ಪಿಎನ್‌ಬಿ: ಮುಚ್ಚಿದ ಲಕೋಟೆಯಲ್ಲಿ ವರದಿಗೆ ಕೇಂದ್ರ ಸರ್ಕಾರದ ಆಕ್ಷೇಪ

7
ಅಟಾರ್ನಿ ಜನರಲ್‌ರನ್ನು ತರಾಟೆಗೆ ತೆಗೆದುಕೊಂಡ ‘ಸುಪ್ರೀಂ’

ಪಿಎನ್‌ಬಿ: ಮುಚ್ಚಿದ ಲಕೋಟೆಯಲ್ಲಿ ವರದಿಗೆ ಕೇಂದ್ರ ಸರ್ಕಾರದ ಆಕ್ಷೇಪ

Published:
Updated:
ಪಿಎನ್‌ಬಿ: ಮುಚ್ಚಿದ ಲಕೋಟೆಯಲ್ಲಿ ವರದಿಗೆ ಕೇಂದ್ರ ಸರ್ಕಾರದ ಆಕ್ಷೇಪ

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ (ಪಿಎನ್‌ಬಿ) ₹13 ಸಾವಿರ ಕೋಟಿ ವಂಚನೆ ಪ್ರಕರಣದ ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌, ಸಿಬಿಐಗೆ ನೀಡಿದ ಆದೇಶಕ್ಕೆ ಕೇಂದ್ರ ಸರ್ಕಾರ ಶುಕ್ರವಾರ ಆಕ್ಷೇಪ ವ್ಯಕ್ತಪಡಿಸಿದೆ.

ನ್ಯಾಯಾಲಯವು ಪ್ರಕರಣದ ವಿಚಾರಣೆ ಮತ್ತು ಉಸ್ತುವಾರಿಯನ್ನು ಏಕಕಾಲಕ್ಕೆ ಮಾಡುವಂತಿಲ್ಲ ಎಂದು ಸರ್ಕಾರವು ಸುಪ್ರೀಂ ಕೋರ್ಟ್‌ಗೆ ವಿವರಣೆ ನೀಡಿದೆ.

ಪಿಎನ್‌ಬಿ ಹಗರಣದ ಸ್ವತಂತ್ರ ತನಿಖೆ ಕೋರಿ ವಕೀಲ ವಿನೀತ್‌ ಧಂಡಾ ಎಂಬುವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಗೆ ಸರ್ಕಾರದ ಪ್ರತಿನಿಧಿ ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ವಿರೋಧ ವ್ಯಕ್ತಪಡಿಸಿದರು.

ಎಷ್ಟು ಸಮಂಜಸ:  ತನಿಖೆ ಪ್ರಗತಿಯಲ್ಲಿರುವಾಗ ನ್ಯಾಯಾಲಯಗಳು ಸರ್ಕಾರದಿಂದ ವರದಿ ಕೋರುವುದು ಎಷ್ಟು ಸಮಂಜಸ ಎಂದು ಅವರು, ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠವನ್ನು ಪ್ರಶ್ನಿಸಿದರು.

ತನಿಖಾ ಸಂಸ್ಥೆಗಳು ಪ್ರಕರಣದ ತನಿಖೆ ಆರಂಭಿಸುವ ಮುನ್ನವೇ ಯಾರೋ  ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುತ್ತಾರೆ. ಸಂಬಂಧ ಇಲ್ಲದವರು ಪ್ರಕರಣದ ತನಿಖೆಯ ಸ್ಥಿತಿಗತಿ ವರದಿಯ ಬಗ್ಗೆ ಮಾಹಿತಿ ನೀಡುವಂತೆ ಕೋರುತ್ತಾರೆ. ಇದು ಎಷ್ಟು ನ್ಯಾಯಸಮ್ಮತ ಎಂದು ವೇಣುಗೋಪಾಲ್‌ ಪ್ರಶ್ನಿಸಿದರು.

ಇಂತಹ ಕ್ರಮಗಳು ತನಿಖಾ ಸಂಸ್ಥೆಯ ನೈತಿಕ ಬಲ ಮತ್ತು ಆತ್ಮಸ್ಥೈರ್ಯ ಉಡುಗಿಸುತ್ತವೆ. ನ್ಯಾಯಾಲಯಗಳು ಇಂತಹ ಅರ್ಜಿಗಳನ್ನು ಏಕೆ ಪುರಸ್ಕರಿಸುತ್ತವೆಯೋ ಅರ್ಥವಾಗುತ್ತಿಲ್ಲ ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದರು.

ಇದರಿಂದ ಕೆರಳಿದ ನ್ಯಾಯಮೂರ್ತಿಗಳು, ‘ಸಾಂವಿಧಾನಿಕ ಹುದ್ದೆಯಲ್ಲಿರುವ ಅಟಾರ್ನಿ ಜನರಲ್‌ ವೇಣುಗೋಪಾಲ್‌ ಅವರ ವಾದ ಸಮರ್ಥನೀಯವಲ್ಲ. ನ್ಯಾಯಾಲಯಗಳಲ್ಲಿ ಸರಿಯಾದ ಭಾಷೆ ಬಳಸಬೇಕು’ ಎಂದು ತರಾಟೆಗೆ ತೆಗೆದುಕೊಂಡರು. ಪ್ರಕರಣದ ವಿಚಾರಣೆಯನ್ನು ಏಪ್ರಿಲ್‌ 9ಕ್ಕೆ ಮುಂದೂಡಿದರು.

ನೀರವ್‌ ಬಂಧನಕ್ಕೆ ಮನವಿ: ಪಿಎನ್‌ಬಿಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರಾಭರಣ ಉದ್ಯಮಿ ನೀರವ್‌ ಮೋದಿಯನ್ನು ಎರಡು ತಿಂಗಳ ಒಳಗಾಗಿ ಹಿಡಿದು ತರುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರ ವಿನೀತ್‌ ಧಂಡಾ ಅವರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಪಿಎನ್‌ಬಿ ಹಗರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಬೇಕು. ಪಿಎನ್‌ಬಿ ಆಡಳಿತ ವರ್ಗವನ್ನೂ ವಿಚಾರಣೆಗೆ ಒಳಪಡಿಸಬೇಕು. ದೊಡ್ಡ ಮೊತ್ತದ ಸಾಲ ಮಂಜೂರಾತಿ, ವಸೂಲಾತಿಗೆ ಮಾರ್ಗಸೂಚಿ ರಚಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅವರು ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry