ಮನೆ ಜಖಂ, ಕುರಿಗಳ ಸಾವು

ಮಂಗಳವಾರ, ಮಾರ್ಚ್ 19, 2019
33 °C
ಕೂಡ್ಲಿಗಿ ತಾಲ್ಲೂಕಿನ ಎಲ್ಲೆಡೆ ಉತ್ತಮ ಮಳೆ; ಕೆರೆ, ಹಳ್ಳಗಳಿಗೆ ನೀರು

ಮನೆ ಜಖಂ, ಕುರಿಗಳ ಸಾವು

Published:
Updated:
ಮನೆ ಜಖಂ, ಕುರಿಗಳ ಸಾವು

ಕೂಡ್ಲಿಗಿ: ತಾಲ್ಲೂಕಿನಾದ್ಯಂತ ಶುಕ್ರವಾರ ತಡರಾತ್ರಿ ಉತ್ತಮ ಮಳೆಯಾಗಿದ್ದು, ಮಳೆಯ ರಭಸಕ್ಕೆ ಶಿವಪುರದಲ್ಲಿ ವಿದ್ಯುತ್ ಕಂಬ ಬಿದ್ದು ಮನೆ ಜಖಂಗೊಂಡಿದೆ. ಶಿವಪುರ ಗೊಲ್ಲರಹಟ್ಟಿಯ ಬಳಿ ಹಳ್ಳದಲ್ಲಿ ಕೊಚ್ಚಿ ಹೋಗಿ ಹೋಗಿ 6 ಕುರಿಗಳು ಸಾವನ್ನಪ್ಪಿವೆ.

ಗುರುವಾರ ರಾತ್ರಿ ಸುಮಾರು 10.30 ವೇಳೆಗೆ ತುಂತುರು ಮಳೆ ಆರಂಭವಾಗಿತ್ತು. ಆದರೆ ಶುಕ್ರವಾರ ತಡರಾತ್ರಿ 1 ರ ವೇಳೆಗೆ ಬಿರುಸುಗೊಂಡಿತ್ತು. ಪರಿಣಾಮವಾಗಿ ಬೆಳಿಗ್ಗೆ ಹೊತ್ತಿಗೆ ಕೂಡ್ಲಿಗಿ ಪಟ್ಟಣ, ತಾಲ್ಲೂಕಿನ ಶಿವಪುರ, ಕಕ್ಕುಪ್ಪಿ, ಮೊರಬ ಸೇರಿದಂತೆ ಹಲವು ಕಡೆ ಹೊಲಗಳು ನೀರಿನಿಂದ ಆವೃತ್ತವಾಗಿದ್ದವು.

ಪಟ್ಟಣದ ದೊಡ್ಡ ಕೆರೆಯಲ್ಲಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹಗೊಂಡಿದ್ದು, ಸುಮಾರು ಎರಡು ತಿಂಗಳ ಕಾಲ ಜಾನುವಾರುಗಳಿಗೆ ನೀರಿನ ಪೂರೈಕೆ ಆಗಲಿದೆ. ತಾಲ್ಲೂಕಿನ ಕೈವಲ್ಯಾಪುರ ಕೆರೆಗೂ ಹೆಚ್ಚಿನ ನೀರು ಹರಿದು ಬಂದಿದೆ.

ಕುರಿಗಳ ಸಾವು: ಶಿವಪುರ ಗೊಲ್ಲರಹಟ್ಟಿಯ ಬಳಿ ಹೊಲವೊಂದರ ಮಂದೆಯಲ್ಲಿದ್ದ 6 ಕುರಿಗಳು ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿವೆ. ಮಧ್ಯರಾತ್ರಿ ಸುಮಾರು 12.30ರ ಸಮಯದಲ್ಲಿ ಮಳೆ ತೀವ್ರಗೊಂಡಾಗ ಮಂದೆಯಲ್ಲಿದ್ದ ಕುರಿಗಳು ಹೊಲದ ಪಕ್ಕದಲ್ಲಿದ್ದ ಹಳ್ಳದಲ್ಲಿನ ಮರದ ಕೆಳಗೆ ಹೋಗಿ ಆಶ್ರಯ ಪಡೆದಿದ್ದವು. ಆಗ ಹಳ್ಳದ ನೀರು ವೇಗವಾಗಿ ಹರಿದು ಬಂದಿದ್ದರಿಂದ ಗೊಲ್ಲರಹಟ್ಟಿಯ ಬೈರಪ್ಪನವರ ಎರಡು, ಗೋಪಾಲಪ್ಪನವರ ನಾಲ್ಕು ಕುರಿಗಳು ಸಾವನ್ನಪ್ಪಿದ್ದವು. ಸಣ್ಣಪ್ಪ ಎಂಬುವವರ ನಾಲ್ಕು ಕುರಿಗಳು ತೀವ್ರ ಅಸ್ವಸ್ಥಗೊಂಡಿವೆ. ಕೂಡ್ಲಿಗಿ ಹೋಬಳಿಯ ಕಂದಾಯ ನಿರೀಕ್ಷಕ ನವೀನ್ ಸ್ಥಳಕ್ಕೆ ಭೇಟಿ ನೀಡಿದ್ದರು.

ಬಿದ್ದ ಕಂಬ: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಸಲುವಾಗಿ ಸ್ಥಳಾಂತರಿಸಿದ್ದ ಜೋಡಿ ವಿದ್ಯುತ್ ಕಂಬಗಳು ಶಿವಪುರ ಗ್ರಾಮದ ಇಟಗಿ ಬಸವರಾಜ ಅವರ ಮನೆಯ ಮೇಲೆ ಬಿದ್ದು, ಒಂದು ಭಾಗದ ಗೋಡೆ ಜಖಂಗೊಂಡಿದೆ.

‘ಹೆದ್ದಾರಿ ನಿರ್ಮಿಸುತ್ತಿರುವ ಎಲ್ ಅಂಡ್ ಟಿ ಕಂಪೆನಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವಘಡ ನಡೆದಿದೆ. ಚರಂಡಿ ವ್ಯವಸ್ಥೆ ಮಾಡದಿರುವುದರಿಂದ ಮನೆಗಳಿಗೆ ಮಳೆ ನೀರು ನುಗ್ಗುವಂತಾಗಿದೆ’ ಎಂದು ಗ್ರಾಮದ ಹಾಲಸ್ವಾಮಿ ದೂರಿದರು. ಬತ್ತಿದ್ದ ಕೆರೆಯಲ್ಲಿ ಕೆಲ ರೈತರು ನಾಟಿ ಮಾಡಿದ್ದ ಕರುಬೂಜ ಹಾಗೂ ಸೌತೆ ಬಳ್ಳಿ ಈಗ ನೀರಿನಲ್ಲಿ ಮುಳುಗಿದ್ದು, ಬೆಳೆ ನಷ್ಟವಾಗಿದೆ.

ಇದನ್ನೂ ಓದಿ

ನಗರಗಳಲ್ಲೂ ತಂಪೆರೆದ ಜಿಟಿಜಿಟಿ ಮಳೆ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry