ಆಶ್ರಮ ಶಾಲೆ ಉನ್ನತೀಕರಣಕ್ಕೆ ಪ್ರಸ್ತಾವ

7
ತಾಲ್ಲೂಕು ಪಂಚಾಯಿತಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧ್ಯಕ್ಷ ಚಂದ್ರು ಹೇಳಿಕೆ

ಆಶ್ರಮ ಶಾಲೆ ಉನ್ನತೀಕರಣಕ್ಕೆ ಪ್ರಸ್ತಾವ

Published:
Updated:

ಚಾಮರಾಜನಗರ: ‘ತಾಲ್ಲೂಕು ವ್ಯಾಪ್ತಿಯಲ್ಲಿರುವ ಆಶ್ರಮ ಶಾಲೆಗಳ ಉನ್ನತೀಕರಣ ಸಂಬಂಧ ತಾಲ್ಲೂಕು ಪಂಚಾಯಿತಿ ಸದಸ್ಯರ ಸಭೆ ನಡೆಸಿ ಸರ್ಕಾರಕ್ಕೆ ಶೀಘ್ರದಲ್ಲಿಯೇ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ವಿ.ಚಂದ್ರು ಹೇಳಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಆಶ್ರಮ ಶಾಲೆಗಳಲ್ಲಿ 5ನೇ ತರಗತಿವರೆಗೆ ಮಾತ್ರವೇ ವಿದ್ಯಾಭ್ಯಾಸಕ್ಕೆ ಅವಕಾಶವಿದೆ. ಮುಂದಿನ ಹಂತದ ವಿದ್ಯಾಭ್ಯಾಸಕ್ಕೆ ಮಕ್ಕಳು ನಗರ ಪ್ರದೇಶಗಳಿಗೆ ಬರಬೇಕಿದೆ. ಇದರಿಂದ ಹೆಚ್ಚು ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿದ್ದಾರೆ. ಇದನ್ನು ತಪ್ಪಿಸಲು ಆಶ್ರಮ ಶಾಲೆಯನ್ನು ಪಿಯು ವರೆಗೆ ವಿಸ್ತರಣೆ ಮಾಡುವುದು ಅವಶ್ಯವಾಗಿದೆ ಎಂದು ತಿಳಿಸಿದರು.

5ನೇ ತರಗತಿಯ ನಂತರ ಮಕ್ಕಳು ಯಾವ ಶಾಲೆಗೆ ಸೇರುತ್ತಾರೆ. ಶಾಲೆಯಿಂದ ಎಷ್ಟು ಜನ ಮಕ್ಕಳು ಹೊರಗುಳಿಯುತ್ತಾರೆ ಎಂಬುದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ವರದಿ ಸಲ್ಲಿಸಬೇಕು. ಇದರ ಆಧಾರದಡಿ ಸದಸ್ಯರ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಜಯಶೀಲ ಮಾತನಾಡಿ, ತಾಲ್ಲೂಕಿನಲ್ಲಿ 1ರಿಂದ 5ನೇ ತರಗತಿವರೆಗೆ 350 ವಿದ್ಯಾರ್ಥಿಗಳು ಆಶ್ರಮ ಶಾಲೆಯಲ್ಲಿ ಇದ್ದಾರೆ. 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಆಶ್ರಮ ಶಾಲೆಯ ಸೌಲಭ್ಯವಿಲ್ಲ. 8 ರಿಂದ 10ನೇ ತರಗತಿಯವರೆಗೆ ಬಾಲಕರು ಮತ್ತು ಬಾಲಕಿಯರಿಗೆ ಪ್ರತ್ಯೇಕ ಶಾಲೆಗಳಿವೆ. ಬಾಲಕರ ಶಾಲೆಯಲ್ಲಿ 20 ಹಾಗೂ ಬಾಲಕಿಯರ ಶಾಲೆಯಲ್ಲಿ 22ಜನ ವಿದ್ಯಾರ್ಥಿಗಳು ಮಾತ್ರ ದಾಖಲಾಗಿದ್ದಾರೆ ಎಂದು ವಿವರಿಸಿದರು.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜಯಕಾಂತಾ ಮಾತನಾಡಿ, ತಾಲ್ಲೂಕಿನ ವ್ಯಾಪ್ತಿಯಲ್ಲಿ 533 ವಿದ್ಯಾರ್ಥಿಗಳು ಇಲಾಖೆಯ ವಿದ್ಯಾರ್ಥಿ ನಿಲಯದಲ್ಲಿ ದಾಖಲಾಗಿದ್ದಾರೆ. ಈ ಪೈಕಿ 74 ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಇದ್ದು, ಅವರಿಗೆ ಆಗಸ್ಟ್‌ ನಿಂದ ಫೆಬ್ರುವರಿವರೆಗೆ ವಿಶೇಷ ತರಗತಿ ನೀಡಲಾಗಿದೆ ಎಂದರು.

ಕೃಷಿ ಇಲಾಖೆ ಅಧಿಕಾರಿ ಸುಂದರಮ್ಮ ಮಾತನಾಡಿ, ತಾಲ್ಲೂಕಿನಲ್ಲಿ ಏಪ್ರಿಲ್‌ನಿಂದ ಬಿತ್ತನೆ ಕಾರ್ಯ ಆರಭವಾಗುವುದರಿಂದ ಅಗತ್ಯಕ್ಕೆ ತಕ್ಕಷ್ಟು ಬಿತ್ತನೆಬೀಜ ಹಾಗೂ ರಸಗೊಬ್ಬರ ಸಂಗ್ರಹಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾ ಯಕ ಕಾರ್ಯಪಾಲಕ ಎಂಜಿನಿಯರ್‌ ಪುರುಷೋತ್ತಮ್‌ ಮಾತನಾಡಿ, ಇಲಾಖೆಯಿಂದ ಓವರ್‌ ಹೆಡ್‌ ಟ್ಯಾಕ್‌ ನಿರ್ಮಾ ಣದ 38 ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಈ ಪೈಕಿ 28 ಕಾಮಗಾರಿ ಪೂರ್ಣವಾಗಿದೆ. ಉಳಿದ 10 ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದರು.

ಸಂಜೆ ವಿದ್ಯುತ್ ಕಡಿತ ಬೇಡ: ಅಧ್ಯಕ್ಷ ಚಂದ್ರು ಮಾತನಾಡಿ, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆ ಹಿನ್ನೆಲೆಯಲ್ಲಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಸಂಜೆಯಿಂದ ಬೆಳಿಗ್ಗೆವರೆಗೆ ವಿದ್ಯುತ್ ಕಡಿತಗೊಳಿಸಬಾರದು ಎಂದು ಸೆಸ್ಕ್ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕು ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಯಾವುದೇ ಮಾಹಿತಿ ನೀಡದೆ ವಿದ್ಯುತ್‌ ಕಡಿತಗೊಳಿಸಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿದ್ದು, ವಿದ್ಯುತ್‌ ಕಡಿತ ಗೊಳಿಸುವ ಮುನ್ನವೇ ಅಧಿಕಾರಿಗಳು ಮಾಹಿತಿ ನೀಡಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ತಿಳಿಸಿದರು.

ಸಾಮಾಜಿಕ ನ್ಯಾಯಾ ಸ್ಥಾಯಿಸಮಿತಿ ಅಧ್ಯಕ್ಷೆ ನಾಗಸುಂದರಮ್ಮ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ನಿರಂತರ ಜ್ಯೋತಿ ವ್ಯವಸ್ಥೆ ಮಾಡಲಾಗಿದೆ. ಸಾಲು ಸಾಲು ಹಬ್ಬಗಳು ನಡೆಯುತ್ತಿವೆ. ಆದರೂ, ವಿದ್ಯುತ್‌ ಪೂರೈಕೆ ಮಾತ್ರ ಸಮರ್ಪಕವಾಗಿಲ್ಲ ಎಂದು ದೂರಿದರು.

ಸೆಸ್ಕ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ದೇವರಾಜ್‌ ಮಾತ ನಾಡಿ, ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದರಿಂದ ವಿದ್ಯುತ್‌ ಕಂಬ ಸ್ಥಳಾಂತರ ಮಾಡಲಾಗುತ್ತಿದೆ. ಇದರಿಂದ ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್‌ ವ್ಯತ್ಯಯವಾ ಗುತ್ತಿದೆ. ಹಬ್ಬಗಳಿಗೆ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿದೆ ಎಂದರು.

ಸಭೆಯಲ್ಲಿ ಉಪಾಧ್ಯಕ್ಷ ಪಿ.ಎನ್.ದಯಾನಿಧಿ, ಇಒ ರಮೇಶ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry