ಹಣದ ಅಕ್ರಮ ಹರಿವು ತಡೆಯಲು ತಂಡ: ಅಧಿಕಾರಿ ಬಿ.ಆರ್‌ ಬಾಲಕೃಷ್ಣನ್‌ ಹೇಳಿಕೆ

ಗುರುವಾರ , ಮಾರ್ಚ್ 21, 2019
27 °C
ಆದಾಯ ತೆರಿಗೆ ಇಲಾಖೆ ತನಿಖಾ ವಿಭಾಗದಿಂದ ಕ್ರಮ

ಹಣದ ಅಕ್ರಮ ಹರಿವು ತಡೆಯಲು ತಂಡ: ಅಧಿಕಾರಿ ಬಿ.ಆರ್‌ ಬಾಲಕೃಷ್ಣನ್‌ ಹೇಳಿಕೆ

Published:
Updated:
ಹಣದ ಅಕ್ರಮ ಹರಿವು ತಡೆಯಲು ತಂಡ: ಅಧಿಕಾರಿ ಬಿ.ಆರ್‌ ಬಾಲಕೃಷ್ಣನ್‌ ಹೇಳಿಕೆ

ಮಂಗಳೂರು: ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದ್ದು, ಈ ಸಂದರ್ಭದಲ್ಲಿ ಹಣದ ಪ್ರಭಾವವನ್ನು ತಡೆಗಟ್ಟಲು ಆದಾಯ ತೆರಿಗೆ ಇಲಾಖೆಯ ತನಿಖಾ ವಿಭಾಗದ ವತಿಯಿಂದ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಪ್ರತ್ಯೇಕ ತಂಡವನ್ನು ರಚಿಸಲಾಗುವುದು ಎಂದು ಇಲಾಖೆಯ ಕರ್ನಾಟಕ, ಗೋವಾ ವಿಭಾಗದ ಪ್ರಧಾನ ನಿರ್ದೇಶಕ (ತನಿಖಾ ವಿಭಾಗ) ಬಿ.ಆರ್‌.ಬಾಲಕೃಷ್ಣನ್‌ ತಿಳಿಸಿದರು.

ಇಲ್ಲಿ ಶುಕ್ರವಾರ ವಿಭಾಗದ ಹೊಸ ಕಚೇರಿ ಉದ್ಘಾಟಿಸಿದ ಬಳಿಕ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

ಕೆಲವು ರಾಜ್ಯಗಳಲ್ಲಿ ಚುನಾವಣಾ ಸಂದರ್ಭದಲ್ಲಿ ಹಣದ ಹೊಳೆ ಹರಿಯುತ್ತಿರುವ ಆರೋಪ ಕೇಳುತ್ತೇವೆ. ಇದಕ್ಕೆ ಕರ್ನಾಟಕವೂ ಹೊರತಲ್ಲ. ಮತದಾನ ಪ್ರಕ್ರಿಯೆ ಸುಸೂತ್ರವಾಗಿ ನಡೆಯುವಂತೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ಈಗಾಗಲೇ ಕೆಲವು ಸುತ್ತಿನ ಸಭೆಗಳನ್ನು ನಡೆಸಿದೆ. ಹಣದ ಪ್ರಭಾವವನ್ನು ತಡೆಯುವ ವಿಷಯವಾಗಿ ಸಭೆಯಲ್ಲಿ ವಿವರವಾದ ಚರ್ಚೆಗಳು ನಡೆದಿದ್ದವು ಎಂದರು.

ಹಣದ ಅಕ್ರಮ ಹರಿವಿನ ತನಿಖೆ ನಡೆಸಲು ಹಾಗೂ ಅದನ್ನು ವಶಪಡಿಸಿಕೊಳ್ಳಲು ಉಪನಿರ್ದೇಶಕರಿಗೆ ಅಧಿಕಾರ ನೀಡಲಾಗಿದೆ. ಚುನಾವಣಾ ಅಕ್ರಮಗಳನ್ನು ತಡೆಯಲು ಇದು ನೆರವಾಗಲಿದೆ. ಜಿಲ್ಲಾ ಮಟ್ಟದ ತಂಡಗಳಷ್ಟೇ ಅಲ್ಲದೆ, ಸಾರ್ವಜನಿಕರು ಅಕ್ರಮಗಳ ಕುರಿತು ತೆರಿಗೆ ಇಲಾಖೆಗೆ ಮಾಹಿತಿ ನೀಡಲು ಪ್ರತ್ಯೇಕ ದೂರವಾಣಿ ಸಂಖ್ಯೆಗಳನ್ನೂ ನೀಡಲಾಗುವುದು. ಇಂತಹ ದೂರುಗಳನ್ನು ಕಳುಹಿಸಲು ಪ್ರತ್ಯೇಕ ಇಮೇಲ್‌ ವಿಳಾಸವನ್ನು ನೀಡಲಾಗುವುದು. ಹಲವು ಸಂದರ್ಭಗಳಲ್ಲಿ ಒಂದು ಪಕ್ಷದ ವಿರುದ್ಧ ಮತ್ತೊಂದು ಪಕ್ಷದವರು ದೂರು ನೀಡುವುದುಂಟು. ಏನೇ ದೂರು ಬಂದರೂ ತನಿಖಾ ತಂಡಗಳು ಪರಿಶೀಲಿಸಲಿವೆ ಎಂದರು.

ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಉಪ ಚುನಾವಣೆ ಸಂದರ್ಭದಲ್ಲಿ ಸುಮಾರು ₹40 ಕೋಟಿ ಹಣವನ್ನು ಐ.ಟಿ ಇಲಾಖೆಯ ತನಿಖಾ ವಿಭಾಗ ವಶಪಡಿಸಿಕೊಂಡಿದೆ ಎಂದರು.

ನೋಟು ಅಮಾನ್ಯೀಕರಣದ ಬಳಿಕ ಕರ್ನಾಟಕದಲ್ಲಿ ಅಧಿಕಾರಿಗಳು ಮತ್ತು ರಾಜಕೀಯ ವ್ಯಕ್ತಿಗಳ ವಶದಲ್ಲಿದ್ದ ಹಣವನ್ನು ವಶಕ್ಕೆ ಪಡೆದ ಪ್ರಕರಣಗಳಲ್ಲಿ ತನಿಖೆ ಪ್ರಗತಿಯಲ್ಲಿದೆ ಎಂದರು.

₹ 500 ಕೋಟಿ ಬೇನಾಮಿ ಆಸ್ತಿ

‘2016ರಲ್ಲಿ ಜಾರಿಗೆ ಬಂದ ಬೇನಾಮಿ ವ್ಯವಹಾರ (ತಡೆ) ತಿದ್ದುಪಡಿ ಕಾಯ್ದೆಯಡಿ ಆದಾಯ ತೆರಿಗೆ ಇಲಾಖೆಯು ಕರ್ನಾಟಕ ಮತ್ತು ಗೋವಾದಲ್ಲಿ ₹500 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಗಳನ್ನು ಗುರುತಿಸಿ ವಶಕ್ಕೆ ತೆಗೆದುಕೊಂಡಿದೆ. ಈ ಪ್ರಕರಣಗಳಲ್ಲಿ ಸೂಕ್ತ ತೀರ್ಮಾನಗಳು ಬರಬೇಕಷ್ಟೆ. ಆಸ್ತಿ ಬೇನಾಮಿ ಎಂದು ಸಾಬೀತಾದಲ್ಲಿ ಅದು ಸರ್ಕಾರದ ವಶಕ್ಕೆ ಬರಲಿದೆ’ ಎಂದು ಬಿ.ಆರ್‌. ಬಾಲಕೃಷ್ಣನ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry