ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಕೈಜೋಡಿಸಿ

ಹಳೆಯ ವಿದ್ಯಾರ್ಥಿಗಳ ಸಮಾವೇಶದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೈ.ಮರಿಸ್ವಾಮಿ ಸಲಹೆ
Last Updated 17 ಮಾರ್ಚ್ 2018, 6:38 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಪ್ರತಿಯೊಬ್ಬರೂ ಕೈ ಜೋಡಿಸಿದಾಗ ಮಾತ್ರ ಮಕ್ಕಳಿಗೆ ಉತ್ತಮ ಗುಣಮಟ್ಟ ಶಿಕ್ಷಣ ಒದಗಿಸಬಹುದು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೈ.ಮರಿಸ್ವಾಮಿ ತಿಳಿಸಿದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕಾಗಿ ಹಳೆಯ ವಿದ್ಯಾರ್ಥಿಗಳ ಸಮಾವೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಖಾಸಗಿ ಶಾಲೆಗಳು ಗುಣಮಟ್ಟದ ಶಿಕ್ಷಣ ಒದಗಿಸುವ ನೆಪದಲ್ಲಿ ಶಿಕ್ಷಣ ವ್ಯಾಪಾರೀಕರಣ ಮಾಡಲು ಹೊರಟಿವೆ. ಶ್ರೀಮಂತರು ಮಕ್ಕಳಿಗೆ ಅಂತರರಾಷ್ಟ್ರೀಯ ಮಟ್ಟದ ಶಿಕ್ಷಣ ಕೊಡಿಸಲು ಮುಂದಾದರೆ, ರೈತರು, ಕಾರ್ಮಿಕರು, ಬಡ ಕುಟುಂಬದಿಂದ ಬಂದ ಮಕ್ಕಳಿಗೆ ಸರ್ಕಾರಿ ಶಾಲೆಗಳೇ ಇವತ್ತಿಗೂ ಆಸರೆಯಾಗಿವೆ ಎಂದು ಹೇಳಿದರು.

ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣದಿಂದಾಗಿ ಶಿಕ್ಷಣ ಇವತ್ತು ಬಡವರಿಗೆ ಕೈಗೆಟುಕುವ ಸ್ಥಿತಿಯಲ್ಲಿ ಇಲ್ಲದಂತಾಗಿದೆ. ಸಂವಿಧಾನದ ಅಡಿಯಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣ ಪಡೆಯುವ ಹಕ್ಕಿದೆ. ಈ ನಿಟ್ಟಿನಲ್ಲಿ ಇವತ್ತು ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸಲು ಕಾರ್ಯ ಪ್ರತಿಯೊಬ್ಬರು ಜವಾಬ್ದಾರಿಯಾಗಬೇಕು. ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣದಿಂದ ವಂಚಿಸಿದರೆ ಮುಂದಿನ ದಿನಗಳಲ್ಲಿ ಸಮಾಜ ಘಾತುಕರಾಗುವ ಅಪಾಯವಿದೆ. ಅದು ಮಕ್ಕಳ ಹಕ್ಕುಗಳ ಉಲ್ಲಂಘನೆ ಕೂಡವಾಗಿದೆ ಎಂದು ತಿಳಿಸಿದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಬರುವ ದೂರುಗಳಲ್ಲಿ ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಅಡಿಯಲ್ಲಿ ಸೇರಿರುವ ಮಕ್ಕಳ ಸಮಸ್ಯೆಗಳೇ ಹೆಚ್ಚಾಗಿವೆ. ಸಮವಸ್ತ್ರ, ಪಠ್ಯ ಪುಸ್ತಕ, ಪರೀಕ್ಷಾ ಪ್ರವೇಶಪತ್ರ ನೀಡುವ ವಿಚಾರ, ಸರ್ಕಾರದ ನಿಯಮ ಬಾಹಿರವಾಗಿ ಹೆಚ್ಚಿನ ಶುಲ್ಕ ಪಡೆಯುವುದು ಸೇರಿದಂತೆ ಅನೇಕ ಹಲವು ವಿಚಾರಗಳ ಬಗ್ಗೆ ದೂರುಗಳು ಬರುತ್ತಿವೆ. ಇಂತಹ ಸಮಸ್ಯೆಗಳಿಗೆ ಕಡಿವಾಣ ಹಾಕಬೇಕಾದರೆ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಅವರು ಹೇಳಿದರು.

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಪೋಷಕರು ಸಹಕರಿಸಬೇಕು. ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆದ ವಿದ್ಯಾರ್ಥಿಗಳು ಸಂಘಗಳನ್ನು ಸ್ಥಾಪಿಸಿ ಈ ಮೂಲಕ ಸಮುದಾಯದ ಸಹಕಾರದೊಂದಿಗೆ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಲು ಮುಂದಾಗಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್‌.ಸಿ.ಪದ್ಮರಾಜು ಮಾತನಾಡಿ, ಉನ್ನತ ಹುದ್ದೆ ಅಲಂಕರಿಸಿರುವವರೆಲ್ಲರೂ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದವರೇ ಆಗಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಮೂಲ ಸೌಕರ್ಯ ನೀಡುವಲ್ಲಿ ಹಳೆಯ ವಿದ್ಯಾರ್ಥಿಗಳ ಸಹಕಾರ ಬೇಕಿದೆ. ಶಾಲೆಯ ಹಳೆಯ ವಿದ್ಯಾರ್ಥಿಗಳು ಓದಿದ ಶಾಲೆಗೆ ಏನನ್ನಾದರೂ ನೀಡುವ ಮೂಲಕ ಋಣ ತೀರಿಸಬೇಕು. ಮಕ್ಕಳ ಭವಿಷ್ಯದೊಂದಿಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರೀವಿಕ್ಷಕಿ ನಾಗರತ್ನ ಮಾತನಾಡಿ, ಶಾಲೆಗಳು ದೇವಾಲಯವಿದ್ದಂತೆ. ಜಿಲ್ಲೆಯ ಗಡಿ ಭಾಗಗಳಲ್ಲಿ ನಾನಾ ಸಮಸ್ಯೆಗಳಿಂದ ಹಲವು ಸರ್ಕಾರಿ ಶಾಲೆಗಳು ಬೀಗ ಹಾಕುವ ಸ್ಥಿತಿ ತಲುಪಿವೆ. ಆ ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆದಿರುವ ಹಳೆಯ ವಿದ್ಯಾರ್ಥಿಗಳು ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಿಸಲು ಭಾವನಾತ್ಮಕವಾಗಿ ಸ್ಪಂದಿಸಬೇಕು. ಶಾಲೆಗಳನ್ನು ಅಭಿವೃದ್ಧಿಪಡಿಸಲು ಅಗತ್ಯವಿರುವ ಸಲಹೆ ಸೂಚನೆ ನೀಡಬೇಕು ಎಂದರು.

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಮೇರಿ ಚೆಲ್ಲದುರೈ, ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತಲಾ, ಶಿಡ್ಲಘಟ್ಟ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್‌ ಬಾಬು, ಚಿಂತಾಮಣಿ ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರಕುಮಾರ್‌, ಬಾಗೇಪಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಕುಮಾರ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲತಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT