ಯುಗದ ಆದಿಯ ಸಂಭ್ರಮ...

ಶುಕ್ರವಾರ, ಮಾರ್ಚ್ 22, 2019
28 °C

ಯುಗದ ಆದಿಯ ಸಂಭ್ರಮ...

Published:
Updated:
ಯುಗದ ಆದಿಯ ಸಂಭ್ರಮ...

ವಸಂತ ಋತುವಿನ ಆಗಮನವೆಂದರೆ ಸಂಭ್ರಮ ಮೂಡುವ ಸುಸಂದರ್ಭ. ಋತುರಾಜನ ಪದಾರ್ಪಣೆಯೊಂದಿಗೆ ಯುಗಾದಿಯೂ ಬರುತ್ತದೆ. ಯುಗಾದಿಯ ಕುರಿತಂತೆ, ಅದರ ವಿಶೇಷತೆಗಳ ಬಗೆಗೆ ವಿವಿಧ ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖವೂ ಇದೆ. ‘ಯುಗ’ ಎಂದರೆ ನೂತನ ವರ್ಷ ಎಂದೂ, ‘ಆದಿ’ ಎಂದರೆ ಆರಂಭ ಎಂಬುದು ಯಥಾರ್ಥ. ‘ಋತುಗಳಲ್ಲಿ ವಸಂತವು ನಾನು’ ಎಂದು ಭಗವದ್ಗೀತೆಯ ‘ವಿಭೂತಿ ಯೋಗ’ದಲ್ಲಿ ಶ್ರೀಕೃಷ್ಣನು ಹೇಳಿಕೊಂಡಿದ್ದಾನೆ.

ವಸಂತ ಋತುವಿನಲ್ಲಿ ಪ್ರಕೃತಿ ಹೊಸ ಚಿಗುರಿನೊಂದಿಗೆ ಹೊಸತನಕ್ಕೆ ತೆರೆದುಕೊಳ್ಳುವಂತೆ, ನಿಸರ್ಗದಲ್ಲಿ ಪುಟಿದೇಳುವ ಚೈತನ್ಯವನ್ನು ಕಂಡಾಗ ಮನದಲ್ಲಿ ಹೊಸ ವರ್ಷದ ಸಂಭ್ರಮ ಸಹಜವಾಗಿಯೇ ಮೂಡುತ್ತದೆ.

ಚೈತ್ರ ಶುಕ್ಲ ಪಾಡ್ಯಮಿಯ ದಿನವೇ ಚಾಂದ್ರಮಾನ ಯುಗಾದಿ. ಇದು ಬರುವುದು ಮೇಷ ಸಂಕ್ರಮಣದ ಮೊದಲು ಬರುವ ಅಮಾವಾಸ್ಯೆಯ ಮಾರನೇ ದಿನ. ಈ ಬಾರಿ ಮಾರ್ಚ್‌ 18ರ ಭಾನುವಾರ ಯುಗದ ಆದಿ ಅರ್ಥಾತ್‌ ಹೊಸ ವರ್ಷ ಆರಂಭವಾಗುತ್ತಿದೆ. ರಾಮನು ರಾವಣನನ್ನು ವಧಿಸಿ ಅಯೋಧ್ಯೆಯಲ್ಲಿ ಆಳ್ವಿಕೆಯನ್ನು ಆರಂಭಿಸಿದ್ದು ಕೂಡ ಯುಗಾದಿ ದಿನದಂದೇ ಎಂಬುದು ಪ್ರತೀತಿ.

ಯುಗಾದಿಯ ಮಹತ್ವ

ಪಾಶ್ಚಾತ್ಯರ ಪ್ರಭಾವದಿಂದ ಜನವರಿ 1ರಂದು ಹೊಸವರ್ಷದ ಆಚರಣೆ ನಡೆಯುತ್ತದೆ. ಆದರೂ, ಯುಗಾದಿಯ ಚಿತ್ರಣ ವಸಂತ ಋತುವಿನೊಂದಿಗೆ ಬರುವುದೇ ಅಂದ. ವಾತಾವರಣದಲ್ಲಿ ಅಗಾಧ ಬದಲಾವಣೆ ಕಾಣುವ ಈ ಋತು ಭಕ್ತಿಗೆ ಪ್ರಶಸ್ತವಾದ ಮುಹೂರ್ತಗಳನ್ನು ಹೊಂದಿದೆ. ಇನ್ನೊಂದು ನಂಬಿಕೆಯ ಪ್ರಕಾರ, ಬ್ರಹ್ಮನು ಜಗತ್ತನ್ನು ಸೃಷ್ಟಿಸಿದ್ದು ಯುಗಾದಿಯಂದೇ. ಅಂದಿನಿಂದ ಕಾಲಗಣನೆಗಾಗಿ ಗ್ರಹ, ನಕ್ಷತ್ರ, ಋತು, ಮಾಸ, ತಿಥಿ ಇತ್ಯಾದಿಗಳನ್ನು ನಿಯೋಜಿಸಿದ ಎಂದು ಪುರಾಣಗಳು ಹೇಳುತ್ತವೆ.

ಯುಗಾದಿ ಹಬ್ಬದ ದಿನಕ್ಕೆ ಸಂಬಂಧಿಸಿ ಕೆಲವು ಧರ್ಮಗ್ರಂಥಗಳಲ್ಲಿ ಐದು ವಿಧಿಗಳನ್ನು ಸೂಚಿಸಲಾಗಿದೆ. ತೈಲಾಭ್ಯಂಜನ (ಎಣ್ಣೆ ಸ್ನಾನ), ದೇವತಾ ಸ್ತುತಿ, ಧರ್ಮ ಧ್ವಜಾರೋಹಣ, ನಿಂಬಕುಸುಮ ಭಕ್ಷಣ (ಬೇವಿನೆಲೆಯ ಸೇವನೆ) ಮತ್ತು ಪಂಚಾಂಗ ಶ್ರವಣ.

ಈ ಪೈಕಿ ಪಂಚಾಂಗ ಶ್ರವಣ ಮಾತ್ರ ಎಲ್ಲ ಕಡೆ ಸಾಮೂಹಿಕವಾಗಿ ನಡೆಯುತ್ತದೆ. ಇದು ಹನುಮಂತನ ದೇಗುಲಗಳಲ್ಲೇ ಹೆಚ್ಚಾಗಿ ನಡೆಯುತ್ತದೆ. ಯುಗಾದಿ ಹಬ್ಬದ ದಿನ ‘ಪಂಚಾಗ ಶ್ರವಣ ಮಾಡುವುದರಿಂದ ಸಂಪತ್ತು, ವಾರದಿಂದ ಆಯುಷ್ಯ ವೃದ್ಧಿ, ನಕ್ಷತ್ರದಿಂದ ಪಾಪನಾಶ, ಯೋಗದಿಂದ ರೋಗನಾಶ, ಕರಣದಿಂದ ಚಿಂತಿಸಿದ ಕಾರ್ಯದಲ್ಲಿ ಸಿದ್ಧಿ ಲಭಿಸುತ್ತವೆ’ ಎಂಬ ನಂಬಿಕೆ ಇದೆ. ಪಂಚಾಂಗ ಶ್ರವಣದಲ್ಲಿ ರಾಶಿ ಭವಿಷ್ಯದಿಂದ ಹಿಡಿದು ಮಳೆ-ಬೆಳೆ, ಆಯ-ವ್ಯಯ, ದೇಶದ ಭವಿಷ್ಯ, ಯುದ್ಧ-ಶಾಂತಿ ಹೀಗೆ ಮನುಕುಲದ ಒಳಿತು ಅಡಗಿರುವ ವಿಚಾರಗಳೇ ಪ್ರಮುಖವಾಗಿರುತ್ತವೆ.

ಏನಿದು ಚಾಂದ್ರಮಾನ?

ಚಂದ್ರನ ಚಲನೆಯನ್ನು ಅನುಸರಿಸಿ, ಅಮಾವಾಸ್ಯೆ-ಹುಣ್ಣಿಮೆಗಳ ಆಧಾರದ ಮೇಲೆ, ಮಾಸ ಗಣನೆ ಮಾಡುವ ಪದ್ಧತಿಯೇ ಚಾಂದ್ರಮಾನ. ಹಬ್ಬಕ್ಕೆ ಎರಡು ದಿನಗಳ ಮೊದಲೇ ಯುಗಾದಿಯ ಸಂಭ್ರಮ ಪ್ರಾರಂಭಗೊಳ್ಳುತ್ತದೆ. ಯುಗಾದಿ ದಿನ ಬೆಳಿಗ್ಗೆ ಬೇಗನೆದ್ದು ಸ್ನಾನ ಮಾಡುತ್ತಾರೆ. ಮನೆಗಳನ್ನು ಮಾವಿನ ಎಲೆಯ ತೋರಣಗಳಿಂದ ಅಲಂಕರಿಸುತ್ತಾರೆ. ಶಿವ ಮತ್ತು ಪಾರ್ವತಿಯ ಮಕ್ಕಳಾದ ಗಣೇಶ ಮತ್ತು ಕಾರ್ತಿಕೇಯರಿಗೆ ಮಾವಿನ ಕಾಯಿಗಳೆಂದರೆ ತುಂಬಾ ಇಷ್ಟ ಎಂಬ ಪ್ರತೀತಿ ಇದೆ. ಆದ್ದರಿಂದ ಈ ದೇವರ ಕೃಪೆ ತಮ್ಮ ಮೇಲಿರಲಿ ಎಂದು ಜನರು ಮಾವಿನ ತೋರಣಗಳಿಂದ ಮನೆಯನ್ನು ಅಲಂಕರಿಸುತ್ತಾರೆ. ವಿವಿಧ ಭಕ್ಷ್ಯಗಳನ್ನು ತಯಾರಿಸಿ ಸವಿಯುತ್ತಾರೆ. ಪರಸ್ಪರ ಸಿಹಿ ಹಂಚಿ ಶುಭಾಶಯಗಳನ್ನೂ ಕೋರುತ್ತಾರೆ.

ಬೇವಿನ ಕಷಾಯ

ಯುಗಾದಿಯಂದು ಅಭ್ಯಂಜನ ಕಡ್ಡಾಯ. ತಲೆಯಿಂದ ಕಾಲಿನವರೆಗೂ ಎಣ್ಣೆಯಿಂದ ಮಸಾಜ್‌ ಮಾಡಿಕೊಂಡು ಕನಿಷ್ಠ ಒಂದು ಗಂಟೆಯ ನಂತರ ಹದವಾದ ಬಿಸಿನೀರಿನಲ್ಲಿ ಸ್ನಾನ ಮಾಡುವುದು ಕ್ರಮ. ಸ್ನಾನಕ್ಕೆ ಬೇವಿನ ಎಲೆಯ ಕಷಾಯ ಬಳಸಿದರೆ ಯಾವುದೇ ಬಗೆಯ ಚರ್ಮದ ಸಮಸ್ಯೆ ದೂರವಾಗುತ್ತದೆ. ಗೀಸರ್‌ನಲ್ಲಿ ನೀರು ಬಿಸಿಮಾಡಿಕೊಳ್ಳುವವರು ಒಂದು ಮಗ್‌ ಬಿಸಿನೀರಿನಲ್ಲಿ ಮೊದಲೇ ಬೇವಿನೆಲೆ ಹಾಕಿಟ್ಟು ಅದನ್ನು ಸ್ನಾನದ ನೀರಿನೊಂದಿಗೆ ಬೆರೆಸಿಕೊಳ್ಳಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry