ವಿಭಜನೆಯತ್ತ ಪಂಜಾಬ್‌ ಎಎಪಿ

ಗುರುವಾರ , ಮಾರ್ಚ್ 21, 2019
32 °C
ಕೇಜ್ರಿವಾಲ್‌ ಕ್ಷಮಾಪಣೆಗೆ ಆಕ್ರೋಶ: ಅಧ್ಯಕ್ಷ ಸ್ಥಾನಕ್ಕೆ ಮಾನ್‌ ರಾಜೀನಾಮೆ

ವಿಭಜನೆಯತ್ತ ಪಂಜಾಬ್‌ ಎಎಪಿ

Published:
Updated:
ವಿಭಜನೆಯತ್ತ ಪಂಜಾಬ್‌ ಎಎಪಿ

ನವದೆಹಲಿ/ಚಂಡಿಗಡ: ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಗುರುವಾರ ಶಿರೋಮಣಿ ಅಕಾಲಿದಳ ಮುಖಂಡ ಬಿಕ್ರಂ ಸಿಂಗ್ ಮಜಿಥಿಯಾ ಅವರ ಕ್ಷಮಾಪಣೆ ಕೋರಿದ ಬೆನ್ನಲ್ಲೇ ಪಂಜಾಬ್‌ ಆಮ್‌ ಆದ್ಮಿ ಪಕ್ಷದಲ್ಲಿ ಬಂಡಾಯ ಭುಗಿಲೆದ್ದಿದೆ.

ಮಜಿಥಿಯಾ ಮಾದಕ ವಸ್ತು ಮಾರಾಟ ಜಾಲದಲ್ಲಿ ತೊಡಗಿದ್ದಾರೆ ಎಂದು ಈ ಹಿಂದೆ ತಾವು ಮಾಡಿದ ಆರೋಪಕ್ಕಾಗಿ ಕೇಜ್ರಿವಾಲ್‌ ಲಿಖಿತ ಕ್ಷಮಾಪಣೆ ಕೋರಿದ್ದರು. ಇದು ಪಂಜಾಬ್‌ ಎಎಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.

ಕೇಜ್ರಿವಾಲ್‌ ಕ್ಷಮಾಪಣೆ ಹೊರಬೀಳುತ್ತಲೇ ಸಂಗ್ರೂರ್‌ ಸಂಸದ ಭಗವಂತ್‌ ಸಿಂಗ್‌ ಮಾನ್‌ ಪಂಜಾಬ್‌ ಎಎಪಿ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಅದಾದ ಕೆಲವು ಗಂಟೆಗಳಲ್ಲಿ ಪಕ್ಷದ ಸಹ ಅಧ್ಯಕ್ಷ ಅಮನ್‌ ಅರೋರ್‌ ಕೂಡ ಹುದ್ದೆಯಿಂದ ಕೆಳಗಿಳಿದಿದ್ದಾರೆ.

ಶುಕ್ರವಾರ ರಾತ್ರಿಯ ವೇಳೆಗೆ ಪಂಜಾಬ್‌ ಎಎಪಿ ವಿಭಜನೆಯತ್ತ ಹೆಜ್ಜೆ ಹಾಕಿದ್ದು, 20 ಶಾಸಕರ ಪೈಕಿ 15ಕ್ಕೂ ಹೆಚ್ಚು ಶಾಸಕರು ಹೊಸ ಪಕ್ಷ ಕಟ್ಟುವ ಪರ ಒಲವು ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂಧಾನಕ್ಕೆ ಶರಣಾದ ಕೇಜ್ರಿವಾಲ್‌:  ಮಜಿಥಿಯಾ, ಕೇಂದ್ರ ಸಚಿವರಾದ ಸಚಿವ ಅರುಣ್‌ ಜೇಟ್ಲಿ, ನಿತಿನ್‌ ಗಡ್ಕರಿ ಸೇರಿದಂತೆ 20ಕ್ಕೂ ಹೆಚ್ಚು ಜನರು ಕೇಜ್ರಿವಾಲ್‌ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡಿದ್ದಾರೆ. ಇವುಗಳಿಂದ ಹೊರಬರಲು ಕೇಜ್ರಿವಾಲ್‌ ಅವರು ಮಜಿಥಿಯಾ ಜತೆ ಸಂಧಾನಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಜಾಲತಾಣದಲ್ಲಿ ಮಾನ್‌ ರಾಜೀನಾಮೆ: ಭಗಂವತ್‌ ಸಿಂಗ್‌ ಮಾನ್‌ ಅವರು ಸಾಮಾಜಿಕ ಜಾಲತಾಣದಲ್ಲಿಯೇ ತಮ್ಮ ಹುದ್ದೆಗೆ ರಾಜೀನಾಮೆ ಪ್ರಕಟಿಸಿದ್ದಾರೆ.

‘ಮಾದಕ ವಸ್ತುಗಳ ಮಾರಾಟ ಜಾಲ ಮತ್ತು ಎಲ್ಲ ರೀತಿಯ ಭ್ರಷ್ಟಾಚಾರದ ವಿರುದ್ಧ ಪಂಜಾಬ್‌ನ ಆಮ್‌ ಆದ್ಮಿಯಾಗಿ ನನ್ನ ಹೋರಾಟ ಮುಂದುವರಿಯಲಿದೆ’ ಎಂದು ಅವರು ಹೇಳಿದ್ದಾರೆ.

‘ಕೇಜ್ರಿವಾಲ್‌ ಅವರ ಕ್ಷಮಾಪಣೆ ನಿಜಕ್ಕೂ ಆಶ್ಚರ್ಯ ಮೂಡಿಸಿದೆ. ರಾಜ್ಯದಲ್ಲಿ ಹೆಚ್ಚಿರುವ ಮಾದಕ ವಸ್ತುಗಳ ಹಾವಳಿ ವಿರುದ್ಧ ಪಕ್ಷದ ಹೋರಾಟ ನಿಲ್ಲುವುದಿಲ್ಲ’ ಎಂದು ಪಂಜಾಬ್‌ ವಿಧಾನಸಭೆಯಲ್ಲಿ ಎಎಪಿ ನಾಯಕರಾಗಿರುವ ಸುಖಪಾಲ್‌ ಸಿಂಗ್‌ ಖೈರಾ ಹೇಳಿದ್ದಾರೆ.

ಎಎಪಿ ಮಿತ್ರಪಕ್ಷ ಲೋಕ್‌ ಇನ್ಸಾಫ್‌ ಪಾರ್ಟಿ (ಎಲ್‌ಐಪಿ) ಕೂಡ ಈ ಬೆಳವಣಿಗೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದೆ.

ಪಕ್ಷಕ್ಕೆ ಮುಜುಗರ: ಕೇಜ್ರಿವಾಲ್‌ ಅವರ ಈ ಅನಿರೀಕ್ಷಿತ ಕ್ಷಮಾಪಣೆಯಿಂದಾಗಿ ಪಂಜಾಬ್‌ನಲ್ಲಿ ಪಕ್ಷಕ್ಕೆ ಮುಜುಗರವಾಗಿದೆ. ಮಾದಕ ವಸ್ತುಗಳ ವಿರುದ್ಧ ಪಕ್ಷ ನಡೆಸುತ್ತಿರುವ ಹೋರಾಟಕ್ಕೆ ತೀವ್ರ ಹಿನ್ನಡೆಯಾಗಿದೆ ಎಂದು ಪಕ್ಷದ ಶಾಸಕರು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‘ಕೇಜ್ರಿವಾಲ್‌ ಅವರು ಈ ರೀತಿ ಒಬ್ಬ ಮಾದಕ ವಸ್ತು ಕಳ್ಳಸಾಗಾಣಿಕೆದಾರನ ಮುಂದೆ ಮಂಡಿಯೂರುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಇದು ನಮ್ಮೆಲ್ಲರನ್ನೂ ತಲೆ ತಗ್ಗಿಸುವಂತೆ ಮಾಡಿದೆ. ಕ್ಷಮಾಪಣೆ ಕೋರುವ ಮುನ್ನ ಕೇಜ್ರಿವಾಲ್‌ ನಮ್ಮೊಂದಿಗೆ ಚರ್ಚಿಸಿಲ್ಲ’ ಎಂದು ಅವರು ಅಸಮಾಧಾನ ಹೊರ ಹಾಕಿದ್ದಾರೆ.

‘ಮಜಿಥಿಯಾ ಅವರು ಮಾದಕ ವಸ್ತು ಕಳ್ಳ ಸಾಗಾಣಿಕೆದಾರ. ಜೈಲಿನಲ್ಲಿರಲು ಅರ್ಹ ವ್ಯಕ್ತಿ’ ಎಂದು ಎಎಪಿ ರಾಜ್ಯಸಭಾ ಸದಸ್ಯ ಸಂಜಯ್‌ ಸಿಂಗ್‌ ಪ್ರತಿಕ್ರಿಯಿಸಿದ್ದಾರೆ.

***

ಅರವಿಂದ್‌ ಕೇಜ್ರಿವಾಲ್‌ ಅವರು ಮಾದಕ ವಸ್ತು ಕಳ್ಳಸಾಗಣೆದಾರನ ಕ್ಷಮಾಪಣೆ ಕೋರುವ ಮೂಲಕ ಪಂಜಾಬ್‌ನಲ್ಲಿ ಎಎಪಿಯ ಕತ್ತು ಹಿಸುಕಿದ್ದಾರೆ.

- ನವಜ್ಯೋತ್‌ ಸಿಂಗ್‌ ಸಿಧು, ಕಾಂಗ್ರೆಸ್‌ ನಾಯಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry