4

ರಾಜಧಾನಿಗೆ ತಂಪೆರೆದ ವರುಣ

Published:
Updated:
ರಾಜಧಾನಿಗೆ ತಂಪೆರೆದ ವರುಣ

ಬೆಂಗಳೂರು: ನಗರದಾದ್ಯಂತ ಶುಕ್ರವಾರ ರಾತ್ರಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆ ಸುರಿದಿದೆ. ದಿಢೀರ್ ಮಳೆಯಿಂದಾಗಿ ರಸ್ತೆಗಳ ಮೇಲೆ ನೀರು ಹರಿದಿದ್ದರಿಂದ ಕೆಲವೆಡೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಬೊಮ್ಮಸಂದ್ರ 38.5, ಕೊಟ್ಟಿಗೆಪಾಳ್ಯ 34, ಬಸವನಗುಡಿ 32.5, ಅಗ್ರಹಾರ ದಾಸರಹಳ್ಳಿ 30.5, ರಾಜರಾಜೇಶ್ವರಿನಗರ 29, ನಾಗರಬಾವಿ 28, ಸಾರಕ್ಕಿ 24.5, ಉತ್ತರಹಳ್ಳಿ 21.5, ಮಂಡೂರು 17.5, ಕೋಣನಕುಂಟೆ 16.5, ಬಿದರಹಳ್ಳಿ 13.5 ಮಿ.ಮೀ. ಮಳೆಯಾಗಿದೆ.

ರಾಜಾಜಿನಗರ, ಬಸವೇಶ್ವರನಗರ, ಯಶವಂತಪುರ, ಪೀಣ್ಯ, ಶಿವಾಜಿನಗರ, ಎಂ.ಜಿ.ರಸ್ತೆ, ಕೋರಮಂಗಲ, ಮೆಜೆಸ್ಟಿಕ್, ರಿಚ್ಮಂಡ್‌ ರಸ್ತೆ ಹಾಗೂ ಕೆ.ಆರ್. ಪುರದಲ್ಲಿ ಅರ್ಧ ಗಂಟೆವರೆಗೆ ಮಳೆಯಾಗಿದೆ.

ಇಂದಿರಾನಗರ, ದೊಮ್ಮಲೂರು, ವರ್ತೂರು, ಎಲೆಕ್ಟ್ರಾನಿಕ್ ಸಿಟಿ, ಬೊಮ್ಮನಹಳ್ಳಿ, ಓಕಳೀಪುರ, ಮಲ್ಲೇಶ್ವರ, ಹೆಬ್ಬಾಳ, ಆರ್.ಟಿ.ನಗರ ಸೇರಿದಂತೆ ಹಲವಡೆ ಮಳೆ ಸುರಿದಿದೆ. ಕ್ವೀನ್ಸ್ ರಸ್ತೆಯ ಅಕ್ಕ–ಪಕ್ಕದ ಕಾಲುವೆಗಳ ನೀರು ತುಂಬಿದ್ದರಿಂದ ಭಾಗಶಃ ನೀರು ರಸ್ತೆಯ ಮೇಲೆ ಹರಿಯಿತು. ಅದರಲ್ಲೇ ಸವಾರರು ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದದ್ದು ಕಂಡುಬಂತು.

ಕೆ.ಆರ್.ವೃತ್ತ, ಆನಂದ್ ರಾವ್‌ ವೃತ್ತ, ಅನಿಲ್ ಕುಂಬ್ಳೆ ವೃತ್ತ, ನಾಯಂಡಹಳ್ಳಿ ಮೇಲ್ಸೇತುವೆ, ಹೆಬ್ಬಾಳ ಮೇಲ್ಸೇತುವೆ ಬಳಿ ರಸ್ತೆ ಮೇಲೆ ಮಳೆ ನಿಂತಿತ್ತು. ನೃಪತುಂಗ ರಸ್ತೆ, ಉಪ್ಪಾರಪೇಟೆ, ಮೆಜೆಸ್ಟಿಕ್‌, ಶೇಷಾದ್ರಿಪುರ, ಟಿನ್‌ಫ್ಯಾಕ್ಟರಿ, ಮೈಸೂರು ರಸ್ತೆ ಹಾಗೂ ಸುತ್ತ

ಮುತ್ತ ಕೆಲ ಸಮಯ ಸಂಚಾರ ದಟ್ಟಣೆ ಉಂಟಾಗಿತ್ತು. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ ತಮಿಳುನಾಡು, ಕೇರಳ ಹಾಗೂ ರಾಜ್ಯದಲ್ಲಿ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಜಿ.ಎಸ್‌.ಶ್ರೀನಿವಾಸ್ ರೆಡ್ಡಿ ತಿಳಿಸಿದರು.

ಗುರುವಾರವೂ ನಗರದಲ್ಲಿ ಕೆಲ ಸಮಯ ಮಳೆ ಸುರಿದಿತ್ತು. ಶನಿವಾರ ಸಹ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದರು.

8 ಮರ ಧರೆಗೆ: ಬಿರುಗಾಳಿ ಸಹಿತ ಮಳೆ ಸುರಿದಿದ್ದರಿಂದ ನಗರದಾದ್ಯಂತ 8 ಮರಗಳು ಬಿದ್ದಿವೆ. ಜಗಜೀವನರಾಂ ನಗರ, ಗಾಂಧಿನಗರದಲ್ಲಿ ತಲಾ 2, ಚಿಕ್ಕಲಸಂದ್ರ, ಚನ್ನಮ್ಮನ ಕೆರೆ ಅಚ್ಚುಕಟ್ಟು, ಮಲ್ಲೇಶ್ವರ ಹಾಗೂ ವಿದ್ಯಾಪೀಠ ವೃತ್ತದಲ್ಲಿ ಮರಗಳು ಬಿದ್ದಿವೆ ಎಂದು ಬಿಬಿಎಂಪಿ ಸಿಬ್ಬಂದಿ ‘ಪ್ರಜಾವಾಣಿ’ಗೆ ತಿಳಿಸಿದರು.

ಜಗಜೀವನರಾಂ ನಗರದಲ್ಲಿ ಬೃಹತ್ ಮರವೊಂದು ಧರೆಗೆ ಉರುಳಿದಿದ್ದರಿಂದ ವಿದ್ಯುತ್ ತಂತಿಗಳು ತುಂಡಾಗಿವೆ.

ಮರದ ಕೊಂಬೆ ಬಿದ್ದು ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ. ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ರಸ್ತೆಗೆ ಅಡ್ಡಲಾಗಿ ಆ ಮರ ಬಿದ್ದಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು. ಬಿಬಿಎಂಪಿಯ ಅರಣ್ಯ ವಿಭಾಗದ ಸಿಬ್ಬಂದಿ ಅದನ್ನು ತೆರವು ಮಾಡಿ, ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಕೋಡಿ ಚಿಕ್ಕನಹಳ್ಳಿ, ಗಾಯತ್ರಿನಗರ, ಕೆ.ಪಿ.ಅಗ್ರಹಾರ, ಗಿರಿಯಾಸ್ ಬಡಾವಣೆ, ಸಿ.ವಿ.ರಾಮನ್ ನಗರ, ಬನಶಂಕರಿ 3ನೇ ಹಂತ, ಕೆ.ಪಿ.ಅಗ್ರಹಾರದ ತಗ್ಗುಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದೆ. ಮಳೆನೀರುಗಾಲುವೆಗಳಲ್ಲಿ ಕಸ ತುಂಬಿಕೊಂಡಿದ್ದರಿಂದ ಸಮಸ್ಯೆ ಉಂಟಾಯಿತು. ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿ ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದರು.

‘ವಿದ್ಯುತ್ ಕಡಿತಕ್ಕೆ ಸಂಬಂಧಿಸಿದಂತೆ 340 ದೂರುಗಳು ಬಂದಿವೆ. ಆ ಪೈಕಿ 2 ದೂರುಗಳಿಗೆ ಸ್ಪಂದಿಸಿದ್ದೇವೆ. 338 ದೂರುಗಳನ್ನು ಇತ್ಯರ್ಥಪಡಿಸಬೇಕಿದೆ. ಕಾಟನ್‌ಪೇಟೆಯಲ್ಲಿ ಅರ್ಧ ಗಂಟೆಗೂ ಅಧಿಕ ಕಾಲ ವಿದ್ಯುತ್ ಕಡಿತಗೊಳಿಸಲಾಗಿತ್ತು’ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದರು.

**

ಹೊಸಕೋಟೆಯಲ್ಲೂ ಗುಡುಗು ಸಹಿತ ಮಳೆ

ನಗರದ ಹೊರಭಾಗಗಳಾದ ಹೊಸಕೋಟೆ ಹಾಗೂ ಹೆಸರಘಟ್ಟದಲ್ಲಿ ಒಂದು ಗಂಟೆವರೆಗೆ ಗುಡುಗು, ಬಿರುಗಾಳಿ ಸಹಿತ ಮಳೆಯಾಗಿದೆ

ಹೊಸಕೋಟೆ ಪಟ್ಟಣದಲ್ಲಿ ಕೆ.ಸಿ. ವ್ಯಾಲಿ ಯೋಜನೆ, ಒಳಚರಂಡಿ ಹಾಗೂ ಕುಡಿಯುವ ನೀರಿನ ಪೈಪ್‌ಗಳ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಇದರಿಂದ ಪಟ್ಟಣದಲ್ಲಿ ದೂಳಿನ ಪ್ರಮಾಣ ಹೆಚ್ಚಾಗಿದ್ದು, ಜನರು ಹೈರಾಣಾಗಿದ್ದಾರೆ. ಮಳೆಯು ದೂಳಿನ ಸಮಸ್ಯೆಯನ್ನು ನಿವಾರಿಸಿದೆ.

ಹೆಸರಘಟ್ಟದ ಹಲವೆಡೆ ಮರಗಳು ನೆಲಕ್ಕೆ ಉರುಳಿವೆ. ಸಾಕಷ್ಟು ಕಡೆ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.

**

ಹಾರಾಟ ವ್ಯತ್ಯಯ

ಮಳೆಯಿಂದಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎಎಲ್) 21 ವಿಮಾನಗಳ ಹಾರಾಟದಲ್ಲಿ ಕೆಲ ಕಾಲ ವ್ಯತ್ಯಯ ಉಂಟಾಯಿತು.

‘ಕೆಐಎಎಲ್‌ನಲ್ಲಿ ಇಳಿಯಬೇಕಿದ್ದ 5 ವಿಮಾನಗಳ ಮಾರ್ಗ ಬದಲಾಯಿಸಿ, ಬೇರೆಡೆಗೆ ಕಳುಹಿಸಲಾಗಿದೆ’ ಎಂದು ಕೆಐಎಎಲ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry