ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೃಷಿ ವೃತ್ತಿಯಾದರೆ ಮಾತ್ರ ಲಾಭದಾಯಕ’

‘ಸುಸ್ಥಿರ ಅಭಿವೃದ್ಧಿ–ಭಾರತೀಯ ದೃಷ್ಟಿಕೋನ’ ರಾಷ್ಟ್ರೀಯ ಸಮ್ಮೇಳನ
Last Updated 16 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕೃಷಿಯನ್ನು ವೃತ್ತಿಯನ್ನಾಗಿ ನೋಡುತ್ತಿರುವ ದೇಶಗಳಲ್ಲಿ ಅದು ಲಾಭದಾಯಕವಾಗಿದೆ. ಆದರೆ, ನಮ್ಮಲ್ಲಿ ಅದನ್ನು ಕೇವಲ ಸೇವೆಯನ್ನಾಗಿ ಪರಿಗಣಿಸಲಾಗಿದೆ’ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜೈವಿಕ ಅನಿಲ ವಿಭಾಗದ ಅಧ್ಯಕ್ಷ ವೈ.ಬಿ.ರಾಮಕೃಷ್ಣ ಅಭಿಪ್ರಾಯಪಟ್ಟರು.

ಪಿಇಎಸ್‌ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ಕೇಂದ್ರ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಸುಸ್ಥಿರ ಅಭಿವೃದ್ಧಿ–ಭಾರತೀಯ ದೃಷ್ಟಿಕೋನ’ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ನಿತ್ಯ ಸಾವಿರಾರು ಟನ್‌ ಆಹಾರ ವ್ಯರ್ಥವಾಗುತ್ತಿದೆ. ಆಹಾರದ ಮರುಬಳಕೆ ಮಾಡುವ ಬಗ್ಗೆ ಚಿಂತಿಸಬೇಕು’ ಎಂದು ಹೇಳಿದರು.

‘ಕೈಗಾರಿಕಾ ಅಭಿವೃದ್ಧಿ ಬಳಿಕ ಸುಸ್ಥಿರ ಅಭಿವೃದ್ಧಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಸುಸ್ಥಿರ ಅಭಿವೃದ್ಧಿಗಾಗಿ ಕೃಷಿ ಚಟುವಟಿಕೆಯ ಸ್ವರೂಪ ಬದಲಾಗಬೇಕಿದೆ. ಹಳೆಯ ಕೃಷಿಪದ್ಧತಿಗಳನ್ನು ಅನುಸರಿಸುವುದು ಅಗತ್ಯ. ಕಾಲೇಜುಗಳು ತಮ್ಮ ಆವರಣಗಳನ್ನು ‘ಶೂನ್ಯ ತ್ಯಾಜ್ಯ ಆವರಣ’ವನ್ನಾಗಿ ಬದಲಾಯಿಸಬೇಕು’ ಎಂದು ಅವರು ಸಲಹೆ ನೀಡಿದರು.

ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಎಂ.ಆರ್.ದೊರೆಸ್ವಾಮಿ, ‘ನೈಸರ್ಗಿಕ ಸಂಪನ್ಮೂಲದ ಅತಿಯಾದ ಬಳಕೆಯನ್ನು ಅಭಿವೃದ್ಧಿ ಎನ್ನಲು ಸಾಧ್ಯವಿಲ್ಲ. ಸಂಪನ್ಮೂಲವನ್ನು ಮುಂದಿನ ಪೀಳಿಗೆಗೂ ಉಳಿಸುವುದು ಅತಿ ಮುಖ್ಯ. ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್ ಜತೆ ಕೈಜೋಡಿಸಿ ಸೌರಶಕ್ತಿ ಘಟಕ ನಿರ್ಮಾಣಕ್ಕೆ ಮುಂದಾಗಿರುವುದು ಅಭಿನಂದನಾರ್ಹ’ ಎಂದು ಶ್ಲಾಘಿಸಿದರು.

‘12 ಪಂಚವಾರ್ಷಿಕ ಯೋಜನೆಗಳು ಬಂದರೂ ಹಳ್ಳಿಗಳಲ್ಲಿ ಸಮಸ್ಯೆ ಇನ್ನೂ ಜೀವಂತವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ಇಂದಿಗೂ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಹಲವು ಅದ್ಭುತ ಯೋಜನೆಗಳು ಬಂದರೂ ಅವುಗಳ ಅನುಷ್ಠಾನದಲ್ಲಿ ಆಗಿರುವ ಹಿನ್ನಡೆಯಿಂದ ಅಭಿವೃದ್ಧಿ ಸಾಧ್ಯವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
**
2045ರ ವೇಳೆಗೆ ನವೀಕರಿಸಲಾಗದ ಇಂಧನ ಬಳಕೆ ಕ್ಷೀಣಿಸಲಿದೆ. 2050ಕ್ಕೆ ಸೌರಶಕ್ತಿ ಸೇರಿ ಇತರೆ ನವೀಕರಿಸಬಹುದಾದ ಇಂಧನ ಬಳಕೆ ಹೆಚ್ಚಲಿದೆ.
-ಡಾ.ಭೀಮರಾಯ ಮೇತ್ರಿ, ಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT