4
ಮೈತ್ರಿಕೂಟ ನಿರ್ವಹಣೆ: ನಾಯಕತ್ವದ ನಿಲುವಿಗೆ ಬಿಜೆಪಿಯಲ್ಲಿ ಮೆಚ್ಚುಗೆ

ಮಿತ್ರರಿಗೆ ಮಣಿಯದ ಮೋದಿ

Published:
Updated:
ಮಿತ್ರರಿಗೆ ಮಣಿಯದ ಮೋದಿ

ನವದೆಹಲಿ: 2014ರ ಲೋಕಸಭಾ ಚುನಾವಣೆ ಬಳಿಕ ಎನ್‌ಡಿಎ ಮೈತ್ರಿಕೂಟ ಸೇರಿಕೊಂಡ ಪಕ್ಷಗಳನ್ನು ನಿಭಾಯಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎಡವಿದ್ದಾರೆಯೇ ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ. ಶಿವಸೇನಾ ಮತ್ತು ತೆಲುಗು ದೇಶಂ ಪಾರ್ಟಿಯ ವಿಚಾರದಲ್ಲಿ ಮೋದಿ ಅವರು ತಳೆದ ನಿಲುವು ಈ ಪ್ರಶ್ನೆಗಳಿಗೆ ಕಾರಣವಾಗಿದೆ.

ಆದರೆ, ಇದು ಬಿಜೆಪಿಯ ಹಿರಿಯ ಮುಖಂಡರ ರಾಜಕೀಯ ಚಾಣಾಕ್ಷತೆ ಎಂದೇ ಆ ಪಕ್ಷದ ಹಲವು ಮುಖಂಡರು ಭಾವಿಸಿದ್ದಾರೆ. ಮೈತ್ರಿಕೂಟದ ಪಕ್ಷಗಳ ಒತ್ತಡ ತಂತ್ರಕ್ಕೆ ಮಣಿಯುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಬಿಜೆಪಿ ನಾಯಕತ್ವ ನೀಡಿದೆ ಎಂದು ಈ ಮುಖಂಡರು ಹೇಳುತ್ತಿದ್ದಾರೆ.

ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ನಿರಂತರ ಒತ್ತಡಕ್ಕೆ ಮಣಿಯಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದೇ ಟಿಡಿಪಿ ಮತ್ತು ಬಿಜೆಪಿಯ ನಡುವಣ ಮೈತ್ರಿ ಮುರಿಯುವುದಕ್ಕೆ ಇರುವ ಮುಖ್ಯ ಕಾರಣ. ಆರ್ಥಿಕ ಶಿಸ್ತು ಮತ್ತು ಔಚಿತ್ಯ ಮರೆತು ನಾಯ್ಡು ಅವರು ಹಣಕ್ಕಾಗಿ ನಿರಂತರವಾಗಿ ಬೇಡಿಕೆ ಇರಿಸುತ್ತಲೇ ಇದ್ದಾರೆ ಎಂಬ ಬಗ್ಗೆ ಪ್ರಧಾನಿಗೆ ಅಸಮಾಧಾನವೂ ಇತ್ತು ಎನ್ನಲಾಗಿದೆ.

ಬಿಕ್ಕಟ್ಟು ಆರಂಭವಾಗುತ್ತಿದ್ದಂತೆಯೇ ಹಿರಿಯ ಸಚಿವರ ಜತೆಗೆ ಪ್ರಧಾನಿ ಸಮಾಲೋಚನೆ ನಡೆಸಿದ್ದಾರೆ. ನಾಯ್ಡು ಅವರ ಬೇಡಿಕೆಗಳಿಗೆ ಮಣಿಯುವುದರಿಂದ ರಾಜಕೀಯವಾಗಿ ಯಾವುದೇ ಲಾಭ ಆಗದು ಎಂಬ ನಿರ್ಧಾರಕ್ಕೆ ಪ್ರಧಾನಿ ಬಂದಿದ್ದಾರೆ.

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನ ನೀಡುವ ಭರವಸೆಯಿಂದ ಕೇಂದ್ರ ಹಿಂದೆ ಸರಿದಿದೆ ಎಂದು ನಾಯ್ಡು ಅವರು ಬಹಿರಂಗವಾಗಿ ಹೇಳುತ್ತಿದ್ದಾರೆ. ಆದರೆ, ಈಗಾಗಲೇ ನೀಡಿದ ಅನುದಾನದಲ್ಲಿ ಆಗಿರುವ ಕೆಲಸಗಳ ಮೇಲ್ವಿಚಾರಣೆಯನ್ನು ಕೇಂದ್ರ ಸರ್ಕಾರ ಮಾಡುವುದು ನಾಯ್ಡು ಅವರಿಗೆ ಬೇಕಿಲ್ಲ. ಅದಕ್ಕಾಗಿಯೇ ಅವರು ಎನ್‌ಡಿಎಯಿಂದ ಹೊರಗೆ ಹೋಗುವ ನಿರ್ಧಾರ ಮಾಡಿದ್ದಾರೆ ಎಂದು ಕೇಂದ್ರದ ಕೆಲವು ಸಚಿವರು ಹೇಳುತ್ತಿದ್ದಾರೆ.

ಆಂಧ್ರಪ್ರದೇಶ ವಿಭಜನೆಯನ್ನು ಮುಂದಿಟ್ಟುಕೊಂಡು 2014ರ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಖಳನಾಯಕನ ಸ್ಥಾನದಲ್ಲಿ ಕೂರಿಸಲು ನಾಯ್ಡು ಯಶಸ್ವಿಯಾಗಿದ್ದರು. ಅದೇ ರೀತಿಯಲ್ಲಿ, ರಾಜ್ಯದ ಅಭಿವೃದ್ಧಿಯ ತಮ್ಮ ಕನಸನ್ನು ಸಾಕಾರಗೊಳಿಸಲು ಬಿಜೆಪಿ ಅಡ್ಡಿಯಾಯಿತು ಎಂದು 2019ರ ಚುನಾವಣೆಯಲ್ಲಿ ಜನರಿಗೆ ಹೇಳುವುದು ನಾಯ್ಡು ಉದ್ದೇಶ ಎಂದು ಬಿಜೆಪಿಯ ಮುಖಂಡರು ಹೇಳುತ್ತಾರೆ.

ವೈಎಸ್‌ಆರ್‌ ಕಾಂಗ್ರೆಸ್‌ ಒಡ್ಡುತ್ತಿರುವ ಪ್ರಬಲ ಸ್ಪರ್ಧೆಯ ಮುಂದೆ ಗೆಲ್ಲಲು ನಾಯ್ಡು ಅವರಿಗೆ ಇರುವುದು ಇದೊಂದೇ ದಾರಿ ಎಂದು ಬಿಜೆಪಿಯ ಹಿರಿಯ ಸಚಿವರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಆಂಧ್ರಪ‍್ರದೇಶದಲ್ಲಿ ಬಿಜೆಪಿ ಬೆಳೆಯಲು ಇದೊಂದು ಸದವಕಾಶ ಎಂದೂ ಕೆಲವು ಮುಖಂಡರು ಭಾವಿಸಿದ್ದಾರೆ.

***

ಬಿಜೆಪಿಗೆ ಎಚ್ಚರಿಕೆ

ಉಪಚುನಾವಣೆಗಳ ಸೋಲು ಮತ್ತು ಮಿತ್ರ ಪಕ್ಷಗಳ ಅತೃಪ್ತಿಯನ್ನು ಲಘುವಾಗಿ ಪರಿಗಣಿಸಬಾರದು ಎಂದು ಎನ್‌ಡಿಎ ಭಾಗವಾಗಿರುವ ಎಲ್‌ಜೆಪಿ ಮತ್ತು ಅಕಾಲಿ ದಳಗಳು ಬಿಜೆಪಿಗೆ ಹೇಳಿವೆ.

ಮಿತ್ರಪಕ್ಷಗಳಲ್ಲಿ ಉಂಟಾಗಿರುವ ಅತೃಪ್ತಿಯನ್ನು ಪರಿಹರಿಸದಿದ್ದರೆ 2019ರ ಲೋಕಸಭೆ ಚುನಾವಣೆ ಕಠಿಣವಾಗಬಹುದು ಎಂದು ಕೇಂದ್ರ ಸಚಿವ ರಾಮ್‌ವಿಲಾಸ್‌ ಪಾಸ್ವಾನ್‌ ಮಗ, ಎಲ್‌ಜೆಪಿ ಸಂಸದ ಚಿರಾಗ್‌ ಪಾಸ್ವಾನ್‌ ಹೇಳಿದ್ದಾರೆ.

2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನಲ್ಲಿ ಪ್ರಾದೇಶಿಕ ಪಕ್ಷಗಳು ಮಹತ್ವದ ಪಾತ್ರ ವಹಿಸಿವೆ. ಆದರೆ ಈ ಪಕ್ಷಗಳನ್ನು ಈಗ ನಿರ್ಲಕ್ಷಿಸಲಾಗುತ್ತಿದೆ ಎಂದು ಅಕಾಲಿದಳದ ಹಿರಿಯ ಮುಖಂಡ ನರೇಶ್‌ ಗುಜ್ರಾಲ್‌ ಹೇಳಿದ್ದಾರೆ.

ಏನೇ ಆದರೂ ಪಂಜಾಬ್‌ನಲ್ಲಿ ಅಕಾಲಿ ದಳವು ಬಿಜೆಪಿ ಜತೆಗಿನ ಮೈತ್ರಿಯನ್ನು ಕಡಿದುಕೊಳ್ಳುವುದಿಲ್ಲ. ಯಾಕೆಂದರೆ, ಇದು ರಾಜಕೀಯ ಮೈತ್ರಿ ಅಷ್ಟೇ ಅಲ್ಲ, ಸಾಮಾಜಿಕ ಮೈತ್ರಿ ಕೂಡ ಹೌದು ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry