ಜೆಡಿಎಸ್‌ ಬಂಡಾಯ ಶಾಸಕರ ವಿಚಾರಣೆ ಸೋಮವಾರ

7
ಸ್ಪೀಕರ್‌ ಮುಂದೆ ಹಾಜರಾಗುವಂತೆ ಸಮನ್ಸ್‌

ಜೆಡಿಎಸ್‌ ಬಂಡಾಯ ಶಾಸಕರ ವಿಚಾರಣೆ ಸೋಮವಾರ

Published:
Updated:
ಜೆಡಿಎಸ್‌ ಬಂಡಾಯ ಶಾಸಕರ ವಿಚಾರಣೆ ಸೋಮವಾರ

ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಜೆಡಿಎಸ್‌ನ ಏಳು ಬಂಡಾಯ ಶಾಸಕರ ವಿಚಾರಣೆ ಸೋಮವಾರ ನಡೆಯಲಿದೆ.

ಎರಡು ದಿನಗಳೊಳಗೆ ವಿಚಾರಣೆ ನಡೆಸಬೇಕು ಎಂದು ಗುರುವಾರ ಜೆಡಿಎಸ್‌ ಮನವಿ ಸಲ್ಲಿಸಿತ್ತು. ಈ ಸಂಬಂಧ  ಶಾಸಕರಿಗೆ ವಿಧಾನಸಭಾಧ್ಯಕ್ಷರ ಅರೆನ್ಯಾಯಿಕ ಪ್ರಾಧಿಕಾರದ ಮುಂದೆ ಹಾಜರಾಗಬೇಕು ಎಂದು ಸಮನ್ಸ್‌ ನೀಡಲಾಗಿದೆ ಎಂದು ವಿಧಾನ ಸಭಾ ಕಾರ್ಯದರ್ಶಿ ಎಸ್‌.ಮೂರ್ತಿ ತಿಳಿಸಿದ್ದಾರೆ.

2016 ರಲ್ಲಿ ಪಕ್ಷದ ವಿಪ್‌ ಉಲ್ಲಂಘಿಸಿ ಅಡ್ಡ ಮತದಾನ ಮಾಡಿರುವ ಶಾಸಕರಾದ ಎನ್‌. ಚಲುವರಾಯಸ್ವಾಮಿ, ಅಖಂಡ ಶ್ರೀನಿವಾಸಮೂರ್ತಿ, ಜಮೀರ್‌ ಅಹಮದ್‌ ಖಾನ್‌, ಎಚ್‌.ಸಿ.ಬಾಲಕೃಷ್ಣ, ರಮೇಶ್ ಬಂಡಿಸಿದ್ದೇಗೌಡ, ಇಕ್ಬಾಲ್‌ ಅನ್ಸಾರಿ ಮತ್ತು ಭೀಮಾ ನಾಯಕ್‌ ಅವರ ಸದಸ್ಯತ್ವ ಅನರ್ಹಗೊಳಿಸಬೇಕು. ಈ ಸಂಬಂಧ ಅರ್ಜಿ ಸಲ್ಲಿಸಿ ಎರಡು ವರ್ಷ ಕಳೆದಿದೆ. ಪದೇ ಪದೇ ಮನವಿ ಮಾಡಿದರೂ ಕ್ರಮ ಜರುಗಿಸಿಲ್ಲ ಎಂದು ಜೆಡಿಎಸ್‌ ಶಾಸಕರಾದ ಸಿ.ಎನ್‌.ಬಾಲಕೃಷ್ಣ ಮತ್ತು ಬಿ.ಬಿ.ನಿಂಗಯ್ಯ ಮನವಿ ಸಲ್ಲಿಸಿದ್ದರು.

ಶಾಸಕರ ಅನರ್ಹತೆ ವಿಚಾರವು ಅತ್ಯಂತ ತುರ್ತಿನ ವಿಷಯವಾಗಿರುವುದರಿಂದ  ವಿಚಾರಣೆಗೆ ತೆಗೆದುಕೊಳ್ಳಬೇಕು. ಇದರಿಂದ ನ್ಯಾಯ– ನೀತಿ ಎತ್ತಿಹಿಡಿಯಲು ಸಾಧ್ಯವಾಗುತ್ತದೆ ಎಂದು ಮನವಿಯಲ್ಲಿ ಹೇಳಿದ್ದರು.

ಏಳು ಶಾಸಕರ ಸದಸ್ಯತ್ವ ಅನರ್ಹತೆ ವಿಚಾರ ಇತ್ಯರ್ಥ ಆಗಿಲ್ಲ. ಆದ್ದರಿಂದ, ಇದೇ 23 ರಂದು ನಡೆಯುವ ಚುನಾವಣೆಯಲ್ಲಿ ಇವರಿಗೆ ಮತದಾನ ಮಾಡಲು ಅವಕಾಶ ನೀಡಬಾರದು ಎಂದೂ ಆಗ್ರಹಿಸಿದ್ದರು. ಸೋಮವಾರ ಬೆಳಿಗ್ಗೆ 11.30 ಕ್ಕೆ  ವಿಧಾನಸೌಧದ ಮೊದಲ ಮಹಡಿಯಲ್ಲಿರುವ ವಿಧಾನಸಭಾಧ್ಯಕ್ಷರ ಕೊಠಡಿಯಲ್ಲಿ ವಿಚಾರಣೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry