾ 12-15 ರೂಪಾಯಿ ತಲಬಿನ ಚಾಕರಿ ದೊರೆತಿದ್ದಿದ್ದರೆ ಎಷ್ಟೋ ನೆಮ್ಮದಿಯಾಗಿರುತ್ತಿದ್ದೆನೆಂದು ಈಗಲೂ ಅನ್ನಿಸುತ್ತದೆ. ವಾಸ್ತವವಾಗಿ ಜಟಕಾಗಾಡಿಗೆ ಬಣ್ಣ ಬಳಿಯುವ ಒಂದು ಸಣ್ಣಕಾರ್ಖಾನೆಯಲ್ಲಿ 10-12 ರೂಪಾಯಿ ತಲಬಿನ ಮೇಲೆ ಮೂರು-ನಾಲ್ಕು ತಿಂಗಳು ಗುಮಾಸ್ತನಾಗಿದ್ದೆ. ಆ ಕಾರ್ಖಾನೆಯ ಮಾಲೀಕನಿಗೆ ಬೇರೆ ಐಶ್ವರ್ಯ ಬಂದದ್ದರಿಂದ ಈ ಸಣ್ಣ ವ್ಯಾಪಾರವನ್ನು ಮುಚ್ಚಿದ. ನಾನು ಮತ್ತೆ ಬೀದಿಯ ಪಾಲಾದೆ’.

ಹಾಗೆ ಬೀದಿ ತಿರುಗುತ್ತಿದ್ದಾಗ ಅವರು ಒಂದು ದಿನ ಆರ್ಕಾಟ್ ಶ್ರೀನಿವಾಸಾಚಾರ್ ರಸ್ತೆಯಲ್ಲಿದ್ದ ಪೋಸ್ಟ್ ಆಫೀಸಿನ ಪಕ್ಕದ ಓಣಿಯಲ್ಲಿ ಕಾಲಿಟ್ಟರು. ಅಂದಿನಿಂದಲೇ ಶುರುವಾಯಿತು ಅವರ ಮತ್ತು ಮುದ್ರಣಶಾಲೆಗಳ, ಪತ್ರಿಕೆಗಳ ನಂಟು. ‘ಸೂರ್ಯೋದಯ ಪ್ರಕಾಶಿಕಾ’ ಅವರಿಗೆ ಮೊದಲು ಉದ್ಯೋಗ ನೀಡಿದ ಪತ್ರಿಕೆ. 1912ರಲ್ಲಿ ಅವರಿಗೆ ಲಾಹೋರಿನ ‘ಪಂಜಾಬಿ’ ಪತ್ರಿಕೆಯಲ್ಲಿ ಉಪ ಸಂಪಾದಕ ಹುದ್ದೆ ದೊರೆಯಿತು. 100 ರೂಪಾಯಿ ಸಂಬಳದ ಆ ಹುದ್ದೆಯನ್ನು ನಿರಾಕರಿಸಿದ ಡಿ.ವಿ.ಜಿ. ಅದೇ ವರ್ಷ ಪ್ರಾರಂಭಿಸಿದ್ದು ‘ದಿ ಕರ್ನಾಟಕ’ ಎಂಬ ಅರ್ಧ ವಾರ ಪತ್ರಿಕೆ. ‘ಮೈಸೂರು ದೇಶದ ಸಾರ್ವಜನಿಕ ಜೀವನದ ಪ್ರಚೋದಕ ಶಕ್ತಿ’ ಎಂದು ಪತ್ರಿಕೆ ಹೆಸರು ಪಡೆಯಿತು. ಅಂದ ಹಾಗೆ ‘ದಿ ಕರ್ಣಾಟಕ’ ಪತ್ರಿಕೆಯ ಕಚೇರಿಯಿದ್ದದ್ದು ವಾಣಿವಿಲಾಸ ಆಸ್ಪತ್ರೆಯ ಎದುರಿನ ಕೋಟೆಬೀದಿಯಲ್ಲಿ.

ಡಿ.ವಿ.ಜಿ.ಯವರೇ ನೆನಪು ಮಾಡಿಕೊಂಡಿರುವಂತೆ ಬೆಂಗಳೂರಿನಲ್ಲಿ ಮೊದಮೊದಲ ಸಾರ್ವಜನಿಕ ಚಟುವಟಿಕೆಗಳು ನಡೆದದ್ದು ಕೆ.ಟಿ.ಅಪ್ಪಣ್ಣನವರ ‘ಹಿಂದೂ ಕಾಫಿ ಕ್ಲಬ್’ನಲ್ಲಿ (ಮುಂದೆ ಅವರು ಅಹಮದ್ ಬಿಲ್ಡಿಂಗ್ಸ್ ಎಂಬ ಕಟ್ಟಡದಲ್ಲಿ ‘ಹಿಂದೂ ರೆಸ್ಟೊರೆಂಟ್’ ಪ್ರಾರಂಭಿಸಿದರಂತೆ– ಆಮೇಲಿನದು ಈಗಿನ ಆನಂದರಾವ್ ಸರ್ಕಲ್ಲಿನಲ್ಲಿ ತುಂಬ ವರ್ಷ ನಡೆದ ‘ಮಾಡರ್ನ್ ಹಿಂದೂ ಹೋಟೆಲ್’) ಹಾಗೂ ಚಿಕ್ಕಪೇಟೆಯಲ್ಲಿದ್ದ ಕೆ.ಎಸ್. ಕೃಷ್ಣಯ್ಯರ್ ಎಂಬುವರ ಮನೆಯಲ್ಲಿ. ಅಲ್ಲಿ ಸೇರುತ್ತಿದ್ದವರಲ್ಲಿ ಒಬ್ಬರಾಗಿದ್ದ ಡಿ.ವಿ.ಜಿ.ಯವರು ಕೆಲವರು ಯುವಕರ ಜೊತೆ ‘ಪಾಪ್ಯುಲರ್ ಎಜುಕೇಷನ್ ಲೀಗ್’ ಸಂಸ್ಥೆ ಸ್ಥಾಪಿಸಿದರು.

ಮಾಗಡಿ ರಸ್ತೆಯಲ್ಲಿದ್ದ ಕುಷ್ಠರೋಗಿಗಳ ಅಸ್ಪತ್ರೆಯ ರೋಗಿಗಳಿಗೆ ದೀಪಾವಳಿಯಂದು ಸಿಹಿತಿಂಡಿ ಹಂಚಿದ್ದು, ಗೂಡ್ಸ್‌ಶೆಡ್ ರೋಡಿನ ದೇವಸ್ಥಾನದಲ್ಲಿ ಮಿಲ್ಲಿನ ಕಾರ್ಮಿಕರಿಗಾಗಿ ರಾತ್ರಿ ಪಾಠಶಾಲೆ ಸ್ಥಾಪಿಸಿದ್ದು ಈ ಸಂಸ್ಥೆಯ ಚಟುವಟಿಕೆಗಳಲ್ಲಿ ಕೆಲವು. 1915ರಲ್ಲಿ ಡಿ.ವಿ.ಜಿ.ಯವರ ಉಪಕ್ರಮದಿಂದ ಬೆಂಗಳೂರು ಪಬ್ಲಿಕ್ ಲೈಬ್ರರಿ ಪ್ರಾರಂಭವಾಯಿತು. ಅದೇ ವರ್ಷ ಅವರು ತನ್ನ ಕೆಲವು ಸ್ನೇಹಿತರ ಜೊತೆ ‘ದಿ ಮೈಸೂರು ಸೋಷಿಯಲ್ ಸರ್ವೀಸ್ ಲೀಗ್’ ಸ್ಥಾಪಿಸಿದರು. ಅದೇ ಇಂದಿನ ‘ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ’ಯ ಮೂಲ ಸಂಸ್ಥೆ.

ಆಗ ಮದರಾಸಿಗೆ ಆಗಮಿಸಿದ್ದ ಗಾಂಧೀಜಿಯವರು ಜಿ.ಎ.ನಟೇಶನ್‍ ಅವರ ಮನೆಯಲ್ಲಿ ತಂಗಿದ್ದರು. ಡಿ.ವಿ.ಜಿ.ಯವರು ನಟೇಶನ್‍ ಅವರ ಜೊತೆ ಪತ್ರ ವ್ಯವಹಾರ ಮಾಡಿ ಗಾಂಧೀಜಿ ಅವರನ್ನು ಮೊಟ್ಟ ಮೊದಲು ಬೆಂಗಳೂರಿಗೆ ಕರೆಸಿಕೊಳ್ಳುವಲ್ಲಿ ಯಶಸ್ವಿಯಾದರು. ಬೆಂಗಳೂರಿನಲ್ಲಿ ಗಾಂಧಿಯವರ ಮೊಟ್ಟಮೊದಲ ಕಾರ್ಯಕ್ರಮ ನಡೆದದ್ದು ಆಗಿನ ‘ಗವರ್ನ್‌ಮೆಂಟ್‌ ಹೈಸ್ಕೂಲ್’ ಸಭಾ ಭವನದಲ್ಲಿ (ಅದೇ ಇಂದಿನ ‘ಗವರ್ನ್‌ಮೆಂಟ್‌ ಆರ್ಟ್ಸ್‌ ಅಂಡ್ ಸೈನ್ಸ್ ಕಾಲೇಜು). ಅಂದು ಗಾಂಧೀಜಿ ಅನಾವರಣ ಮಾಡಿದ ಗೋಖಲೆಯವರ ಭಾವಚಿತ್ರ ಈಗಲೂ ‘ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ’ಯಲ್ಲಿದೆ.

ಪತ್ರಿಕೋದ್ಯೋಗದಿಂದ ದೂರ ಸರಿದ ಮೇಲೆ ಡಿ.ವಿ.ಜಿ. ತಮ್ಮ ಸಮಯವನ್ನೆಲ್ಲ ವಿನಿಯೋಗಿಸಿದ್ದು ಸಾರ್ವಜನಿಕ ಸೇವೆಗಾಗಿ. ಆ ಅವಧಿಯಲ್ಲಿ ಅವರ ಸಂಪರ್ಕಕ್ಕೆ ಬಂದ ಮಹನೀಯರು ಒಬ್ಬಿಬ್ಬರಲ್ಲ, ಸಂಸ್ಥೆಗಳು ಒಂದೆರಡಲ್ಲ. ಆ ಬಗ್ಗೆ ಡಿ.ವಿ.ಜಿ.ಯವರೇ ತಮ್ಮ ಹಲವು ಸಂಪುಟಗಳ ‘ಜ್ಞಾಪಕಚಿತ್ರಶಾಲೆ’ಯಲ್ಲಿ ವಿಷದವಾಗಿ ಬರೆದಿದ್ದಾರೆ.

ವಾಗ್ಗೇಯಕಾರ ಮೈಸೂರು ವಾಸುದೇವಾಚಾರ್ಯರ ಕೋರಿಕೆಯ ಮೇರೆಗೆ ಚಿಕ್ಕಪೇಟೆಯ ಒಂದು ಸಂದಿಯಲ್ಲಿದ್ದ ಮಣ್ಣು ಮಾಳಿಗೆಯ ಮನೆಯೊಂದರಲ್ಲಿ 10-12 ಮಂದಿಯ ಜೊತೆ ಅವರ ಗಾಯನವನ್ನು ಕೇಳಿದ್ದು; ತುಳಸಿ ತೋಟದ ಬಳಿಯಿದ್ದ ಎ.ವಿ.ವರದಾಚಾರ್ಯರ ನಾಟಕಶಾಲೆಯಲ್ಲಿ ‘ಪ್ರಹ್ಲಾದಚರಿತ್ರೆ’ ನಾಟಕ ನೋಡಿದ್ದು; ನಗರ್ತಪೇಟೆಯಲ್ಲಿದ್ದ ಬೆಂಗಳೂರು ನಾಗರತ್ನಮ್ಮನವರ ಮನೆಯಲ್ಲಿ ಅವರ ಸಂಗೀತ ಕೇಳಿದ್ದು; ಈಗ ‘ನರಹರಿರಾಯರಗುಡ್ಡ’ ಎಂದೇ ಪ್ರಸಿದ್ಧವಾಗಿರುವ ಗುಡ್ಡಕ್ಕೆ ನರಹರಿರಾಯರೇ ‘ಮೌಂಟ್‍ಜಾಯ್’ ಎಂದು ಹೆಸರಿಟ್ಟದ್ದು, ಇತ್ಯಾದಿ ಪ್ರಸಂಗಗಳಾಗಲೀ ಇಂಡಿಯನ್‍ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಅಠಾರಾಕಚೇರಿ, ಸೆಂಟ್ರಲ್‍ ಕಾಲೇಜು, ಕನ್ನಡ ಸಾಹಿತ್ಯ ಪರಿಷತ್ತು, ಕೈಲಾಸಂ ಅವರ ತಂದೆ ಪರಮಶಿವ ಅಯ್ಯರ್ ಅವರ ಬಂಗಲೆ ‘ವೈಟ್ ಹೌಸ್’, ಹೀಗೆ ತಾವು ಓಡಾಡಿದ ಸಂಸ್ಥೆಗಳಾಗಲೀ ಅವರ ಮನಃಪಟಲದಲ್ಲಿ ಚಿರಂತನವಾಗಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry