ಕೆಪಿಸಿಎಲ್ ಲಿಖಿತ ಪರೀಕ್ಷೆಯಲ್ಲಿ ಅಕ್ರಮ ಆರೋಪ

7
ಒಂದೇ ಪುಸ್ತಕದಿಂದ ಶೇ 90 ರಷ್ಟು ಪ್ರಶ್ನೆಗಳ ಆಯ್ಕೆ; ಮರು ಪರೀಕ್ಷೆಗೆ ಆಗ್ರಹ

ಕೆಪಿಸಿಎಲ್ ಲಿಖಿತ ಪರೀಕ್ಷೆಯಲ್ಲಿ ಅಕ್ರಮ ಆರೋಪ

Published:
Updated:
ಕೆಪಿಸಿಎಲ್ ಲಿಖಿತ ಪರೀಕ್ಷೆಯಲ್ಲಿ ಅಕ್ರಮ ಆರೋಪ

ಬೆಂಗಳೂರು: ಕರ್ನಾಟಕ ಪವರ್ ಕಾರ್ಪೋರೇಷನ್‌ ಲಿಮಿಟೆಡ್‌ನ (ಕೆಪಿಸಿಎಲ್) ಕಿರಿಯ ಎಂಜಿನಿಯರ್ ಮತ್ತು ಸಹಾಯಕ ಎಂಜಿನಿಯರ್‌ ಹುದ್ದೆಗಳ ಭರ್ತಿಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಬಂದಿರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೆಪಿಸಿಎಲ್, ಪರೀಕ್ಷೆ ನಡೆಸಿರುವ ಸಂಸ್ಥೆಯಿಂದ ಮಾಹಿತಿ ಪಡೆಯಲು ಮುಂದಾಗಿದೆ.

288 ಕಿರಿಯ ಎಂಜಿನಿಯರ್, 296 ಸಹಾಯಕ ಎಂಜಿನಿಯರ್‌, ಕೆಮಿಸ್ಟ್‌ ಮತ್ತು ಕೆಮಿಕಲ್‌ ಸೂಪರ್‌ವೈಸರ್‌ ಸೇರಿ 622 ಹುದ್ದೆಗಳ ನೇಮಕಾತಿಗೆ 2017ರ ಆಗಸ್ಟ್ 3ರಲ್ಲಿ ಕೆಪಿಸಿಎಲ್ ಅಧಿಸೂಚನೆ ಹೊರಡಿಸಲಾಗಿತ್ತು. 2018ರ ಜ. 21ರಂದು ನಡೆದ ಲಿಖಿತ ಪರೀಕ್ಷೆಗೆ ಸುಮಾರು 44,000 ಅಭ್ಯರ್ಥಿಗಳು ಹಾಜರಾಗಿದ್ದರು.

ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲು ಮತ್ತು ಪರೀಕ್ಷೆ ನಡೆಸಲು ಅನುಸರಿಸಿರುವ ಕ್ರಮಗಳು ಅಕ್ರಮಗಳಿಗೆ ದಾರಿಮಾಡಿವೆ ಎಂದು ಆರೋಪಿಸಿ ಅಭ್ಯರ್ಥಿಗಳು, ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಮಂಗಳವಾರ ದೂರು ನೀಡಿದ್ದು, ಮರು ಪರೀಕ್ಷೆ ನಡೆಸುವಂತೆ ಒತ್ತಾಯಿಸಿದ್ದಾರೆ.

‘ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ಖಾಸಗಿ ಏಜೆನ್ಸಿಯೊಂದಕ್ಕೆ ವಹಿಸಲಾಗಿತ್ತು. ಆ ಏಜೆನ್ಸಿಯ ವಿಷಯ ತಜ್ಞರೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ್ದಾರೆ’ ಎಂದು ಕೆಪಿಸಿಎಲ್‌ನ ಪ್ರಧಾನ ವ್ಯವಸ್ಥಾಪಕಿ ಆರ್. ಶಿಲ್ಪಾ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

ಏಜೆನ್ಸಿ ಹೆಸರು ಬಹಿರಂಗಪಡಿಸಲು ನಿರಾಕರಿಸಿದ ಅಧಿಕಾರಿ, ದೂರು ಆಧರಿಸಿ ಮಾಹಿತಿ ಕೇಳಲಾಗಿದೆ ಎಂದು ಹೇಳಿದರು.

ಅಭ್ಯರ್ಥಿಗಳ ಆರೋಪಗಳೇನು?: ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿರುವ ವಿಧಾನವೇ ಅಕ್ರಮಕ್ಕೆ ಅನುಕೂಲ ಮಾಡಿಕೊಟ್ಟಿದೆ. ಅಭ್ಯರ್ಥಿಗಳು ಹತ್ತಾರು ಪುಸ್ತಕ ಓದಿ ಪರೀಕ್ಷೆಗೆ ತಯಾರಾಗಿದ್ದಾರೆ. ಆದರೆ, ‘ಆರ್‌.ಎಸ್. ಕುರ್ಮಿ ಆಬ್ಜೆಕ್ಟಿವ್ ಟೈಪ್ ಬುಕ್’ ಒಂದರಿಂದಲೇ ಶೇ 90 ರಷ್ಟು ಪ್ರಶ್ನೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.

ಪ್ರಶ್ನೆಪತ್ರಿಕೆ ಪರೀಕ್ಷೆಗೂ ಮುನ್ನವೇ ಸೋರಿಕೆಯಾಗಿದೆ. ಕೆಪಿಸಿಎಲ್‌ ಹಿರಿಯ ಅಧಿಕಾರಿಗಳು ಮತ್ತು ಸಂಬಂಧಿಕರ ಮಕ್ಕಳೇ ಸಾಕಷ್ಟು ಸಂಖ್ಯೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದು, ಅಂತವರಿಗೆ ಮಾಹಿತಿ ಸೋರಿಕೆಯಾಗಿರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಡಿಸಿದ್ದಾರೆ.

ಬೆಂಗಳೂರಿನ ಬಾಗಲಗುಂಟೆ ಮುಖ್ಯ ರಸ್ತೆಯ ಪರೀಕ್ಷಾ ಕೇಂದ್ರಕ್ಕೆ ತೆರೆದ ಲಕೋಟೆಯಲ್ಲಿ ಪ್ರಶ್ನೆ ಪತ್ರಿಕೆ ಬಂದಿದೆ.  ಕಲಬುರ್ಗಿಯ ರೇಷ್ಮಾ ಪದವಿ ಕಾಲೇಜಿನಲ್ಲಿ ಸಾಮೂಹಿಕ ನಕಲು ನಡೆದಿದೆ. ಒಟ್ಟಿಗೆ ಅರ್ಜಿ ಹಾಕಿದ ಅಭ್ಯರ್ಥಿಗಳು ಒಂದೇ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥಿತ ಅವಕಾಶ ಕಲ್ಪಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಪ್ರಶ್ನೆ ಪತ್ರಿಕೆಯಲ್ಲಿ ಪ್ರಶ್ನೆಗಳೇ ತಪ್ಪಾಗಿ ಮುದ್ರಿತವಾಗಿದ್ದು, ಇದು ಅಭ್ಯರ್ಥಿಗಳಲ್ಲಿ ಗೊಂದಲಕ್ಕೆ ಕಾರಣವಾಗಿತ್ತು. ಜ. 29ರಂದು ಮೊದಲ ಕೀ ಉತ್ತರ ಪ್ರಕಟವಾಗಿದ್ದು, ಅದರಲ್ಲಿ ಸಾಕಷ್ಟು ತಪ್ಪುಗಳಿದ್ದವು. ಆಕ್ಷೇಪಣೆ ಸಲ್ಲಿಸಿದ ಬಳಿಕ ಪರಿಷ್ಕೃತ ಕೀ ಉತ್ತರ ಪ್ರಕಟಿಸಲಾಗಿದ್ದು, ಅದರಲ್ಲೂ 15 ತಪ್ಪುಗಳು ಉಳಿದುಕೊಂಡಿವೆ. ಆದರೆ, ಆಕ್ಷೇಪಣೆ ಸಲ್ಲಿಸಲು ಆನ್‌ಲೈನ್‌ನಲ್ಲಿ ಅವಕಾಶವೇ ಇಲ್ಲ ಎಂದಿದ್ದಾರೆ.

‘ಈಗ ನಡೆದಿರುವ ಪರೀಕ್ಷೆಯನ್ನೇ ಅಧಿಕೃತಗೊಳಿಸಿದರೆ ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನ್ಯಾಯವಾಗಲಿದೆ. ಹೀಗಾಗಿ ಮರು ಪರೀಕ್ಷೆ ನಡೆಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry