ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಬ್ಬದ ಹೋಳಿಗೆ ಮತ್ತು ದೇಹದ ಸಿಹಿ

Last Updated 16 ಮಾರ್ಚ್ 2018, 19:30 IST
ಅಕ್ಷರ ಗಾತ್ರ

‘ಯುಗಾದಿ ಹಬ್ಬವು ಬಲು ಜೋರು... ಹೋಳಿಗೆ ಊಟವು ನಮಗಂದು’ ಎಂದು ಎರಡನೇ ತರಗತಿಯ ಬಾಲಕ ಹಾಡುತ್ತಿದ್ದಾಗ ಪಕ್ಕದಲ್ಲೇ ಕುಳಿತಿದ್ದ ಅಜ್ಜಿ, ಇನ್ಸುಲಿನ್‌ ಚುಚ್ಚಿಕೊಂಡು ಕಪ್ಪುಗಟ್ಟಿದ ತೋಳು, ಹೊಟ್ಟೆಯ ಭಾಗವನ್ನೊಮ್ಮೆ ಸವರಿಕೊಂಡರು.

ಮಧುಮೇಹಿಗಳ ಪಾಲಿಗೆ ಹಬ್ಬಗಳೆಂದರೆ ಒಂದು ರೀತಿಯಲ್ಲಿ ಮುಜುಗರದ, ಮತ್ತೊಂದು ರೀತಿಯಲ್ಲಿ ಶಿಕ್ಷೆಯ ಭಾವ ತರುತ್ತದೆ. ಸಿಹಿ ತಿನ್ನದೆ ಇರಲಾಗದು, ತಿಂದರೆ ಮಧುಮೇಹ ನಿಯಂತ್ರಣಕ್ಕೆ ಕನಿಷ್ಠ 10 ದಿನಗಳಾದರೂ ಕಷ್ಟಪಡಬೇಕು. ಮನೆಯಲ್ಲಿ ಒಬ್ಬರು ಮಧುಮೇಹಿ ಇದ್ದರೆ ಇಡೀ ಮನೆಯ ಹಬ್ಬದ ಊಟದಲ್ಲಿ ಸಿಹಿಯ ಪಾಲಿಗೆ ಕಡಿವಾಣ ಬೀಳುತ್ತದೆ.

ಕೆಲವರು, ‘ಅವರೊಬ್ಬರನ್ನು ಬಿಟ್ಟು ಸಿಹಿ ತಿನ್ನುವುದು ಹೇಗೆ’ ಎಂದೋ, ‘ಸಿಹಿತಿನಿಸು ತಂದು ಇಟ್ಟರೆ ಅವರು ತಿನ್ನದೆ ಇರಲಾರರು, ಹಾಗಾಗಿ ತರುವುದೇ ಬೇಡ’ ಎಂದೋ ಸಿಹಿತಿನಿಸಿಗೆ ಕತ್ತರಿಯನ್ನೇ ಹಾಕಿಬಿಡುತ್ತಾರೆ. ತಮ್ಮ ಕಾರಣಕ್ಕೆ ಹಬ್ಬದೂಟವನ್ನೂ ಸಿಹಿಯಿಲ್ಲದೆ ಮಾಡುವಂತಾಗುತ್ತಿದೆಯಲ್ಲ ಎಂಬುದೇ ಮಧುಮೇಹಿಗಳ ಮುಜುಗರಕ್ಕೆ ಕಾರಣ.

ರಕ್ತದಲ್ಲಿ ಗ್ಲುಕೋಸ್‌ ಪ್ರಮಾಣ ಮಿತಿ ಮೀರಿದಾಗ ದೇಹದಲ್ಲಿ ಅಗತ್ಯ ಪ್ರಮಾಣದಲ್ಲಿ ಇನ್ಸುಲಿನ್‌ ಉತ್ಪತ್ತಿಯಾಗುವ ಬದಲು ತಿಂದ ಸಕ್ಕರೆಯ ಅಂಶವೆಲ್ಲವೂ ರಕ್ತಕ್ಕೆ ನೇರವಾಗಿ ಸೇರಿಕೊಳ್ಳುತ್ತದೆ. ಇನ್ಸುಲಿನ್‌ ಪ್ರಮಾಣವನ್ನು ಸರಿದೂಗಿಸಿಕೊಳ್ಳಲು ಔಷಧಿರೂಪದಲ್ಲಿ ಚುಚ್ಚಿಕೊಳ್ಳಬೇಕಾಗುತ್ತದೆ.

ಸಿಹಿತಿನಿಸುಗಳಲ್ಲಿರುವ ಸಕ್ಕರೆ (ಸಕ್ರೈನ್‌) ತಿನ್ನಲೇಬೇಕು ಎಂಬ ಚಪಲವನ್ನುಂಟು ಮಾಡುವ ಕಾರಣ ಮಧುಮೇಹಿಗಳು ಕದ್ದುಮುಚ್ಚಿಯಾದರೂ ಸಿಹಿ ತಿನ್ನುವುದುಂಟು.

ಹೀಗೆ ಮಾಡಬಹುದು: ಯುಗಾದಿ ದಿನ ಬೆಳಿಗ್ಗೆ ಅಕ್ಕಿ, ಅವಲಕ್ಕಿ, ಸಕ್ಕರೆ, ಬೆಲ್ಲ ರಹಿತ ಆಹಾರ ಸೇವಿಸುವುದು.

ಹೆಚ್ಚು ನೀರು ಸೇವಿಸುವುದು, ಮಧ್ಯಾಹ್ನ ಸಿಹಿಯೂಟದ ಬಳಿಕ ಮತ್ತು ರಾತ್ರಿವರೆಗೂ ದಾಹವಾದಾಗಲೆಲ್ಲ ಬಿಸಿ ನೀರು ಸೇವಿಸುವುದು, ಸಂಜೆ ಮತ್ತು ರಾತ್ರಿ ಚಹಾ, ಕಾಫಿ, ಫಲಾಹಾರಕ್ಕೆ ಕಡಿವಾಣ ಹಾಕುವುದು, ರಾತ್ರಿ ಊಟದ ಬದಲು ಬಾಳೆಹಣ್ಣು, ಮೂಸಂಬಿ, ಕಿತ್ತಳೆ ಹ್ಣಣು ಸೇವಿಸುವುದು. ತೀರಾ ಹಸಿವಾದರೆ ಸೌತೆಕಾಯಿ ಸೇವಿಸಬಹುದು.

ಬೆಳಿಗ್ಗೆ ಮತ್ತು ಸಂಜೆ ಕನಿಷ್ಠ 15 ನಿಮಿಷ ನಡಿಗೆ ಮತ್ತು ಲಘು ವ್ಯಾಯಾಮ ಮಾಡುವುದು.

ಆಹಾರದಲ್ಲಿ ಯಾವುದೇ ರೂಪದಲ್ಲಿಯೂ ಆಲೂಗಡ್ಡೆ, ಕ್ಯಾರೆಟ್‌, ಬೀಟ್‌ರೂಟ್‌ ಮತ್ತು ಸಿಹಿಗುಂಬಳಕಾಯಿ ಬಳಸದಿರುವುದು ಕ್ಷೇಮ. ಹಣ್ಣುಗಳಲ್ಲಿ ಮಾವಿನಹಣ್ಣು, ಕಲ್ಲಂಗಡಿ ಹಣ್ಣು, ಸಪೋಟ ಮತ್ತು ಹಲಸಿನಹಣ್ಣು ತಿನ್ನಲೇಬಾರದು.

ಕನಿಷ್ಠ ಏಳು ದಿನ ಇದೇ ಪಥ್ಯವನ್ನು ಮುಂದುವರಿಸಿದರೆ ಸಕ್ಕರೆ ಮತ್ತು ಕೊಬ್ಬಿನ ಪ್ರಮಾಣವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಬಹುದು. ಒಟ್ಟಿನಲ್ಲಿ ಬಾಯಿ ಚಪಲಕ್ಕೆ ಕಡಿವಾಣ ಹಾಕಿಕೊಂಡರೆ ಹಬ್ಬದ ದಿನವನ್ನೂ, ನಂತರದ ದಿನಗಳನ್ನೂ ಸಿಹಿಯಾಗಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT