ದಕ್ಷಿಣಕ್ಕೆ ತಾರತಮ್ಯ: ಸಿದ್ದರಾಮಯ್ಯ ಅಸಮಾಧಾನ

7
ತೆರಿಗೆ ರೂಪದಲ್ಲಿ ಹೆಚ್ಚಿನ ಪಾಲು; ಕೇಂದ್ರದ ಅನುದಾನ ಅಸಮರ್ಪಕ ಹಂಚಿಕೆ

ದಕ್ಷಿಣಕ್ಕೆ ತಾರತಮ್ಯ: ಸಿದ್ದರಾಮಯ್ಯ ಅಸಮಾಧಾನ

Published:
Updated:
ದಕ್ಷಿಣಕ್ಕೆ ತಾರತಮ್ಯ: ಸಿದ್ದರಾಮಯ್ಯ ಅಸಮಾಧಾನ

ಬೆಂಗಳೂರು: ಕೇಂದ್ರ ಸರ್ಕಾರ ದಕ್ಷಿಣದ ರಾಜ್ಯಗಳಿಗೆ ನೀಡುತ್ತಿರುವ ಅನುದಾನದ ಪ್ರಮಾಣ ಕಡಿಮೆ ಆಗುತ್ತಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಫೇಸ್‌ಬುಕ್‌ನಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಕ್ಷಿಣದ ಆರು ರಾಜ್ಯಗಳು ತೆರಿಗೆ ರೂಪದಲ್ಲಿ ಕೇಂದ್ರಕ್ಕೆ ಹೆಚ್ಚಿನ ಪಾಲು ನೀಡುತ್ತಿವೆ. ಆದರೆ, ಅನುದಾನದ ರೂಪದಲ್ಲಿ ಹಿಂದಕ್ಕೆ ಸಿಗುತ್ತಿರುವುದು ತೀರಾ ಕಡಿಮೆ ಎಂದು ಅವರು ಹೇಳಿದ್ದಾರೆ.

ಉತ್ತರಪ್ರದೇಶ ಸಂದಾಯ ಮಾಡುವ ಪ್ರತಿ ₹ 1 ತೆರಿಗೆಗೆ ಪ್ರತಿಯಾಗಿ ₹ 1.79 ಅನುದಾನ ಪಡೆಯುತ್ತಿದೆ. ಆದರೆ, ಕರ್ನಾಟಕ ಪ್ರತಿ ₹ 1 ತೆರಿಗೆಗೆ ಪ್ರತಿಯಾಗಿ ಕೇವಲ 47 ಪೈಸೆ ಅನುದಾನ ಪಡೆಯುತ್ತಿದೆ. ಪ್ರಾದೇಶಿಕ ಅಸಮಾನತೆ ಸರಿಪಡಿಸಬೇಕು ಎನ್ನುವುದನ್ನು ಒಪ್ಪುತ್ತೇನೆ. ಆದರೆ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ತಾರತಮ್ಯ ಮಾಡಿದರೆ ಹೇಗೆ ಸಹಿಸುವುದು ಎಂದು ಪ್ರಶ್ನಿಸಿದ್ದಾರೆ.

‘ಉತ್ತರ ಮತ್ತು ದಕ್ಷಿಣದ ರಾಜ್ಯಗಳ ಜನಸಂಖ್ಯೆಯ ಅಸಮತೋಲನದ ಬಗ್ಗೆ ಮಾತನಾಡಿರುವ ಸಿದ್ದರಾಮಯ್ಯ, ದಕ್ಷಿಣದ ರಾಜ್ಯಗಳಲ್ಲಿ ಜನಸಂಖ್ಯೆ ಬೆಳವಣಿಗೆ ಸುಸ್ಥಿರ ಹಂತ ತಲುಪಿದೆ. ಉತ್ತರದಲ್ಲಿ ಇದು ಸಾಧ್ಯವಾಗಿಲ್ಲ. ಆದರೆ, ಅನುದಾನ ವಿತರಿಸುವಾಗ ಜನಸಂಖ್ಯೆ ಮಾನದಂಡವಾಗಿದೆ. ಇನ್ನೂ ಎಷ್ಟು ದಿನ ನಾವು ಜನಸಂಖ್ಯೆ ಏರಿಕೆ ತಾಪ ಅನುಭವಿಸಬೇಕು’ ಎಂದು ಕೇಳಿದ್ದಾರೆ.

‘ನಮ್ಮ ರಾಜ್ಯಗಳಿಂದ ಸಂಗ್ರಹವಾದ ತೆರಿಗೆಯಲ್ಲಿ ನಮಗೇ ಹೆಚ್ಚಿನ ಪಾಲು ಸಿಗುವಂತಹ ವ್ಯವಸ್ಥೆ ಜಾರಿಗೆ ಬರಬೇಕು. ಅದರಲ್ಲಿ ಕೇಂದ್ರದಿಂದ ಪ್ರಾಯೋಜಿತವಾದ ಯೋಜನೆಗಳ ಪಾಲುದಾರಿಕೆ ಕಡಿಮೆ ಇರಬೇಕು. ಒಂದೊಮ್ಮೆ ಕೇಂದ್ರ ಯೋಜನೆಗಳು, ತೀರಾ ಅನಿವಾರ್ಯ ವಾದರೆ, ಅವುಗಳನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸಿಕೊಳ್ಳುವ ಅವಕಾಶವಾದರೂ ಇರಬೇಕು’ ಎಂದು ತಿಳಿಸಿದ್ದಾರೆ.

‘ಕರ್ನಾಟಕವು ಯುರೋಪ್ ಖಂಡದ ಹಲವು ದೇಶಗಳಿಗಿಂತ ದೊಡ್ಡದು. ಭಾರತ ಅಭಿವೃದ್ಧಿಯಾಗಬೇಕೆಂದರೆ ಇಲ್ಲಿನ ರಾಜ್ಯಗಳು ಏಳಿಗೆಯಾಗಬೇಕು. ನಾವು ಪ್ರಗತಿ ಹೊಂದಲು ಅವಕಾಶ ನೀಡಬೇಕಾದ ಕಾಲಘಟ್ಟದಲ್ಲಿದ್ದೇವೆ. ಅವುಗಳ ಅನನ್ಯತೆಯ ಪ್ರತಿಪಾದನೆಯನ್ನು ಧಕ್ಕೆ ಎಂದು ಭಾವಿಸಿ, ರಾಜ್ಯಗಳ ಏಳಿಗೆಗೆ ಅಡ್ಡಿಯಾಗಬಾರದು’ ಎಂದು ಕಿವಿ ಮಾತು ಹೇಳಿದ್ದಾರೆ.

**

ಅಸ್ಮಿತೆಗಾಗಿ ಹೋರಾಡುವುದು ತಪ್ಪೇ?

‘ಕನ್ನಡಿಗರು ತಮ್ಮದೇ ನಾಡ ಧ್ವಜ ಹೊಂದುವುದು, ಕನ್ನಡ ಭಾಷೆಗೆ ಪ್ರಾಧಾನ್ಯತೆ ನೀಡುವುದು ಮತ್ತು ನಮ್ಮ ನಾಡಿನ ಅಸ್ಮಿತೆಗಾಗಿ ಹೋರಾಡುವುದು ಸದೃಢ ರಾಷ್ಟ್ರ ನಿರ್ಮಾಣದ ಆಶಯಕ್ಕೆ ಹೇಗೆ ಅಡ್ಡಿ ಆಗುತ್ತದೆ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry