ಎನ್‌ಡಿಎಯಿಂದ ಹೊರಬಂದ ಚಂದ್ರಬಾಬು: ಅವಿಶ್ವಾಸಕ್ಕೆ ಪ್ರತಿಪಕ್ಷಗಳ ಬಲ

ಬುಧವಾರ, ಮಾರ್ಚ್ 20, 2019
25 °C

ಎನ್‌ಡಿಎಯಿಂದ ಹೊರಬಂದ ಚಂದ್ರಬಾಬು: ಅವಿಶ್ವಾಸಕ್ಕೆ ಪ್ರತಿಪಕ್ಷಗಳ ಬಲ

Published:
Updated:
ಎನ್‌ಡಿಎಯಿಂದ ಹೊರಬಂದ ಚಂದ್ರಬಾಬು: ಅವಿಶ್ವಾಸಕ್ಕೆ ಪ್ರತಿಪಕ್ಷಗಳ ಬಲ

ಅಮರಾವತಿ/ನವದೆಹಲಿ (ಪಿಟಿಐ): ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನ ನೀಡಿಲ್ಲ ಎಂದು ಆಕ್ರೋಶಗೊಂಡಿರುವ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಾರ್ಟಿಯು (ಟಿಡಿಪಿ) ಕೇಂದ್ರದ ಆಡಳಿತಾರೂಢ ಮೈತ್ರಿಕೂಟ ಎನ್‌ಡಿಎಯಿಂದ ಶುಕ್ರವಾರ ಹೊರನಡೆದಿದೆ. ಅಷ್ಟೇ ಅಲ್ಲದೆ, ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿಯ ನೋಟಿಸನ್ನೂ ನೀಡಿದೆ.

ಆಂಧ್ರಪ‍್ರದೇಶವನ್ನು ಕೇಂದ್ರವು ನಿರ್ಲಕ್ಷಿಸಿದೆ ಎಂಬ ಇದೇ ಕಾರಣಕ್ಕಾಗಿ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷವೂ ಕೇಂದ್ರ ಸರ್ಕಾರದ ವಿರುದ್ಧ ಗುರುವಾರ ಅವಿಶ್ವಾಸ ಗೊತ್ತುವಳಿಗೆ ನೋಟಿಸ್‌ ನೀಡಿತ್ತು.

2014ರ ಮೇಯಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಇದೇ ಮೊದಲ ಬಾರಿಗೆ ಅವಿಶ್ವಾಸ ಗೊತ್ತುವಳಿಯ ನೋಟಿಸ್‌ ಸಲ್ಲಿಕೆಯಾಗಿದೆ. ಟಿಆರ್‌ಎಸ್‌ ಮತ್ತು ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷವು ಮಂಡಿಸಲು ಉದ್ದೇಶಿಸಿರುವ ಅವಿಶ್ವಾಸ ನಿರ್ಣಯಕ್ಕೆ ಹತ್ತಕ್ಕೂ ಹೆಚ್ಚು ವಿರೋಧ ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ.

ಕಾಂಗ್ರೆಸ್‌, ತೃಣಮೂಲ ಕಾಂಗ್ರೆಸ್‌, ಸಮಾಜವಾದಿ ಪಾರ್ಟಿ, ಬಿಎಸ್‌ಪಿ, ಎನ್‌ಸಿಪಿ, ಸಿಪಿಎಂ, ಸಿಪಿಐ, ಆರ್‌ಜೆಡಿ, ಆರ್‌ಎಸ್‌ಪಿ, ಮುಸ್ಲಿಂ ಲೀಗ್‌ ಮತ್ತು ಎಐಎಂಐಎಂ ಮುಖಂಡರು ಅವಿಶ್ವಾಸ ಗೊತ್ತುವಳಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಕೇರಳ ಕಾಂಗ್ರೆಸ್‌ (ಮಾಣಿ), ನ್ಯಾಷನಲ್ ಕಾನ್ಫರೆನ್ಸ್‌, ಎಐಡಿಯುಎಫ್‌ ಮತ್ತು ಇತರ ಕೆಲವು ಸಣ್ಣ ಪಕ್ಷಗಳು ಬೆಂಬಲ ನೀಡುವ ನಿರೀಕ್ಷೆ ಇದೆ.

ಸರ್ಕಾರಕ್ಕೆ ಬೆಂಬಲ ನೀಡುವ ಬಗ್ಗೆ ಮಿತ್ರ ಪಕ್ಷ ಶಿವಸೇನಾ ಇನ್ನೂ ನಿರ್ಧಾರ ಕೈಗೊಂಡಿಲ್ಲ. ತಟಸ್ಥವಾಗಿ ಉಳಿಯುವ ಸಾಧ್ಯತೆ ಹೆಚ್ಚು ಎಂದು ಮೂಲಗಳು ತಿಳಿಸಿವೆ.

ಟಿಡಿಪಿ ಪರವಾಗಿ ತೋಟ ನರಸಿಂಹಂ ಮತ್ತು ವೈಎಸ್‌ಆರ್ ಕಾಂಗ್ರೆಸ್‌ ಪರವಾಗಿ ವೈ.ವಿ ಸುಬ್ಬಾ ರೆಡ್ಡಿ ಅವಿಶ್ವಾಸ ನೋಟಿಸ್‌ ನೀಡಿದ್ದಾರೆ.

ಆದರೆ, ಸದನದಲ್ಲಿ ಭಾರಿ ಪ್ರತಿಭಟನೆ, ಗದ್ದಲ ನಡೆಯುತ್ತಿದೆ ಎಂಬ ಕಾರಣಕ್ಕೆ ಲೋಕಸಭೆಯ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರು ಸದನವನ್ನು ಸೋಮವಾರಕ್ಕೆ ಮುಂದೂಡಿದ್ದಾರೆ. ಹಾಗಾಗಿ ಅವಿಶ್ವಾಸ ಗೊತ್ತುವಳಿಯ ನೋಟಿಸನ್ನು ಚರ್ಚೆಗೆ ಎತ್ತಿಕೊಳ್ಳಲಾಗಿಲ್ಲ.

ವಿಡಿಯೊ ಕಾನ್ಫರೆನ್ಸ್‌ನಲ್ಲಿ ನಿರ್ಧಾರ: ಚಂದ್ರಬಾಬು ನಾಯ್ಡು ಅವರು ಪಕ್ಷದ ಸಂಸದರು ಮತ್ತು ಪಾಲಿಟ್‌ ಬ್ಯೂರೊ ಸದಸ್ಯರ ಜತೆ ಶುಕ್ರವಾರ ಬೆಳಿಗ್ಗೆ ವಿಡಿಯೊ ಕಾನ್ಫರೆನ್ಸ್‌ ನಡೆಸಿ ಎನ್‌ಡಿಎಯಿಂದ ಹೊರಗೆ ಬರುವ ನಿರ್ಧಾರ ಕೈಗೊಂಡರು.

ಶಿವಸೇನಾ ಮನವೊಲಿಕೆ ಯತ್ನ

ತನ್ನ ಅತ್ಯಂತ ಹಳೆಯ ಮಿತ್ರ ಪಕ್ಷ ಶಿವಸೇನಾವನ್ನು ಒಲಿಸಿಕೊಳ್ಳಲು ಬಿಜೆಪಿ ಮುಂದಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಶಿವಸೇನಾ ಮುಖಂಡ ಮತ್ತು ಕೇಂದ್ರ ಸಚಿವ ಅನಂತ್‌ ಗೀತೆ ಅವರನ್ನು ಭೇಟಿಯಾಗಿದ್ದಾರೆ.

ಅವಿಶ್ವಾಸ ಗೊತ್ತುವಳಿ ಮಂಡನೆಯಾದರೆ ಸರ್ಕಾರಕ್ಕೆ ಬೆಂಬಲ ನೀಡಬೇಕು ಎಂದು ಫಡಣವೀಸ್‌ ಅವರು ಗೀತೆ ಅವರನ್ನು ಕೋರಿದ್ದಾರೆ ಎಂದು ತಿಳಿದು ಬಂದಿದೆ. ‘ರಾಷ್ಟ್ರವಾದಿ ಮತ್ತು ಹಿಂದುತ್ವವಾದಿ ಶಕ್ತಿಗಳು ಜತೆಯಾಗಿಯೇ ನಿಲ್ಲಲಿವೆ’ ಎಂದು ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಫಡಣವೀಸ್‌ ಹೇಳಿದ್ದಾರೆ.

ಅವಿಶ್ವಾಸಕ್ಕೆ ಸೋಲು ಖಚಿತ

ಸದ್ಯ 536 ಸದಸ್ಯರಿರುವ ಲೋಕಸಭೆಯಲ್ಲಿ ಅವಿಶ್ವಾಸಮತವನ್ನು ಸೋಲಿಸಲು ಸರ್ಕಾರಕ್ಕೆ ಬೇಕಿರುವುದು 269 ಸಂಸದರ ಬೆಂಬಲ. ಸದನದಲ್ಲಿ ಬಿಜೆಪಿ ಸಂಸದರ ಸಂಖ್ಯೆಯೇ 274. ಎನ್‌ಡಿಎ ಕೂಟದಲ್ಲಿ ಇರುವ ಮಿತ್ರ ಪಕ್ಷಗಳ ಸಂಸದರ ಸಂಖ್ಯೆ 21 (ಶಿವಸೇನಾವನ್ನು ಬಿಟ್ಟು). ಹಾಗಾಗಿ ಅವಿಶ್ವಾಸ ಗೊತ್ತುವಳಿ ಅಂಗೀಕಾರ ಆಗುವ ಸಾಧ್ಯತೆ ಬಹಳ ಕಡಿಮೆ.

ವಿರೋಧ ಪಕ್ಷಗಳಿಗೇನು ಲಾಭ: ತಮ್ಮ ಅವಿಶ್ವಾಸ ಗೊತ್ತುವಳಿಗೆ ಸೋಲಾಗುತ್ತದೆ ಎಂಬುದು ವಿರೋಧ ಪಕ್ಷಗಳಿಗೂ ತಿಳಿದಿದೆ. ಆದರೆ, ಗೊತ್ತುವಳಿ ಮೇಲಿನ ಚರ್ಚೆಯಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದು ವಿರೋಧ ಪಕ್ಷಗಳ ಕಾರ್ಯತಂತ್ರವಾಗಿದೆ. ಜತೆಗೆ, ಬಿಜೆಪಿ ವಿರುದ್ಧದ ಪಕ್ಷಗಳಲ್ಲಿ ಒಗ್ಗಟ್ಟು ಮೂಡಿಸುವುದಕ್ಕೂ ಇದು ನೆರವಾಗಬಹುದು ಎಂಬ ನಿರೀಕ್ಷೆ ಇದೆ.

ರಾಜಕೀಯ ತಂತ್ರ: ಅವಿಶ್ವಾಸ ಗೊತ್ತುವಳಿಗೆ ಬೆಂಬಲ ನೀಡುವುದಿಲ್ಲ ಎಂದು ತೆಲಂಗಾಣದ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿಯು (ಟಿಆರ್‌ಎಸ್‌) ಹೇಳಿದೆ. ಇದೊಂದು ರಾಜಕೀಯ ತಂತ್ರ ಎಂದು ಟಿಆರ್‌ಎಸ್‌ ಮುಖ್ಯಸ್ಥ ಕೆ. ಚಂದ್ರಶೇಖರ್‌ ರಾವ್‌ ಹೇಳಿದ್ದಾರೆ. ಟಿಆರ್‌ಎಸ್‌ 11 ಲೋಕಸಭಾ ಸದಸ್ಯರನ್ನು ಹೊಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry