ಸಂಧಾನ ಸಭೆ ಮತ್ತೆ ವಿಫಲ

7
ಮೆಟ್ರೊ ರೈಲು ನಿಗಮ ಸಿಬ್ಬಂದಿ ಮುಷ್ಕರ

ಸಂಧಾನ ಸಭೆ ಮತ್ತೆ ವಿಫಲ

Published:
Updated:
ಸಂಧಾನ ಸಭೆ ಮತ್ತೆ ವಿಫಲ

ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ನಡುವೆ ಕಾರ್ಮಿಕ ನ್ಯಾಯಾಲಯದಲ್ಲಿ ಶುಕ್ರವಾರ ನಡೆದ ಸಂಧಾನ ಸಭೆ ವಿಫಲವಾಗಿದೆ. ಈ ಸಂಬಂಧ ಇದೇ 19ಕ್ಕೆ ಮತ್ತೊಮ್ಮೆ ಸಭೆ ಕರೆಯಲಾಗಿದೆ.

ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಇದೇ 22ರಂದು ಮುಷ್ಕರ ನಡೆಸಲು ನಿಗಮದ ಸಿಬ್ಬಂದಿ ನಿರ್ಧರಿಸಿದ್ದಾರೆ.

‘ಬಿಎಂಆರ್‌ಸಿಎಲ್‌ ನೌಕರರ ಸಂಘಕ್ಕೆ ಮಾನ್ಯತೆ ನೀಡಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆ. ಅದಕ್ಕೆ ನಿಗಮದ ಅಧಿಕಾರಿಗಳು ಒಪ್ಪುತ್ತಿಲ್ಲ. ನಮ್ಮ ಇತರ ಬೇಡಿಕೆಗಳಿಗೂ ಸಭೆಯಲ್ಲಿ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ. ಹೀಗಾಗಿ, ಮಾತುಕತೆ ಮುರಿದು ಬಿದ್ದಿದೆ’ ಎಂದು ಬಿಎಂಆರ್‌ಸಿಎಲ್‌ ನೌಕರರ ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ

ಮೂರ್ತಿ ತಿಳಿಸಿದರು.

‘ನಿರ್ಣಯ ಕೈಗೊಳ್ಳುವ ಅಧಿಕಾರಿಗಳು ಸಂಧಾನ ಸಭೆಗೆ ಬರುತ್ತಿಲ್ಲ. ಹೀಗಾಗಿ, ಸಭೆ ವಿಫಲವಾಗುತ್ತಿದೆ. ಮುಂದಿನ ಸಭೆಗೆ ನಿಗಮದ ಉನ್ನತ ಅಧಿಕಾರಿಗಳು ಬಂದು ನಮ್ಮ ಬೇಡಿಕೆಗಳನ್ನು ಈಡೇರಿಸಲು ಒಪ್ಪಬೇಕು. ಇಲ್ಲವಾದರೆ, ಮುಷ್ಕರ ನಡೆಸುವುದು ನಿಶ್ಚಿತ’ ಎಂದರು.

ಭದ್ರತೆಗೆ ಮನವಿ: ಮುಷ್ಕರದ ವೇಳೆ ಪ್ರತಿಭಟನಾಕಾರರು ಮೆಟ್ರೊ ನಿಲ್ದಾಣಗಳಿಗೆ ನುಗ್ಗಿ ದಾಂಧಲೆ, ರೈಲು ನಿಲುಗಡೆ ಹಾಗೂ ಸಾರ್ವಜನಿಕರಿಗೆ ತೊಂದರೆ ಕೊಡುವ ಸಾಧ್ಯತೆ ಇದೆ. ಹೀಗಾಗಿ, ನಿಲ್ದಾಣಗಳಲ್ಲಿ ಮುಷ್ಕರದ ದಿನ ಭದ್ರತಾ ಸಿಬ್ಬಂದಿ ನೇಮಿಸಬೇಕು ಎಂದು ಮೆಟ್ರೊ ನಿಲ್ದಾಣಗಳ ಸಹಾಯಕ ಭದ್ರತಾ ಅಧಿಕಾರಿ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಪತ್ರ ಬರೆಯಲು ಸಿದ್ಧತೆ ನಡೆಸಿದ್ದಾರೆ.

***

ಎಸ್ಮಾ ತಡೆಯಾಜ್ಞೆ ಮುಂದುವರಿಕೆ

ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ಕಾರ್ಪೋರೇಷನ್‌ ಲಿಮಿಟೆಡ್‌ (ಬಿಎಂಆರ್‌ಸಿಎಲ್‌) ಸಿಬ್ಬಂದಿ ವಿರುದ್ಧದ ಅಗತ್ಯ ಸೇವೆ ನಿರ್ವಹಣಾ ಕಾಯ್ದೆ (ಎಸ್ಮಾ) ಮೇಲಿನ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್‌ ಮತ್ತೆ ಒಂದು ವಾರ ಕಾಲ ವಿಸ್ತರಿಸಿದೆ.

ಈ ಕುರಿತಂತೆ ಬಿಎಂಆರ್‌ಸಿಎಲ್‌ ನೌಕರರ ಸಂಘ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ಆಕ್ಷೇಪಣೆ ಸಲ್ಲಿಸಲು ಸಂಘದ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶಿಸಿದೆ.

2017ರ ಜುಲೈ 7ರಂದು ಬಿಎಂಆರ್‌ಸಿಎಲ್‌ ನೌಕರರು ಮುಷ್ಕರ ನಡೆಸಿದ್ದರು. ಈ ವೇಳೆ ರಾಜ್ಯ ಸರ್ಕಾರ ಎಸ್ಮಾ ಜಾರಿಗೊಳಿಸಿತ್ತು.

ಇದೇ ವೇಳೆ ನೌಕರರು ತಮ್ಮ ಸಂಘಕ್ಕೆ ಮಾನ್ಯತೆ ಕೋರಿ ಬಿಎಂಆರ್‌ಸಿಎಲ್‌ಗೆ ಮನವಿ ಮಾಡಿದ್ದರು. ಇದನ್ನು ಬಿಎಂಆರ್‌ಸಿಎಲ್‌ ಪುರಸ್ಕರಿಸಿರಲಿಲ್ಲ. ‘ಸಂಘದಲ್ಲಿ ವಿಭಾಗೀಯ ಎಂಜಿನಿಯರ್‌ಗಳು, ಕಸ್ಟಮ್ಸ್‌ ರಿಲೇಷನ್‌ ಅಧಿಕಾರಿಗಳು, ನಿಲ್ದಾಣ ನಿರ್ವಾಹಕರು, ರೈಲು ಚಾಲಕರನ್ನೂ ಸೇರ್ಪಡೆ ಮಾಡಿರುವ ಕಾರಣ ನೌಕರರ ಸಂಘಕ್ಕೆ ಮಾನ್ಯತೆ ನೀಡಲಾಗದು’ ಎಂದು ತಿಳಿಸಿತ್ತು. ಸಂಘಕ್ಕೆ ಮಾನ್ಯತೆ ದೊರಕಿಸಿಕೊಡುವಂತೆ ಹಾಗೂ ಎಸ್ಮಾ ತೆರವುಗೊಳಿಸುವಂತೆ ಕೋರಿ ಸಂಘವು ಹೈಕೋರ್ಟ್‌ ಮೆಟ್ಟಿಲೇರಿತ್ತು.

ಈ ಅರ್ಜಿಗೆ ಸಂಬಂಧಿಸಿದಂತೆ 2017ರ ನವೆಂಬರ್ 7ರಂದು ಮಧ್ಯಂತರ ತಡೆ ನೀಡಲಾಗಿತ್ತು. ಇದೀಗ ನ್ಯಾಯಪೀಠ ಈ ತಡೆಯಾಜ್ಞೆಯನ್ನು ಮುಂದುವರಿಸಿ ಆದೇಶಿಸಿದೆ.

ಏತನ್ಮಧ್ಯೆ ಸಂಬಳ ಏರಿಕೆ ಮತ್ತು ಸಂಘಕ್ಕೆ ಮಾನ್ಯತೆ ಕೋರಿದ ಬೇಡಿಕೆಗಳ ಕುರಿತಂತೆ ಬಿಎಂಆರ್‌ಸಿಎಲ್‌ ಜೊತೆ ನಡೆಸಿದ ಮಾತುಕತೆ ಮುರಿದು ಬಿದ್ದಿರುವ ಪರಿಣಾಮ ನೌಕರರ ಸಂಘವು ಇದೇ 22ರಿಂದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರಕ್ಕೆ ಕರೆ ಕೊಟ್ಟಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry