ಶವ ಸಾಗಣೆ ವಾಹನದಲ್ಲಿ ಭಿಕ್ಷುಕನ ರವಾನೆ

7
ಕರೆ ಮಾಡಿದರೂ ಬಾರದ ಆಂಬುಲೆನ್ಸ್‌

ಶವ ಸಾಗಣೆ ವಾಹನದಲ್ಲಿ ಭಿಕ್ಷುಕನ ರವಾನೆ

Published:
Updated:
ಶವ ಸಾಗಣೆ ವಾಹನದಲ್ಲಿ ಭಿಕ್ಷುಕನ ರವಾನೆ

ಕೋಲಾರ: ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಸಮೀಪ ಪ್ರಜ್ಞೆ ತಪ್ಪಿ ಬಿದ್ದಿದ್ದ ಭಿಕ್ಷುಕನನ್ನು ಶವ ಸಾಗಣೆ ವಾಹನದಲ್ಲಿ (ಮುಕ್ತಿ ವಾಹನ) ಆಸ್ಪತ್ರೆಗೆ ಕರೆದೊಯ್ದಿರುವ ಘಟನೆ ಗುರುವಾರ ನಡೆದಿದೆ.

ವಯೋವೃದ್ಧ ಭಿಕ್ಷುಕ ಬ್ರಾಹ್ಮಣರ ಬೀದಿ ಬದಿಯಲ್ಲಿ ಮಧ್ಯಾಹ್ನ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಸಾರ್ವಜನಿಕರು ಈ ಬಗ್ಗೆ ಆಂಬುಲೆನ್ಸ್‌ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದರು. ಆದರೆ, ನಿಯಂತ್ರಣ ಕೊಠಡಿ ಸಿಬ್ಬಂದಿ ಆಂಬುಲೆನ್ಸ್‌ ಕಳುಹಿಸಲಿಲ್ಲ. ಸಾರ್ವಜನಿಕರು ಮೂರ್ನಾಲ್ಕು ಬಾರಿ ಕರೆ ಮಾಡಿದರೂ ಸಿಬ್ಬಂದಿ ಶೀಘ್ರವೇ ಆಂಬುಲೆನ್ಸ್‌ ಕಳುಹಿಸುತ್ತೇವೆ ಎಂದು ಹೇಳಿ ನಿರ್ಲಕ್ಷ್ಯ ತೋರಿದ್ದಾರೆ.

ನಂತರ ಸಾರ್ವಜನಿಕರು ಹಾಗೂ ನಗರಸಭೆ ಸದಸ್ಯ ಎಸ್‌.ಆರ್‌.ಮುರಳಿಗೌಡ ಅವರು ನಗರಸಭೆಗೆ ಸೇರಿದ ಶವ ಸಾಗಣೆ ವಾಹನದಲ್ಲಿ ಭಿಕ್ಷುಕನನ್ನು ಶ್ರೀ ನರಸಿಂಹರಾಜ (ಎಸ್‌ಎನ್‌ಆರ್‌) ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.

‘ಭಿಕ್ಷುಕನನ್ನು ಎಸ್ಎನ್‌ಆರ್‌ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆಂಬುಲೆನ್ಸ್‌ ಆಸ್ಪತ್ರೆ ಆವರಣದಲ್ಲೇ ನಿಂತಿತ್ತು. ಈ ಬಗ್ಗೆ ನಿಯಂತ್ರಣ ಕೊಠಡಿ ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಎಲ್ಲಾ ಆಂಬುಲೆನ್ಸ್‌ಗಳು ಸೇವೆಯಲ್ಲಿ ನಿರತವಾಗಿದ್ದವು ಎಂದು ಸಬೂಬು ಹೇಳಿದರು’ ಎಂದು ಮುರಳಿಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಯೋವೃದ್ಧರೊಬ್ಬರು ರಸ್ತೆ ಮಧ್ಯೆ ಜೀವನ್ಮರಣ ಹೋರಾಟ ನಡೆಸುತ್ತಿದ್ದರೂ ಸಿಬ್ಬಂದಿ ಬೇಜವಾಬ್ದಾರಿಯುತವಾಗಿ ನಡೆದುಕೊಂಡರು. ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲೇ ಈ ಪರಿಸ್ಥಿತಿ ಇದ್ದರೆ ಬೇರೆ ಜಿಲ್ಲೆಗಳ ಗತಿ ಏನು. ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್‌ ಬಾರದೆ ಸಾವು ಸಂಭವಿಸಿದರೆ ಯಾರು ಹೊಣೆ’ ಎಂದು ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry