ಇಂಡಿಯನ್ ಸೂಪರ್ ಲೀಗ್‌: ಚೊಚ್ಚಲ ಪ್ರಶಸ್ತಿ ಜಯದತ್ತ ಬಿಎಫ್‌ಸಿ ಚಿತ್ತ

7

ಇಂಡಿಯನ್ ಸೂಪರ್ ಲೀಗ್‌: ಚೊಚ್ಚಲ ಪ್ರಶಸ್ತಿ ಜಯದತ್ತ ಬಿಎಫ್‌ಸಿ ಚಿತ್ತ

Published:
Updated:
ಇಂಡಿಯನ್ ಸೂಪರ್ ಲೀಗ್‌: ಚೊಚ್ಚಲ ಪ್ರಶಸ್ತಿ ಜಯದತ್ತ ಬಿಎಫ್‌ಸಿ ಚಿತ್ತ

ಬೆಂಗಳೂರು: ಪದಾರ್ಪಣೆ ಮಾಡಿದ ವರ್ಷದಲ್ಲೇ ಫೈನಲ್‌ ಪ್ರವೇಶಿಸಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಇಂಡಿಯನ್ ಸೂಪರ್ ಲೀಗ್‌ನ (ಐಎಸ್‌ಎಲ್‌) ಪ್ರಶಸ್ತಿ ಮೇಲೆ ಕಣ್ಣಿಟ್ಟು ಶನಿವಾರ ಕಣಕ್ಕೆ ಇಳಿಯಲಿದೆ.

ಎರಡನೇ ಬಾರಿ ಪ್ರಶಸ್ತಿ ಗಳಿಸುವ ಗುರಿಯೊಂದಿಗೆ ಇಲ್ಲಿಗೆ ಬಂದಿರುವ ಚೆನ್ನೈಯಿನ್ ಎಫ್‌ಸಿ ತಂಡ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಬಿಎಫ್‌ಸಿಗೆ ಸವಾಲೊಡ್ಡಲಿದೆ.

ಪದಾರ್ಪಣೆ ಮಾಡಿದ ವರ್ಷದಲ್ಲೇ ಐ–ಲೀಗ್‌ ಪ್ರಶಸ್ತಿ ಗೆದ್ದ ಬಿಎಫ್‌ಸಿ ತಂಡ ಐಎಸ್‌ಎಲ್‌ನಲ್ಲೂ ಇದೇ ರೀತಿಯ ದಾಖಲೆ ನಿರ್ಮಿಸಲು ತುದಿಗಾಲಲ್ಲಿ ನಿಂತಿದೆ. ತವರಿನಲ್ಲಿ ಆಡಿದ ಪಂದ್ಯಗಳಲ್ಲಿ ಉತ್ತಮ ದಾಖಲೆ ಹೊಂದಿರುವ ಸುನಿಲ್ ಚೆಟ್ರಿ ಬಳಗದವರು ಉದ್ಯಾನನಗರಿಯ ಪ್ರೇಕ್ಷಕರನ್ನು ಮುದಗೊಳಿಸುವ ಹುಮ್ಮಸ್ಸಿನಲ್ಲಿದ್ದಾರೆ.

ತಮ್ಮ ತವರಿನ ಪ್ರೇಕ್ಷಕರನ್ನು ಖುಷಿಪಡಿಸುವ ಒತ್ತಡವೇ ಬಿಎಫ್‌ಸಿಗೆ ತಿರುಗುಬಾಣವಾಗಲಿದೆ ಎಂದು ತಂಡದ ಫಾರ್ವರ್ಡ್ ಆಟಗಾರ ಜೆಜೆ ಲಾಲ್‌ಪೆಖ್ಲುವಾ ಲೆಕ್ಕಾಚಾರ ಮಾಡಿದ್ದಾರೆ. ಈ ಒತ್ತಡದ ಲಾಭ ಪಡೆದುಕೊಂಡು ಪ್ರಶಸ್ತಿ ಗೆಲ್ಲುವುದು ಆ ತಂಡದ ಗುರಿ. 2015ರ ಆವೃತ್ತಿಯಲ್ಲಿ ಇದೇ ತಂತ್ರ ಬಳಸಿ ಗೋವಾ ತಂಡವನ್ನು ಅದರ ನೆಲದಲ್ಲೇ ಮಣಿಸಿ ಪ್ರಶಸ್ತಿ ಗೆದ್ದಿರುವುದು ಚೆನ್ನೈಯಿನ್ ತಂಡದ ಆತ್ಮವಿಶ್ವಾಸಕ್ಕೆ ಕಾರಣ.

ಒಂದು ಐ–ಲೀಗ್ ಮತ್ತು ಎರಡು ಫೆಡರೇಷನ್ ಕಪ್ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದಿರುವ ಬಿಎಫ್‌ಸಿ, ಐಎಸ್‌ಎಲ್‌ ನಲ್ಲಿ ಮೊದಲ ಸಲ  ಆಡಿದ ನಂತರ ಇನ್ನಷ್ಟು ಬಲ ಪಡೆದುಕೊಂಡಿದೆ.

ಯಾವುದೇ ಪರಿಸ್ಥಿತಿಯನ್ನು ನಿಭಾಯಿಸುವ ತಾಕತ್ತು ಹೊಂದಿರುವ ಕೋಚ್ ಆಲ್ಪರ್ಟ್ ರೋಕಾ ಅವರ ಬಲ ತಂಡದ ಯಶಸ್ಸಿನ ಹಿಂದೆ ಇದೆ. ಕಳೆದ 10 ಪಂದ್ಯಗಳಲ್ಲಿ ಸೋಲೇ ಕಾಣದ ದಾಖಲೆ ತಂಡದ ಆಟಗಾರರಿಗೆ ನೈತಿಕ ಶಕ್ತಿ ತುಂಬಿದೆ.

ಭಾರತೀಯ ಆಟಗಾರರ ಮುಖಾಮುಖಿ: ಬಿಎಫ್‌ಸಿ ಮತ್ತು ಚೆನ್ನೈಯಿನ್‌ ಎಫ್‌ಸಿಯಲ್ಲಿ ವಿದೇಶದ ಬಲಿಷ್ಠ ಆಟಗಾರರು ಇದ್ದಾರೆ. ಆದರೂ ಭಾರತೀಯ ಆಟಗಾರರ ನಡುವಿನ ಜಿದ್ದಾಜಿದ್ದಿಗೆ ಫೈನಲ್‌ ಪಂದ್ಯ ಸಾಕ್ಷಿಯಾಗಲಿದೆ. ಸುನಿಲ್ ಚೆಟ್ರಿ ಮತ್ತು ಜೆಜೆ ಲಾಲ್‌ಪೆಖ್ಲುವಾ ಕ್ರಮವಾಗಿ ಬಿಎಫ್‌ಸಿ ಮತ್ತು ಚೆನ್ನೈಯಿನ್‌ ತಂಡಗಳ ಶಕ್ತಿ. ಸೆಮಿಫೈನಲ್‌ನ ಎರಡನೇ ಲೆಗ್ ಪಂದ್ಯದಲ್ಲಿ ಚೆಟ್ರಿ ರೋಮಾಂಚಕ ಹ್ಯಾಟ್ರಿಕ್ ಗೋಲು ಗಳಿಸಿದ್ದರೆ ಗೋವಾ ಎದುರಿನ ಸೆಮಿಫೈನಲ್‌ ಪಂದ್ಯದಲ್ಲಿ ಲಾಲ್‌ಪೆಖ್ಲುವಾ ಎರಡು ಗೋಲು ಗಳಿಸಿ ತಂಡದ ಜಯಕ್ಕೆ ಕಾರಣರಾಗಿದ್ದರು.

ಲೀಗ್‌ನಲ್ಲಿ ಹೆಚ್ಚು ಗೋಲು ಗಳಿಸಿದ ಭಾರತೀಯ ಆಟಗಾರರ ಪೈಕಿ ಇವರಿಬ್ಬರು ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿದ್ದಾರೆ. ಇಬ್ಬರೂ ಶನಿವಾರದ ಪ್ರಮುಖ ಆಕರ್ಷಣೆಯಾಗಲಿದ್ದಾರೆ.

ಅತಿ ಹೆಚ್ಚು ಗೋಲು ತಡೆದವರ ಪೈಕಿ ಕ್ರಮವಾಗಿ ಎರಡು ಮತ್ತು ಐದನೇ ಸ್ಥಾನದಲ್ಲಿರುವ ಚೆನ್ನೈಯಿನ್ ತಂಡದ ಕರಣ್‌ಜೀತ್ ಸಿಂಗ್ ಹಾಗೂ ಬಿಎಫ್‌ಸಿಯ ಗುರುಪ್ರೀತ್ ಸಿಂಗ್ ಸಂಧು ಕೂಡ ಫೈನಲ್‌ ಪಂದ್ಯದಲ್ಲಿ ಮಿಂಚುವ ಹುಮ್ಮಸ್ಸಿನಲ್ಲಿದ್ದಾರೆ. ಕರಣ್‌ಜೀತ್‌ ಅವರನ್ನು ಚಕಿತಗೊಳಿಸುವ ಜವಾಬ್ದಾರಿ ಚೆಟ್ರಿ, ಉದಾಂತ ಸಿಂಗ್ ಮತ್ತು ಮಿಕು ಅವರ ಮೇಲಿದೆ.

ಗುರುಪ್ರೀತ್ ಸಿಂಗ್‌ ಅವರ ದಿಕ್ಕು ತಪ್ಪಿಸುವ ಸವಾಲು ಲಾಲ್‌ಪೆಖ್ಲುವಾ, ಧನಪಾಲ್‌ ಗಣೇಶ್‌ ಮತ್ತು ಅನಿರುದ್ಧ್ ಥಾಪ ಅವರ ಮುಂದೆ ಇದೆ. ಬಿಎಫ್‌ಸಿಯ ಗಾಯಗೊಂಡ ಡಿಫೆಂಡರ್ ಹರ್ಮನ್‌ಜ್ಯೋತ್ ಖಾಬ್ರಾ ಆಡುವುದು ಅನುಮಾನ. ಆದರೂ ರಾಹುಲ್ ಭೆಕೆ, ನಿಶುಕುಮಾರ್‌, ಶುಭಾಶಿಷ್ ಬೋಸ್‌ ಮತ್ತು ಎರಿಕ್‌ ಪಾರ್ಟಲು ನೇತೃತ್ವದಲ್ಲಿ ಈ ತಂಡ ಎದುರಾಳಿಗಳಿಗೆ ತಡೆಯೊಡ್ಡಲು ಸಮರ್ಥವಾಗಿದೆ.

ಪಂದ್ಯ ಆರಂಭ: ರಾತ್ರಿ 8.00

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ಮತ್ತು ಹಾಟ್ ಸ್ಟಾರ್‌ ಆ್ಯಪ್

***

ಗುರುಪ್ರೀತ್ ಸಿಂಗ್ ಸಂಧುಗೆ ಚಿನ್ನದ ಕೈಗವಸು?

ಗೋಲ್‌ ಕೀಪಿಂಗ್ ಮೂಲಕ ಬಿಎಫ್‌ಸಿಗೆ ಲೀಗ್ ಉದ್ದಕ್ಕೂ ಉತ್ತಮ ಕಾಣಿಕೆ ನೀಡಿರುವ ಗುರುಪ್ರೀತ್ ಸಿಂಗ್ ಸಂಧು ಈ ಬಾರಿಯ ಚಿನ್ನದ ಕೈ ಗವಸು ಪ್ರಶಸ್ತಿ ಗಳಿಸುವ ಸಾಧ್ಯತೆ ಇದೆ.

ಲೀಗ್‌ನಲ್ಲಿ ಹೆಚ್ಚು ಗೋಲು ತಡೆದವರ ಪಟ್ಟಿಯಲ್ಲಿ ಸಂಧು ಐದನೇ ಸ್ಥಾನದಲ್ಲಿದ್ದಾರೆ. ಆದರೆ ಉತ್ತಮ ಗೋಲ್‌ಕೀಪರ್‌ಗಳ ಪಟ್ಟಿಯಲ್ಲಿ ಅವರೇ ಮೊದಲಿಗರು.

18 ಪಂದ್ಯಗಳಲ್ಲಿ 44 ಗೋಲುಗಳನ್ನು ತಡೆದಿರುವ ಅವರು 14 ಗೋಲುಗಳನ್ನು ಮಾತ್ರ ಬಿಟ್ಟುಕೊಟ್ಟಿದ್ದಾರೆ. ಏಳು ಪಂದ್ಯಗಳಲ್ಲಿ ಒಂದು ಗೋಲು ಕೂಡ ಬಿಟ್ಟುಕೊಡದೆ ಗಮನ ಸೆಳೆದಿದ್ದಾರೆ. ಒಟ್ಟು 1566 ನಿಮಿಷ ಅಂಗಣದಲ್ಲಿದ್ದ ಸಂಧು ಸರಾಸರಿ 111.86 ನಿಮಿಷಗಳಿಗೆ ಒಂದರಂತೆ ಗೋಲು ಬಿಟ್ಟುಕೊಟ್ಟಿದ್ದಾರೆ.

ಉತ್ತಮ ಗೋಲ್‌ಕೀಪರ್‌ಗಳ ಪಟ್ಟಿಯ ಎರಡನೇ ಸ್ಥಾನದಲ್ಲಿ ಜೆಮ್‌ಶೆಡ್‌ಪುರ ಎಫ್‌ಸಿಯ ಸುಬ್ರತಾ ಪಾಲ್ ಇದ್ದಾರೆ. ಅವರು ಕೂಡ 18 ಪಂದ್ಯಗಳಲ್ಲಿ 44 ಗೋಲುಗಳನ್ನು ತಡೆದಿದ್ದಾರೆ. 15 ಗೋಲು ಬಿಟ್ಟುಕೊಟ್ಟಿರುವ ಅವರು ಏಳು ಪಂದ್ಯಗಳಲ್ಲಿ ಕ್ಲೀನ್ ಶೀಟ್‌ ಹೊಂದಿದ್ದಾರೆ.

ಚೆನ್ನೈಯಿನ್ ಎಫ್‌ಸಿಯ ಕರಣ್‌ಜೀತ್ ಸಿಂಗ್‌ ನಾಲ್ಕನೇ ಸ್ಥಾನದಲ್ಲಿದ್ದಾರೆ. 19 ಪಂದ್ಯಗಳಲ್ಲಿ 49 ಗೋಲು ತಡೆದಿರುವ ಅವರು 20 ಗೋಲು ಬಿಟ್ಟುಕೊಟ್ಟಿದ್ದು ಏಳು ಕ್ಲೀನ್ ಶೀಟ್ ಹೊಂದಿದ್ದಾರೆ.

***

ಚಿನ್ನದ ಶೂ: ಮಿಕು, ಚೆಟ್ರಿ ದೂರ

ಚಿನ್ನದ ಶೂ ಪ್ರಶಸ್ತಿ ಗೋವಾ ಎಫ್‌ಸಿಯ ಫೆರಾನ್ ಕೊರೊಮಿನಾಸ್ ಪಾಲಾಗುವುದು ಖಚಿತ. 20 ಪಂದ್ಯಗಳಲ್ಲಿ 18 ಗೋಲು ಗಳಿಸಿರುವ ಅವರನ್ನು ಹಿಂದಿಕ್ಕಬೇಕಾದರೆ ಬಿಎಫ್‌ಸಿಯ ಮಿಕು ಫೈನಲ್‌ನಲ್ಲಿ ಐದು ಗೋಲು ಗಳಿಸಬೇಕು. 19 ಪಂದ್ಯ ಆಡಿದ ಮಿಕು ಖಾತೆಯಲ್ಲಿ 14 ಗೋಲುಗಳು ಇವೆ. ಮೂರನೇ ಸ್ಥಾನವನ್ನು ಬಿಎಫ್‌ಸಿ ನಾಯಕ ಸುನಿಲ್ ಚೆಟ್ರಿ ಒಳಗೊಂಡಂತೆ ಮೂವರು ಹಂಚಿಕೊಂಡಿದ್ದಾರೆ. ಇವರು ತಲಾ 13 ಗೋಲು ಗಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry