5
ಚುನಾವಣಾ ಪೂರ್ವಸಿದ್ಧತ ಸಭೆಯಲ್ಲಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಸೂಚನೆ

ಮತಗಟ್ಟೆಗಳಿಗೆ ಶೀಘ್ರ ಮೂಲಸೌಕರ್ಯ ಒದಗಿಸಿ

Published:
Updated:

ಚಾಮರಾಜನಗರ: ‘ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮತಗಟ್ಟೆಗಳೆಂದು ಗುರುತಿಸಿರುವ ಕಟ್ಟಡಗಳಲ್ಲಿ ಮೂಲಸೌಕರ್ಯ ಒದಗಿಸುವ ಕೆಲಸವನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು’ ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಸೂಚನೆ ನೀಡಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಚುನಾವಣಾ ಪೂರ್ವಸಿದ್ಧತೆ ಸಂಬಂಧ ನಡೆದ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಈಗಾಗಲೇ ಜಿಲ್ಲೆಯಲ್ಲಿ ಗುರುತಿಸಲಾಗಿರುವ ಮತಗಟ್ಟೆಗಳಲ್ಲಿ ಕುಡಿಯುವ ನೀರು, ಶೌಚಾಲಯ, ಅಂಗವಿಕಲರು, ಅಶಕ್ತರು ಪ್ರವೇಶಿಸಲು ಅನುಕೂಲವಾಗುವಂತೆ ರ್ಯಾಂಪ್‌ ವ್ಯವಸ್ಥೆ ಮಾಡಬೇಕು. ಈ ಹಿಂದೆ ಯಾವ ಮತಗಟ್ಟೆ ಕಟ್ಟಡಗಳಲ್ಲಿ ಸೌಲಭ್ಯ ಇದೆ? ಯಾವ ಕಟ್ಟಡಗಳಲ್ಲಿ ಇಲ್ಲ ಎಂಬ ಬಗ್ಗೆ ಪಟ್ಟಿ ಮಾಡಿ ಮೂಲಸೌಕರ್ಯ ಕಲ್ಪಿಸಲು ಸೂಚಿಸಲಾಗಿತ್ತು. ಆ ಪ್ರಕಾರ ಶೌಚಾಲಯ, ರ್‍ಯಾಂಪ್ ನಿರ್ಮಾಣ ಮಾಡಲಾಗಿದೆಯೇ ಎಂಬ ಬಗ್ಗೆ ಪರಿಶೀಲಿಸಬೇಕು. ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಈ ಬಗ್ಗೆ ವೀಕ್ಷಿಸಿ ದೃಢೀಕರಿಸಬೇಕು ಎಂದರು.

ಸೆಕ್ಟರ್ ಅಧಿಕಾರಿಗಳ ಪಾತ್ರ ಚುನಾವಣಾ ಪ್ರಕ್ರಿಯೆಯಲ್ಲಿ ಅತ್ಯಂತ ಮುಖ್ಯವಾಗಿದೆ. ಚೆಕ್‍ಪೋಸ್ಟ್ ಸ್ಥಾಪನೆ, ಮತಗಟ್ಟೆಗಳಿಗೆ ಮೂಲಸೌಕರ್ಯ ಇನ್ನಿತರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಚುನಾವಣೆ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಸೂಚಿಸಲಾಗಿರುವ ಕರ್ತವ್ಯ ವ್ಯಾಪ್ತಿ ಸ್ಥಳದಲ್ಲಿ ವ್ಯಾಪಕ ಪ್ರವಾಸ ಕೈಗೊಂಡು ಅಗತ್ಯ ಸಿದ್ಧತೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಮಾತನಾಡಿ, ಈ ಹಿಂದೆ ನಡೆದ ಚುನಾವಣೆ ಸಂದರ್ಭದಲ್ಲಿ ಅಂತರರಾಜ್ಯ ಹಾಗೂ ಅಂತರ ಜಿಲ್ಲೆ ಚೆಕ್ ಪೋಸ್ಟ್‌ಗಳನ್ನು ತೆರೆದಿರುವ ಬಗ್ಗೆ ಮಾಹಿತಿ ಪಡೆಯಲಾಗಿದೆ. ವಿಧಾನಸಭಾ ಚುನಾವಣಾ ಸಂದರ್ಭದಲ್ಲಿಯೂ ಎಲ್ಲಿ ಚೆಕ್ ಪೋಸ್ಟ್‌ಗಳು ಅಗತ್ಯವಿದೆ ಎಂಬ ಬಗ್ಗೆ ಈಗಾಗಲೇ ಕೆಲವು ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಸೆಕ್ಟರ್, ಸ್ಥಳೀಯ ಪೊಲೀಸ್ ಅಧಿಕಾರಿಗಳು, ತಹಶೀಲ್ದಾರರು ಮತ್ತೊಮ್ಮೆ ವಿವರವಾಗಿ ಚರ್ಚಿಸಿ ಚೆಕ್ ಪೋಸ್ಟ್ ಸ್ಥಾಪನೆ ಸ್ಥಳಗಳನ್ನು ಶೀಘ್ರವಾಗಿ ಗುರುತಿಸಿ ತಮಗೆ ವರದಿ ನೀಡಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಮಾತನಾಡಿ, ಚುನಾವಣೆ ಸಿದ್ಧತೆ ಸಂಬಂಧ ನೀಡಲಾಗುವ ಮಾರ್ಗದರ್ಶನ, ಸೂಚನೆ ಅನುಸಾರ ವರದಿಯನ್ನು ತುರ್ತಾಗಿ ಸಲ್ಲಿಸಬೇಕು. ಯಾವುದೇ ಗೊಂದಲಗಳಿದ್ದರೂ ನೇರವಾಗಿ ಸಂಪರ್ಕಿಸಿ ಪರಿಹರಿಸಿಕೊಳ್ಳಬೇಕು. ಕಾಲಕಾಲಕ್ಕೆ ಕೇಳಲಾಗುವ ಮಾಹಿತಿಯನ್ನು ವಿಳಂಬ ಮಾಡದೆ ನೀಡಬೇಕು ಎಂದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಬಿ. ಫೌಜಿಯಾ ತರನ್ನುಮ್‌, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸೆಕ್ಟರ್ ಅಧಿಕಾರಿಗಳು, ಪೊಲೀಸ್, ಅಬಕಾರಿ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry