ಆಲ್‌ ಇಂಗ್ಲೆಂಡ್ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಸೆಮಿಫೈನಲ್‌ಗೆ ಪಿ.ವಿ.ಸಿಂಧು ಪ್ರವೇಶ

ಬುಧವಾರ, ಮಾರ್ಚ್ 27, 2019
22 °C
ಕ್ವಾರ್ಟರ್‌ಗೆ ಪ್ರಣಯ್

ಆಲ್‌ ಇಂಗ್ಲೆಂಡ್ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಸೆಮಿಫೈನಲ್‌ಗೆ ಪಿ.ವಿ.ಸಿಂಧು ಪ್ರವೇಶ

Published:
Updated:
ಆಲ್‌ ಇಂಗ್ಲೆಂಡ್ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಸೆಮಿಫೈನಲ್‌ಗೆ ಪಿ.ವಿ.ಸಿಂಧು ಪ್ರವೇಶ

ಲಂಡನ್‌ (ಎಎಫ್‌ಪಿ): ಭಾರತದ ಪಿ.ವಿ.ಸಿಂಧು ಆಲ್‌ ಇಂಗ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ ಪ್ರವೇಶಿಸಿದರು. ಶುಕ್ರವಾರ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ಅವರು 2016ನೇ ಸಾಲಿನ ಚಾಂಪಿಯನ್‌, ಜಪಾನ್‌ನ ನೊಜೊಮಿ ಒಕುಹರಾ ಅವರನ್ನು 20–22, 21–18, 21–18ರಿಂದ ಮಣಿಸಿದರು. ಈ ಟೂರ್ನಿಯಲ್ಲಿ ಸಿಂಧು ನಾಲ್ಕರ ಘಟ್ಟಕ್ಕೆ ಪ್ರವೇಶಿಸುತ್ತಿರುವುದು ಇದೇ ಮೊದಲು.

ಪುರುಷರ ಸಿಂಗಲ್ಸ್‌ನಲ್ಲಿ ಎಚ್‌.ಎಸ್.ಪ್ರಣಯ್‌ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು. ಗಾಯದ ಸಮಸ್ಯೆಯಿಂದ ಇತ್ತೀಚೆಗಷ್ಟೇ ಚೇತರಿಸಿಕೊಂಡಿದ್ದ ಪ್ರಣಯ್‌ ಪ್ರೀ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ 21–10, 21–9ರಲ್ಲಿ ಇಂಡೊನೇಷ್ಯಾದ ಟಾಮಿ ಸುಗಾರ್ತೊ ಅವರನ್ನು ಮಣಿಸಿದರು.

ಕಮರಿದ ಕನಸು: ಗೆಲ್ಲುವ ವಿಶ್ವಾಸ ಮೂಡಿಸಿದ್ದ ಕಿದಂಬಿ ಶ್ರೀಕಾಂತ್ ಅವರ ಕನಸು ಕಮರಿದೆ. ಅವರು 11–21, 21–15, 20–22ರಲ್ಲಿ ಚೀನಾದ ಹುಯಾಂಗ್ ಕ್ಸಿಯಾಂಗ್ ಅವರಿಗೆ ಮಣಿದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 42ನೇ ಸ್ಥಾನದಲ್ಲಿರುವ ಕ್ಸಿಯಾಂಗ್ ಅಮೋಘ ಆಟವಾಡಿದರು.

ಮೊದಲ ಗೇಮ್‌ನಲ್ಲಿ ಪ್ರಯಾಸಪಟ್ಟ ಶ್ರೀಕಾಂತ್‌ ಪಾಯಿಂಟ್ಸ್ ಬಿಟ್ಟುಕೊಟ್ಟರು. ಕ್ಸಿಯಾಂಗ್ ಅವರ ಸ್ಮ್ಯಾಷ್‌ಗಳನ್ನು ಎದುರಿಸಲು ಅವರಿಗೆ ಸಾಧ್ಯವಾಗಲಿಲ್ಲ. ಒಂದು ಹಂತದಲ್ಲಿ ತೀವ್ರ ಹಿನ್ನಡೆಯೊಂದಿಗೆ ಗೇಮ್‌ ಸೋಲುವ ಹಂತದಲ್ಲಿದ್ದರು. ಆದರೆ ಎದುರಾಳಿಯ ಆಟವನ್ನು ಅರಿತು ತಿರುಗೇಟು ನೀಡುವ ಮೂಲಕ 11–11ರಲ್ಲಿ ಸಮ ಬಲ ಮಾಡಿಕೊಂಡಿದ್ದರು. ನಂತರ ಕ್ಸಿಯಾಂಗ್ ಮಿಂಚಿದರು. ಅವರ ಸ್ಮ್ಯಾಷ್‌ಗಳನ್ನು ತಡೆಯಲು ಶ್ರೀಕಾಂತ್‌ಗೆ ಸಾಧ್ಯವಾಗಲಿಲ್ಲ.

ಎರಡನೇ ಗೇಮ್‌ನಲ್ಲಿ ಶ್ರೀಕಾಂತ್ ಸುಲಭವಾಗಿ ಗೆದ್ದರು. ಆರಂಭದಿಂದಲೇ ಹೆಚ್ಚು ಪಾಯಿಂಟ್ಸ್‌ ಅಂತರ ಗಿಟ್ಟಿಸುವ ಮೂಲಕ ಕ್ಸಿಯಾಂಗ್‌ಗೆ ಎಲ್ಲಿಯೂ ಮುನ್ನಡೆಯ ಅವಕಾಶ ನೀಡಲಿಲ್ಲ.

ನಿರ್ಣಾಯಕ ಸೆಟ್ ತೀವ್ರ ಜಿದ್ದಾಜಿದ್ದಿನಿಂದ ಕೂಡಿತ್ತು. ಇಬ್ಬರು ಆಟಗಾರರು ಸಮಬಲದ ಹೋರಾಟ ನಡೆಸಿದರು. 19–19ರ ಪಾಯಿಂಟ್ಸ್‌ವರೆಗೂ ಹೋರಾಟ ನಡೆಯಿತು. ಕೊನೆಯ ಹಂತದಲ್ಲಿ ವಿಜೃಂಭಿಸಿದ ಕ್ಸಿಯಾಂಗ್ ಅವರಿಗೆ ಶ್ರೀಕಾಂತ್ ಮಣಿದರು. 52 ನಿಮಿಷದ ಪೈಪೋಟಿ ಇದಾಗಿತ್ತು.

ಭಾರತದ ಡಬಲ್ಸ್‌ ಜೋಡಿ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ 16–21, 21–16, 21–23ರಲ್ಲಿ ಎರಡನೇ ಶ್ರೇಯಾಂಕದ ಮಥಾಯಿಸ್ ಬೋಯ್ ಮತ್ತು ಮೊಗೆನ್ಸನ್‌ ಜೋಡಿಯ ಎದುರು ಸೋತಿತು.

ಕೆಟ್ಟ ಅಂಪೈರಿಂಗ್: ಶ್ರೀಕಾಂತ್ ಆರೋಪ

‘ಹಿಂದಿನ ಪಂದ್ಯದಲ್ಲಿ ಅಂಪೈರ್‌ ಸರ್ವಿಸ್ ಫಾಲ್ಟ್‌ಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ದರು. ಆದರೆ ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ಫಾಲ್ಟ್‌ ಹುಡುಕುವುದಕ್ಕೆ ಅವರು ಕೂತಿರುವಂತೆ ಕಾಣಿಸಿತು. ಸರ್ವಿಸ್ ಫಾಲ್ಟ್‌ಗೆ ಸರಿಯಾದ ನಿಯಮಗಳು ಇಲ್ಲ. ಇದರಿಂದ ಆಟಗಾರರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಕೆಲವೊಮ್ಮೆ ಫಾಲ್ಟ್‌ ಎಸಗಿದರೆ ಎಚ್ಚರಿಕೆ ನೀಡುತ್ತಾರೆ. ಇನ್ನು ಕೆಲವೊಮ್ಮೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಇದು ನನಗೆ ಹಾಸ್ಯಾಸ್ಪದ ಎನಿಸುತ್ತಿದೆ’ ಎಂದು ಭಾರತದ ಆಟಗಾರ ಶ್ರೀಕಾಂತ್ ಆರೋಪಿಸಿದರು. ‘ಪ್ರತಿ ಎರಡು–ಮೂರು ಪಾಯಿಂಟ್ಸ್‌ಗಳಿಗೊಮ್ಮೆ ಸರ್ವಿಸ್‌ ಫಾಲ್ಟ್‌ಗಳನ್ನು ಹಡುಕಲಾಯಿತು. ಅದರಲ್ಲೂ ನಿರ್ಣಾಯಕ ಗೇಮ್‌ನಲ್ಲಿ ನಮ್ಮ ಗಮನ ಆಟದ ಕಡೆ ಹರಿಸಲು ಸಾಧ್ಯವಾಗಲೇ ಇಲ್ಲ. ಬಿಡಬ್ಲ್ಯುಎಫ್‌ ಇದಕ್ಕೆ ಸರಿಯಾದ ನಿಯಮಗಳನ್ನು ತರಬೇಕು’ ಎಂದು ಭಾರತದ ಚಿರಾಗ್ ಶೆಟ್ಟಿ ಕೂಡ ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry